Ephesians - Chapter 5
Holy Bible

1 : ದೇವರ ಅಕ್ಕರೆಯ ಮಕ್ಕಳು ನೀವು. ಆದ್ದರಿಂದ ದೇವರನ್ನೇ ಅನುಸರಿಸಿ ಬಾಳಿರಿ.
2 : ಕ್ರಿಸ್ತಯೇಸು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತಮ್ಮನ್ನೇ ಸಮರ್ಪಿಸಿದರು. ದೇವರಿಗೆ ಸುಗಂಧ ಕಾಣಿಕೆಯನ್ನಾಗಿಯೂ ಬಲಿಯನ್ನಾಗಿಯೂ ಅರ್ಪಿಸಿದರು. ಅಂತೆಯೇ, ನೀವೂ ಪ್ರೀತಿಯಿಂದ ಬಾಳಿರಿ.
3 : ನೀವು ದೇವಜನರಾಗಿರುವುದರಿಂದ ನಿಮ್ಮಲ್ಲಿ ಲೈಂಗಿಕ ಪಾಪವಾಗಲಿ, ಅಶುದ್ಧ ಕೃತ್ಯಗಳಾಗಲಿ ಮತ್ತು ದುರಾಶೆಯಾಗಲಿ ಇರಬಾರದು. ಇಂಥ ಸುದ್ದಿಗೂ ನೀವು ಅವಕಾಶ ಕೊಡಬಾರದು.
4 : ಹೊಲಸು ಮಾತುಗಳು, ಬರಡು ನುಡಿಗಳು, ಕುಚೋದ್ಯ ಪದಗಳು ಯಾವುವೂ ನಿಮಗೆ ತರವಲ್ಲ. ಪ್ರತಿಯಾಗಿ, ದೇವರಿಗೆ ನೀವು ಕೃತಜ್ಞತಾ ಸ್ತುತಿಮಾಡಿರಿ.
5 : ವ್ಯಭಿಚಾರಿಗಳಿಗೂ ಅಶ್ಲೀಲ ಕೃತ್ಯಗಳಲ್ಲಿ ಭಾಗವಹಿಸುವವರಿಗೂ ಮತ್ತು ದುರಾಶೆಯುಳ್ಳವರಿಗೂ (ದುರಾಶೆ ವಿಗ್ರಹಾರಾಧನೆಯ ಒಂದು ರೂಪ) ಕ್ರಿಸ್ತ ಯೇಸುವಿನ ಮತ್ತು ದೇವರ ಸಾಮ್ರಾಜ್ಯದಲ್ಲಿ ಹಕ್ಕುಬಾಧ್ಯತೆ ಇಲ್ಲವೆಂದು ನಿಮಗೆ ಮನದಟ್ಟಾಗಿರಲಿ.
6 : ಹುರುಳಿಲ್ಲದ ಮಾತುಗಳನ್ನು ಆಡುವವರಿಗೆ ಮರುಳಾಗದಿರಿ. ಇಂಥ ಕೃತ್ಯಗಳನ್ನು ಮಾಡುವ ದುಷ್ಕರ್ಮಿಗಳ ಮೇಲೆ ದೇವರ ಕೋಪ ಎರಗುತ್ತದೆ.
7 : ಅಂಥವರ ಸಹವಾಸವೇ ನಿಮಗೆ ಬೇಡ.
8 : ನೀವು ಹಿಂದೊಮ್ಮೆ ಕತ್ತಲುಮಯವಾಗಿದ್ದಿರಿ; ಈಗಲಾದರೋ ಪ್ರಭುವಿನಲ್ಲಿ ಬೆಳಕಾಗಿದ್ದೀರಿ. ಆದ್ದರಿಂದ ಬೆಳಕಿನ ಮಕ್ಕಳಾಗಿ ಬಾಳಿರಿ.
9 : ಕಾರಣ - ಸಚ್ಚರಿತೆ, ಸದಾಚಾರ ಮತ್ತು ಸತ್ಯಸಂಧತೆ ಇವೆಲ್ಲವೂ ಬೆಳಕಿನ ಕುಡಿಗಳು.
10 : ಪ್ರಭುವಿಗೆ ಮೆಚ್ಚಿಕೆಯಾದುದು ಯಾವುದೆಂಬುದನ್ನು ಕಲಿತುಕೊಳ್ಳಿರಿ.
11 : ನಿಷ್ಪ್ರಯೋಜಕವಾದ ಕತ್ತಲುಮಯ ಕಾರ್ಯಗಳಿಗೆ ಕೈಹಾಕದಿರಿ. ಅಂಥವುಗಳನ್ನು ಬಯಲಿಗೆಳೆದು ಖಂಡಿಸಿರಿ.
12 : ಆ ಜನರು ಗುಟ್ಟಾಗಿ ಮಾಡುವ ಕೃತ್ಯಗಳು ಹೇಳುವುದಕ್ಕೂ ಅವಮಾನಕರವಾದುವು.
13 : ಬೆಳಕು ಬೆಳಗಿಸುವ ವಸ್ತುಗಳೆಲ್ಲವೂ ಕಂಗೊಳಿಸುವುವು. ಹೀಗೆ ಕಂಗೊಳಿಸುವುದೆಲ್ಲವೂ ಬೆಳಕಾಗುವುದು.
14 : ಆದ್ದರಿಂದ: “ನಿದ್ರೆಮಾಡುವವನೇ ಎದ್ದೇಳು ಸತ್ತವರನ್ನು ಬಿಟ್ಟು ಬಾ ಎಚ್ಚೆತ್ತು ನಿನಗೀವನು ಬೆಳಕನು ಕ್ರಿಸ್ತನು.” ಎಂದು ಬರೆಯಲಾಗಿದೆ.
15 : ಆದುದರಿಂದ ನಿಮ್ಮ ನಡತೆಯ ವಿಷಯದಲ್ಲಿ ನೀವು ಅತ್ಯಂತ ಜಾಗರೂಕರಾಗಿರಿ; ಮೂಢರಂತಿರದೆ ಜಾಣರಾಗಿ ಜೀವಿಸಿರಿ.
16 : ಈ ದಿನಗಳು ಕೆಟ್ಟ ದಿನಗಳಾಗಿರುವುದರಿಂದ ನಿಮಗಿರುವ ಸದವಕಾಶಗಳನ್ನು ಸದ್ವಿನಿಯೋಗಿಸಿಕೊಳ್ಳಿರಿ.
17 : ಬುದ್ಧಿಹೀನರಾಗಿರದೆ ಪ್ರಭುವಿನ ಚಿತ್ತವೇನೆಂದು ಗ್ರಹಿಸಿಕೊಳ್ಳಿರಿ.
18 : ಮದ್ಯಪಾನಮಾಡಿ ಮತ್ತರಾಗಬೇಡಿ. ಅದು ಪಾಪಕೃತ್ಯಗಳಿಗೆ ಎಡೆಮಾಡುತ್ತದೆ. ಬದಲಿಗೆ ಪವಿತ್ರಾತ್ಮಭರಿತರಾಗಿರಿ.
19 : ಕೀರ್ತನೆ, ಹಾಡು, ಭಕ್ತಿಗೀತೆ ಇವುಗಳಿಂತ ನಿಮ್ಮ ಭಾವಗಳನ್ನು ಪರಸ್ಪರ ವ್ಯಕ್ತಪಡಿಸಿರಿ. ಹೃದಯಾಂತರಾಳದಿಂದ ಹಾಡಿ ಪ್ರಭುವಿಗೆ ಸ್ತುತಿಸಲ್ಲಿಸಿರಿ.
20 : ನಮ್ಮ ಪ್ರಭು ಯೇಸುಕ್ರಿಸ್ತರ ಹೆಸರಿನಲ್ಲಿ ಯಾವಾಗಲೂ ಎಲ್ಲ ವರಗಳಿಗಾಗಿಯೂ ಪಿತನಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ.
21 : ಕ್ರಿಸ್ತಯೇಸುವಿನಲ್ಲಿ ಭಯಭಕ್ತಿಯುಳ್ಳವರಾಗಿದ್ದು, ಒಬ್ಬರಿಗೊಬ್ಬರು ನಮ್ರತೆಯಿಂದ ನಡೆದುಕೊಳ್ಳಿರಿ.
22 : ಮಹಿಳೆಯರೇ, ನೀವು ಪ್ರಭುವಿಗೆ ಹೇಗೋ ಹಾಗೆ ನಿಮ್ಮ ನಿಮ್ಮ ಪತಿಯರಿಗೆ ವಿಧೇಯರಾಗಿರಿ.
23 : ಕ್ರಿಸ್ತಯೇಸು ಧರ್ಮಸಭೆಯೆಂಬ ದೇಹಕ್ಕೆ ಶಿರಸ್ಸಾಗಿರುವ ಹಾಗೆಯೇ, ಪತಿಯಾದವನು ತನ್ನ ಪತ್ನಿಗೆ ಶಿರಸ್ಸಾಗಿರುತ್ತಾನೆ. ಕ್ರಿಸ್ತಯೇಸುವೇ ಧರ್ಮಸಭೆಯ ಉದ್ಧಾರಕ.
24 : ಧರ್ಮಸಭೆ ಕ್ರಿಸ್ತಯೇಸುವಿನ ಆಡಳಿತಕ್ಕೆ ಒಳಪಟ್ಟಿರುವಂತೆ ಪತ್ನಿಯೂ ಸಹ ಎಲ್ಲಾ ವಿಷಯಗಳಲ್ಲೂ ತನ್ನ ಪತಿಯ ಆಡಳಿತಕ್ಕೆ ಒಳಪಟ್ಟಿರಬೇಕು.
25 : ಪುರುಷರೇ, ಕ್ರಿಸ್ತಯೇಸು ಧರ್ಮಸಭೆಯನ್ನು ಪ್ರೀತಿಸಿದ ಪ್ರಕಾರ ನಿಮ್ಮ ನಿಮ್ಮ ಪತ್ನಿಯರನ್ನು ಪ್ರೀತಿಸಿರಿ. ಧರ್ಮಸಭೆಯನ್ನು ಪಾವನಗೊಳಿಸುವುದಕ್ಕಾಗಿ ಕ್ರಿಸ್ತಯೇಸು ತಮ್ಮ ಪ್ರಾಣವನ್ನೇ ಕೊಟ್ಟರು.
26 : ವಾಕ್ಯೋಪದೇಶದಿಂದಲೂ ಜಲಸ್ನಾನದಿಂದಲೂ ಅದನ್ನು ಶುದ್ಧೀಕರಿಸಿದರು.
27 : ಧರ್ಮಸಭೆ ಕಳಂಕಕಲ್ಮಷವಾಗಲಿ, ಸುಕ್ಕು ಬೊಕ್ಕೆಯಾಗಲಿ ಇಲ್ಲದ ಸೌಂದರ್ಯವತಿಯಾಗಿ ತಮಗೆ ಅರ್ಪಿಸಿಕೊಳ್ಳುವಂತೆ ಹೀಗೆ ಮಾಡಿದರು.
28 : ಹಾಗೆಯೇ ಪುರುಷನು ಸಹ ತನ್ನ ಶರೀರವನ್ನು ಪ್ರೀತಿಸುವಂತೆ ತನ್ನ ಪತ್ನಿಯನ್ನು ಪ್ರೀತಿಸಲಿ. ತನ್ನ ಪತ್ನಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸುತ್ತಾನೆ.
29 : ಸ್ವಂತ ಶರೀರವನ್ನು ಯಾರೂ ಎಂದೂ ದ್ವೇಷಿಸುವುದಿಲ್ಲ, ಬದಲಿಗೆ ಅದನ್ನು ಪೋಷಿಸಿ ಪಾಲನೆ ಮಾಡುತ್ತಾನೆ. ಧರ್ಮಸಭೆಯನ್ನು ಸಹ ಕ್ರಿಸ್ತಯೇಸು ಹೀಗೆಯೇ ಕಾಪಾಡುತ್ತಾರೆ.
30 : ನಾವು ಆ ಸಭೆಯ ಅಂಗಗಳು.
31 : ಪವಿತ್ರಗ್ರಂಥದಲ್ಲಿ ಹೀಗೆ ಬರೆಯಲಾಗಿದೆ: “ಈ ಕಾರಣದಿಂದ ಪುರುಷನಾದವನು ತನ್ನ ತಂದೆ ತಾಯನ್ನು ಬಿಟ್ಟು ತನ್ನ ಪತ್ನಿಯೊಡನೆ ಒಂದುಗೂಡುವನು ಮತ್ತು ಅವರಿಬ್ಬರೂ ಒಂದೇ ಶರೀರವಾಗಿರುವರು.”
32 : ಈ ಗಹನವಾದ ರಹಸ್ಯವು ಯೇಸುಕ್ರಿಸ್ತರಿಗೂ ಧರ್ಮಸಭೆಗೂ ಇರುವ ಸಂಬಂಧವನ್ನು ಸೂಚಿಸುತ್ತದೆ ಎಂಬುದೇ ನನ್ನ ಅಭಿಪ್ರಾಯ.
33 : ಆದರೆ ಇದು ನಿಮಗೂ ಅನ್ವಯಿಸುತ್ತದೆ. ಪ್ರತಿಯೊಬ್ಬ ಪುರುಷನು ತನ್ನನ್ನು ಪ್ರೀತಿಸುವಂತೆ ತನ್ನ ಪತ್ನಿಯನ್ನೂ ಪ್ರೀತಿಸಲಿ ಮತ್ತು ಪ್ರತಿಯೊಬ್ಬ ಸ್ತ್ರೀಯು ತನ್ನ ಪತಿಯ ವಿಷಯದಲ್ಲಿ ಗೌರವದಿಂದ ನಡೆದುಕೊಳ್ಳಲಿ.

Holydivine