Ephesians - Chapter 3
Holy Bible

1 : ಅನ್ಯಜನರಾದ ನಿಮ್ಮ ನಿಮಿತ್ತ ಯೇಸುಕ್ರಿಸ್ತರ ಸೆರೆಯಾಳಾಗಿರುವ ಪೌಲನೆಂಬ ನಾನು ಹೇಳುವುದೇನೆಂದರೆ:
2 : ದೇವರು ತಮ್ಮ ಕೃಪಾತಿಶಯದ ಬಗ್ಗೆ ಸಾರುವ ಹೊಣೆಯನ್ನು ನಿಮ್ಮ ಸಲುವಾಗಿ ನನಗೆ ಕೊಟ್ಟಿರುತ್ತಾರೆಂಬುದನ್ನು ನೀವೇ ಬಲ್ಲಿರಿ.
3 : ದೇವರು ತಮ್ಮ ನಿಗೂಢ ಯೋಜನೆಯನ್ನು ನನಗೆ ಪ್ರಕಟಗೊಳಿಸಿದ್ದಾರೆ. ಇದರ ಬಗ್ಗೆ ನಾನು ಮೊದಲೇ ನಿಮಗೆ ಸಂಕ್ಷೇಪವಾಗಿ ಬರೆದಿದ್ದೇನೆ.
4 : ಅದನ್ನು ಲಕ್ಷ್ಯವಿಟ್ಟು ಓದಿದರೆ, ಆಗ ಯೇಸುಕ್ರಿಸ್ತರ ರಹಸ್ಯವನ್ನು ಎಷ್ಟರ ಮಟ್ಟಿಗೆ ನಾನು ಮನಗಂಡಿದ್ದೇನೆ ಎಂದು ನಿಮಗೇ ತಿಳಿಯುತ್ತದೆ.
5 : ಹಿಂದಿನ ಕಾಲದವರಿಗೆ ಈ ರಹಸ್ಯವನ್ನು ತಿಳಿಸಿರಲಿಲ್ಲ. ಆದರೆ ಈಗ ದೇವರು ಪವಿತ್ರಾತ್ಮರ ಮುಖಾಂತರ ಪೂಜ್ಯ ಪ್ರೇಷಿತರಿಗೂ ಪ್ರವಾದಿಗಳಿಗೂ ಅದನ್ನು ಪ್ರಕಟಿಸಿದ್ದಾರೆ.
6 : ಶುಭಸಂದೇಶದ ಮೂಲಕ ಅನ್ಯಜನರೂ ಯೇಸುಕ್ರಿಸ್ತರಲ್ಲಿ ದೇವಜನರೊಡನೆ ಸಹಬಾಧ್ಯರು, ಹಕ್ಕುದಾರರು, ಒಂದೇ ಶರೀರದ ಅಂಗಗಳು, ಹಾಗೂ ದೇವರು ಮಾಡಿದ ವಾಗ್ದಾನದಲ್ಲಿ ಪಾಲುಗಾರರು; ಇದೇ ಆ ರಹಸ್ಯ.
7 : ಈ ಶುಭಸಂದೇಶಕ್ಕೆ ದಾಸನನ್ನಾಗಿ ದೇವರು ನನ್ನನ್ನು ನೇಮಿಸಿದ್ದಾರೆ. ತಮ್ಮ ಪ್ರಭಾವಮಯ ಶಕ್ತಿಯಿಂದ ಈ ವಿಶೇಷ ವರವನ್ನು ಉಚಿತವಾಗಿ ನನಗೆ ದಯಪಾಲಿಸಿದ್ದಾರೆ.
8 : ದೇವಜನರಲ್ಲೆಲ್ಲ ನಾನು ಅತ್ಯಲ್ಪನು. ಆದರೂ ಯೇಸುಕ್ರಿಸ್ತರ ಅಪರಿಮಿತ ಆಧ್ಯಾತ್ಮಿಕ ಸಿರಿಸಂಪತ್ತಿನ ಬಗ್ಗೆ ಅನ್ಯಜನರಿಗೆ ಪ್ರಬೋಧಿಸುವ ಸೌಭಾಗ್ಯ ನನ್ನದಾಯಿತು.
9 : ಸಮಸ್ತವನ್ನು ಸೃಷ್ಟಿಸಿದ ದೇವರ ಆದಿಯಿಂದಲೂ ಗುಪ್ತವಾಗಿಟ್ಟಿದ್ದ ತಮ್ಮ ಯೋಜನೆಯನ್ನು ಈಡೇರಿಸುವ ವಿಧಾನವನ್ನು ಸರ್ವಜನರಿಗೆ ತಿಳಿಯಪಡಿಸುವುದಕ್ಕಾಗಿ ನನ್ನನ್ನು ಆರಿಸಿಕೊಂಡಿರುವರು.
10 : ಹೀಗೆ ಧರ್ಮಸಭೆಯ ಮೂಲಕ ದೇವರ ಬಹುರೂಪದ ಜ್ಞಾನವು ಅಶರೀರ ಶಕ್ತಿಗಳ ಅಧಿಕಾರಿಗಳಿಗೂ ಅಧಿಪತಿಗಳಿಗೂ ಈಗಿನ ಕಾಲದಲ್ಲಿ ತಿಳಿಯಬೇಕೆಂಬುದೇ ಅವರ ಉದ್ದೇಶವಾಗಿತ್ತು.
11 : ತಮ್ಮ ಪೂರ್ವ ಸಂಕಲ್ಪದಂತೆಯೇ ಇದನ್ನು ದೇವರು ನಮ್ಮ ಪ್ರಭುವಾದ ಯೇಸುಕ್ರಿಸ್ತರಲ್ಲಿ ಕಾರ್ಯಗತಗೊಳಿಸಿದರು.
12 : ಯೇಸುಕ್ರಿಸ್ತರಲ್ಲಿ ನಾವಿಟ್ಟಿರುವ ವಿಶ್ವಾಸದ ಮೂಲಕ ಅವರಲ್ಲಿ ಒಂದಾಗಿ, ದೇವರ ಸಾನ್ನಿಧ್ಯವನ್ನು ಸೇರುವ ಧೈರ್ಯ ಹಾಗೂ ಭರವಸೆ ನಮಗಿದೆ.
13 : ಆದುದರಿಂದ ನಿಮಗಾಗಿ ನಾವು ಸಹಿಸುತ್ತಿರುವ ಸಂಕಟಗಳನ್ನು ನೆನೆದು ಎದೆಗುಂದದಿರಿ. ಇದೆಲ್ಲವೂ ನಿಮ್ಮ ಯಶಸ್ವಿಗಾಗಿಯೇ ಎಂಬುದನ್ನು ಮರೆಯದಿರಿ.
14 : ಈ ಕಾರಣ ನಾನು ಮೊಣಕಾಲೂರಿ ಪಿತನಲ್ಲಿ ಪ್ರಾರ್ಥಿಸುತ್ತೇನೆ;
15 : ಸ್ವರ್ಗಲೋಕದಲ್ಲೂ ಭೂಲೋಕದಲ್ಲೂ ಪ್ರತಿ ಕುಟುಂಬವು ತನ್ನ ಹೆಸರನ್ನು ಪಡೆದಿರುವುದು ಅವರಿಂದಲೇ.
16 : ಅವರು ತಮ್ಮ ಮಹಿಮೆಯ ಸಂಪನ್ಮೂಲಗಳಿಂದ ಪವಿತ್ರಾತ್ಮ ಅವರ ಮುಖಾಂತರ ನಿಮ್ಮ ಅಂತರಂಗವನ್ನು ಬಲಗೊಳಿಸಲಿ;
17 : ನಿಮ್ಮ ವಿಶ್ವಾಸದ ಫಲವಾಗಿ, ಯೇಸುಕ್ರಿಸ್ತರು ನಿಮ್ಮ ಹೃದಯಗಳಲ್ಲಿ ಸದಾ ವಾಸಿಸಲಿ ಮತ್ತು ನಿಮ್ಮ ಜೀವನವು ಪ್ರೀತಿಯಲ್ಲಿ ಬೇರೂರಿ ಸದೃಢವಾಗಿ ನಿಲ್ಲಲಿ.
18 : ಹೀಗೆ ದೇವಜನರೆಲ್ಲರೊಡನೆ, ಕ್ರಿಸ್ತ ಯೇಸುವಿನ ಅಗಾಧ ಪ್ರೀತಿಯ ಉದ್ದ-ಅಗಲ, ಆಳ-ಎತ್ತರ ಎಷ್ಟೆಂಬುದನ್ನು ನೀವು ಗ್ರಹಿಸಿಕೊಳ್ಳುವಂತಾಗಲಿ.
19 : ಹೌದು, ಜ್ಞಾನವನ್ನು ಮೀರಿದ ಈ ಪ್ರೀತಿಯನ್ನು ಅರಿತುಕೊಳ್ಳಲು ಆಸಕ್ತರಾಗಬೇಕು, ದೇವರ ಪರಿಪೂರ್ಣತೆಯಿಂದ ತುಂಬಿದವರಾಗಬೇಕು ಎಂದು ನಾನು ಬೇಡಿಕೊಳ್ಳುತ್ತೇನೆ.
20 : ನಮ್ಮಲ್ಲಿ ಕಾರ್ಯಸಾಧಿಸುವ ಹಾಗೂ ನಮ್ಮ ಆಶೆ-ಆಕಾಂಕ್ಷೆಗಿಂತಲೂ ಬೇಡಿಕೆ-ಕೋರಿಕೆಗಿಂತಲೂ ಅಧಿಕವಾದುದನ್ನು ಮಾಡಲು ದೇವರು ಶಕ್ತರು.
21 : ಅವರಿಗೆ ಧರ್ಮಸಭೆಯಲ್ಲೂ ಕ್ರಿಸ್ತಯೇಸುವಿನಲ್ಲೂ ಯುಗಯುಗಾಂತರಕ್ಕೂ ತಲತಲಾಂತರಕ್ಕೂ ಮಹಿಮೆ ಸಲ್ಲಲಿ! ಆಮೆನ್!

Holydivine