Deuteronomy - Chapter 1
Holy Bible

1 : ಜೋರ್ಡನ್ ನದಿಯ ಆಚೆ, ಪಾರಾನಿಗೂ, ತೋಫೆಲ್, ಲಾಬಾನ್, ಹಚೇರೋತ್, ದೀಜಾಹಾಬ್ ಎಂಬ ಊರುಗಳಿಗೂ ನಡುವೆ, ಮರುಭೂಮಿಯಲ್ಲಿ ಅರಾಬಾ ಎಂಬ ತಗ್ಗಾದ ಪ್ರದೇಶದಲ್ಲಿ ಸೂಫಿಗೆ ಎದುರಾಗಿ ಮೋಶೆ ಇಸ್ರಯೇಲರೆಲ್ಲರಿಗೆ ಮಾಡಿದ ಉಪನ್ಯಾಸಗಳು ಇವು.
2 : (ಹೋರೇಬಿನಿಂದ ಸೇಯೀರ್ ಬೆಟ್ಟಗಳ ಮಾರ್ಗವಾಗಿ ಕಾದೇಶ್ ಬರ್ನೇಯದವರೆಗೆ ಹನ್ನೊಂದು ದಿನದ ಪ್ರಯಾಣ.)
3 : ಮೋಶೆ ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸ ಸೀಹೋನನನ್ನು ಮತ್ತು ಅಷ್ಟಾರೋತ್, ಎದ್ರೈ ಎಂಬ ಪಟ್ಟಣಗಳಲ್ಲಿದ್ದ ಬಾಷಾನಿನ ಅರಸ ಓಗನನ್ನು ಜಯಿಸಿದನು. ತರುವಾಯ,
4 : ಅಂದರೆ ಇಸ್ರಯೇಲರು ಈಜಿಪ್ಟ್ ದೇಶವನ್ನು ಬಿಟ್ಟ ನಲವತ್ತನೆಯ ವರ್ಷದ ಹನ್ನೊಂದನೆಯ ತಿಂಗಳಿನ ಮೊದಲನೆಯ ದಿನ ಸರ್ವೇಶ್ವರಸ್ವಾಮಿ ತನಗೆ ಆಜ್ಞಾಪಿಸಿದ್ದನ್ನೆಲ್ಲ ಇಸ್ರಯೇಲರಿಗೆ ತಿಳಿಸಿದನು.
5 : ಜೋರ್ಡನ್ ನದಿಯ ಆಚೆ ಮೋವಾಬ್ಯರ ದೇಶದಲ್ಲಿ ಮೋಶೆ ಈ ಮುಂದಣ ಧರ್ಮಶಾಸ್ತ್ರವನ್ನು ವಿವರಿಸುವುದಕ್ಕೆ ಪ್ರಾರಂಭಿಸಿದನು:
6 : “ಹೋರೇಬಿನಲ್ಲಿ ನಮ್ಮ ದೇವರಾದ ಸರ್ವೇಶ್ವರ ನಮಗೆ, ‘ನೀವು ಈ ಬೆಟ್ಟದ ಬಳಿ ವಾಸಿಸಿದ್ದು ಸಾಕು;
7 : ಈಗ ಹಿಂದಿರುಗಿ ಅಮೋರಿಯರು ಇರುವ ಮಲೆನಾಡಿಗೂ ಅದರ ಸುತ್ತಮುತ್ತಲಿನ ಪ್ರದೇಶಕ್ಕೂ ಪ್ರಯಾಣಮಾಡಿರಿ. ಅಲ್ಲಿನ ಕಣಿವೆ, ತಪ್ಪಲು, ಇಳಕಲು ಪ್ರದೇಶಗಳಿಗೂ ದಕ್ಷಿಣಸೀಮೆ, ಸಮುದ್ರತೀರ ಎಂಬ ನಾಡುಗಳಿಗೂ ಕಾನಾನ್ಯರ ನಾಡು, ಲೆಬನೋನ್ ಪರ್ವತ ಮತ್ತು ಯೂಫ್ರೆಟಿಸ್ ಮಹಾನದಿಯವರೆಗೆ ವಿಸ್ತರಿಸಿಕೊಂಡಿರುವ ಪ್ರದೇಶಗಳಿಗೂ ತೆರಳಿರಿ.
8 : ಆ ನಾಡನ್ನು ನಿಮಗೆ ಕೊಟ್ಟಿದ್ದೇನೆ. ಸರ್ವೇಶ್ವರನೆಂಬ ನಾನು ನಿಮ್ಮ ಪಿತೃಗಳಾದ ಅಬ್ರಹಾಮ, ಇಸಾಕ ಯಕೋಬರಿಗೂ ಅವರ ಸಂತತಿಯವರಿಗೂ ಆ ನಾಡನ್ನು ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ್ದೆನು. ಅದನ್ನು ಸೇರಿ ಸ್ವಾಧೀನಮಾಡಿಕೊಳ್ಳಿ,’ ಎಂದು ಆಜ್ಞಾಪಿಸಿದರು.
9 : “ಆ ಕಾಲದಲ್ಲಿ ನಾನು ನಿಮ್ಮನ್ನು ಸಂಬೋಧಿಸಿ, ‘ನಿಮ್ಮ ಭಾರವನ್ನು ನಾನೊಬ್ಬನೇ ಹೊರುವುದು ಅಸಾಧ್ಯ;
10 : ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಸಂಖ್ಯೆಯಲ್ಲಿ ಹೆಚ್ಚಿಸಿದ್ದಾರೆ; ನೀವು ಆಕಾಶದ ನಕ್ಷತ್ರಗಳಷ್ಟಾಗಿದ್ದೀರಿ;
11 : ನೀವು ಈಗ ಇರುವುದಕ್ಕಿಂತ ಇನ್ನೂ ಸಾವಿರದಷ್ಟಾಗುವಂತೆ ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ನಿಮ್ಮನ್ನು ಹೆಚ್ಚಿಸಲಿ; ಅವರೇ ವಾಗ್ದಾನಮಾಡಿದ ಪ್ರಕಾರ ನಿಮ್ಮನ್ನು ಆಶೀರ್ವದಿಸಲಿ;
12 : ಆದರೆ ನಿಮ್ಮ ಸಮಸ್ಯೆಗಳನ್ನೂ ಹೊಣೆಯನ್ನೂ ವ್ಯಾಜ್ಯಗಳನ್ನೂ ನಾನೊಬ್ಬನೇ ಸಹಿಸುವುದು ಹೇಗೆ?
13 : ಆದುದರಿಂದ ನೀವು ಪ್ರತಿಯೊಂದು ಕುಲದಿಂದ ಜ್ಞಾನಿಗಳೂ, ವಿವೇಕಿಗಳೂ, ಪ್ರಖ್ಯಾತರೂ ಆದ ವ್ಯಕ್ತಿಗಳನ್ನು ಆರಿಸಿಕೊಳ್ಳಿ; ನಾನು ಅವರನ್ನು ನಿಮಗೆ ಅಧಿಪತಿಗಳನ್ನಾಗಿ ನೇಮಿಸುತ್ತೇನೆ,’ ಎಂದು ಹೇಳಿದೆ.
14 : ಅದಕ್ಕೆ ನೀವು, ‘ನಿಮ್ಮ ಆಲೋಚನೆಯಂತೆ ನಡೆಯುವುದು ವಿಹಿತವಾದದ್ದೇ’ ಎಂದು ಉತ್ತರಕೊಟ್ಟಿರಿ.
15 : ಆಗ ನಾನು ನಿಮ್ಮಲ್ಲಿ ಪ್ರಸಿದ್ಧರಾದ ಬುದ್ಧಿವಂತರನ್ನು ಕರೆಯಿಸಿ ಒಂದೊಂದು ಕುಲದಲ್ಲಿ ಸಾವಿರ ಮಂದಿಯ ಮೇಲೆ, ನೂರು ಮಂದಿಯ ಮೇಲೆ, ಐವತ್ತು ಮಂದಿಯ ಮೇಲೆ ಹಾಗು ಹತ್ತು ಮಂದಿಯ ಮೇಲೆ ಅಧಿಕಾರಿಗಳನ್ನಾಗಿ ಹಾಗು ಉಪಾಧಿಕಾರಿಗಳನ್ನಾಗಿ ನೇಮಿಸಿದೆ.
16 : ಆ ನ್ಯಾಯಾಧಿಪತಿಗಳಿಗೆ ನಾನು ಆಗ ಕೊಟ್ಟ ಸೂಚನೆ ಇದು: ‘ನೀವು ಸರ್ವಕುಲದವರ ವ್ಯಾಜ್ಯಗಳನ್ನು ವಿಚಾರಿಸಬೇಕು. ಅದು ಇಸ್ರಯೇಲರ ವ್ಯಾಜ್ಯವಾಗಿರಬಹುದು, ಅನ್ಯರೊಡನೆ ವ್ಯಾಜ್ಯವಾಗಿರಬಹುದು. ಎಲ್ಲವನ್ನು ನೀವು ನ್ಯಾಯದ ಪ್ರಕಾರವೇ ತೀರ್ಮಾನಿಸಬೇಕು.
17 : ನ್ಯಾಯ ವಿಚಾರಿಸುವಾಗ ಮುಖದಾಕ್ಷಿಣ್ಯ ಮಾಡಬಾರದು; ಅಧಿಕಾರಿಗೂ ಅಲ್ಪರಿಗೂ ಸಮನಾಗಿ ಕಿವಿಗೊಡಿ; ನೀವು ದೇವರ ಹೆಸರಿನಲ್ಲಿ ನ್ಯಾಯ ತೀರಿಸುವುದರಿಂದ ಯಾವ ಮನುಷ್ಯನಿಗೂ ಹೆದರಬೇಡಿ. ನೀವು ತೀರಿಸಲಿಕ್ಕಾಗದ ವ್ಯಾಜ್ಯಗಳನ್ನು ನನ್ನ ಬಳಿಗೆ ತನ್ನಿ; ನಾನೇ ಅವುಗಳನ್ನು ತೀರಿಸುತ್ತೇನೆ,’ ಎಂದು ಹೇಳಿದೆ.
18 : ಹೀಗೆ, ನೀವು ಮಾಡಬೇಕಾದ ಎಲ್ಲ ಕಾರ್ಯಗಳ ವಿಷಯದಲ್ಲೂ ಆಗಲೇ ನಿಮಗೆ ಆಜ್ಞೆಕೊಟ್ಟೆ.
19 : “ನಾವು ಹೋರೇಬಿನಿಂದ ಹೊರಟು ನಮ್ಮ ದೇವರಾದ ಸರ್ವೇಶ್ವರ ಆಜ್ಞಾಪಿಸಿದಂತೆ ಅಮೋರಿಯರ ಮಲೆನಾಡಿನ ಮಾರ್ಗವನ್ನು ಹಿಡಿದು, ನೀವು ನೋಡಿದ ಆ ಘೋರ ಮಹಾ ಅರಣ್ಯದಲ್ಲಿ ನಡೆದು, ಕಾದೇಶ್‍ಬರ್ನೇಯಕ್ಕೆ ಸೇರಿದೆವು.
20 : ಆಗ ನಾನು, ‘ನಮ್ಮ ದೇವರಾದ ಸರ್ವೇಶ್ವರ ನಮಗೆ ಕೊಡುವ ಅಮೋರಿಯರ ಮಲೆನಾಡಿನ ಹತ್ತಿರಕ್ಕೆ ಬಂದಿದ್ದೀರಿ;
21 : ನಿಮ್ಮ ದೇವರಾದ ಸರ್ವೇಶ್ವರ ಆ ನಾಡನ್ನು ನಿಮಗೇ ಕೊಟ್ಟಿದ್ದಾರೆ; ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ಹೇಳಿದಂತೆ ಅದನ್ನು ಏರಿ ಸ್ವಾಧೀನ ಮಾಡಿಕೊಳ್ಳಿ; ನೀವು ದಿಗಿಲುಪಡದೆ ಧೈರ್ಯವಾಗಿಯೇ ಇರಬೇಕು,’ ಎಂದು ಹೇಳಿದೆ.
22 : “ಆಗ ನೀವೆಲ್ಲರೂ ನನ್ನ ಬಳಿಗೆ ಬಂದು, ‘ನಮಗಿಂತ ಮುಂದಾಗಿ ಜನರನ್ನು ಕಳುಹಿಸುತ್ತೇವೆ; ಅವರು ನಮ್ಮ ಪರವಾಗಿ ಆ ನಾಡನ್ನು ಪರೀಕ್ಷಿಸಿ ನೋಡಿ, ನಾವು ಹತ್ತಿಹೋಗಬೇಕಾದ ದಾರಿಯ ಬಗ್ಗೆ ಹಾಗು ಸೇರಬೇಕಾದ ಊರುಗಳ ಬಗ್ಗೆ ನಮಗೆ ಸಮಾಚಾರ ತರಲಿ’, ಎಂದು ಹೇಳಿದಿರಿ.
23 : ಅದು ಒಳ್ಳೇ ಆಲೋಚನೆಯೆಂದು ನಾನು ತಿಳಿದು, ನಿಮ್ಮಲ್ಲಿ ಕುಲಕ್ಕೆ ಒಬ್ಬೊಬ್ಬನ ಮೇರೆಗೆ, ಹನ್ನೆರಡು ಮಂದಿಯನ್ನು ಆರಿಸಿಕೊಂಡೆ.
24 : ಅವರು ಹೋಗಿ ಆ ಮಲೆನಾಡನ್ನು ಹತ್ತಿ ಎಷ್ಕೋಲೆಂಬ ಕಣಿವೆಯ ಬಳಿಗೆ ಬಂದು, ಆ ಪ್ರದೇಶವನ್ನು ಸಂಚರಿಸಿ ನೋಡಿ,
25 : ಅಲ್ಲಿನ ಹಣ್ಣುಹಂಪಲುಗಳಲ್ಲಿ ಕೆಲವನ್ನು ತಂದು ತೋರಿಸಿದರು; ನಮ್ಮ ದೇವರಾದ ಸರ್ವೇಶ್ವರ ನಮಗೆ ಕೊಡುವ ಆ ನಾಡು ಒಳ್ಳೆಯ ನಾಡೆಂದು ನಮಗೆ ತಿಳಿಸಿದರು.
26 : ಆದರೂ ನೀವು ಅಲ್ಲಿಗೆ ಹತ್ತಿಹೋಗದೆ ನಿಮ್ಮ ದೇವರಾದ ಸರ್ವೇಶ್ವರನ ಆಜ್ಞೆಯನ್ನು ಉಲ್ಲಂಘಿಸಿದಿರಿ;
27 : ನಿಮ್ಮ ನಿಮ್ಮ ಡೇರೆಗಳಲ್ಲಿ ಗೊಣಗುಟ್ಟಿದಿರಿ; ‘ಸರ್ವೇಶ್ವರ ನಮ್ಮನ್ನು ಈಜಿಪ್ಟ್ ದೇಶದಿಂದ ಬರಮಾಡಿದ್ದು ಹಗೆತನದಿಂದಲೇ; ಅಮೋರಿಯರ ಕೈಗೆ ಒಪ್ಪಿಸಿ ಸಂಹರಿಸಬೇಕೆಂದೇ.
28 : ನಾವು ಹೋಗಬೇಕಾದ ಆ ಸೀಮೆ ಎಂಥದೆಂದು ಆಲೋಚಿಸಿ ನೋಡಬೇಕು; ಅಲ್ಲಿಗೆ ಹೋಗಿದ್ದ ನಮ್ಮ ಸಹೋದರರು ಬಂದು ಆ ನಾಡಿನ ಜನರು ನಮಗಿಂತ ಬಲಿಷ್ಟರೂ ಎತ್ತರವಾಗಿಯೂ ಇದ್ದಾರೆ. ಅವರಿರುವ ಪಟ್ಟಣಗಳು ದೊಡ್ಡವು, ಆಕಾಶವನ್ನು ಮುಟ್ಟುವಂಥ ಕೋಟೆಕೊತ್ತಲುಳ್ಳವು; ಅಲ್ಲಿ ‘ಅನಾ ಕಿಮ್’ ವಂಶಸ್ಥರನ್ನು ಕಂಡೆವೆಂದು ಹೇಳಿ ನಮ್ಮ ಧೈರ್ಯವನ್ನು ಕೆಡಿಸಿದ್ದಾರೆ,’ ಎಂದುಕೊಳ್ಳುತ್ತಿದ್ದಿರಿ.
29 : “ಅದಕ್ಕೆ ನಾನು, ‘ಕಳವಳಪಡಬೇಡಿ, ಅವರಿಗೆ ಭಯಪಡಬೇಡಿ.
30 : ನಿಮ್ಮ ಮುಂದುಗಡೆಯಲ್ಲೇ ಹೋಗುವ ನಿಮ್ಮ ದೇವರಾದ ಸರ್ವೇಶ್ವರ ಈಜಿಪ್ಟ್ ದೇಶದಲ್ಲೂ ನೀವು ನೋಡಿದ ಮರುಭೂಮಿಯಲ್ಲೂ ಪ್ರತ್ಯಕ್ಷರಾಗಿ ನಿಮ್ಮ ಪರವಾಗಿ ಯುದ್ಧಮಾಡಿದಂತೆಯೇ, ಈಗಲೂ ನಿಮ್ಮ ಕಡೆಯವರಾಗಿದ್ದು ಯುದ್ಧಮಾಡುವರು.
31 : ನೀವು ಈ ಸ್ಥಳಕ್ಕೆ ಸೇರುವ ಪರ್ಯಂತರ ನಿಮ್ಮ ಪ್ರಯಾಣದಲ್ಲೆಲ್ಲಾ ಒಬ್ಬ ತಂದೆ ತನ್ನ ಮಗನನ್ನು ಹೇಗೋ ಹಾಗೆಯೇ, ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಹೊತ್ತುತಂದರಲ್ಲವೇ?” ಎಂದು ನಿಮಗೆ ಹೇಳಿದೆ.
32 : “ಆದರೂ ನೀವು ನಿಮ್ಮ ದೇವರಾದ ಸರ್ವೇಶ್ವರನನ್ನು ನಂಬಲೇ ಇಲ್ಲ.
33 : ನೀವು ಹೋಗಬೇಕಾದ ದಾರಿಯನ್ನು ತೋರಿಸುವುದಕ್ಕೂ ಕಂಡು ಇಳಿಯಬೇಕಾದ ಸ್ಥಳಗಳನ್ನು ಗೊತ್ತು ಮಾಡುವುದಕ್ಕೂ ಇರುಳಲ್ಲಿ ಬೆಂಕಿಯಲ್ಲೂ ಹಗಲಲ್ಲಿ ಮೇಘದಲ್ಲೂ ನಿಮ್ಮ ಮುಂದುಗಡೆ ಹೋದ ದೇವರನ್ನು ನೀವು ನಂಬಲಿಲ್ಲ.
34 : “ಸರ್ವೇಶ್ವರ ನಿಮ್ಮ ಮಾತುಗಳನ್ನು ಕೇಳಿ ಕೋಪಗೊಂಡರು.
35 : ಅವರು ನಿಮ್ಮ ಪಿತೃಗಳಿಗೆ ವಾಗ್ದಾನ ಮಾಡಿದ ಒಳ್ಳೇ ನಾಡನ್ನು ಈ ದುಷ್ಟ ಜನರಲ್ಲಿ ಯಾರೂ ನೋಡುವುದಿಲ್ಲವೆಂದು ಪ್ರಮಾಣಮಾಡಿದರು.
36 : ‘ಯೆಫುನ್ನೆಯ ಮಗ ಕಾಲೇಬನೊಬ್ಬನೇ ಸರ್ವೇಶ್ವರನಾದ ನನ್ನನ್ನು ಮನಃಪೂರ್ವಕವಾಗಿ ಅನುಸರಿಸಿದ್ದರಿಂದ ಅವನೇ ಅದನ್ನು ನೋಡುವನು; ಅವನು ಸಂಚರಿಸಿದ ಪ್ರದೇಶವನ್ನು ಅವನಿಗೆ ಹಾಗು ಅವನ ಸಂತತಿ ಅವರಿಗೆ ಕೊಡುವೆನು,’ ಎಂದು ಹೇಳಿದರು.
37 : ಅದು ಮಾತ್ರವಲ್ಲದೆ, ಸರ್ವೇಶ್ವರ ನಿಮ್ಮ ದೆಸೆಯಿಂದ ನನ್ನ ಮೇಲೆಯೂ ಕೋಪಮಾಡಿದರು. ‘ನೀನೂ ಆ ನಾಡಿಗೆ ಸೇರುವುದಿಲ್ಲ;
38 : ಆದರೆ ನಿನ್ನ ಮುಂದೆ ನಿಂತಿರುವ ನೂನನ ಮಗ ಯೆಹೋಶುವನು ಅಲ್ಲಿಗೆ ಸೇರುವನು. ಅವನೇ ಇಸ್ರಯೇಲರಿಗೆ ಆ ನಾಡನ್ನು ಸ್ವಾಧೀನಪಡಿಸುವನು; ಆದುದರಿಂದ ಅವನನ್ನು ಧೈರ್ಯಗೊಳಿಸು.
39 : ಆದರೆ ಪರರ ಪಾಲಾಗುವರೆಂದು ನೀವು ಹೇಳಿದ ನಿಮ್ಮ ಮನೆಯವರು ಹಾಗು ಒಳ್ಳೆಯದು, ಕೆಟ್ಟದು ಎಂಬುದನ್ನು ಅರಿಯದ ನಿಮ್ಮ ಹಸುಳೆಗಳು ಅಲ್ಲಿಗೆ ಸೇರುವರು; ಅವರಿಗೇ ಆ ನಾಡನ್ನು ಕೊಡುವೆನು; ಅವರು ಅದನ್ನು ಸ್ವಾಧೀನಮಾಡಿಕೊಳ್ಳುವರು.
40 : ನೀವಾದರೋ ಹಿಂದಿರುಗಿ ಕೆಂಪು ಸಮುದ್ರದ ಮಾರ್ಗವನ್ನು ಹಿಡಿದು ಮರುಭೂಮಿಗೆ ಹೊರಟು ಹೋಗಿ’ ಎಂದು ಆಜ್ಞಾಪಿಸಿದರು.
41 : “ಅದಕ್ಕೆ ನೀವು, ‘ನಾವು ಸರ್ವೇಶ್ವರನಿಗೆ ದ್ರೋಹಿಗಳಾದೆವು; ಆದರೂ ನಮ್ಮ ದೇವರಾದ ಸರ್ವೇಶ್ವರ ಆಜ್ಞಾಪಿಸಿದಂತೆ ನಾವೇ ಈಗ ಆ ಮಲೆನಾಡನ್ನು ಹತ್ತಿ ಯುದ್ಧಮಾಡುತ್ತೇವೆ,’ ಎಂದು ಉತ್ತರಕೊಟ್ಟಿರಿ; ನೀವೆಲ್ಲರು ನಿಮ್ಮ ನಿಮ್ಮ ಆಯುಧಗಳನ್ನು ತೆಗೆದುಕೊಂಡು ಆ ಮಲೆನಾಡನ್ನು ಹತ್ತಿ ಜಯಿಸುವುದು ಅಲ್ಪಕಾರ್ಯವೆಂದು ಭಾವಿಸಿ ಹೊರಡುವುದಕ್ಕಿದ್ದಿರಿ.
42 : ಆದರೆ ಸರ್ವೇಶ್ವರ ನನಗೆ, ‘ನಾನು ಇವರ ಮಧ್ಯೆ ಇಲ್ಲವಾದುದರಿಂದ ಇವರು ಸೋತು ಹೋಗುವರು; ಯುದ್ಧಮಾಡಲೂ ಬಾರದು, ಆ ಮಲೆನಾಡಿಗೆ ಹೋಗಲೂಬಾರದು ಎಂದು ಇವರಿಗೆ ಆಜ್ಞಾಪಿಸು,’ ಎಂದರು.
43 : “ನಾನು ಆ ಮಾತನ್ನು ನಿಮಗೆ ತಿಳಿಸಿದರೂ ನೀವು ಕಿವಿಗೊಡದೆ ಸರ್ವೇಶ್ವರನ ಆಜ್ಞೆಯನ್ನು ತಾತ್ಸಾರಮಾಡಿ ಸೊಕ್ಕಿನಿಂದ ಆ ಬೆಟ್ಟವನ್ನು ಹತ್ತಿದಿರಿ.
44 : ಆಗ ಬೆಟ್ಟದಲ್ಲಿದ್ದ ಅಮೋರಿಯರು ನಿಮಗೆ ವಿರುದ್ಧ ಹೊರಟು ಜೇನುನೊಣಗಳಂತೆ ನಿಮ್ಮನ್ನು ಮುತ್ತಿ ಸೇಯಿರಿನಲ್ಲಿ ಹೊರ್ಮದವರೆಗೂ ಬೆನ್ನಟ್ಟಿ ಸಂಹರಿಸಿದರು.
45 : ನೀವು ಹಿಂದಿರುಗಿ ಬಂದು ಸರ್ವೇಶ್ವರನ ಮುಂದೆ ಗೋಳಾಡಿದಿರಿ. ಆಗ ಅವರು ನಿಮ್ಮ ಮೊರೆಯನ್ನು ಕೇಳಲೂ ಇಲ್ಲ, ನಿಮ್ಮನ್ನು ರಕ್ಷಿಸಲೂ ಇಲ್ಲ.
46 : “ಆಮೇಲೆ ನೀವು ಕಾದೇಶಿನಲ್ಲಿ ಬಹುಕಾಲ ವಾಸವಾಗಿದ್ದಿರಿ.

Holydivine