Genesis - Chapter 1
Holy Bible

1 : ಆದಿಯಲ್ಲಿ ದೇವರು ಪರಲೋಕ - ಭೂಲೋಕವನ್ನು ಸೃಷ್ಟಿಮಾಡಿದರು.
2 : ಭೂಮಿ ನಿರಾಕಾರವಾಗಿಯೂ ಬರಿದಾಗಿಯೂ ಇತ್ತು. ಆದಿ ಸಾಗರದ ಮೇಲೆ ಕಗ್ಗತ್ತಲು ಕವಿದಿತ್ತು. ದೇವರಾತ್ಮ ಜಲರಾಶಿಯ ಮೇಲೆ ಚಲಿಸುತ್ತಿತ್ತು.
3 : ಆಗ ದೇವರು, “ಬೆಳಕಾಗಲಿ” ಎನ್ನಲು ಬೆಳಕಾಯಿತು.
4 : ದೇವರ ಕಣ್ಣಿಗೆ ಅದು ಚೆನ್ನಾಗಿ ಕಂಡಿತು. ಅವರು ಬೆಳಕನ್ನೂ ಕತ್ತಲೆಯನ್ನೂ ಬೇರೆಬೇರೆ ಮಾಡಿ ಬೆಳಕಿಗೆ ಹಗಲೆಂದೂ ಕತ್ತಲೆಗೆ ಇರುಳೆಂದೂ ಹೆಸರಿಟ್ಟರು.
5 : ಹೀಗೆ ಬೈಗೂ ಬೆಳಗೂ ಆಗಿ ಮೊದಲನೆಯ ದಿನವಾಯಿತು.
6 : ಬಳಿಕ ದೇವರು, “ಜಲರಾಶಿಯ ನಡುವೆ ವಿಸ್ತಾರವಾದ ಒಂದು ಗುಮ್ಮಟವು ಉಂಟಾಗಲಿ, ಅದು ಕೆಳಗಿನ ನೀರನ್ನೂ ಮೇಲಿನ ನೀರನ್ನೂ ಬೇರೆ ಬೇರೆ ಮಾಡಲಿ,” ಎಂದರು. ಹಾಗೆಯೇ ಆಯಿತು.
7 : ಹೀಗೆ ದೇವರು ವಿಸ್ತಾರವಾದ ಗುಮ್ಮಟವೊಂದನ್ನು ಮಾಡಿ ಕೆಳಗಿದ್ದ ನೀರನ್ನು ಮೇಲಿದ್ದ ನೀರಿನಿಂದ ವಿಂಗಡಿಸಿದರು.
8 : ದೇವರು ಆ ಗುಮ್ಮಟಕ್ಕೆ “ಆಕಾಶ” ಎಂದು ಹೆಸರಿಟ್ಟರು. ಹೀಗೆ ಬೈಗೂ ಬೆಳಗೂ ಆಗಿ ಎರಡನೆಯ ದಿನ ಆಯಿತು.
9 : ಅನಂತರ ದೇವರು, “ಆಕಾಶದ ಕೆಳಗಿರುವ ನೀರೆಲ್ಲ ಒಂದೇ ಸ್ಥಳದಲ್ಲಿ ಕೂಡಿಕೊಳ್ಳಲಿ; ಒಣ ನೆಲವು ಕಾಣಿಸಿಕೊಳ್ಳಲಿ,” ಎಂದರು. ಹಾಗೆಯೇ ಆಯಿತು.
10 : ದೇವರು ಒಣನೆಲಕ್ಕೆ “ಭೂಮಿ” ಎಂದೂ ಜಲರಾಶಿಗೆ “ಸಮುದ್ರ” ಎಂದೂ ಹೆಸರಿಟ್ಟರು. ದೇವರ ಕಣ್ಣಿಗೆ ಅದೂ ಚೆನ್ನಾಗಿ ಕಂಡಿತು.
11 : ತರುವಾಯ ದೇವರು, “ಭೂಮಿಯಲ್ಲಿ ಸಸ್ಯಗಳನ್ನೂ - ಎಲ್ಲ ತರದ ದವಸಧಾನ್ಯ, ಹಣ್ಣು ಹಂಪಲು ಇವುಗಳನ್ನು ಬಿಡುವ ಗಿಡಮರ ಬಳ್ಳಿಗಳನ್ನೂ ಬೆಳೆಯಿಸಲಿ,” ಎಂದರು. ಅದು ಹಾಗೆಯೇ ಆಯಿತು.
12 : ಭೂಮಿಯಲ್ಲಿ ಸಸ್ಯಗಳು ಬೆಳೆದವು; ಎಲ್ಲ ತರದ ದವಸಧಾನ್ಯಗಳನ್ನೂ ಹಣ್ಣು ಹಂಪಲುಗಳನ್ನೂ ಬಿಡುವ ಗಿಡಮರ ಬಳ್ಳಿಗಳು ಕಾಣಿಸಿಕೊಂಡವು. ದೇವರ ಕಣ್ಣಿಗೆ ಅವು ಚೆನ್ನಾಗಿ ಕಂಡವು.
13 : ಹೀಗೆ ಬೈಗೂ ಬೆಳಗೂ ಆಗಿ ಮೂರನೆಯ ದಿನವಾಯಿತು.
14 : ಅದಾದನಂತರ ದೇವರು, “ಹಗಲು ಇರುಳುಗಳನ್ನು ಬೇರೆಬೇರೆ ಮಾಡಲು, ಋತು ಕಾಲಗಳನ್ನೂ ದಿನಸಂವತ್ಸರಗಳನ್ನೂ ಸೂಚಿಸಲು, ಹಾಗು
15 : ಭೂಮಿಗೆ ಬೆಳಕನ್ನೀಯಲು, ಆಕಾಶ ದೀಪಗಳು ಉಂಟಾಗಲಿ,” ಎಂದರು. ಹಾಗೆಯೇ ಆಯಿತು.
16 : ಹಗಲನ್ನಾಳುವುದಕ್ಕೆ ಸೂರ್ಯನನ್ನೂ ಇರುಳನ್ನಾಳುವುದಕ್ಕೆ ಚಂದ್ರನನ್ನೂ, ಹೀಗೆ ಎರಡು ದೀವಿಗೆಗಳನ್ನು ಸೃಷ್ಟಿಮಾಡಿದರು. ಅದು ಮಾತ್ರವಲ್ಲ, ನಕ್ಷತ್ರಗಳನ್ನೂ ಅವರು ಸೃಷ್ಟಿ ಮಾಡಿದರು.
17 : ಆ ದೀವಿಗೆಗಳನ್ನು ಆಕಾಶದಲ್ಲಿ ಇಟ್ಟು ಭೂಮಿಗೆ ಬೆಳಕನ್ನೀಯುವಂತೆ ಮಾಡಿದರು. ಹಾಗೂ
18 : ಹಗಲಿರುಳುಗಳನ್ನು ಆಳುವುದಕ್ಕೂ, ಬೆಳಕನ್ನೂ ಕತ್ತಲನ್ನೂ ಬೇರೆಬೇರೆ ಮಾಡುವುದಕ್ಕೂ ಅವುಗಳನ್ನು ನೇಮಿಸಿದರು. ದೇವರ ಕಣ್ಣಿಗೆ ಅದೂ ಚೆನ್ನಾಗಿ ಕಂಡಿತು.
19 : ಹೀಗೆ ಬೈಗೂ ಬೆಳಗೂ ಆಗಿ ನಾಲ್ಕನೆಯ ದಿನ ಆಯಿತು.
20 : ಆಮೇಲೆ ದೇವರು, “ಹಲವಾರು ಜಲ ಜಂತುಗಳು ನೀರಿನಲ್ಲಿ ತುಂಬಿಕೊಳ್ಳಲಿ, ಭೂಮಿ ಆಕಾಶಗಳ ನಡುವೆ ಪಕ್ಷಿಗಳು ಹಾರಾಡಲಿ,” ಎಂದರು.
21 : ಈ ಪ್ರಕಾರ ದೇವರು ದೊಡ್ಡ ಜಲಚರಗಳನ್ನೂ ನೀರಿನಲ್ಲಿ ತುಂಬಿರುವ ನಾನಾ ವಿಧವಾದ ಜೀವಜಂತುಗಳನ್ನೂ ರೆಕ್ಕೆಗಳುಳ್ಳ ಸಕಲವಿಧವಾದ ಪಕ್ಷಿಗಳನ್ನೂ ಸೃಷ್ಟಿಮಾಡಿದರು. ದೇವರ ದೃಷ್ಟಿಗೆ ಅದೂ ಚೆನ್ನಾಗಿ ಕಂಡಿತು.
22 : ಅವುಗಳಿಗೆ ದೇವರು, “ನೀವು ಅಭಿವೃದ್ಧಿಯಾಗಿ ಹೆಚ್ಚಿರಿ; ಜಲಚರಗಳು ಸಮುದ್ರದ ನೀರಿನಲ್ಲಿ ತುಂಬಿಕೊಳ್ಳಲಿ, ಪಕ್ಷಿಗಳು ಭೂಮಿಯ ಮೇಲೆ ಹೆಚ್ಚಲಿ,” ಎಂದು ಹೇಳಿ ಆಶೀರ್ವದಿಸಿದರು.
23 : ಹೀಗೆ ಬೈಗೂ ಬೆಳಗೂ ಆಗಿ ಐದನೆಯ ದಿನ ಆಯಿತು.
24 : ಆ ಬಳಿಕ ದೇವರು, “ಭೂಮಿಯಿಂದ ಎಲ್ಲ ತರದ ಜೀವಜಂತುಗಳು ಸೃಷ್ಟಿಯಾಗಲಿ, ದೊಡ್ಡ - ಚಿಕ್ಕ ಸಾಕುಪ್ರಾಣಿಗಳೂ ಕಾಡು ಮೃಗಗಳೂ ಹುಟ್ಟಲಿ,” ಎಂದರು. ಅಂತೆಯೇ ಆಯಿತು.
25 : ಎಲ್ಲ ತರದ ದೊಡ್ಡ - ಚಿಕ್ಕ ಕಾಡು ಮೃಗಗಳನ್ನೂ ಸಾಕುಪ್ರಾಣಿಗಳನ್ನೂ ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳನ್ನೂ ದೇವರು ಸೃಷ್ಟಿಮಾಡಿದರು. ಅವರ ನೋಟಕ್ಕೆ ಅದು ಚೆನ್ನಾಗಿ ಕಂಡಿತು.
26 : ಅದಾದನಂತರ ದೇವರು, “ನಮ್ಮಂತೆಯೇ ಇರುವ ಹಾಗು ನಮ್ಮನ್ನು ಹೋಲುವ, ಮನುಷ್ಯರನ್ನು ಉಂಟುಮಾಡೋಣ. ಅವರು ಸಮುದ್ರದಲ್ಲಿರುವ ವಿೂನುಗಳ ಮೇಲೆಯೂ ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ದೊಡ್ಡ - ಚಿಕ್ಕ ಸಾಕುಪ್ರಾಣಿ ಹಾಗು ಕಾಡುಮೃಗಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳ ಮೇಲೆಯೂ ದೊರೆತನ ಮಾಡಲಿ,” ಎಂದರು. ಹೀಗೆ ದೇವರು:
27 : ಸೃಷ್ಟಿಸಿದರು ನರರನ್ನು ತಮ್ಮ ಹೋಲಿಕೆಯಲ್ಲಿ ಸೃಷ್ಟಿಸಿದರವರನ್ನು ದೇವಾನುರೂಪದಲ್ಲಿ ಸೃಷ್ಟಿಸಿದರವರನ್ನು ಸ್ತ್ರೀಪುರುಷರನ್ನಾಗಿ.
28 : ಅವರನ್ನು ದೇವರು ಆಶೀರ್ವದಿಸಿ, “ನೀವು ಅಭಿವೃದ್ಧಿಯಾಗಿ, ಅನೇಕ ಮಕ್ಕಳನ್ನು ಪಡೆಯಿರಿ; ಭೂಮಿಯಲ್ಲಿ ಹರಡಿಕೊಂಡು ಅದನ್ನು ವಶಪಡಿಸಿ ಕೊಳ್ಳಿರಿ; ಸಮುದ್ರದ ವಿೂನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲ ಪ್ರಾಣಿಗಳ ಮೇಲೆಯೂ ದೊರೆತನ ಮಾಡಿರಿ.
29 : ಇನ್ನೂ, ಭೂಮಿಯಲ್ಲಿರುವ ಎಲ್ಲ ತರದ ದವಸ ಧಾನ್ಯಗಳನ್ನೂ ಹಣ್ಣು ಹಂಪಲುಗಳನ್ನೂ ನಿಮಗೆ ಆಹಾರವಾಗಿ ಕೊಟ್ಟಿದ್ದೇನೆ.
30 : ಇದಲ್ಲದೆ, ಭೂಮಿಯ ಮೇಲೆ ತಿರುಗಾಡುವ ದೊಡ್ಡ - ಚಿಕ್ಕ ಮೃಗಗಳಿಗೂ ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೂ ನೆಲದಲ್ಲಿ ಹರಿದಾಡುವ ಕ್ರಿಮಿ ಕೀಟಗಳಿಗೂ ಹುಲ್ಲು ಸೊಪ್ಪುಗಳನ್ನು ಆಹಾರವಾಗಿ ಕೊಟ್ಟಿದ್ದೇನೆ,” ಎಂದು ಹೇಳಿದರು. ಹಾಗೆಯೇ ಆಯಿತು.
31 : ತಾವು ಸೃಷ್ಟಿಸಿದ ಎಲ್ಲವನ್ನು ದೇವರು ನೋಡಿದರು. ಅವೆಲ್ಲವೂ ಬಹಳ ಚೆನ್ನಾಗಿತ್ತು. ಹೀಗೆ ಬೈಗೂ ಬೆಳಗೂ ಆಗಿ ಆರನೆಯ ದಿನ ಆಯಿತು.

Holydivine