Titus - Chapter 1
Holy Bible

1 : ಕ್ರಿಸ್ತವಿಶ್ವಾಸದಲ್ಲಿ ಪುತ್ರನಾಗಿರುವ ತೀತನಿಗೆ - ದೇವರ ದಾಸನೂ ಯೇಸುಕ್ರಿಸ್ತರ ಪ್ರೇಷಿತನೂ ಆದ ಪೌಲನು ಬರೆಯುವ ಪತ್ರ. ತಂದೆಯಾದ ದೇವರೂ ನಮ್ಮ ಉದ್ಧಾರಕರಾದ ಯೇಸುಕ್ರಿಸ್ತರೂ ನಿನಗೆ ಕೃಪಾಶೀರ್ವಾದವನ್ನೂ ಶಾಂತಿಸಮಾಧಾನವನ್ನೂ ಅನುಗ್ರಹಿಸಲಿ!
2 : ದೇವರು, ತಾವು ಆರಿಸಿಕೊಂಡಿರುವ ಜನರ ವಿಶ್ವಾಸವನ್ನು ದೃಢಪಡಿಸಲು ಮತ್ತು ಭಕ್ತಿಯನ್ನು ವೃದ್ಧಿಗೊಳಿಸಿ ಅಮರ ಜೀವದತ್ತ ಕರೆದೊಯ್ಯುವ ಸತ್ಯಗಳನ್ನು ಅವರಿಗೆ ಬೋಧಿಸಲು ನನ್ನನ್ನು ನೇಮಿಸಿದ್ದಾರೆ.
3 : ಈ ಅಮರ ಜೀವವನ್ನು ಕೊಡುವುದಾಗಿ ಸತ್ಯಪರರಾದ ದೇವರು ಆದಿಯಿಂದಲೂ ನಮಗೆ ವಾಗ್ದಾನಮಾಡಿದ್ದರು.
4 : ಸೂಕ್ತ ಕಾಲವು ಬಂದಾಗ ಈ ವಾಗ್ದಾನವನ್ನು ಈಡೇರಿಸಿ ತಮ್ಮ ಸಂದೇಶವನ್ನು ಪ್ರಕಟಿಸಿದರು. ನನಗೊಪ್ಪಿಸಿರುವ ಈ ಸಂದೇಶವನ್ನು ಜಗದ್ರಕ್ಷಕರಾದ ದೇವರ ಆಜ್ಞಾನುಸಾರ ನಾನು ಸಾರುತ್ತಿದ್ದೇನೆ.
5 : ನೀನು ಕ್ರೇಟ್ ದ್ವೀಪದಲ್ಲಿ ಇನ್ನೂ ಸರಿಪಡಿಸಬೇಕಾದ ಕೆಲಸಗಳನ್ನು ಕ್ರಮಪಡಿಸಿ, ಅಲ್ಲಿಯ ಪ್ರತಿಯೊಂದು ಪಟ್ಟಣಕ್ಕೂ ಸಭೆಯ ಹಿರಿಯರನ್ನು ನೇಮಿಸಬೇಕೆಂದು ನಿನ್ನನ್ನು ಅಲ್ಲೇ ಬಿಟ್ಟು ಬಂದೆ.
6 : ನಾನು ಕೊಟ್ಟ ಸಲಹೆಗಳನ್ನು ಜ್ಞಾಪಿಸಿಕೋ; ಸಭಾಹಿರಿಯನು ನಿಂದಾರಹಿತನೂ ಏಕಪತ್ನಿ ವ್ರತಸ್ಥನೂ ಆಗಿರಬೇಕು. ಆತನ ಮಕ್ಕಳು ವಿಶ್ವಾಸಿಗಳಾಗಿರಬೇಕು. ಅವರು ಸ್ವೇಚ್ಛಾಚಾರಿಗಳಾಗಿರಬಾರದು, ಅವಿಧೇಯರಾಗಿರಬಾರದು.
7 : ಏಕೆಂದರೆ, ಸಭಾಧ್ಯಕ್ಷನು ದೇವರ ಸೇವೆಯಲ್ಲಿ ಮೇಲ್ವಿಚಾರಕನಾಗಿರುವುದರಿಂದ ನಿಂದಾರಹಿತನಾಗಿರಬೇಕು. ಆತನು ಗರ್ವಿ ಅಥವಾ ಮುಂಗೋಪಿಯಾಗಿರಬಾರದು. ಕುಡಿತವಾಗಲಿ, ಹಿಂಸಾಚಾರವಾಗಲಿ, ಹಿಂಸಾಪ್ರವೃತ್ತಿಯಾಗಲಿ ಅವನಲ್ಲಿರಬಾರದು. ಅವನು ಲಾಭಕೋರನಾಗಿರಬಾರದು.
8 : ಅತಿಥಿ ಸತ್ಕಾರಮಾಡುವವನೂ ಒಳ್ಳೆಯದನ್ನು ಪ್ರೀತಿಸುವವನೂ ಆಗಿರಬೇಕು. ಇಂಥವನು ಸ್ವಸ್ಥಚಿತ್ತನೂ ನೀತಿವಂತನೂ ಸದ್ಭಕ್ತನೂ ಆತ್ಮ ಸಂಯಮವುಳ್ಳವನೂ ಆಗಿರಬೇಕು.
9 : ವಿಶ್ವಾಸಿಸಲು ಯೋಗ್ಯವಾದ ಹಾಗೂ ಕ್ರೈಸ್ತತತ್ವಗಳಿಗೆ ಅನುಗುಣವಾದ ಸಿದ್ಧಾಂತಗಳನ್ನು ಅವನು ಭದ್ರವಾಗಿ ಹಿಡಿದವನಾಗಿರಬೇಕು. ಆಗ ಸದ್ಬೋಧನೆಯಿಂದ ಇತರರನ್ನು ಪ್ರೋತ್ಸಾಹಿಸುವುದಕ್ಕೂ ಅದಕ್ಕೆ ವ್ಯತಿರಿಕ್ತವಾಗಿ ನಡೆಯುವವರ ತಪ್ಪುಗಳನ್ನು ಎತ್ತಿತೋರಿಸುವುದಕ್ಕೂ ಆತನು ಸಮರ್ಥನಾಗುತ್ತಾನೆ.
10 : ಇತ್ತೀಚೆಗೆ ಅವಿಧೇಯರು, ಜೊಳ್ಳುಮಾತಿನವರು ಹಾಗೂ ವಂಚಕಬೋಧಕರು ತಲೆಯೆತ್ತಿದ್ದಾರೆ. ಅವರಲ್ಲಿ ಕ್ರೈಸ್ತರಾಗಿರುವ ಯೆಹೂದ್ಯರು ಸಾಕಷ್ಟು ಮಂದಿ ಇದ್ದಾರೆ.
11 : ಇವರ ಬಾಯಿ ಮುಚ್ಚಿಸಬೇಕಾಗಿದೆ. ಏಕೆಂದರೆ, ಇವರು ಹಣಸಂಪಾದನೆಯ ದುರುದ್ದೇಶದಿಂದ ಮಾಡಬಾರದ ಬೋಧನೆಯನ್ನು ಮಾಡಿ ಅನೇಕ ಕುಟುಂಬಗಳನ್ನು ಹಾಳುಮಾಡುತ್ತಿದ್ದಾರೆ.
12 : ಕ್ರೇಟ್‍ನವನೇ ಆದ ಅವರ ಪ್ರವಾದಿಯೊಬ್ಬನು ಸ್ವಜನರ ವಿಷಯವಾಗಿ ಹೀಗೆಂದಿದ್ದಾನೆ:
13 : ‘ಕ್ರೇಟ್ ನಿವಾಸಿಗಳು ಸದಾ ಸುಳ್ಳುಗಾರರು, ದುಷ್ಟಮೃಗಗಳು, ಸೋಮಾರಿಗಳು ಮತ್ತು ಹೊಟ್ಟೆಬಾಕರು’ - ಈ ಮಾತು ನಿಜವಾದುದು.
14 : ಆದ್ದರಿಂದ ಯೆಹೂದ್ಯರ ಕಟ್ಟುಕತೆಗಳಿಗೂ ಸತ್ಯಭ್ರಷ್ಟರಾದವರ ವಿಧಿಗಳಿಗೂ ಕಿವಿಗೊಡದಂತೆ ತಿವ್ರವಾಗಿ ಖಂಡಿಸಿ, ವಿಶ್ವಾಸದಲ್ಲಿ ದೃಢವಾಗಿರುವಂತೆ ಭಕ್ತಾದಿಗಳಿಗೆ ಬೋಧಿಸು.
15 : ಮನಃಶುದ್ಧಿಯುಳ್ಳವರಿಗೆ ಎಲ್ಲವೂ ಶುದ್ಧವಾಗಿಯೇ ಇದೆ. ಭ್ರಷ್ಟರಿಗೆ ಮತ್ತು ಅವಿಶ್ವಾಸಿಗಳಿಗೆ ಯಾವುದೂ ಶುದ್ಧವಲ್ಲ. ಏಕೆಂದರೆ, ಅವರ ಮನಸ್ಸೂ ಮನಸ್ಸಾಕ್ಷಿಯೂ ಮಲಿನವಾಗಿದೆ.
16 : ತಾವು ದೇವರನ್ನು ಬಲ್ಲವರೆಂದು ಹೇಳಿಕೊಳ್ಳುತ್ತಾರೆ. ಆದರೆ ಅವರ ನಡತೆ ತದ್ವಿರುದ್ಧವಾಗಿರುತ್ತದೆ. ಇಂಥವರು ಅವಿಧೇಯರೂ ಅಸಹ್ಯರೂ ಆಗಿರುವುದರಿಂದ ಯಾವುದೇ ಸತ್ಕಾರ್ಯವನ್ನು ಮಾಡಲು ಅಯೋಗ್ಯರಾಗಿದ್ದಾರೆ.

Holydivine