Proverbs - Chapter 1
Holy Bible

1 : ಇಸ್ರಯೇಲರಿಗೆ ಅರಸನಾಗಿದ್ದ ದಾವೀದನ ಮಗ ಸೊಲೊಮೋನನ ಜ್ಞಾನೋಕ್ತಿಗಳು:
2 : ಜ್ಞಾನವನ್ನೂ ಶಿಸ್ತನ್ನೂ ಪಡೆಯುವುದಕ್ಕೆ ಒಳನೋಟದ ಮಾತುಗಳನ್ನು ಗ್ರಹಿಸುವುದಕ್ಕೆ,
3 : ವಿವೇಕ ಹಾಗೂ ನ್ಯಾಯ ನೀತಿಯ ಮಾರ್ಗದಲ್ಲಿ ಶಿಕ್ಷಿತರಾಗುವುದಕ್ಕೆ ಮತ್ತು
4 : ಮೂಢರಿಗೆ ಬುದ್ದಿಯನ್ನೂ ಯುವಜನರಿಗೆ ತಿಳುವಳಿಕೆಯನ್ನೂ ಕಲಿಸುವುದಕ್ಕೆ ಒದಗುತ್ತವೆ ಈ ಜ್ಞಾನೋಕ್ತಿಗಳು.
5 : ಇವುಗಳನ್ನು ಕೇಳಿ ಜಾಣನು ಇನ್ನೂ ಜಾಣನಾಗುವನು, ವಿವೇಕಿಯು ಮತ್ತಷ್ಟು ಜ್ಞಾನಸಂಪನ್ನನಾಗುವನು.
6 : ಗಾದೆಗಳನ್ನೂ ಗೂಢಾರ್ಥಗಳನ್ನೂ ಜ್ಞಾನಿಯ ನುಡಿ ಹಾಗು ಒಗಟುಗಳನ್ನೂ ತಿಳಿದುಕೊಳ್ಳಲು ಸಹ ಇವು ಸಾಧನಗಳು.
7 : ಸರ್ವೇಶ್ವರನಲ್ಲಿ ಭಯಭಕ್ತಿಯೇ ಜ್ಞಾನಕ್ಕೆ ಮೂಲ; ಮೂರ್ಖರಿಗಾದರೋ ಜ್ಞಾನ, ಶಿಸ್ತು ಎಂದರೆ ತಾತ್ಸಾರ.
8 : ಮಗನೇ, ನಿನ್ನ ತಂದೆಯ ಬೋಧೆಗೆ ಕಿವಿಗೊಡು, ನಿನ್ನ ತಾಯಿಯ ಉಪದೇಶವನ್ನು ತೊರೆಯದಿರು.
9 : ಅವು ನಿನ್ನ ತಲೆಗೆ ಸುಂದರ ಕಿರೀಟ, ನಿನ್ನ ಕೊರಳಿಗೆ ಕಂಠಾಭರಣ.
10 : ಮಗನೇ, ಪಾಪಿಗಳ ಪ್ರೇರಣೆಗೆ ಒಪ್ಪಿಗೆ ಕೊಡಲೇಬೇಡ
11 : ಅವರು ನಿನಗೆ “ನಮ್ಮೊಡನೆ ಬಾ, ಹೊಂಚುಹಾಕಿ ಹತ್ಯೆಮಾಡೋಣ;
12 : ಪಾತಾಳಕ್ಕಿಳಿಯುವವರನ್ನು ನರಕ ನುಂಗುವಂತೆ ಅವರನ್ನು ಜೀವಸಹಿತ ಪೂರ್ತಿಯಾಗಿ ಕಬಳಿಸಿಬಿಡೋಣ ಬಾ;
13 : ಅಮೂಲ್ಯವಾದ ಸೊತ್ತನ್ನೆಲ್ಲಾ ಕಂಡು ಹಿಡಿಯೋಣ; ಕೊಳ್ಳೆಹೊಡೆದು ಮನೆ ತುಂಬಿಸಿಕೊಳ್ಳೋಣ, ಬಾ;
14 : ನಮ್ಮೊಡನೆ ಪಾಲುಗಾರನಾಗಲು ಬಾ; ನಮ್ಮೆಲ್ಲರ ನಿಧಿ ಒಂದೇ ಆಗಿರಲಿ” ಎಂದೆಲ್ಲಾ ಹೇಳುವರು.
15 : ಆದರೆ ಮಗನೇ, ಅವರೊಡನೆ ಸೇರಬೇಡ; ನೀನು ಅವರ ಮಾರ್ಗದಲ್ಲಿ ಹೆಜ್ಜೆಯಿಡಬೇಡ.
16 : ಅವರ ಕಾಲು ಕೇಡನ್ನು ಹಿಂಬಾಲಿಸಿ ಓಡುತ್ತವೆ ರಕ್ತಪಾತಕ್ಕಾಗಿ ಅವರು ತುಡಿಯುತ್ತಿರುತ್ತಾರೆ.
17 : ರೆಕ್ಕೆಯುಳ್ಳ ಹಕ್ಕಿಯ ಕಣ್ಣೆದುರಿಗೇ ಬಲೆಯನ್ನು ಹರಡುವುದು ವ್ಯರ್ಥವಲ್ಲವೆ?
18 : ಇಂಥವರು ಹೊಂಚುಹಾಕುವುದು ಸ್ವಹತ್ಯಕ್ಕೇ, ಬಲೆ ಒಡ್ಡುವುದು ಸ್ವಂತ ಪ್ರಾಣನಾಶಕ್ಕೆ.
19 : ಸೂರೆ ಮಾಡುವವರೆಲ್ಲರ ಪಾಡು ಇದುವೆ; ಕೊಳ್ಳೆಯು, ಕೊಳ್ಳೆಗಾರರ ಪ್ರಾಣವನ್ನೇ ಕೊಳ್ಳೆಮಾಡುತ್ತದೆ.
20 : ಜ್ಞಾನವೆಂಬಾಕೆ ಹಾದಿಗಳಲ್ಲಿ ಕೂಗುತ್ತಾ ಇದ್ದಾಳೆ; ಬೀದಿಚೌಕಗಳಲ್ಲಿ ದನಿಗೈಯುತ್ತಾ ಇದ್ದಾಳೆ.
21 : ಪೇಟೆಯ ಜನಜಂಗುಳಿಯ ನಡುವೆ, ಪುರ ದ್ವಾರಗಳಲ್ಲೆ, ಹೀಗೆಂದು ಪ್ರಚಾರ ಮಾಡುತ್ತಿದ್ದಾಳೆ:
22 : “ಮೂಢರೇ, ಎಂದಿನ ತನಕ ಮೂಢರಾಗಿರಲಾಶಿಸುವಿರಿ? ಕುಚೋದ್ಯಗಾರರೇ, ಎಷ್ಟು ಕಾಲ ಕುಚೋದ್ಯಗಾರರಾಗಿರಲಿಚ್ಛಿಸುವಿರಿ? ಮೂರ್ಖರೇ, ಎಷ್ಟರವರೆಗೆ ತಿಳುವಳಿಕೆಯನ್ನು ಹಗೆಮಾಡುವಿರಿ?
23 : ನನ್ನ ಎಚ್ಚರಿಕೆಯ ಮಾತಿನತ್ತ ಗಮನಕೊಡಿ; ನನ್ನ ಚೈತನ್ಯವನ್ನು ನಿಮ್ಮ ಮೇಲೆ ಸುರಿಸಿ, ನನ್ನ ನುಡಿಯನ್ನು ನಿಮಗೆ ತಿಳಿಯಪಡಿಸುವೆನು.
24 : ನಾನು ನಿಮ್ಮನ್ನು ಕರೆದಾಗ ತಿರಸ್ಕರಿಸಿದಿರಿ. ನಾನು ನಿಮಗೆ ಕೈ ನೀಡಿದಾಗ ಗಮನಿಸದೆ ಹೋದಿರಿ.
25 : ನನ್ನ ಬುದ್ಧಿವಾದವನ್ನು ಅಲಕ್ಷ್ಯಮಾಡಿದಿರಿ, ನನ್ನ ತಿದ್ದುಪಾಟನ್ನು ತಳ್ಳಿಬಿಟ್ಟಿರಿ.
26 : ಆದುದರಿಂದ ಬಿರುಗಾಳಿಯಂತೆ ನಿಮಗೆ ಅಪಾಯಬಂದಾಗ, ತುಫಾನಿನಂತೆ ನಿಮಗೆ ಆಪತ್ತು ಬಂದೊದಗಿದಾಗ
27 : ಕಷ್ಟ ಸಂಕಟಗಳು ನಿಮಗೆ ಸಂಭವಿಸಿದಾಗ ನಿಮ್ಮನ್ನು ಕುರಿತು ನಾನೆ ನಕ್ಕು ಪರಿಹಾಸ್ಯ ಮಾಡುವೆನು.
28 : ಆಗ ನನಗೆ ಮೊರೆಯಿಟ್ಟರೂ ಉತ್ತರಿಸೆನು; ಆತುರದಿಂದ ಹುಡುಕಿದರೂ ನಾನು ಕಾಣಸಿಗೆನು. 29ಏಕೆಂದರೆ ಸುಜ್ಞಾನವನ್ನೇ ಅವರು ದ್ವೇಷಿಸಿದರು, ಸರ್ವೇಶ್ವರನಲ್ಲಿ ಭಯಭಕ್ತಿಯಿರಿಸದೆ ಹೋದರು.
29 : ಏಕೆಂದರೆ ಸುಜ್ಞಾನವನ್ನೇ ಅವರು ದ್ವೇಷಿಸಿದರು, ಸರ್ವೇಶ್ವರನಲ್ಲಿ ಭಯಭಕ್ತಿಯಿರಿಸದೆ ಹೋದರು.
30 : ನನ್ನ ಆಲೋಚನೆಯನ್ನು ಅವರು ಕೇಳಲಿಲ್ಲ, ನನ್ನ ಪ್ರತಿಯೊಂದು ಎಚ್ಚರಿಕೆಯ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ.
31 : ಈ ಕಾರಣ, ತಮ್ಮ ನಡತೆಗೆ ತಕ್ಕಫಲವನ್ನು ಅನುಭವಿಸುವರು, ತಮ್ಮ ಕುಯುಕ್ತಿಗಳ ಪರಿಣಾಮದಿಂದ ಹೊಟ್ಟೆ ತುಂಬಿಸಿಕೊಳ್ಳುವರು.
32 : ಮೂಢರು ತಮ್ಮ ಉದಾಸೀನತೆಯಿಂದಲೆ ಹತರಾಗುವರು, ಜ್ಞಾನಹೀನರು ತಮ್ಮ ನಿಶ್ಚಿಂತೆಯಿಂದಲೆ ನಾಶವಾಗುವರು.
33 : ನನ್ನ ಮಾತಿಗೆ ಕಿವಿಗೊಡುವವರಾದರೋ ಸುರಕ್ಷಿತವಾಗಿರುವರು, ಕೇಡಿಗೆ ಭಯಪಡದೆ ನೆಮ್ಮದಿಯಾಗಿ ಬಾಳುವರು.

Holydivine