Romans - Chapter 1
Holy Bible

1 : ದೇವರಿಗೆ ಅತ್ಯಂತ ಪ್ರಿಯರು ಹಾಗು ದೇವಜನರಾಗಲು ಕರೆಹೊಂದಿದವರು ಆದ ರೋಮ್‍ನಗರ ನಿವಾಸಿಗಳೆಲ್ಲರಿಗೆ: ಕ್ರಿಸ್ತ ಯೇಸುವಿನ ದಾಸನೂ ಪ್ರೇಷಿತನಾಗಲು ಕರೆ ಹೊಂದಿದವನೂ ದೇವರ ಶುಭಸಂದೇಶವನ್ನು ಸಾರಲು ನೇಮಕಗೊಂಡವನೂ ಆದ ಪೌಲನು ಬರೆಯುವ ಪತ್ರ: ನಮ್ಮ ತಂದೆಯಾದ ದೇವರು ಹಾಗು ಪ್ರಭುವಾದ ಯೇಸುಕ್ರಿಸ್ತರು ನಿಮಗೆ ಕೃಪಾಶೀರ್ವಾದವನ್ನೂ ಶಾಂತಿಸಮಾಧಾನವನ್ನೂ ಅನುಗ್ರಹಿಸಲಿ.
2 : ದೇವರು ತಮ್ಮ ಶುಭಸಂದೇಶವನ್ನು ನೀಡುವುದಾಗಿ ಪ್ರವಾದಿಗಳ ಮುಖಾಂತರ ಮುಂಚಿತವಾಗಿಯೇ ಪವಿತ್ರಗ್ರಂಥದಲ್ಲಿ ವಾಗ್ದಾನಮಾಡಿದ್ದರು.
3 : ಈ ಸಂದೇಶ ದೇವರ ಪುತ್ರನೂ ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರನ್ನು ಕುರಿತಾದುದು. ಮನುಷ್ಯತ್ವದ ಮಟ್ಟಿಗೆ ಯೇಸು ದಾವೀದನ ವಂಶಜರು;
4 : ದೈವಿಕ ಪರಿಶುದ್ಧತೆಯ ಮಟ್ಟಿಗೆ ಇವರು ದೇವರ ಶಕ್ತಿಯನ್ನು ವ್ಯಕ್ತಪಡಿಸುವ ದೇವರ ಪುತ್ರ. ಸತ್ತು ಪುನರುತ್ಥಾನ ಹೊಂದಿ ಇದನ್ನು ಖಚಿತಪಡಿಸಿದವರು.
5 : ಇವರ ನಾಮ ಮಹಿಮೆಗೋಸ್ಕರವಾಗಿಯೇ ಸರ್ವಜನಾಂಗಗಳೂ ಇವರನ್ನು ವಿಶ್ವಾಸಿಸಿ, ವಿಧೇಯರಾಗಿ ನಡೆಯುವಂತೆ ಮಾಡಲು ಪ್ರೇಷಿತನಾಗುವ ಸೌಭಾಗ್ಯ ನನ್ನದಾಯಿತು. ಆ ಯೇಸುಕ್ರಿಸ್ತರ ಮುಖಾಂತರವೇ ದೇವರು ಈ ಭಾಗ್ಯವನ್ನು ನನಗೆ ಅನುಗ್ರಹಿಸಿದರು.
6 : ಯೇಸುಕ್ರಿಸ್ತರಿಗೆ ಸ್ವಂತದವರಾಗಲು ಕರೆ ಹೊಂದಿರುವ ನೀವು ಕೂಡ ಸರ್ವ ಜನಾಂಗಗಳಲ್ಲಿ ಸೇರಿದ್ದೀರಿ.
7 : ಮೊಟ್ಟ ಮೊದಲನೆಯದಾಗಿ, ನಿಮ್ಮೆಲ್ಲರ ಪರವಾಗಿ ಯೇಸುಕ್ರಿಸ್ತರ ಮುಖಾಂತರ ನಾನು ನನ್ನ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
8 : ಏಕೆಂದರೆ, ನಿಮ್ಮ ವಿಶ್ವಾಸ ಹಾಗು ವಿಧೇಯತೆ ಇಡೀ ಜಗತ್ತಿನಲ್ಲಿ ಪ್ರಖ್ಯಾತವಾಗಿದೆ.
9 : ನಾನು ಪ್ರಾರ್ಥನೆ ಮಾಡುವಾಗಲೆಲ್ಲ ತಪ್ಪದೆ, ನಿಮ್ಮ ಪರವಾಗಿ ವಿಜ್ಞಾಪನೆ ಮಾಡುತ್ತೇನೆ. ದೈವಚಿತ್ತದಿಂದ ನಾನು ನಿಮ್ಮಲ್ಲಿಗೆ ಬರಲು ಈಗಲಾದರೂ ಅನುಕೂಲವಾಗಲೆಂದು ಬೇಡಿಕೊಳ್ಳುತ್ತೇನೆ.
10 : ಇದಕ್ಕೆ ದೇವರೇ ಸಾಕ್ಷಿ. ಅವರ ಪುತ್ರನನ್ನೇ ಕುರಿತಾದ ಶುಭಸಂದೇಶವನ್ನು ಸಾರುತ್ತಾ ದೈವಸೇವೆಯನ್ನು ಮನಃಪೂರ್ವಕವಾಗಿ ಮಾಡಿಕೊಂಡು ಬರುತ್ತಿದ್ದೇನೆ.
11 : ನಾನು ನಿಮ್ಮನ್ನು ಕಂಡು, ನಿಮ್ಮೊಡನೆ ಆಧ್ಯಾತ್ಮಿಕ ವರಗಳನ್ನು ಹಂಚಿಕೊಂಡು, ನಿಮ್ಮನ್ನು ದೃಢಪಡಿಸಲು ಅತ್ಯಾಸಕ್ತಿಯಿಂದಿದ್ದೇನೆ.
12 : ಅಂದರೆ, ನನ್ನ ವಿಶ್ವಾಸದಿಂದ ನೀವೂ ನಿಮ್ಮ ವಿಶ್ವಾಸದಿಂದ ನಾನೂ - ಪರಸ್ಪರ ಪ್ರಯೋಜನವನ್ನು ಪಡೆಯಬೇಕೆಂಬುದೇ ನನ್ನ ಆಶಯ.
13 : ಸಹೋದರರೇ, ಈ ವಿಷಯ ನಿಮಗೆ ತಿಳಿದಿರಲಿ: ನನ್ನ ಸೇವೆ ಇತರ ಜನರಲ್ಲಿ ಫಲಪ್ರದವಾದಂತೆ ನಿಮ್ಮಲ್ಲೂ ಫಲಪ್ರದವಾಗಬೇಕೆಂಬ ಉದ್ದೇಶದಿಂದ ನಿಮ್ಮ ಬಳಿಗೆ ಬರಲು ನಾನು ಅನೇಕ ಸಾರಿ ಪ್ರಯತ್ನಿಸಿದೆನು. ಆದರೆ, ಕಾರಣಾಂತರಗಳಿಂದ ಇದುವರೆವಿಗೂ ಬರಲು ಸಾಧ್ಯವಾಗಲಿಲ್ಲ.
14 : ಜನರು ನಾಗರಿಕರೇ ಆಗಿರಲಿ, ಅನಾಗರಿಕರೇ ಆಗಿರಲಿ, ವಿದ್ಯಾವಂತರೇ ಆಗಿರಲಿ, ಅವಿದ್ಯಾವಂತರೇ ಆಗಿರಲಿ, ಅವರೆಲ್ಲರಿಗೂ ನಾನು ಕರ್ತವ್ಯಬದ್ಧನಾಗಿದ್ದೇನೆ.
15 : ಆದುದರಿಂದಲೇ ರೋಮ್ ನಗರದಲ್ಲಿರುವ ನಿಮಗೂ ಶುಭಸಂದೇಶವನ್ನು ಸಾರಲು ನಾನು ಆತುರದಿಂದ ಎದುರುನೋಡುತ್ತಿದ್ದೇನೆ.
16 : ಶುಭಸಂದೇಶದ ವಿಷಯದಲ್ಲಿ ನಾನು ನಾಚಿಕೆಪಡುವವನೇ ಅಲ್ಲ. ಯೆಹೂದ್ಯರನ್ನು ಮೊದಲ್ಗೊಂಡು ಇತರರಿಗೂ ವಿಶ್ವಾಸಿಸುವ ಪ್ರತಿಯೊಬ್ಬನಿಗೂ ಈ ಶುಭಸಂದೇಶವು ಜೀವೋದ್ಧಾರವನ್ನು ತರುವ ದೇವರ ಶಕ್ತಿಯಾಗಿದೆ.
17 : ದೇವರು ಮಾನವನನ್ನು ಹೇಗೆ ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ ಎಂಬುದನ್ನು ಶುಭಸಂದೇಶವು ಪ್ರಕಟಿಸುತ್ತದೆ. ಇಂಥ ಸಂಬಂಧವು ಆದಿಯಿಂದ ಅಂತ್ಯದವರೆಗೂ ವಿಶ್ವಾಸದಿಂದ ಮಾತ್ರ ಸಾಧ್ಯ. “ಯಾರು ದೇವರೊಡನೆ ಸತ್ಸಂಬಂಧ ಹೊಂದಿರುತ್ತಾರೋ ಅವರು ವಿಸ್ವಾಸದಿಂದಲೇ ಸಜ್ಜೀವವನ್ನು ಪಡೆಯುತ್ತಾರೆ,” ಎಂದು ಪವಿತ್ರ ಗ್ರಂಥದಲ್ಲಿ ಲಿಖಿತವಾಗಿದೆ.
18 : ಮಾನವರ ಎಲ್ಲಾ ಪಾಪಾಕ್ರಮಗಳ ಮೇಲೆ ದೇವರ ಕೋಪಾಗ್ನಿ ಸ್ವರ್ಗದಿಂದ ಎರಗುವುದೆಂದು ಪ್ರಕಟವಾಗುತ್ತಿದೆ. ಏಕೆಂದರೆ, ಅವರ ಅಕ್ರಮ ನಡತೆ ಸತ್ಯವನ್ನು ಅಡಗಿಸುತ್ತಿದೆ.
19 : ದೇವರ ವಿಷಯವಾಗಿ ಮಾನವರು ಏನನ್ನು ಅರಿತುಕೊಳ್ಳಲು ಸಾಧ್ಯವೋ ಅದು ಅವರಿಗೆ ಚೆನ್ನಾಗಿ ತಿಳಿದಿದೆ. ದೇವರೇ ಅದನ್ನು ಅವರಿಗೆ ಸ್ಪಷ್ಟಪಡಿಸಿದ್ದಾರೆ.
20 : ದೇವರು ಲೋಕವನ್ನು ಸೃಷ್ಟಿಸಿದಂದಿನಿಂದ ಅವರ ಅಗೋಚರ ಗುಣಲಕ್ಷಣಗಳು, ಅವರ ಅನಂತ ಶಕ್ತಿ ಮತ್ತು ದೈವಸ್ವಭಾವ ಮನುಷ್ಯರಿಗೆ ಸೃಷ್ಟಿಗಳ ಮೂಲಕವೇ ವೇದ್ಯವಾಗುತ್ತಿವೆ. ಆದುದರಿಂದ ಮಾನವರು ತಮ್ಮ ಅಜ್ಞಾನಕ್ಕೆ ಯಾವ ನೆಪವನ್ನು ಒಡ್ಡಲೂ ಸಾಧ್ಯವಿಲ್ಲ.
21 : ದೇವರನ್ನು ಅವರು ಅರಿತಿದ್ದರೂ ದೇವರೆಂದು ಗೌರವಿಸಲಿಲ್ಲ; ದೇವರಿಗೆ ಉಪಕಾರ ಸ್ಮರಣೆಯನ್ನು ಮಾಡಲಿಲ್ಲ. ಬದಲಾಗಿ ಅವರು ವ್ಯರ್ಥ ಆಲೋಚನೆಗಳಲ್ಲಿ ಮಗ್ನರಾದರು. ಅವರ ವಿವೇಕರಹಿತ ಮನಸ್ಸು ಅಂಧಕಾರಮಯ ಆಯಿತು.
22 : ತಾವೇ ಜ್ಞಾನಿಗಳೆಂದು ಕೊಚ್ಚಿಕೊಳ್ಳುತ್ತ ಅವರು ನಿಜವಾಗಿಯೂ ಮೂರ್ಖರಾದರು.
23 : ಅಮರದೇವರನ್ನು ಆರಾಧಿಸುವುದನ್ನು ಬಿಟ್ಟು ಅಳಿದುಹೋಗುವಂಥ ನರಮಾನವರ ಪ್ರಾಣಿಪಕ್ಷಿಗಳ, ಸರ್ಪಾದಿಗಳ ವಿಗ್ರಹಗಳನ್ನು ಮಾಡಿ ಆರಾಧಿಸತೊಡಗಿದರು.
24 : ಆದುದರಿಂದ, ಮಾನವರು ಮನಸ್ಸಿನ ಆಶಾಪಾಶಗಳಿಗೆ ಬಲಿಯಾಗಿ ತಮ್ಮ ದೇಹಗಳಿಂದ ತಮ್ಮತಮ್ಮಲ್ಲೇ ಅಶ್ಲೀಲ ಕೃತ್ಯಗಳೆಸಗಲೆಂದು ದೇವರು ಅವರನ್ನು ಅಶುದ್ಧ ನಡತೆಗೆ ಬಿಟ್ಟುಬಿಟ್ಟರು.
25 : ಅವರು ದೇವರ ಸತ್ಯವನ್ನು ಬಿಟ್ಟು ಅಸತ್ಯವಾದುದನ್ನು ಅಂಗೀಕರಿಸಿದರು; ಸೃಷ್ಟಿಕರ್ತನನ್ನು ಆರಾಧಿಸದೆ, ಸೃಷ್ಟಿಯಾದ ವಸ್ತುಗಳನ್ನೇ ಆರಾಧಿಸಿ, ಸೇವೆ ಸಲ್ಲಿಸಿದರು. ಸರ್ವಕಾಲಕ್ಕೂ ಸೃಷ್ಟಿಕರ್ತರೊಬ್ಬರಿಗೇ ಸ್ತುತಿಸ್ತೋತ್ರ ಸಲ್ಲತಕ್ಕದ್ದು. ಆಮೆನ್.
26 : ಮಾನವರು ಈ ರೀತಿ ವರ್ತಿಸಿದ್ದರಿಂದಲೇ ದೇವರು ಅವರನ್ನು ತುಚ್ಛವಾದ ಕಾಮಾಭಿಲಾಷೆಗಳಿಗೆ ಬಿಟ್ಟುಬಿಟ್ಟರು. ಅವರ ಸ್ತ್ರೀಯರು, ಸ್ವಾಭಾವಿಕವಾದ ಭೋಗವನ್ನು ತೊರೆದು ಸ್ವಭಾವಕ್ಕೆ ವಿರುದ್ಧವಾದ ಕಾಮಕೃತ್ಯಗಳನ್ನು ಮಾಡಿದರು.
27 : ಅಂತೆಯೇ ಪುರುಷರು ಸಹ ಸ್ವಾಭಾವಿಕವಾದ ಸ್ತ್ರೀಸಂಗವನ್ನು ತೊರೆದು ತಮ್ಮತಮ್ಮಲ್ಲಿಯೇ ಕಾಮೋದ್ರೇಕಗೊಂಡರು; ಸಲಿಂಗಕಾಮಿಗಳಾದರು; ಲಜ್ಜಾಹೀನರಾಗಿ ವರ್ತಿಸಿದರು; ತಮ್ಮ ದುರ್ನಡತೆಗೆ ತಕ್ಕ ಶಿಕ್ಷೆಯನ್ನು ತಮ್ಮ ಮೇಲೆ ಬರಮಾಡಿಕೊಂಡರು.
28 : ಅವರು ತಮಗಿದ್ದ ದೇವರ ಜ್ಞಾನವನ್ನು ತಿರಸ್ಕರಿಸಿದ್ದರಿಂದ, ದೇವರು ಅವರನ್ನು ಅಶ್ಲೀಲ ನಡವಳಿಕೆಗೆ ಬಿಟ್ಟುಬಿಟ್ಟರು.
29 : ಸಕಲ ವಿಧವಾದ ಅನ್ಯಾಯ, ಅಕ್ರಮ, ದುರಾಶೆ, ದುರ್ನಡತೆ ಅವರಲ್ಲಿ ತುಂಬಿಕೊಂಡವು. ಮತ್ಸರ, ಕೊಲೆ, ಕಲಹ, ಕಪಟತನ, ಹಗೆತನ, ಇವೆಲ್ಲವೂ ಅವರಲ್ಲಿ ತುಂಬಿಹೋಗಿವೆ.
30 : ಅವರು ಹರಟೆಮಲ್ಲರು, ಚಾಡಿಕೋರರು, ದೇವದ್ರೋಹಿಗಳು, ಗರ್ವಿಗಳು, ಅಹಂಕಾರಿಗಳು, ಜಂಭಕೊಚ್ಚಿಕೊಳ್ಳುವವರು, ಕೇಡುಬಗೆಯುವವರು, ತಂದೆತಾಯಿಗಳಿಗೆ ಅವಿಧೇಯರು ಆಗಿದ್ದಾರೆ.
31 : ಮಾತ್ರವಲ್ಲ, ಅವರು ಅವಿವೇಕಿಗಳು, ಅಪ್ರಾಮಾಣಿಕರು, ನಿಷ್ಕರುಣಿಗಳು ಮತ್ತು ನಿರ್ದಯಿಗಳು.
32 : ಇಂಥವುಗಳನ್ನು ಮಾಡುವವರು ಮರಣದಂಡನೆಗೆ ಪಾತ್ರರು ಎಂಬ ದೈವನಿಯಮವನ್ನು ಅರಿತಿದ್ದರೂ ಇಂಥ ಹೀನ ಕೃತ್ಯಗಳನ್ನು ಮಾಡುತ್ತಾರೆ. ತಾವು ಮಾಡುವುದೇ ಅಲ್ಲದೆ ಹಾಗೆಮಾಡುವ ಇತರರನ್ನೂ ಪ್ರೋತ್ಸಾಹಿಸುತ್ತಾರೆ.

Holydivine