Jonah - Chapter 1
Holy Bible

1 : ಒಂದು ದಿನ ಅಮಿತ್ತಾಯನ ಮಗನಾದ ಯೋನನಿಗೆ ಸರ್ವೇಶ್ವರಸ್ವಾಮಿಯ ವಾಣಿ ಕೇಳಿಸಿತು.
2 : “ನಿನೆವೆ ಮಹಾನಗರದ ನಿವಾಸಿಗಳು ಎಷ್ಟು ದುಷ್ಟರೆಂಬುದು ನನಗೆ ತಿಳಿದುಬಂದಿದೆ. ನೀನು ಅಲ್ಲಿಗೆ ಹೋಗು. ಅವರನ್ನು ಕಟುವಾಗಿ ಖಂಡಿಸು.”
3 : ಆದರೆ ಯೋನನು ಆ ಸ್ವಾಮಿಯ ಸನ್ನಿಧಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಿನೆವೆಗೆ ಹೋಗುವುದರ ಬದಲು ತಾರ್ಷಿಷಿಗೆ ಅಭಿಮುಖವಾಗಿ ಓಡಿಹೋಗಲು ಹೊರಟನು. ಜೊಪ್ಪ ಎಂಬ ಊರನ್ನು ತಲುಪಿದಾಗ ತಾರ್ಷಿಷಿಗೆ ಹೊರಡಲಿದ್ದ ಹಡಗೊಂದನ್ನು ಕಂಡನು. ಪ್ರಯಾಣದ ದರವನ್ನು ತೆತ್ತು ಸಹನಾವಿಕರೊಂದಿಗೆ ಹಡಗನ್ನು ಹತ್ತಿದನು. ಹೀಗೆ ಯೋನನು ಸರ್ವೇಶ್ವರಸ್ವಾಮಿಯ ಸನ್ನಿಧಿಯಿಂದ ದೂರ ಹೋಗಬಹುದೆಂದು ಭಾವಿಸಿದನು.
4 : ಆದರೆ ಸರ್ವೇಶ್ವರ ಸಮುದ್ರದಲ್ಲಿ ಬಿರುಗಾಳಿಯೊಂದನ್ನು ಬರಮಾಡಿದರು. ಅಲೆಗಳ ಹೊಡೆತಕ್ಕೆ ಹಡಗು ನುಚ್ಚುನೂರಾಗಿ ಒಡೆದು ಹೋಗುವುದರಲ್ಲಿತ್ತು. ದಿಗ್ಭ್ರಾಂತರಾದ ನಾವಿಕರು ಪ್ರಾಣ ರಕ್ಷಣೆಗಾಗಿ ತಮ್ಮ ದೇವದೇವತೆಗಳ ಮೊರೆ ಹೊಕ್ಕರು. ಪ್ರಾಣಾಪಾಯದಿಂದ ಪಾರಾಗಲು ತಮ್ಮಲ್ಲಿದ್ದ ಸರಕುಸಾಮಗ್ರಿಗಳನ್ನು ಸಮುದ್ರಕ್ಕೆ ಎಸೆದರು.
5 : ಇಷ್ಟರೊಳಗೆ ಯೋನನು ಹಡಗಿನ ತಳಭಾಗಕ್ಕೆ ಇಳಿದುಹೋಗಿ ಹಾಯಾಗಿ ಮಲಗಿದ್ದನು. ಅವನಿಗೆ ಗಾಢನಿದ್ರೆ ಹತ್ತಿತ್ತು.
6 : ಇದನ್ನು ಕಂಡ ನೌಕಾಧಿಕಾರಿ ಅಲ್ಲಿಗೆ ಬಂದು, ಅವನನ್ನು ಎಬ್ಬಿಸುತ್ತಾ: “ಏನಯ್ಯಾ, ಹಾಯಾಗಿ ಇಲ್ಲಿ ನಿದ್ರೆ ಮಾಡುತ್ತಿದ್ದೀಯಲ್ಲ, ಎದ್ದೇಳು. ನಿನ್ನ ದೇವರಿಗೆ ಮೊರೆಯಿಡು. ಅವರಾದರೂ ನಮ್ಮ ಮೇಲೆ ಕರುಣೆತೋರಿ, ನಾವು ನಾಶವಾಗದಂತೆ ಕಾಪಾಡಿಯಾರು,” ಎಂದನು.
7 : ಆಗ ನಾವಿಕರು: “ನಮಗೆ ಸಂಭವಿಸಿರುವ ಈ ದುರಂತಕ್ಕೆ ಕಾರಣ ಯಾರಿರಬಹುದು? ಬನ್ನಿ, ಚೀಟುಹಾಕಿ ನೋಡೋಣ” ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಂಡರು. ಹಾಗೆ ಮಾಡಿದಾಗ ಚೀಟು ಯೋನನ ಹೆಸರಿಗೆ ಬಂತು.
8 : ಆಗ ನಾವಿಕರು: “ನೀನು ಯಾರು? ಎಲ್ಲಿಂದ ಬಂದೆ? ಯಾವ ಕೆಲಸದ ಮೇಲೆ ಬಂದೆ? ನೀನು ಯಾವ ಜನಾಂಗದವನು? ಈ ದುರಂತಕ್ಕೆ ಕಾರಣ ಯಾರು?” ಎಂದು ಪ್ರಶ್ನಿಸಿದರು.
9 : ಅದಕ್ಕೆ ಯೋನನು: “ನಾನು ಹಿಬ್ರಿಯನು. ಸಮುದ್ರವನ್ನೂ ಭೂಮಿಯನ್ನೂ ಸೃಷ್ಟಿಸಿದ ಪರಲೋಕ ದೇವರಾದ ಸರ್ವೇಶ್ವರನ ಭಕ್ತನು ನಾನು,” ಎಂದು ಉತ್ತರಿಸಿದನು.
10 : ಅಲ್ಲದೆ ತಾನು ಆ ಸ್ವಾಮಿಯ ಸನ್ನಿಧಿಯಿಂದ ಓಡಿಹೋಗುತ್ತಿರುವುದಾಗಿಯೂ ತಿಳಿಸಿದನು. ಇದನ್ನು ಕೇಳಿದ್ದೇ ನಾವಿಕರು ಭಯಭ್ರಾಂತರಾದರು. “ಎಂಥಾ ತಪ್ಪು ಮಾಡಿದೆ!” ಎಂದು ಅವನನ್ನು ಖಂಡಿಸಿದರು.
11 : ಆಗ ಬಿರುಗಾಳಿ ಮತ್ತಷ್ಟು ತೀವ್ರಗೊಳ್ಳುತ್ತಿತ್ತು. ನಾವಿಕರು ಯೋನನಿಗೆ: “ಸಮುದ್ರ ಶಾಂತವಾಗಬೇಕಾದರೆ ನಿನ್ನನ್ನು ಏನು ಮಾಡಬೇಕು? ಹೇಳು,” ಎಂದು ಕೇಳಿದರು.
12 : ಯೋನನು: “ನನ್ನನ್ನು ಎತ್ತಿ ಸಮುದ್ರಕ್ಕೆ ಎಸೆಯಿರಿ. ಆಗ ಅದು ಶಾಂತವಾಗುವುದು. ನೀವು ಇಂಥ ಭೀಕರ ಬಿರುಗಾಳಿಗೆ ತುತ್ತಾಗಲು ನಾನೇ ಕಾರಣ. ಇದನ್ನು ನಾನು ಚೆನ್ನಾಗಿ ಬಲ್ಲೆ,” ಎಂದನು.
13 : ನಾವಿಕರು ಅವನ ಸಲಹೆಗೆ ಒಪ್ಪದೆ, ಹಡಗನ್ನು ದಡಕ್ಕೆ ಸಾಗಿಸಲು ತಮ್ಮ ಶಕ್ತಿಸಾಮಥ್ರ್ಯವನ್ನೆಲ್ಲ ಪ್ರಯೋಗಿಸಿ ಹುಟ್ಟು ಹಾಕಿದರು. ಆದರೆ ಸಾಧ್ಯವಾಗಲಿಲ್ಲ. ಸಮುದ್ರವು ಅಲ್ಲೋಲಕಲ್ಲೋಲವಾಗುತ್ತಲೇ ಇತ್ತು.
14 : ಆಗ ಅವರು ಬೇರೆ ದಿಕ್ಕು ತೋಚದೆ ಸರ್ವೇಶ್ವರಸ್ವಾಮಿಗೆ ಮೊರೆಯಿಡುತ್ತಾ: “ಸ್ವಾಮಿ, ಈ ನಿರಪರಾಧಿಯ ಪ್ರಾಣಹಾನಿಗೆ ನಾವು ಹೊಣೆಯಲ್ಲ. ಇದಕ್ಕಾಗಿ ನಮ್ಮನ್ನು ನಾಶಮಾಡಬೇಡಿ. ಇದೆಲ್ಲವೂ ಸಂಭವಿಸಿರುವುದು ನಿಮ್ಮ ಚಿತ್ತವಲ್ಲವೇ?” ಎಂದು ದೈನ್ಯದಿಂದ ಪ್ರಾರ್ಥಿಸಿದರು.
15 : ಬಳಿಕ ಅವರು ಯೋನನನ್ನು ಎತ್ತಿ ಸಮುದ್ರಕ್ಕೆ ಎಸೆದರು. ತಕ್ಷಣವೇ, ಭೋರ್ಗರೆಯುತ್ತಿದ್ದ ಸಮುದ್ರ ಶಾಂತವಾಯಿತು
16 : ಇದನ್ನು ಕಂಡು ಜನರು ಸರ್ವೇಶ್ವರಸ್ವಾಮಿಗೆ ಬಹುವಾಗಿ ಭಯಪಟ್ಟರು: ಯಜ್ಞವನ್ನು ಅರ್ಪಿಸಿ, ಹರಕೆಗಳನ್ನು ಸಲ್ಲಿಸಿದರು.
17 : ಇತ್ತ ಸರ್ವೇಶ್ವರಸ್ವಾಮಿಯ ಆಜ್ಞಾನುಸಾರ ದೊಡ್ಡ ಮೀನೊಂದು ಬಂದು ಯೋನನನ್ನು ನುಂಗಿತು. ಅವನು ಅದರ ಹೊಟ್ಟೆಯಲ್ಲಿ ಮೂರು ಹಗಲು, ಮೂರು ಇರುಳು ಇದ್ದನು.

Holydivine