Philippians - Chapter 1
Holy Bible

1 : ಕ್ರಿಸ್ತಯೇಸುವಿನಲ್ಲಿ ಜೀವಿಸುವ ಫಿಲಿಪ್ಪಿಯ ದೇವಜನರಿಗೆ, ಧರ್ಮಾಧಿಕಾರಿಗಳಿಗೆ ಹಾಗೂ ಧರ್ಮಸೇವಕರಿಗೆ - ಕ್ರಿಸ್ತಯೇಸುವಿನ ದಾಸರಾದ ಪೌಲ ಮತ್ತು ತಿಮೊಥೇಯರು ಜೊತೆಗೂಡಿ ಬರೆಯುವ ಪತ್ರ.
2 : ನಮ್ಮೆಲ್ಲರ ಪಿತನಾದ ದೇವರ ಮತ್ತು ಪ್ರಭುವಾದ ಯೇಸುಕ್ರಿಸ್ತರ ಆಶೀರ್ವಾದವೂ ಶಾಂತಿ ಸಮಾಧಾನವೂ ನಿಮಗೆ ಲಭಿಸಲಿ !
3 : ನಿಮ್ಮನ್ನು ಜ್ಞಾಪಿಸಿಕೊಳ್ಳುವಾಗಲೆಲ್ಲ ನಾನು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
4 : ನಿಮಗೋಸ್ಕರ ಯಾವಾಗಲೂ ತುಂಬುಹೃದಯದಿಂದ ಪ್ರಾರ್ಥಿಸುತ್ತೇನೆ.
5 : ಏಕೆಂದರೆ, ನಾನು ನಿಮ್ಮನ್ನು ಸಂಧಿಸಿದ ಮೊದಲ ದಿನದಿಂದ ಇಂದಿನವರೆಗೂ ನೀವು ನನ್ನೊಡನೆ ಶುಭಸಂದೇಶದ ಪ್ರಚಾರಕಾರ್ಯದಲ್ಲಿ ಸಹಕರಿಸುತ್ತಿರುವಿರಿ.
6 : ಈ ಸತ್ಕಾರ್ಯವನ್ನು ನಿಮ್ಮಲ್ಲಿ ಪ್ರಾರಂಭಿಸಿದ ದೇವರು ಅದನ್ನು ಮುಂದುವರಿಸುತ್ತಾ, ಯೇಸುಕ್ರಿಸ್ತರು ಪುನರಾಗಮಿಸುವಷ್ಟರಲ್ಲಿ ಪೂರೈಸುವರು ಎಂಬುದೇ ನನ್ನ ದೃಢ ನಂಬಿಕೆ.
7 : ನೀವು ನನಗೆ ಆತ್ಮೀಯರು. ಆದಕಾರಣ, ನಿಮ್ಮೆಲ್ಲರನ್ನು ಕುರಿತು ನನಗೆ ಹೀಗನ್ನಿಸುವುದು ಸೂಕ್ತವೇ ಸರಿ. ನಾನು ಸೆರೆಯಲ್ಲಿರುವಾಗಲೂ ಶುಭಸಂದೇಶಕ್ಕಾಗಿ ಹೋರಾಡಿ ಅದನ್ನು ಸ್ಥಿರಗೊಳಿಸುವಾಗಲೂ ದೇವರ ಅನುಗ್ರಹದಲ್ಲಿ ನೀವು ನನ್ನೊಂದಿಗೆ ಸಹಭಾಗಿಗಳಾಗಿದ್ದಿರಿ.
8 : ಕ್ರಿಸ್ತಯೇಸುವಿನಲ್ಲಿರುವ ಉತ್ಕಟ ಪ್ರೀತಿಯಿಂದಲೇ ನಾನು ನಿಮ್ಮೆಲ್ಲರಿಗಾಗಿ ಹಂಬಲಿಸುತ್ತಿದ್ದೇನೆ; ಇದಕ್ಕೆ ದೇವರೇ ಸಾಕ್ಷಿ.
9 : ನೀವು ಪ್ರೀತಿಯಲ್ಲಿ ಪ್ರವರ್ಧಿಸುತ್ತಾ, ಪೂರ್ಣ ಜ್ಞಾನ ಹಾಗೂ ವಿವೇಕದಿಂದ ಕೂಡಿದವರಾಗಬೇಕೆಂಬುದೇ ನನ್ನ ಪ್ರಾರ್ಥನೆ.
10 : ಹೀಗೆ ನೀವು ಉತ್ತಮೋತ್ತಮವಾದುವುಗಳನ್ನೇ ಆರಿಸಿಕೊಂಡು, ಪ್ರಭುಕ್ರಿಸ್ತರ ದಿನದಂದು ನಿರ್ದೋಷಿಗಳೂ ನಿಷ್ಕಳಂಕರೂ ಆಗಿ ಕಾಣಿಸಿಕೊಳ್ಳುವಿರಿ.
11 : ಯೇಸುಕ್ರಿಸ್ತರ ಮುಖಾಂತರ ಲಭಿಸುವ ಸತ್ಸಂಬಂಧದ ಫಲಗಳಿಂದ ತುಂಬಿದವರಾಗಿ ದೇವರಿಗೆ ಸ್ತುತಿಸಲ್ಲಿಸಿ, ಅವರ ಮಹಿಮೆ ಬೆಳಗುವಂತೆ ಮಾಡುವಿರಿ.
12 : ಸಹೋದರರೇ, ನನಗೆ ಬಂದೊದಗಿರುವುದೆಲ್ಲವೂ ಶುಭಸಂದೇಶದ ಬೆಳವಣಿಗೆಗೆ ಹಿತಕರವಾಗಿ ಪರಿಣಮಿಸಿದೆ. ಇದು ನಿಮಗೆ ತಿಳಿದಿರಬೇಕೆಂಬುದೇ ನನ್ನ ಆಶಯ.
13 : ಯೇಸುಕ್ರಿಸ್ತರ ಸಲುವಾಗಿಯೇ ನಾನು ಸೆರೆಯಲ್ಲಿರುವುದೆಂದು ಇಲ್ಲಿಯ ಅರಮನೆಯ ಕಾವಲಾಳುಗಳಿಗೂ ಇತರರೆಲ್ಲರಿಗೂ ಚೆನ್ನಾಗಿ ತಿಳಿದಿದೆ.
14 : ನನ್ನ ಬಂಧನದಿಂದಾಗಿ ನಮ್ಮ ಸಹೋದರರಲ್ಲಿ ಅನೇಕರು ದೇವರಲ್ಲಿ ಭರವಸೆಯಿಟ್ಟಿರುವರು. ಅಳುಕಿಲ್ಲದೆ, ಅಂಜಿಕೆಯಿಲ್ಲದೆ ದಿಟ್ಟತನದಿಂದ ಶುಭಸಂದೇಶವನ್ನು ಅವರು ಸಾರುತ್ತಿರುವರು.
15 : ಕೆಲವರೇನೋ ಅಸೂಯೆಯಿಂದಲೂ ವೈಮನಸ್ಸಿನಿಂದಲೂ ಕ್ರಿಸ್ತಯೇಸುವನ್ನು ಸಾರುತ್ತಿರುವುದು ನಿಜ; ಆದರೆ ಮಿಕ್ಕವರು ಸದುದ್ದೇಶದಿಂದ ಸಾರುತ್ತಿದ್ದಾರೆ;
16 : ಒಲವಿನ ಒತ್ತಾಯದಿಂದ ಸಾರುತ್ತಿದ್ದಾರೆ; ಶುಭಸಂದೇಶದ ಸತ್ಯವನ್ನು ಸಮರ್ಥಿಸುವುದಕ್ಕಾಗಿ ನಾನು ಬಂಧಿತನೆಂದು ಇವರು ಬಲ್ಲರು.
17 : ಆ ಕೆಲವರಾದರೋ ಸ್ವಾರ್ಥ ಸಾಧನೆಗಾಗಿಯೇ ಹೊರತು ಪ್ರಾಮಾಣಿಕರಾಗಿ ಕ್ರಿಸ್ತಯೇಸುವನ್ನು ಸಾರುತ್ತಿಲ್ಲ. ಸೆರೆಯಲ್ಲಿರುವ ನನ್ನನ್ನು ಇನ್ನೂ ಹೆಚ್ಚಿನ ಕಷ್ಟಕ್ಕೆ ಗುರಿಮಾಡಬೇಕೆಂಬುದೇ ಅವರ ಉದ್ದೇಶ.
18 : ಅವರ ಉದ್ದೇಶ ಏನೇ ಆಗಿರಲಿ, ನನಗದು ಮುಖ್ಯವಲ್ಲ. ಕ್ರಿಸ್ತಯೇಸುವನ್ನು ಅವರು ಸಾರುತ್ತಿರುವುದೇ ನನಗೆ ಸಂತೋಷ.
19 : ಹೌದು, ನನಗದು ತುಂಬಾ ಸಂತೋಷದ ವಿಷಯ. ನಿಮ್ಮ ಪ್ರಾರ್ಥನಾ ಫಲದಿಂದಲೂ ಯೇಸುಕ್ರಿಸ್ತರು ಕೊಡುವ ಆತ್ಮದ ನೆರವಿನಿಂದಲೂ ನನಗೆ ಬಿಡುಗಡೆ ಖಚಿತವೆಂದು ಬಲ್ಲೆ.
20 : ನನ್ನ ಕರ್ತವ್ಯಪಾಲನೆಯಲ್ಲಿ ನಾಚುವಂಥ ಸಂದರ್ಭವು ನನಗೆಂದಿಗೂ ಬರದೆಂದು ಬಲ್ಲೆ; ನಾನು ಬದುಕಿದರೂ ಸರಿ, ಸತ್ತರೂ ಸರಿ; ನನ್ನ ದೇಹದ ಮೂಲಕ ಕ್ರಿಸ್ತಯೇಸುವಿಗೆ ಎಂದಿನಂತೆ ಈಗಲೂ ಮಹಿಮೆ ಉಂಟಾಗಬೇಕೆಂಬುದೇ ನನ್ನ ಉತ್ಕಟ ಆಕಾಂಕ್ಷೆ ಹಾಗೂ ನಿರೀಕ್ಷೆ.
21 : ನನಗಂತೂ ಬದುಕುವುದೆಂದರೆ ಕ್ರಿಸ್ತಯೇಸುವೇ; ಸಾಯುವುದು ಲಾಭವೇ.
22 : ದೈಹಿಕವಾಗಿ ಬದುಕುವುದು ಫಲಪ್ರದವಾಗಿದ್ದರೆ, ನಾನು ಬದುಕುವುದು ಉತ್ತಮವೋ ಅಥವಾ ಸಾಯುವುದು ಸೂಕ್ತವೋ ನನಗೆ ತಿಳಿಯದು.
23 : ಉಭಯ ಸಂಕಟಕ್ಕೆ ಸಿಲುಕಿದ್ದೇನೆ. ಒಂದು ಕಡೆ, ಈ ಬದುಕನ್ನು ತೊರೆದು ಕ್ರಿಸ್ತಯೇಸುವಿನೊಡನೆ ಒಂದಾಗಿರಬೇಕೆಂಬುದೇ ನನ್ನ ಬಯಕೆ. ಇದು ಎಷ್ಟೋ ಮೇಲಾದುದು.
24 : ಮತ್ತೊಂದು ಕಡೆ, ನಿಮಗೋಸ್ಕರ ಇಹದಲ್ಲಿದ್ದು ಜೀವಿಸುವುದು ಅತ್ಯವಶ್ಯಕವಾಗಿದೆ.
25 : ಇದರಲ್ಲಿ ನನಗೆ ಎಳ್ಳಷ್ಟೂ ಸಂದೇಹವಿಲ್ಲ. ಈ ಕಾರಣ, ನಾನು ಇಹದಲ್ಲಿ ಉಳಿಯುವೆನೆಂದು ಬಲ್ಲೆ. ನಿಮ್ಮೆಲ್ಲರೊಡನಿದ್ದು, ಕ್ರೈಸ್ತವಿಶ್ವಾಸದಲ್ಲಿ ನೀವು ವೃದ್ಧಿಯಾಗಿ ಆನಂದಿಸುವಂತೆ ನಿಮಗೆ ನೆರವಾಗುತ್ತೇನೆ.
26 : ನಿಮ್ಮಲ್ಲಿಗೆ ನಾನು ಮರಳಿ ಬಂದಾಗ ಕ್ರಿಸ್ತಯೇಸುವಿನಲ್ಲಿ ನೀವು ಹಿರಿಹಿಗ್ಗುವುದಕ್ಕೆ ಮಹದವಕಾಶ ದೊರಕುವುದು.
27 : ಅದೇನೇ ಇರಲಿ, ನೀವು ಮಾತ್ರ ಕ್ರಿಸ್ತಯೇಸುವಿನ ಶುಭಸಂದೇಶಕ್ಕೆ ಯೋಗ್ಯರಾಗಿ ನಡೆದುಕೊಳ್ಳಿರಿ. ನಾನು ನಿಮ್ಮಲ್ಲಿಗೆ ಬಂದರೂ ಸರಿ, ಬಾರದಿದ್ದರೂ ಸರಿ, ಇದು ಮುಖ್ಯವಲ್ಲ. ಶುಭಸಂದೇಶವು ನೀಡುವ ವಿಶ್ವಾಸಕ್ಕಾಗಿ ನೀವು ಒಮ್ಮನಸ್ಸಿನಿಂದ, ಕೆಚ್ಚಿನಿಂದ ಹೋರಾಡುವುದೇ ಮುಖ್ಯ. ಇದು ನನಗೆ ತಿಳಿದುಬಂದರೆ ಅಷ್ಟೇ ಸಾಕು.
28 : ನಿಮ್ಮ ವಿರೋಧಿಗಳಿಗೆ ಯಾವ ವಿಷಯದಲ್ಲೂ ಅಂಜದೆ, ಅಳುಕದೆ ಧೈರ್ಯದಿಂದಿರಿ. ಇದೇ ಅವರಿಗೆ ಅವರ ವಿನಾಶದ ಸ್ಪಷ್ಟ ಮುನ್ಸೂಚನೆ! ನಿಮಗೆ ದೇವರಿಂದ ಬರುವ ಸಂರಕ್ಷಣೆಯ ಮುನ್ಸೂಚನೆ!
29 : ಕ್ರಿಸ್ತಯೇಸುವನ್ನು ನೀವು ವಿಶ್ವಾಸಿಸುವುದು ಮಾತ್ರವಲ್ಲ, ಅವರಿಗೋಸ್ಕರ ಸಂಕಷ್ಟಗಳನ್ನು ಅನುಭವಿಸುವ ಸೌಭಾಗ್ಯವೂ ನಿಮ್ಮದಾಗಿದೆ.
30 : ನಿಮ್ಮ ಹೋರಾಟವೂ ನಮ್ಮ ಹೋರಾಟವೂ ಒಂದೇ ಆಗಿದೆ. ನಾನು ಕ್ರಿಸ್ತಯೇಸುವಿಗಾಗಿ ಪಟ್ಟ ಕಷ್ಟವನ್ನು ನೀವು ಕಂಡಿದ್ದೀರಿ. ಈಗಲೂ ಅನುಭವಿಸುತ್ತಿದ್ದೇನೆಂದು ಅರಿತಿದ್ದೀರಿ.

Holydivine