Acts - Chapter 1
Holy Bible

1 : ಸನ್ಮಾನ್ಯ ಥೆಯೊಫಿಲನೇ, ಯೇಸುಸ್ವಾಮಿ ಸ್ವರ್ಗಕ್ಕೆ ಆರೋಹಣವಾದ ದಿನದವರೆಗೆ ಮಾಡಿದ ಕಾರ್ಯಗಳನ್ನೂ ನೀಡಿದ ಬೋಧನೆಗಳನ್ನೂ ಕುರಿತು ನನ್ನ ಮೊದಲನೆಯ ಪುಸ್ತಕದಲ್ಲಿ ಬರೆದಿದ್ದೇನೆ.
2 : ಸ್ವರ್ಗಾರೋಹಣಕ್ಕೆ ಮೊದಲು ಪ್ರೇಷಿತರನ್ನಾಗಿ ತಾವು ಆರಿಸಿಕೊಂಡಿದ್ದವರಿಗೆ ಪವಿತ್ರಾತ್ಮ ಅವರ ಮುಖಾಂತರ ಉಪದೇಶ ಮಾಡಿದರು.
3 : ತಮ್ಮ ಮರಣದ ನಂತರ ಅವರು ನಲವತ್ತು ದಿನಗಳವರೆಗೆ ಆ ಪ್ರೇಷಿತರಿಗೆ ಪ್ರತ್ಯಕ್ಷರಾದರು. ತಾವು ಜೀವಂತವಾಗಿರುವುದನ್ನು ವಿವಿಧ ರೀತಿಯಲ್ಲಿ ಸ್ಪಷ್ಟಪಡಿಸಿದರು. ದೇವರ ಸಾಮ್ರಾಜ್ಯವನ್ನು ಕುರಿತು ಅವರಿಗೆ ಬೋಧಿಸಿದರು.
4 : ಒಮ್ಮೆ ಅವರೆಲ್ಲರೂ ಒಂದುಗೂಡಿದ್ದ ಸಂದರ್ಭದಲ್ಲಿ, “ನೀವು ಜೆರುಸಲೇಮನ್ನು ಬಿಟ್ಟು ಹೋಗಬೇಡಿ; ನಾನು ನಿಮಗೆ ತಿಳಿಸಿದಂತೆ ನನ್ನ ಪಿತನು ವಾಗ್ದಾನ ಮಾಡಿರುವ ವರಕ್ಕಾಗಿ ಕಾದುಕೊಂಡಿರಿ.
5 : ಏಕೆಂದರೆ, ಯೊವಾನ್ನನು ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದನು; ಆದರೆ ಇನ್ನು ಕೆಲವೇ ದಿನಗಳಲ್ಲಿ ನೀವು ಪವಿತ್ರಾತ್ಮ ಅವರಿಂದ ದೀಕ್ಷಾಸ್ನಾನ ಪಡೆಯುವಿರಿ,” ಎಂದು ಆಜ್ಞಾಪಿಸಿದರು.
6 : ಯೇಸುಸ್ವಾಮಿಯ ಸ್ವರ್ಗಾರೋಹಣ ಮತ್ತೊಮ್ಮೆ ಯೇಸುಸ್ವಾಮಿ ತಮ್ಮೊಡನೆ ಇದ್ದಾಗ ಪ್ರೇಷಿತರು, “ಪ್ರಭೂ, ನೀವು ಇದೀಗಲೇ ಇಸ್ರಯೇಲ್ ಜನರ ರಾಜ್ಯವನ್ನು ಪುನರ್ ಸ್ಥಾಪಿಸುವಿರೋ?” ಎಂದು ಕೇಳಿದರು.
7 : ಯೇಸು ಪ್ರತ್ಯುತ್ತರವಾಗಿ, “ಸಮಯ ಸಂದರ್ಭಗಳು ನನ್ನ ಪಿತನ ಸ್ವಾಧೀನದಲ್ಲಿವೆ. ಅವುಗಳನ್ನು ತಿಳಿಯುವುದು ನಿಮ್ಮ ಕೆಲಸವಲ್ಲ.
8 : ಆದರೆ ಪವಿತ್ರಾತ್ಮ ಅವರು ನಿಮ್ಮ ಮೇಲೆ ಬಂದಾಗ ನೀವು ಶಕ್ತಿಯುತರಾಗುವಿರಿ. ಆಗ ನೀವು ಜೆರುಸಲೇಮಿನಲ್ಲೂ ಜುದೇಯದಲ್ಲೂ ಸಮಾರಿಯದಲ್ಲೂ ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗುವಿರಿ,” ಎಂದರು.
9 : ಇದನ್ನು ಹೇಳಿದ ಮೇಲೆ ಪ್ರೇಷಿತರು ನೋಡುತ್ತಿದ್ದಂತೆಯೇ, ಯೇಸು ಸ್ವರ್ಗಾರೋಹಣವಾದರು. ಮೇಘವೊಂದು ಕವಿದು ಅವರನ್ನು ಕಣ್ಮರೆಮಾಡಿತು.
10 : ಹೀಗೆ ಮೇಲೇರುತ್ತಿದ್ದ ಯೇಸುಸ್ವಾಮಿಯನ್ನು ನೋಡುತ್ತಿದ್ದ ಪ್ರೇಷಿತರ ದೃಷ್ಟಿ ಇನ್ನೂ ಆಕಾಶದತ್ತ ನಾಟಿತ್ತು. ಆಗ ಬಿಳಿಯ ವಸ್ತ್ರ ಧರಿಸಿದ್ದ ವ್ಯಕ್ತಿಗಳಿಬ್ಬರು ಇದ್ದಕ್ಕಿದ್ದಂತೆ ಅವರ ಪಕ್ಕದಲ್ಲಿ ನಿಂತರು.
11 : “ಗಲಿಲೇಯದ ಜನರೇ, ನೀವು ಆಕಾಶವನ್ನು ದಿಟ್ಟಿಸಿ ನೋಡುತ್ತಾ ನಿಂತಿರುವುದೇಕೆ? ಸ್ವರ್ಗಾರೋಹಣರಾದ ಈ ಯೇಸು ನಿಮ್ಮ ಬಳಿಯಿಂದ ಹೇಗೆ ಸ್ವರ್ಗಕ್ಕೆ ಏರಿ ಹೋಗುವುದನ್ನು ಕಂಡಿರೋ ಹಾಗೆಯೇ ಅವರು ಹಿಂದಿರುಗಿ ಬರುವರು,” ಎಂದು ಹೇಳಿದರು.
12 : ಮತ್ತೀಯನ ಆಯ್ಕೆ ಅನಂತರ ಪ್ರೇಷಿತರು ಓಲಿವ್ ತೋಪಿನ ಗುಡ್ಡದಿಂದ ಸುಮಾರು ಒಂದು ಕಿಲೊವಿೂಟರು ದೂರದಲ್ಲಿರುವ ಜೆರುಸಲೇಮಿಗೆ ಹಿಂದಿರುಗಿದರು.
13 : ಅವರು ಯಾರಾರೆಂದರೆ: ಪೇತ್ರ, ಯೊವಾನ್ನ, ಯಕೋಬ, ಅಂದ್ರೆಯ, ಫಿಲಿಪ್ಪ, ತೋಮ, ಬಾರ್ತಲೊಮಾಯ, ಮತ್ತಾಯ, ಅಲ್ಫಾಯನ ಮಗ ಯಕೋಬ, ದೇಶಾಭಿಮಾನಿ ಆದ ಸಿಮೋನ ಮತ್ತು ಯಕೋಬನ ಮಗ ಯೂದ. ಇವರೆಲ್ಲರು ಪಟ್ಟಣವನ್ನು ಸೇರಿದ್ದೇ, ಮೇಲ್ಮಾಳಿಗೆಯಲ್ಲಿದ್ದ ತಮ್ಮ ಕೊಠಡಿಗೆ ಹೋದರು.
14 : ಅಲ್ಲಿ ಅವರು ಒಮ್ಮನಸ್ಸಿನಿಂದ ಪ್ರಾರ್ಥನೆಯಲ್ಲಿ ನಿರತರಾಗುತ್ತಿದ್ದರು. ಕೆಲವು ಮಹಿಳೆಯರೂ ಯೇಸುವಿನ ತಾಯಿ ಮರಿಯಳೂ ಯೇಸುವಿನ ಸಹೋದರರೂ ಅವರೊಡನೆ ಇದ್ದರು.
15 : ಸ್ವಲ್ಪ ದಿನಗಳ ನಂತರ ಸುಮಾರು ನೂರ ಇಪ್ಪತ್ತು ಮಂದಿ ಭಕ್ತವಿಶ್ವಾಸಿಗಳು ಸಭೆಸೇರಿದ್ದರು. ಆಗ ಪೇತ್ರನು ಎದ್ದು ನಿಂತು ಹೀಗೆಂದನು:
16 : “ಪ್ರಿಯ ಸಹೋದರರೇ, ಯೇಸುವನ್ನು ಬಂಧಿಸಿದವರಿಗೆ ಮುಂದಾಳಾಗಿದ್ದವನು ಯೂದನು. ಅವನ ವಿಷಯವಾಗಿ ಪವಿತ್ರಾತ್ಮ ಅವರು ದಾವೀದನ ಮುಖಾಂತರ ಮುಂತಿಳಿಸಿದ ವಾಕ್ಯ ನೆರವೇರಲೇಬೇಕಾಗಿತ್ತು.
17 : ಈ ಯೂದನು ನಮ್ಮಲ್ಲಿ ಒಬ್ಬನಾಗಿದ್ದವನು, ನಾವು ಕೈಗೊಂಡಿರುವ ಸೇವೆಯಲ್ಲಿ ಭಾಗಿಯಾಗಲು ಆಯ್ಕೆಯಾಗಿದ್ದನು.
18 : (“ಇವನು ತನ್ನ ನೀಚ ಕೃತ್ಯದಿಂದ ಪಡೆದ ಹಣದಿಂದ ಒಂದು ಹೊಲವನ್ನು ಕೊಂಡುಕೊಂಡ. ಆದರೆ ಅದರಲ್ಲೇ ಪ್ರಾಣಕಳೆದುಕೊಂಡ. ತಲೆಕೆಳಗಾಗಿ ಬಿದ್ದು, ಹೊಟ್ಟೆ ಬಿರಿದು, ಕರುಳೆಲ್ಲಾ ಹೊರಬಂದು ಸತ್ತುಹೋದ.
19 : ಈ ವಿಷಯ ಜೆರುಸಲೇಮಿನ ನಿವಾಸಿಗಳಿಗೆಲ್ಲಾ ತಿಳಿಯಿತು. ಆ ಜವಿೂನನ್ನು ತಮ್ಮ ಭಾಷೆಯಲ್ಲಿ ‘ಅಖೆಲ್ದಾಮ’ ಅಂದರೆ ‘ನೆತ್ತರನೆಲ’ ಎಂದು ಕರೆಯಲಾರಂಭಿಸಿದರು)
20 : ‘ಅವನ ಮನೆ ಹಾಳಾಗಲಿ, ಅದು ಪಾಳುಬೀಳಲಿ,’ ಎಂದೂ, ‘ಅವನ ಸ್ಥಾನ ಇನ್ನೊಬ್ಬನದಾಗಲಿ,’ ಎಂದೂ ಕೀರ್ತನಾಗ್ರಂಥದಲ್ಲಿ ಬರೆಯಲಾಗಿದೆ.
21 : “ಆದುದರಿಂದ ಪ್ರಭು ಯೇಸುವಿನ ಪುನರುತ್ಥಾನಕ್ಕೆ ನಮ್ಮೊಡನೆ ಸಾಕ್ಷಿಯಾಗಿರಲು ಒಬ್ಬನನ್ನು ನಾವು ಆರಿಸಬೇಕಾಗಿದೆ. ಅಂಥವನು ಯೇಸುವಿನ ಸೇವಾಸಂಚಾರದಲ್ಲೆಲ್ಲಾ ನಮ್ಮೊಡನೆ ಇದ್ದವನಾಗಿರಬೇಕು.
22 : ಅಂದರೆ, ಸ್ನಾನಿಕ ಯೊವಾನ್ನನು ಸ್ನಾನದೀಕ್ಷೆಯನ್ನು ಕುರಿತು ಬೋಧಿಸಿದ ದಿನದಿಂದ ಯೇಸುವಿನ ಸ್ವರ್ಗಾರೋಹಣದ ದಿನದವರೆಗೂ ನಮ್ಮ ಸಂಗಡ ಇದ್ದವನಾಗಿರಬೇಕು.”
23 : ಆಗ ಬಾರ್ನಬ ಎಂದು ಹೆಸರಿಸಲಾದ ಜೋಸೆಫ್ (ಇವನನ್ನು ಯುಸ್ತ ಎಂದೂ ಕರೆಯುತ್ತಿದ್ದರು.) ಮತ್ತು ಮತ್ತೀಯ ಎಂಬ ಇಬ್ಬರ ಹೆಸರನ್ನು ಸೂಚಿಸಲಾಯಿತು.
24 : ಅನಂತರ ಎಲ್ಲರೂ ಪ್ರಾರ್ಥನೆ ಮಾಡುತ್ತಾ, “ಸರ್ವೇಶ್ವರಾ, ನೀವು ಸರ್ವರ ಅಂತರಂಗಗಳನ್ನು ಅರಿತಿರುವಿರಿ. ಯೂದನು ತನ್ನ ಪ್ರೇಷಿತ ಸ್ಥಾನದಿಂದ ಭ್ರಷ್ಟನಾದ, ತನಗೆ ತಕ್ಕುದಾದ ಸ್ಥಳಕ್ಕೆ ತೆರಳಿದ.
25 : ಈ ಸೇವಾಸ್ಥಾನಕ್ಕೆ ಇವರಿಬ್ಬರಲ್ಲಿ ನೀವು ಆರಿಸಿದವನು ಯಾರೆಂದು ನಮಗೆ ತೋರಿಸಿರಿ,” ಎಂದರು.
26 ಅನಂತರ ಚೀಟುಹಾಕಿದರು. ಅದು ಮತ್ತೀಯನ ಪರವಾಗಿತ್ತು. ಅವನನ್ನು ಹನ್ನೊಂದು ಮಂದಿಯೊಡನೆ ಪ್ರೇಷಿತಸ್ಥಾನಕ್ಕೆ ಸೇರಿಸಿಕೊಳ್ಳಲಾಯಿತು.

Holydivine