Galatians - Chapter 1
Holy Bible

1 : ಗಲಾತ್ಯದಲ್ಲಿರುವ ಸಭೆಗಳಿಗೆ, ಪ್ರೇಷಿತನಾದ ಪೌಲನು ಎಲ್ಲಾ ಸಹೋದರರೊಡನೆ ಸೇರಿ ಬರೆಯುವ ಪತ್ರ:
2 : ಮಾನವರಿಂದಾಗಲಿ ಮಾನವ ಅಧಿಕಾರದಿಂದಾಗಲಿ ನಾನು ಪ್ರೇಷಿತನಾಗಿರದೆ ಯೇಸುಕ್ರಿಸ್ತರಿಂದಲೂ ಮತ್ತು ಅವರನ್ನು ಮರಣದಿಂದ ಎಬ್ಬಿಸಿದ ತಂದೆಯಾದ ದೇವರಿಂದಲೂ ಪ್ರೇಷಿತನಾಗಿರುತ್ತೇನೆ.
3 : ನಮ್ಮ ತಂದೆಯಾದ ದೇವರಿಂದಲೂ ಪ್ರಭು ಯೇಸುಕ್ರಿಸ್ತರಿಂದಲೂ ನಿಮಗೆ ಕೃಪಾಶೀರ್ವಾದವೂ ಶಾಂತಿಸಮಾಧಾನವೂ ಲಭಿಸಲಿ!
4 : ಯೇಸುಕ್ರಿಸ್ತರು, ನಮ್ಮ ತಂದೆಯಾದ ದೇವರ ಚಿತ್ತಕ್ಕನುಸಾರವಾಗಿ, ನಮ್ಮನ್ನು ಸದ್ಯದ ದುಷ್ಟಕಾಲದಿಂದ ಬಿಡುಗಡೆ ಮಾಡುವುದಕ್ಕಾಗಿ ಹಾಗು ನಮ್ಮ ಪಾಪಗಳ ಪರಿಹಾರಕ್ಕಾಗಿ ತಮ್ಮನ್ನೇ ಬಲಿಯಾಗಿ ಅರ್ಪಿಸಿದರು.
5 : ದೇವರಿಗೆ ಯುಗಯುಗಾಂತರಕ್ಕೂ ಸ್ತುತಿಸ್ತೋತ್ರ ಸಲ್ಲಲಿ! ಆಮೆನ್.
6 : ಕ್ರಿಸ್ತಯೇಸುವಿನ ಅನುಗ್ರಹದಿಂದ ನಿಮ್ಮನ್ನು ಕರೆದ ದೇವರನ್ನು ನೀವಿಷ್ಟು ಬೇಗನೆ ತ್ಯಜಿಸಿ, ಬೇರೊಂದು ‘ಶುಭಸಂದೇಶ’ವನ್ನು ಅಂಗೀಕರಿಸುತ್ತಿರುವಿರೆಂದು ಕೇಳಿ ನನಗೆ ಆಶ್ಚರ್ಯವಾಗುತ್ತಿದೆ.
7 : ವಾಸ್ತವವಾಗಿ, ಬೇರೆ ಯಾವ ಶುಭಸಂದೇಶವೂ ಇಲ್ಲ. ಆದರೆ ಕೆಲವರು ನಿಮ್ಮಲ್ಲಿ ಗೊಂದಲವೆಬ್ಬಿಸಿ, ಕ್ರಿಸ್ತಯೇಸುವಿನ ಶುಭಸಂದೇಶವನ್ನು ಮಾರ್ಪಡಿಸಲು ಯತ್ನಿಸುತ್ತಾ ಇದ್ದಾರೆ.
8 : ನಾವು ನಿಮಗೆ ಬೋಧಿಸಿದ ಶುಭಸಂದೇಶಕ್ಕೆ ವಿರುದ್ಧವಾದ ಸಂದೇಶವನ್ನು ನಾವೇ ಆಗಲಿ, ಸ್ವರ್ಗದಿಂದ ಇಳಿದ ದೇವದೂತನೇ ಆಗಲಿ, ಯಾರೇ ಆಗಲಿ ಬೋಧಿಸಿದರೆ ಅವನು ಶಾಪಗ್ರಸ್ತನಾಗಲಿ!
9 : ನೀವು ಅಂಗೀಕರಿಸಿದ ಶುಭಸಂದೇಶಕ್ಕೆ ವಿರುದ್ಧವಾದ ಸಂದೇಶವನ್ನು ಸಾರುವವನು ಶಾಪಗ್ರಸ್ತನಾಗಲಿ ಎಂದು ನಾನು ಮೊದಲೇ ಹೇಳಿದಂತೆ, ಮತ್ತೊಮ್ಮೆ ಒತ್ತಿ ಹೇಳುತ್ತೇನೆ.
10 : ಇದರಿಂದ ನಾನು ಯಾರನ್ನು ಒಲಿಸಿಕೊಳ್ಳಲು ಯತ್ನಿಸುತ್ತಿದ್ದೇನೆ? ಮಾನವರನ್ನೋ? ದೇವರನ್ನೋ? ನಾನು ಮಾನವರ ಮೆಚ್ಚುಗೆಯನ್ನು ಗಳಿಸಿಕೊಳ್ಳಲು ಯತ್ನಿಸುತ್ತಿಲ್ಲ; ನಾನಿನ್ನೂ ಜನರ ಮೆಚ್ಚುಗೆಯನ್ನು ಗಳಿಸುವವನೇ ಆಗಿದ್ದರೆ ಕ್ರಿಸ್ತಯೇಸುವಿನ ದಾಸನಾಗಿರಲು ಸಾಧ್ಯವೇ ಇಲ್ಲ.
11 : ಪ್ರಿಯ ಸಹೋದರರೇ, ನಾನು ಬೋಧಿಸಿದ ಶುಭಸಂದೇಶವು ಮಾನವ ಕಲ್ಪಿತ ಸಂದೇಶ ಅಲ್ಲವೆಂದು ನಿಮಗೆ ಮನದಟ್ಟು ಮಾಡಲು ಬಯಸುತ್ತೇನೆ.
12 : ಈ ಶುಭಸಂದೇಶವನ್ನು ನಾನು ಮನುಷ್ಯರಿಂದ ಪಡೆಯಲಿಲ್ಲ; ಅದನ್ನು ಯಾರಿಂದಲೂ ಕಲಿತುಕೊಳ್ಳಲಿಲ್ಲ; ಯೇಸುಕ್ರಿಸ್ತರೇ ನನಗದನ್ನು ಶ್ರುತಪಡಿಸಿದರು.
13 : ಹಿಂದೊಮ್ಮೆ ನಾನು ಯೆಹೂದ್ಯ ಮತಸ್ಥನಾಗಿದ್ದಾಗ ನನ್ನ ನಡತೆ ಹೇಗಿತ್ತೆಂದು ನೀವು ಚೆನ್ನಾಗಿ ಬಲ್ಲಿರಿ. ಆಗ ನಾನು ದೇವರ ಸಭೆಯನ್ನು ಕ್ರೂರವಾಗಿ ಹಿಂಸಿಸಿದೆ; ಅದನ್ನು ಧ್ವಂಸಮಾಡಲು ಪ್ರಯತ್ನಿಸಿದೆ.
14 : ಇದಲ್ಲದೆ, ನಾನು ನನ್ನ ಪೂರ್ವಜರ ಮತಸಂಪ್ರದಾಯಗಳಲ್ಲಿ ಅತ್ಯಧಿಕ ನಿಷ್ಠೆಯುಳ್ಳವನಾಗಿದ್ದೆ. ಯೆಹೂದ್ಯ ಮತಾಚರಣೆಯಲ್ಲಿ ಅನೇಕ ಸಮವಯಸ್ಕರಿಗಿಂತ ಎಷ್ಟೋ ಮುಂದಾಗಿದ್ದೆ.
15 : ಆದರೆ, ನಾನಿನ್ನೂ ತಾಯಿಯ ಗರ್ಭದಲ್ಲಿ ಇದ್ದಾಗಲೇ ದೇವರು ನನ್ನನ್ನು ತಮ್ಮ ಅನುಗ್ರಹದಿಂದ ಆರಿಸಿಕೊಂಡು ತಮ್ಮ ಸೇವೆಗೆ ಕರೆದರು.
16 : ನಾನು ಯೆಹೂದ್ಯರಲ್ಲದವರಿಗೆ ಶುಭಸಂದೇಶವನ್ನು ಸಾರಬೇಕೆಂದು ದೇವರು ತಮ್ಮ ಮಗನನ್ನು ನನಗೆ ಶ್ರುತಪಡಿಸಿದರು. ಆಗ ಸಲಹೆಗಾಗಿ ನಾನು ಯಾರ ಬಳಿಗೂ ಹೋಗಲಿಲ್ಲ.
17 : ನನಗಿಂತ ಮುಂಚಿತವಾಗಿ ಪ್ರೇಷಿತರಾದವರನ್ನು ಕಾಣಲೆಂದು ನಾನು ಜೆರುಸಲೇಮಿಗೂ ಹೋಗಲಿಲ್ಲ. ಬದಲಿಗೆ, ನೇರವಾಗಿ ಅರೇಬಿಯಾಕ್ಕೆ ಹೋದೆ. ಅಲ್ಲಿಂದ ದಮಸ್ಕಸ್ ನಗರಕ್ಕೆ ಹಿಂದಿರುಗಿದೆ.
18 : ಮೂರು ವರ್ಷಗಳ ನಂತರವೇ ಕೇಫನನ್ನು ಕಂಡು ಮಾತನಾಡಲು ಜೆರುಸಲೇಮಿಗೆ ಹೋದೆ; ಹದಿನೈದು ದಿನ ಆತನೊಂದಿಗೆ ತಂಗಿದ್ದೆ.
19 : ಆಗ, ಉಳಿದ ಪ್ರೇಷಿತರಲ್ಲಿ ಪ್ರಭುವಿನ ಸಹೋದರ ಯಕೋಬನಲ್ಲದೆ ಬೇರೆ ಯಾವ ಪ್ರೇಷಿತರನ್ನೂ ನಾನು ಕಾಣಲಿಲ್ಲ.
20 : ನಾನು ನಿಮಗೆ ಬರೆಯುವ ಸಂಗತಿಗಳು ಸುಳ್ಳಲ್ಲ ಎಂಬುದಕ್ಕೆ ದೇವರೇ ಸಾಕ್ಷಿ.
21 : ಅನಂತರ ನಾನು ಸಿರಿಯ ಮತ್ತು ಸಿಲಿಸಿಯ ಪ್ರಾಂತ್ಯಗಳಿಗೆ ಹೋದೆ.
22 : ಆಗ ಜುದೇಯ ಪಾಂತ್ಯದಲ್ಲಿದ್ದ ಕ್ರೈಸ್ತ ಸಭೆಗಳಿಗೆ ನನ್ನ ಪರಿಚಯವಾಗಿರಲಿಲ್ಲ.
23 : ‘ಹಿಂದೊಮ್ಮೆ ನಮ್ಮನ್ನು ಹಿಂಸಿಸುತ್ತಿದ್ದವನು, ತಾನು ನಾಶ ಮಾಡಲೆತ್ನಿಸಿದ ವಿಶ್ವಾಸವನ್ನೇ ಈಗ ಪ್ರಚಾರ ಮಾಡುತ್ತಿದ್ದಾನೆ’, ಎಂಬ ಸುದ್ದಿಯನ್ನು ಮಾತ್ರ ಕೇಳಿದ್ದರು.
24 : ಈ ಕಾರಣ ನನ್ನನ್ನು ಕುರಿತು ಅವರು ದೇವರನ್ನು ಕೊಂಡಾಡುತ್ತಿದ್ದರು.

Holydivine