Hebrews - Chapter 1
Holy Bible

1 : ಪೂರ್ವಕಾಲದಲ್ಲಿ ದೇವರು ನಮ್ಮ ಪಿತೃಗಳೊಡನೆ ಹಲವಾರು ವಿಧದಲ್ಲಿ, ಅನೇಕ ಸಾರಿ ಪ್ರವಾದಿಗಳ ಮುಖಾಂತರ ಮಾತನಾಡಿದರು.
2 : ಆದರೆ, ಇತ್ತೀಚಿನ ಅಂತಿಮ ದಿನಗಳಲ್ಲಿ ಅವರು ತಮ್ಮ ಪುತ್ರನ ಮುಖೇನ ನಮ್ಮೊಡನೆ ಮಾತನಾಡಿದ್ದಾರೆ. ದೇವರು ಇಡೀ ವಿಶ್ವವನ್ನು ಉಂಟುಮಾಡಿದ್ದು ಇವರ ಮುಖಾಂತರವೇ; ಸಮಸ್ತಕ್ಕೂ ಬಾಧ್ಯನನ್ನಾಗಿ ನೇಮಿಸಿರುವುದು ಇವರನ್ನೇ.
3 : ಇವರೇ ದೇವರ ಮಹಿಮೆಯ ತೇಜಸ್ಸು; ಇವರೇ ದೈವತ್ವದ ಪಡಿಯಚ್ಚು; ತಮ್ಮ ಶಕ್ತಿಯುತ ವಾಕ್ಯದಿಂದ ಇವರೇ ಸಮಸ್ತಕ್ಕೂ ಆಧಾರ; ನಮ್ಮ ಪಾಪಗಳನ್ನು ತೊಡೆದು ಹಾಕಿ, ಸ್ವರ್ಗದಲ್ಲಿ ಮಹೋನ್ನತ ದೇವರ ಬಲಪಾಶ್ರ್ವದಲ್ಲಿ ಆಸೀನರಾಗಿರುವವರೂ ಇವರೇ.
4 : ಹೀಗೆ ದೇವರ ಪುತ್ರನು ದೇವದೂತರಿಗಿಂತಲೂ ಶ್ರೇಷ್ಠ; ಅವರಿಗಿಂತಲೂ ಹೆಸರು ವಾಸಿಯಾದಾತ.
5 : ಏಕೆಂದರೆ, ದೇವರು ತಮ್ಮ ದೂತರಲ್ಲಿ ಯಾರಿಗಾದರೂ - “ನೀನೇ ನನ್ನ ಪುತ್ರ; ನಾನೇ ನಿನ್ನನಿಂದು ಪಡೆದವ,” ಎಂದು ಎಂದಾದರೂ ಹೇಳಿದ್ದುಂಟೇ? ಅಥವಾ, “ನಾನಾತನಿಗೆ ಪಿತನು, ಆತನೆನಗೆ ಪುತ್ರನು,” ಎಂದಾಗಲಿ ಹೇಳಿದ್ದುಂಟೇ?
6 : ಇದಲ್ಲದೆ ದೇವರು ತಮ್ಮ ಚೊಚ್ಚಲ ಮಗನನ್ನು ಭೂಲೋಕಕ್ಕೆ ಕಳುಹಿಸುವಾಗ: “ದೇವದೂತರೆಲ್ಲರೂ ಆತನನ್ನು ಆರಾಧಿಸಲಿ,” ಎಂದಿದ್ದಾರೆ.
7 : ದೇವದೂತರ ವಿಷಯದಲ್ಲಿ - “ದೇವರು ತಮ್ಮ ದೂತರನ್ನು ಬೀಸುಗಾಳಿಯನ್ನಾಗಿಯೂ ತಮ್ಮ ಸೇವಕರನ್ನು ಅಗ್ನಿಜ್ವಾಲೆಯನ್ನಾಗಿಯೂ ಮಾಡುತ್ತಾರೆ,” ಎಂದು ಹೇಳಿದ್ದಾರೆ.
8 : ತಮ್ಮ ಪುತ್ರನನ್ನು ಕುರಿತಾದರೋ: “ದೇವಾ, ನಿನ್ನ ಸಿಂಹಾಸನವು ಶಾಶ್ವತವಾದುದು; ನ್ಯಾಯದಂಡವೇ ನಿನ್ನ ರಾಜದಂಡವಾಗಿದೆ.
9 : ನ್ಯಾಯನೀತಿಗಳನ್ನು ನೀನು ಪ್ರೀತಿಸಿದೆ ಅನ್ಯಾಯ, ಅಕ್ರಮಗಳನ್ನು ದ್ವೇಷಿಸಿದೆ. ಆದ್ದರಿಂದ ದೇವರು, ಹೌದು ನಿನ್ನ ದೇವರು ನಿನ್ನನ್ನು ನಿನ್ನ ಮಿತ್ರರಿಗಿಂತ ಮಿಗಿಲಾಗಿ ಸನ್ಮಾನಿಸಿ ಪರಮಾನಂದ ತೈಲದಿಂದ ಅಭಿಷೇಕಿಸಿದ್ದಾರೆ,” ಎಂದು ಹೇಳಿದ್ದಾರೆ.
10 : ಇದಲ್ಲದೆ, “ಸರ್ವೇಶ್ವರಾ, ಆದಿಯಲ್ಲಿ ನೀ ಭೂಮಿಯನು ಸೃಜಿಸಿದೆ ನಭ ಮಂಡಲದಲ್ಲಿ ನಿನ್ನ ಕೈಚಳಕವ ತೋರಿದೆ.
11 : ಇವುಗಳೆಲ್ಲವೂ ಅಳಿಯುತ್ತವೆ ನೀನಾದರೋ ಸದಾ ಉಳಿಯುವೆ. ಹಳತಾಗುವುವು ಇವೆಲ್ಲಾ ಬಟ್ಟೆಬರೆಯಂತೆ.
12 : ಮುದುರಿ ಮೂಲೆಗೆಸೆಯುವೆ ಇವನ್ನು ಮೇಲಂಗಿಯಂತೆ. ಬದಲಾಯಿಸುವೆ ನೀ ಅವನ್ನು ಉಡುಪಿನಂತೆ ನೀನಾದರೋ ಬದಲಾಗದೆ ಇರುವೆ ಮೊದಲಿನಂತೆ. ಮುಗಿವೇ ಇರದು ನಿನ್ನ ಬಾಳುವೆಗೆ,” ಎಂದೂ ಸಹ ದೇವರು ನುಡಿದಿದ್ದಾರೆ.
13 : ಯಾವ ದೇವದೂತನಿಗಾದರೂ ದೇವರು, “ನಿನ್ನ ಶತ್ರುಗಳನ್ನು ನಾನು ನಿನ್ನ ಪಾದದಡಿ ಹಾಕುವತನಕ ನನ್ನ ಬಡಗಡೆಯಲ್ಲಿ ಆಸೀನನಾಗಿರು,” ಎಂದು ಎಂದಾದರೂ ಹೇಳಿದ್ದುಂಟೇ?
14 : ದೂತರೆಲ್ಲರೂ ಕೇವಲ ಸೇವೆಮಾಡುವ ಆತ್ಮಗಳಲ್ಲವೇ? ಜೀವೋದ್ಧಾರವನ್ನು ಬಾಧ್ಯವಾಗಿ ಹೊಂದಬೇಕಾದವರ ಊಳಿಗಕ್ಕಾಗಿ ಕಳುಹಿಸಲಾದವರಲ್ಲವೇ?

Holydivine