Obadiah - Chapter 1
Holy Bible

1 : ಓಬದ್ಯನು ಕಂಡ ದೈವದರ್ಶನ: ಎದೋಮ್ ನಾಡಿನ ವಿಷಯವಾಗಿ ಸ್ವಾಮಿ ಸರ್ವೇಶ್ವರ ಇಂತೆನ್ನುತ್ತಾರೆ:
2 : “ಹೊರಡಿರಿ, ಎದೋಮಿನ ಮೇಲೆ ಯುದ್ಧ ಮಾಡಲು ತೆರಳೋಣ” ಹೀಗೆಂದು ತಮ್ಮ ದೂತನ ಮುಖಾಂತರ ಸರ್ವೇಶ್ವರ ರಾಷ್ಟ್ರಗಳಿಗೆ ಹೇಳಿ ಕಳುಹಿಸಿದ್ದಾರೆ. ಅವರಿಂದ ಬಂದ ಈ ಸಮಾಚಾರವನ್ನು ನಾವು ಕೇಳಿದ್ದೇವೆ.
3 : ನಿನ್ನ ದುರಹಂಕಾರ ನಿನ್ನನ್ನು ವಂಚಿಸಿದೆ.” ‘ಉನ್ನತಸ್ಥಾನದಲ್ಲಿ ವಾಸವಾಗಿದ್ದೇನೆ; ಬಂಡೆಗಳ ಬಿರುಕುಗಳಲ್ಲಿ ಭದ್ರವಾಗಿದ್ದೇನೆ; ನನ್ನನ್ನು ನೆಲಕ್ಕೆ ಇಳಿಸಬಲ್ಲವರು ಯಾರು?’ ಎನ್ನುತ್ತಿರುವೆ.
4 : ಅದಕ್ಕೆ ಸರ್ವೇಶ್ವರ: “ನೀನು ಹದ್ದಿನ ಮಟ್ಟದಲ್ಲಿ ಹಾರಾಡುತ್ತಿದ್ದರೂ ನಕ್ಷತ್ರ ಮಂಡಲದಲ್ಲಿ ನೆಲೆಗೊಂಡಿದ್ದರೂ ಅಲ್ಲಿಂದಲೂ ನಿನ್ನನ್ನು ಇಳಿಸಿಬಿಡುತ್ತೇನೆ,” ಎನ್ನುತ್ತಾರೆ.
5 : ನಿನ್ನಲ್ಲಿಗೆ ಕಳ್ಳರಾಗಲಿ, ರಾತ್ರಿಯಲ್ಲಿ ಪಂಜುಗಳ್ಳರಾಗಲಿ ಬಂದರೆ ಅವರು ತಮಗೆ ಬೇಕಾದಷ್ಟನ್ನು ಮಾತ್ರ ದೋಚಿಕೊಂಡು ಹೋಗುತ್ತಿದ್ದರಲ್ಲವೆ?
6 : ಆದರೆ ಏಸಾವಿನ ಆಸ್ತಿಪಾಸ್ತಿ ಸಂಪೂರ್ಣವಾಗಿ ಸೂರೆಯಾಗಿದೆ.
7 : ನಿನ್ನ ಮಿತ್ರ ಮಂಡಲಿಯವರೇ ನಿನ್ನನ್ನು ಬೆನ್ನಟ್ಟಿ ಬಂದಿದ್ದಾರೆ. ನಿನ್ನನ್ನು ಗಡಿಯಾಚೆ ತಳ್ಳಿಬಿಟ್ಟಿದ್ದಾರೆ. ನಿನ್ನ ಆಪ್ತರೇ ನಿನ್ನನ್ನು ವಂಚಿಸಿ ಸೋಲಿಸಿದ್ದಾರೆ. ನಿನ್ನ ಅನ್ನ ತಿಂದವರೇ ತಿಳಿಗೇಡಿಯಾದ ನಿನಗೆ ಉರುಲೊಡ್ಡಿದ್ದಾರೆ.
8 : ಸರ್ವೇಶ್ವರ ಇಂತೆನ್ನುತ್ತಾರೆ: “ಆ ದಿನದಲ್ಲಿ ಎದೋಮಿನ ಜ್ಞಾನಿಗಳನ್ನೂ ಏಸಾವಿನ ಪರ್ವತದ ಬುದ್ಧಿಜೀವಿಗಳನ್ನೂ ನಾನು ಅಳಿಸದೆ ಬಿಡುವೆನೋ?
9 : ತೇಮಾನ್ ನಾಡೇ, ನಿನ್ನ ಶೂರರು ದಿಗ್ಭ್ರಾಂತರಾಗುವರು; ಏಸಾವಿನ ಪ್ರಾಂತ್ಯದಲ್ಲಿ ಎಲ್ಲರೂ ಹತರಾಗುವರು.
10 : “ನಿನ್ನ ತಮ್ಮನಾದ ಯಕೋಬನ ವಿರುದ್ಧ ನಡೆಸಿದ ಹಿಂಸಾಕೃತ್ಯಗಳಿಗಾಗಿ ನೀನು ಅವಮಾನ ಕ್ಕೊಳಗಾಗುವೆ. ನಿತ್ಯ ನಾಶನಕ್ಕೆ ಈಡಾಗುವೆ.
11 : ನಿನ್ನ ತಮ್ಮನ ಆಸ್ತಿಯನ್ನು ಕೊಳ್ಳೆಹೊಡೆದ ದಿನದಲ್ಲಿ ನೀನು ತಟಸ್ಥನಾಗಿ ನೋಡುತ್ತಾ ನಿಂತಿದ್ದೆ. ಪರಕೀಯರು ಆತನ ಪುರದ್ವಾರಗಳನ್ನು ಪ್ರವೇಶಿಸಿ ಜೆರುಸಲೇಮಿನ ಸೊತ್ತಿಗಾಗಿ ಚೀಟು ಹಾಕಿದ ದಿನದಂದು ನೀನೂ ಅವರಂತೆ ಇದ್ದೆ.
12 : ನಿನ್ನ ತಮ್ಮನ ದುರ್ದಿನದಲ್ಲಿ, ಅವರ ಅಪಾಯ ಕಾಲದಲ್ಲಿ ನೀನು ಸುಮ್ಮನೆ ನೋಡುತ್ತಾ ನಿಂತಿರಬಾರದಿತ್ತು. ಯೆಹೂದ್ಯರ ವಿನಾಶದಿನದಲ್ಲಿ ಸಂತೋಷಪಡಬಾರದಿತ್ತು. ಅವರ ಸಂಕಟ ಕಾಲದಲ್ಲಿ ನೀನು ಹಿಗ್ಗಬಾರದಿತ್ತು.
13 : ನನ್ನ ಜನರ ಆಪತ್ಕಾಲದಲ್ಲಿ ನೀನು ಅವರ ಪುರದ್ವಾರದೊಳಗೆ ಪ್ರವೇಶಿಸಬಾರದಿತ್ತು. ಅವರ ಸೊತ್ತಿಗೆ ನೀನು ಕೈಹಾಕಬಾರದಿತ್ತು.
14 : ತಪ್ಪಿಸಿಕೊಂಡು ಓಡಿಹೋಗುತ್ತಿದ್ದ ಅವರನ್ನು ಕೊಲ್ಲುವುದಕ್ಕಾಗಿ ಕೂಡುದಾರಿಗಳಲ್ಲಿ ನಿಲ್ಲಬಾರದಿತ್ತು. ತುರ್ತುಪರಿಸ್ಥಿತಿಯಲ್ಲಿ ತಪ್ಪಿಸಿಕೊಂಡವರನ್ನು ಶತ್ರುವಿನ ಕೈಗೆ ಒಪ್ಪಿಸಬಾರದಿತ್ತು.
15 : “ಸಮಸ್ತ ರಾಷ್ಟ್ರಗಳಿಗೂ ಸರ್ವೇಶ್ವರನ ದಿನ ಸಮೀಪಿಸಿದೆ. ನೀನು ಮಾಡಿದ್ದನ್ನೆ ನಿನಗೂ ಮಾಡಲಾಗುವುದು. ನಿನ್ನ ದುಷ್ಕøತ್ಯವು ನಿನ್ನ ತಲೆಗೇ ಬರುವುದು.
16 : ಜನರೇ, ಪವಿತ್ರ ಪರ್ವತದ ಮೇಲೆ ನನ್ನ ದಂಡನೆಯ ಕಹಿಪಾನ ಮಾಡಿದಿರಿ. ಅಂತೆಯೇ ಸಕಲ ರಾಷ್ಟ್ರಗಳೂ ಕಹಿಪಾನ ಮಾಡುವುವು. ಹೌದು, ಪದೇಪದೇ ಪಾನಮಾಡಿ ತೂರಾಡುವುವು. ಅಂತ್ಯದಲ್ಲಿ ಇಲ್ಲದಂತಾಗುವುವು.
17 : “ಆದರೆ ತಪ್ಪಿಸಿಕೊಂಡವರು ಸಿಯೋನ್ ಪರ್ವತದ ಮೇಲೆ ಇರುವರು. ಅದು ಪುಣ್ಯಕ್ಷೇತ್ರ ಎನಿಸಿಕೊಳ್ಳುವುದು; ಯಕೋಬನ ವಂಶಜರು ತಮ್ಮ ಸ್ವತ್ತನ್ನು ಮರಳಿ ಅನುಭವಿಸುವರು.
18 : ಯಕೋಬನವಂಶ ಅಗ್ನಿಯಂತೆ; ಜೋಸೆಫನ ವಂಶ ಜ್ವಾಲೆಯಂತೆ. ಇವೆರಡೂ ಸೇರಿ ಕೂಳೆಯಂತೆ ಇರುವ ಏಸಾವಿನ ವಂಶವನ್ನು ಧಗಧಗನೆ ದಹಿಸಿ ಭಸ್ಮಮಾಡುವುವು. ಏಸಾವಿನ ವಂಶದಲ್ಲಿ ಯಾರೂ ಉಳಿಯುವುದಿಲ್ಲ.” ಇದು ಸರ್ವೇಶ್ವರಸ್ವಾಮಿಯ ನುಡಿ.
19 : ಆಗ ದಕ್ಷಿಣ ವಲಯದವರು ಏಸಾವಿನ ಪರ್ವತವನ್ನು ಸ್ವಾಧೀನಪಡಿಸಿ ಕೊಳ್ಳುವರು. ಪಶ್ಚಿಮದ ಬಯಲು ಸೀಮೆಯವರು ಫಲಿಷ್ಟಿಯವನ್ನೂ ಎಫ್ರಯಿಮ್ ಮತ್ತು ಸಮಾರ್ಯದ ಭೂಮಿಯನ್ನೂ ವಶಪಡಿಸಿಕೊಳ್ಳುವರು. ಬೆನ್ಯಾಮಿನ ವಂಶಜರು ಗಿಲ್ಯಾದನ್ನು ಸ್ವತಂತ್ರಿಸಿಕೊಳ್ಳುವರು.
20 : ಸೆರೆಹೋಗಿರುವ ಇಸ್ರಯೇಲಿನ ಸೈನಿಕರು ಕಾನಾನ್ ನಾಡನ್ನು ಚಾರೆಪತಿನವರೆಗೆ ವಶಪಡಿಸಿಕೊಳ್ಳುವರು. ಸೆಪಾರದ ಎಂಬಲ್ಲಿ ಸೆರೆಯಾಗಿರುವ ಜೆರುಸಲೇಮಿನವರು ದಕ್ಷಿಣ ಪ್ರಾಂತ್ಯದ ಪಟ್ಟಣಗಳನ್ನು ವಶಪಡಿಸಿಕೊಳ್ಳುವರು.
21 : ಉದ್ಧಾರಕನು ಏಸಾವಿನ ಪರ್ವತವನ್ನು ಆಳಲು ಸಿಯೋನ್ ಪರ್ವತವನ್ನು ಏರುವನು. ಆಗ ರಾಜ್ಯಭಾರವು ಸರ್ವೇಶ್ವರಸ್ವಾಮಿಯದಾಗಿರುವುದು.”

Holydivine