Philippians - Chapter 4
Holy Bible

1 : ಹೀಗಿರಲಾಗಿ ಒಲವಿನ ಸಹೋದರರೇ, ನನ್ನ ಅತಿ ಪ್ರಿಯರೇ, ಆಪ್ತರೇ, ನನ್ನ ಮುದವೂ ಮುಕುಟವೂ ಆದವರೇ, ಪ್ರಭುವಿನಲ್ಲಿ ದೃಢ ವಿಶ್ವಾಸಿಗಳಾಗಿ ಬಾಳಿರಿ.
2 : ಯುವೋದ್ಯಳು ಮತ್ತು ಸಂತುಕೆ ಇವರಲ್ಲಿ ನನ್ನದೊಂದು ಬಿನ್ನಹ: ನಿಮ್ಮ ಭಿನ್ನಾಭಿಪ್ರಾಯಗಳನ್ನು ತೊರೆದು ಪ್ರಭುವಿನಲ್ಲಿ ಒಂದಾಗಿ ಬಾಳಿರಿ.
3 : ನನ್ನ ಜೊತೆ ಸೇವಕನಾದ ನೀನು ಈ ಮಹಿಳೆಯರಿಗೆ ನೆರವಾಗಬೇಕು. ಇವರು ಸಹ ಕ್ಲೇಮಂತನು ಮತ್ತು ಇತರ ಸಹಸೇವಕರೊಡನೆ ನನ್ನೊಂದಿಗೆ ಶುಭಸಂದೇಶದ ಪ್ರಚಾರಕಾರ್ಯದಲ್ಲಿ ಸಹಕರಿಸಿರುತ್ತಾರೆ. ಇವರೆಲ್ಲರ ಹೆಸರುಗಳು ನಿತ್ಯಜೀವಬಾಧ್ಯರ ಪಟ್ಟಿಯಲ್ಲಿವೆ.
4 : ಪ್ರಭುವಿನಲ್ಲಿ ನೀವು ಸತತವೂ ಆನಂದಿಸಿರಿ. ಆನಂದಿಸಬೇಕೆಂದು ಮತ್ತೆ ಒತ್ತಿ ಹೇಳುತ್ತೇನೆ.
5 : ನಿಮ್ಮ ಸಹನೆ, ಸಹಾನುಭೂತಿ ಸರ್ವರಿಗೂ ತಿಳಿದಿರಲಿ. ಪ್ರಭುವಿನ ಪುನರಾಗಮನ ಸವಿೂಪಿಸಿದೆ.
6 : ಯಾವ ವಿಷಯದಲ್ಲೂ ಚಿಂತಿಸದೆ, ನಿಮ್ಮ ಅಗತ್ಯಗಳಿಗಾಗಿ ದೇವರಲ್ಲಿ ಪ್ರಾರ್ಥಿಸಿರಿ. ಪ್ರಾರ್ಥಿಸುವಾಗಲೆಲ್ಲಾ ನಿಮ್ಮಲ್ಲಿ ಕೃತಜ್ಞತಾ ಭಾವ ಇರಲಿ.
7 : ಆಗ ಮನುಷ್ಯಗ್ರಹಿಕೆಗೂ ವಿೂರಿದ ದೈವಶಾಂತಿಯು ನಿಮ್ಮ ಹೃನ್ಮನಗಳನ್ನು ಕ್ರಿಸ್ತೇಸುವಿನ ಅನ್ಯೋನ್ಯತೆಯಲ್ಲಿ ಸುರಕ್ಷಿತವಾಗಿ ಕಾಪಾಡುವುದು.
8 : ಕಡೆಯದಾಗಿ ಸಹೋದರರೇ, ಯಾವುದು ಸತ್ಯವು-ಮಾನ್ಯವು, ನ್ಯಾಯವು-ಶುದ್ಧವು, ಪ್ರೀತಿಕರವು-ಮನೋಹರವು ಆಗಿದೆಯೋ ಯಾವುದು ಸದ್ಗುಣವು-ಸ್ತುತ್ಯಾರ್ಹವು ಆಗಿದೆಯೋ ಅಂಥವುಗಳಲ್ಲಿ ಮಗ್ನರಾಗಿರಿ.
9 : ನೀವು ನನ್ನಿಂದ ಕಲಿತವು ಹಾಗೂ ಅರಿತವುಗಳನ್ನು, ಕೇಳಿದವು ಹಾಗೂ ಕಂಡವುಗಳನ್ನು ನಿಮ್ಮ ಜೀವಿತದಲ್ಲಿ ಕಾರ್ಯರೂಪಕ್ಕೆ ತನ್ನಿರಿ. ಆಗ ಶಾಂತಿದಾಯಕ ದೇವರು ನಿಮ್ಮ ಸಂಗಡ ಇರುವರು.
10 : ನನ್ನ ಬಗ್ಗೆ ನಿಮಗಿರುವ ಮಮತೆಯು ಇಷ್ಟು ದಿನಗಳಾದ ಮೇಲೆ ಪುನಃ ಅರಳಿದ್ದಕ್ಕೆ ಪ್ರಭುವಿನಲ್ಲಿ ನಾನು ಬಹಳ ಸಂತೋಷ ಪಡುತ್ತೇನೆ. ಇಂಥ ಮಮತೆ ನಿಮಗೆ ಮೊದಲಿನಿಂದ ಇತ್ತಾದರೂ ಅದನ್ನು ವ್ಯಕ್ತಪಡಿಸಲು ನಿಮಗೆ ಸೂಕ್ತ ಸಂದರ್ಭ ಒದಗಿರಲಿಲ್ಲ.
11 : ನಾನು ಯಾವುದೋ ಕೊರತೆಯಲ್ಲಿರುವೆನೆಂದು ಸೂಚಿಸಲು ಇದನ್ನು ಹೇಳುತ್ತಿಲ್ಲ. ನಾನು ಯಾವ ಸ್ಥಿತಿಯಲ್ಲಿದ್ದರೂ ತೃಪ್ತಿಯಿಂದಿರಲು ಕಲಿತುಕೊಂಡಿದ್ದೇನೆ.
12 : ಬಡತನ ಇರಲಿ, ಸಿರಿತನವಿರಲಿ, ಕೊರತೆಯಿರಲಿ, ಸಮೃದ್ಧಿ ಇರಲಿ, ಹಸಿದಿರಲಿ, ಹೊಟ್ಟೆ ತುಂಬಿರಲಿ - ಯಾವ ಸ್ಥಿತಿಯಲ್ಲಿದ್ದರೂ, ಎಲ್ಲಾ ವೇಳೆಯಲ್ಲಿಯೂ ತೃಪ್ತನಾಗಿರುವ ರಹಸ್ಯವನ್ನು ತಿಳಿದಿದ್ದೇನೆ.
13 : ಸರ್ವೇಶನ ಶಕ್ತಿಯಿಂದ ಸರ್ವವನ್ನೂ ಸಾಧಿಸುವ ಸಾಮಥ್ರ್ಯ ನನಗಿದೆ.
14 : ಆದರೂ ನನ್ನ ಸಂಕಷ್ಟಗಳಲ್ಲಿ ಸಹಾಯ ಮಾಡಿದುದು ನಿಮ್ಮ ಸೌಜನ್ಯವೇ ಸರಿ.
15 : ಫಿಲಿಪ್ಪಿಯ ಸಹೋದರರೇ, ನಾನು ಶುಭಸಂದೇಶವನ್ನು ಸಾರಲು ಹೊರಟ ಪ್ರಾರಂಭದ ದಿನಗಳಲ್ಲಿ ಮಕೆದೋನಿಯವನ್ನು ಬಿಟ್ಟು ಹೋದಾಗ ನೀವಲ್ಲದೆ ಬೇರೆ ಯಾವ ಸಭೆಯೂ ನನ್ನ ಆಯ-ವ್ಯಯಗಳಲ್ಲಿ ನೆರವಾಗಿರಲಿಲ್ಲ. ಇದು ನಿಮಗೆ ತಿಳಿದ ವಿಷಯ.
16 : ನಾನು ಥೆಸಲೋನಿಕದಲ್ಲಿದ್ದಾಗಲೂ ನನ್ನ ಕೊರತೆಯನ್ನು ನೀಗಿಸಲು ಒಂದೆರಡು ಬಾರಿ ಧನಸಹಾಯವನ್ನು ಕಳುಹಿಸಿದಿರಿ.
17 : ನಿಮ್ಮಿಂದ ಸಹಾಯ ಪಡೆಯಬೇಕೆಂಬುದು ನನ್ನ ಉದ್ದೇಶವಲ್ಲ. ಆದರೆ ಈ ಸಹಾಯದಿಂದ ನಿಮಗೆ ಮುಂದೆ ದೊರಕುವ ಪ್ರತಿಫಲವು ಸಮೃದ್ಧಿಯಾಗಲೆಂದೇ ನನ್ನ ಇಚ್ಛೆ.
18 : ನೀವು ಕಳುಹಿಸಿಕೊಟ್ಟಿದ್ದೆಲ್ಲವೂ ನನಗೆ ಸಂದಾಯವಾಗಿದೆ. ಈಗ ಅಗತ್ಯಕ್ಕಿಂತಲೂ ಅಧಿಕವಾಗಿದೆ, ಯಥೇಚ್ಛವಾಗಿದೆ. ಎಪಫ್ರೋದಿತನ ಮೂಲಕ ನೀವು ಕಳುಹಿಸಿದ್ದೆಲ್ಲವೂ ನನಗೆ ತಲುಪಿದೆ. ನಿಮ್ಮ ಕೊಡುಗೆ ಸುಗಂಧ ಕಾಣಿಕೆಯಾಗಿದೆ, ದೇವರಿಗೆ ಮೆಚ್ಚಿಗೆಯಾದ ಇಷ್ಟಾರ್ಥ ಬಲಿಯಾಗಿದೆ.
19 : ನನ್ನ ದೇವರು ತಮ್ಮ ಮಹದೈಶ್ವರ್ಯದಿಂದ ನಿಮ್ಮ ಅಗತ್ಯಗಳನ್ನೆಲ್ಲಾ ಕ್ರಿಸ್ತಯೇಸುವಿನ ಮುಖಾಂತರ ಪೂರೈಸುವರು.
20 : ನಮ್ಮ ತಂದೆಯಾದ ದೇವರಿಗೆ ನಿರಂತರವೂ ಮಹಿಮೆ ಸಲ್ಲಲಿ!
21 : ಕ್ರಿಸ್ತಯೇಸುವಿನಲ್ಲಿ ಎಲ್ಲ ದೇವಜನರಿಗೂ ನನ್ನ ವಂದನೆಗಳನ್ನು ತಿಳಿಸಿರಿ. ನನ್ನೊಡನೆ ಇರುವ ಸಹೋದರರು ನಿಮಗೆ ತಮ್ಮ ಶುಭಾಶಯಗಳನ್ನು ಕಳುಹಿಸಿದ್ದಾರೆ.
22 : ಅಲ್ಲದೆ, ಇಲ್ಲಿರುವ ದೇವಜನರೆಲ್ಲರೂ ವಿಶೇಷವಾಗಿ ಚಕ್ರವರ್ತಿಯ ಅರಮನೆಯಲ್ಲಿರುವ ಕ್ರೈಸ್ತವಿಶ್ವಾಸಿಗಳು ತಮ್ಮ ಪ್ರಣಾಮಗಳನ್ನು ಸಲ್ಲಿಸಿದ್ದಾರೆ.
23 ಪ್ರಭು ಯೇಸುಕ್ರಿಸ್ತರ ಅನುಗ್ರಹ ನಿಮ್ಮೆಲ್ಲರಲ್ಲಿ ಇರಲಿ !

Holydivine