Ephesians - Chapter 1
Holy Bible

1 : ಕ್ರಿಸ್ತಯೇಸುವಿನಲ್ಲಿ ವಿಶ್ವಾಸವಿಟ್ಟಿರುವ ಎಫೆಸದ ದೇವಜನರಿಗೆ - ದೇವರ ಚಿತ್ತಾನುಸಾರ ಕ್ರಿಸ್ತ ಯೇಸುವಿನ ಪ್ರೇಷಿತನಾಗಿ ನೇಮಕಗೊಂಡ ಪೌಲನು ಬರೆಯುವ ಪತ್ರ.
2 : ಪಿತನಾದ ದೇವರ ಮತ್ತು ಪ್ರಭುವಾದ ಯೇಸುಕ್ರಿಸ್ತರ ಅನುಗ್ರಹವೂ ಶಾಂತಿ ಸಮಾಧಾನವೂ ನಿಮಗೆ ಲಭಿಸಲಿ!
3 : ನಮ್ಮ ಪ್ರಭು ಯೇಸುಕ್ರಿಸ್ತರ ಪಿತನಾದ ದೇವರಿಗೆ ಸ್ತುತಿ ಸಲ್ಲಲಿ! ಪಿತದೇವರು ಸ್ವರ್ಗಲೋಕದಿಂದ ಎಲ್ಲಾ ಬಗೆಯ ಆಧ್ಯಾತ್ಮಿಕ ಆಶೀರ್ವಾದಗಳನ್ನು ಕ್ರಿಸ್ತಯೇಸುವಿನಲ್ಲಿ ನಮಗೆ ಅನುಗ್ರಹಿಸಿದ್ದಾರೆ.
4 : ಜಗತ್ತು ಸೃಷ್ಟಿಯಾಗುವ ಮೊದಲೇ ದೇವರು ಕ್ರಿಸ್ತಯೇಸುವಿನಲ್ಲಿ ನಮ್ಮನ್ನು ತಮ್ಮವರನ್ನಾಗಿ ಆರಿಸಿಕೊಂಡರು. ಹೀಗೆ ಅವರ ಸನ್ನಿಧಿಯಲ್ಲಿ ನಾವು ನಿಷ್ಕಳಂಕರೂ ನಿರ್ದೋಷಿಗಳೂ ಆಗಿರಬೇಕೆಂದು ಇಚ್ಛಿಸಿದರು.
5 : ನಮ್ಮ ಮೇಲಿನ ಪ್ರೀತಿಯಿಂದಾಗಿ ದೇವರು ಯೇಸುಕ್ರಿಸ್ತರ ಮೂಲಕ ನಮ್ಮನ್ನು ತಮ್ಮ ಮಕ್ಕಳನ್ನಾಗಿಸಿಕೊಳ್ಳಲು ಆಗಲೇ ನಿರ್ಧರಿಸಿದ್ದರು. ಇದು ಅವರ ಸಂಕಲ್ಪ ಹಾಗೂ ಚಿತ್ತವಾಗಿತ್ತು.
6 : ತಮ್ಮ ಪ್ರೀತಿಯ ಪುತ್ರನಲ್ಲೇ ಅವರು ನಮಗೆ ಉಚಿತವಾಗಿ ಅನುಗ್ರಹಿಸಿರುವ ಅತಿಶಯ ವರಪ್ರಸಾದಕ್ಕಾಗಿ ಅವರಿಗೆ ಸ್ತುತಿಸಲ್ಲಿಸೋಣ.
7 : ಯೇಸುಕ್ರಿಸ್ತರು ಸುರಿಸಿದ ರಕ್ತಧಾರೆಯ ಮೂಲಕ ನಮಗೆ ಪಾಪಕ್ಷಮೆ ದೊರಕಿತು; ವಿಮೋಚನೆಯೂ ಲಭಿಸಿತು.
8 : ಇದು ದೇವರ ಅನುಗ್ರಹದ ಶ್ರೀಮಂತಿಕೆಯೇ ಸರಿ. ಇದನ್ನು ನಮ್ಮ ಮೇಲೆ ಅವರು ಯಥೇಚ್ಛವಾಗಿ ಸುರಿಸಿದ್ದಾರೆ.
9 : ದೇವರು ಸಮಗ್ರ ಜ್ಞಾನ-ವಿವೇಕಗಳಿಂದ ತಮ್ಮ ರಹಸ್ಯ ಯೋಜನೆಯನ್ನು ನಮಗೆ ತಿಳಿಯಪಡಿಸಿದ್ದಾರೆ. ಮೊದಲೇ ನಿರ್ಧರಿಸಿದ್ದಂತೆ ಅದನ್ನು ಯೇಸುಕ್ರಿಸ್ತರ ಮೂಲಕ ಪರಿಪೂರ್ಣಗೊಳಿಸಬೇಕೆಂಬುದು ಅವರ ಸಂಕಲ್ಪವಾಗಿತ್ತು.
10 : ಕಾಲವು ಸಂಪೂರ್ಣಗೊಂಡಾಗ ಇಹಪರಗಳಲ್ಲಿರುವ ಸಮಸ್ತವನ್ನು ಕ್ರಿಸ್ತ ಯೇಸುವಿನಲ್ಲಿ ಒಂದುಗೂಡಿಸುವುದೇ ಈ ಯೋಜನೆಯ ಇಂಗಿತ:
11 : ದೈವಯೋಜನೆಯಂತೆಯೇ ಸಕಲವೂ ಸಂಭವಿಸುತ್ತದೆ. ದೇವರು ಆದಿಯಲ್ಲೇ ಸಂಕಲ್ಪಸಿದ್ದಂತೆ ತಮ್ಮ ಚಿತ್ತಕ್ಕನುಗುಣವಾಗಿ ಕ್ರಿಸ್ತಯೇಸುವಿನ ಅನ್ಯೋನ್ಯತೆಯಲ್ಲಿ ನಮ್ಮನ್ನು ತಮ್ಮವರನ್ನಾಗಿ ಆರಿಸಿಕೊಂಡರು.
12 : ಆದಕಾರಣ ಯೇಸುಕ್ರಿಸ್ತರಲ್ಲಿ ಮೊತ್ತಮೊದಲು ನಿರೀಕ್ಷೆಯನ್ನಿರಿಸಿದ ನಾವು ದೇವರ ಮಹಿಮೆಯನ್ನು ಸ್ತುತಿಸಿ ಹಾಡಬೇಕು.
13 : ನೀವು ಸಹ ಸತ್ಯವಾಕ್ಯವನ್ನು ಅಂದರೆ, ನಿಮಗೆ ಜೀವೋದ್ದಾರವನ್ನೀಯುವ ಶುಭಸಂದೇಶವನ್ನು ಕೇಳಿ ಯೇಸುಕ್ರಿಸ್ತರಲ್ಲಿ ವಿಶ್ವಾಸ ಇಟ್ಟಿರಿ. ದೇವರು ವಾಗ್ದಾನಮಾಡಿದ ಪವಿತ್ರಾತ್ಮ ಅವರಿಂದ ಮುದ್ರಿತರಾದಿರಿ.
14 : ಹೀಗೆ ದೇವರಿಗೆ ಸೇರಿದವರು ವಿಮೋಚನೆ ಹೊಂದಿ ಸ್ವರ್ಗೀಯ ಸ್ವಾಸ್ಥ್ಯಕ್ಕೆ ಬಾಧ್ಯರಾಗಲು ಆ ಪವಿತ್ರಾತ್ಮರೇ ಆಧಾರ. ಈ ಕಾರಣ ದೇವರಿಗೆ ಮಹಿಮೆ ಸಲ್ಲಲಿ.
15 : ಪ್ರಭು ಯೇಸುವಿನಲ್ಲಿ ನೀವಿಟ್ಟಿರುವ ವಿಶ್ವಾಸ ಹಾಗೂ ದೇವಜನರೆಲ್ಲರ ಮೇಲೆ ನಿಮಗಿರುವ ಪ್ರೀತಿಯನ್ನು ಕುರಿತು ಕೇಳಿದ್ದೇನೆ.
16 : ಅಂದಿನಿಂತ ನಿಮ್ಮ ಸಲುವಾಗಿ ದೇವರಿಗೆ ಸದಾ ಕೃತಜ್ಞತಾಸ್ತುತಿ ಸಲ್ಲಿಸಿ, ನನ್ನ ಪ್ರಾರ್ಥನೆಯಲ್ಲಿ ನಿಮ್ಮನ್ನು ಸ್ಮರಿಸಿಕೊಳ್ಳುತ್ತಿದ್ದೇನೆ.
17 : ನಮ್ಮ ಪ್ರಭು ಯೇಸುಕ್ರಿಸ್ತರ ದೇವರೂ ಮಹಿಮಾನ್ವಿತ ತಂದೆಯೂ ಆದವರು, ನಿಮಗೆ ಜ್ಞಾನವನ್ನೂ ವಿವೇಚನೆಯನ್ನೂ ನೀಡುವ ಆತ್ಮವನ್ನು ದಯಪಾಲಿಸಲಿ; ತಮ್ಮನ್ನು ಸಂಪೂರ್ಣವಾಗಿ ಅರಿತುಕೊಳ್ಳುವ ವರವನ್ನು ಈಯಲಿ, ಎಂದು ಪ್ರಾರ್ಥಿಸುತ್ತೇನೆ.
18 : ದೇವರು ನಿಮ್ಮ ಮನೋನೇತ್ರಗಳನ್ನು ತೆರೆಯಲಿ; ಅವರ ಬೆಳಕು ನಿಮಗೆ ಕಾಣುವಂತೆ ಆಗಲಿ. ಹೀಗೆ, ಅವರು ಕರೆದಿರುವ ಜನರಿಗೆ ಲಭಿಸುವ ಭರವಸೆಯ ಭಾಗ್ಯ ಎಂಥದ್ದೆಂದೂ ದೇವಜನರಿಗೆ ಕಾಯ್ದಿರಿಸಿರುವ ಸ್ವಾಸ್ಥ್ಯ ಸಂಪತ್ತು ಎಂಥದ್ದೆಂದೂ ನೀವು ಅರಿತುಕೊಳ್ಳಬೇಕು.
19 : ಕ್ರೈಸ್ತವಿಶ್ವಾಸಿಗಳಾದ ನಮ್ಮಲ್ಲಿ ದೇವರು ಸಾಧಿಸಿರುವ ಮಹತ್ಕಾರ್ಯಗಳು ಎಷ್ಟು ಶಕ್ತಿಯುತವಾದುವು ಎಂಬುದು ನಿಮಗೆ ಮನದಟ್ಟಾಗಬೇಕು.
20 : ಈ ಮಹಿಮಾಶಕ್ತಿಯಿಂದಲೇ ದೇವರು ಯೇಸುಕ್ರಿಸ್ತರನ್ನು ಮರಣದಿಂದ ಎಬ್ಬಿಸಿದರು; ಸಕಲ ಅಧಿಕಾರ, ಆಧಿಪತ್ಯ, ಪ್ರಭಾವ ಮತ್ತು ಪ್ರಭುತ್ವ ಇವೆಲ್ಲವುಗಳ ಮೇಲೆ ಯೇಸುಕ್ರಿಸ್ತರೇ ಆಡಳಿತ ನಡೆಸುವಂತೆ ಸ್ವರ್ಗಲೋಕದಲ್ಲಿ ಅವರನ್ನು ತಮ್ಮ ಬಲಗಡೆಯಲ್ಲಿ ಆಸೀನರಾಗಿಸಿದ್ದಾರೆ.
21 : ಹೀಗೆ ಇಹದಲ್ಲೂ ಪರದಲ್ಲೂ ಕೀರ್ತಿಗಳಿಸಿದವರೆಲ್ಲರಿಗಿಂತಲೂ ಯೇಸುಕ್ರಿಸ್ತರ ಮಹಿಮೆಯೇ ಸರ್ವಶ್ರೇಷ್ಠವಾದುದು.
22 : ದೇವರು ಸಮಸ್ತವನ್ನು ಯೇಸುಕ್ರಿಸ್ತರ ಪಾದದಡಿಯಲ್ಲಿರಿಸಿ, ಅವರನ್ನು ಧರ್ಮಸಭೆಯ ಶಿರಸ್ಸನ್ನಾಗಿ ನೇಮಿಸಿದ್ದಾರೆ.
23 : ಧರ್ಮಸಭೆಯೇ ಯೇಸುಕ್ರಿಸ್ತರ ದೇಹ. ಎಲ್ಲವನ್ನೂ ಎಲ್ಲಾ ವಿಧದಲ್ಲೂ ಪೂರೈಸುವಾತನಿಂದ ಅದು ಪರಿಪೂರ್ಣ ಉಳ್ಳದ್ದಾಗಿದೆ.

Holydivine