Ecclesiastes - Chapter 1
Holy Bible

1 : ದಾವೀದನ ಮಗನೂ ಜೆರುಸಲೇಮನ್ನು ಆಳುವ ಅರಸನೂ ಆದ ಉಪದೇಶಕನ ಪ್ರವಚನಗಳು:
2 : ಉಪದೇಶಕನು ಹೇಳುವುದನ್ನು ಕೇಳಿ: ವ್ಯರ್ಥಗಳಲ್ಲಿ ವ್ಯರ್ಥ, ವ್ಯರ್ಥವೇ ವ್ಯರ್ಥ, ಎಲ್ಲವೂ ವ್ಯರ್ಥ!
3 : ಈ ಲೋಕದಲ್ಲಿ ಮನುಷ್ಯನು ಪಡುವ ಎಲ್ಲಾ ಪ್ರಯಾಸದಿಂದ ಅವನಿಗೆ ದೊರಕುವ ಲಾಭವಾದರೂ ಏನು?
4 : ಒಂದು ಸಂತತಿ ಗತಿಸುತ್ತದೆ, ಮತ್ತೊಂದು ಸಂತತಿ ಬರುತ್ತದೆ, ಭೂಮಿಯಾದರೋ ಶಾಶ್ವತವಾಗಿ ನಿಲ್ಲುತ್ತದೆ.
5 : ಸೂರ್ಯನು ಮೂಡುತ್ತಾನೆ, ಸೂರ್ಯನು ಮುಳುಗುತ್ತಾನೆ, ತಾನು ಹೊರಟ ಸ್ಥಳಕ್ಕೆ ಮರಳಿ ಓಡುತ್ತಾನೆ.
6 : ಗಾಳಿ ದಕ್ಷಿಣಕ್ಕೆ ಬೀಸುತ್ತದೆ, ಉತ್ತರದ ಕಡೆಗೆ ತಿರುಗುತ್ತದೆ, ಸುತ್ತುತ್ತಾ ಸುತ್ತುತ್ತಾ ಹೋಗಿ ಹಿಂತಿರುಗಿ ಬರುತ್ತದೆ.
7 : ನದಿಗಳು ಹರಿದು ಸಮುದ್ರವನ್ನು ಸೇರುತ್ತವೆ, ಆದರೂ ಸಮುದ್ರವು ತುಂಬುವುದಿಲ್ಲ, ಅವು ಎಲ್ಲಿಂದ ಹರಿದು ಬರುತ್ತವೋ ಅಲ್ಲಿಗೆ ಹಿಂತಿರುಗಿ ಹೋಗುತ್ತವೆ.
8 : ಮನುಷ್ಯನಿಂದ ವಿವರಿಸಲಾಗದಷ್ಟು ಎಲ್ಲವೂ ನೀರಸ. ಎಷ್ಟು ನೋಡಿದರೂ ಕಣ್ಣಿಗೆ ತೃಪ್ತಿಯಿಲ್ಲ. ಎಷ್ಟು ಕೇಳಿದರೂ ಕಿವಿಗೆ ದಣಿವಿಲ್ಲ.
9 : ಮನುಷ್ಯನಿಂದ ವಿವರಿಸಲಾಗದಷ್ಟು ಎಲ್ಲವೂ ನೀರಸ. ಎಷ್ಟು ನೋಡಿದರೂ ಕಣ್ಣಿಗೆ ತೃಪ್ತಿಯಿಲ್ಲ. ಎಷ್ಟು ಕೇಳಿದರೂ ಕಿವಿಗೆ ದಣಿವಿಲ್ಲ.
10 : ಇಗೋ, ಹೊಸದು ಎನಿಸುಕೊಳ್ಳುವ ವಸ್ತು ಇದ್ದರೂ ಅದು ನಮಗಿಂತ ಮುಂಚೆಯೇ ಪುರಾತನ ಕಾಲದಲ್ಲೇ ಇದ್ದುದು.
11 : ಹಿಂದಿನ ಕಾಲದವರ ಜ್ಞಾಪಕವು ಇಂದಿನವರಿಗಿಲ್ಲ. ಮುಂದಿನ ಕಾಲದವರ ಜ್ಞಾಪಕವು ಅವರಿಗಿಂತ ಮುಂದೆ ಬರುವವರಿಗೆ ಇರುವುದಿಲ್ಲ.
12 : ಉಪದೇಶಕನಾದ ನಾನು ಜೆರುಸಲೇಮಿನಲ್ಲಿ ಇಸ್ರಯೇಲರಿಗೆ ಅರಸನಾಗಿದ್ದೆ.
13 : ಆಕಾಶದ ಕೆಳಗೆ ನಡೆಯುವ ಎಲ್ಲಾ ಕಾರ್ಯಗಳನ್ನು ಜ್ಞಾನದಿಂದ ವಿಚಾರಿಸಿದೆ; ವಿಮರ್ಶಿಸಲು ಮನಸ್ಸು ಮಾಡಿದೆ. ನರಮಾನವರ ಕರ್ತವ್ಯ ಎಂದು ದೇವರು ವಿಧಿಸಿರುವ ಕೆಲಸ ಕಾರ್ಯಗಳೆಲ್ಲ ಕಷ್ಟಕರವಾದುವೇ.
14 : ಲೋಕದಲ್ಲಿ ನಡೆಯುವ ಎಲ್ಲ ಕಾರ್ಯಕಲಾಪಗಳನ್ನು ಗಮನಿಸಿದ್ದೇನೆ. ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ ಎಲ್ಲವೂ ವ್ಯರ್ಥ.
15 : ಸೊಟ್ಟವಾದುದನ್ನು ನೆಟ್ಟಗೆ ಮಾಡುವುದು ಅಸಾಧ್ಯ, ಇಲ್ಲವಾದುದನ್ನು ಲೆಕ್ಕ ಹಾಕುವುದು ಅಶಕ್ಯ.
16 : ನನ್ನಷ್ಟಕ್ಕೆ ನಾನೇ ಹೀಗೆಂದುಕೊಂಡೆ: “ನನಗಿಂತ ಮೊದಲು ಜೆರುಸಲೇಮನ್ನು ಆಳಿದ ಎಲ್ಲಾ ಅರಸರಿಗಿಂತಲೂ ಹೆಚ್ಚು ಜ್ಞಾನವನ್ನು ಸಂಪಾದಿಸಿಕೊಂಡಿದ್ದೇನೆ. ಜ್ಞಾನ ಹಾಗೂ ತಿಳುವಳಿಕೆಯ ವಿಶೇಷ ಅನುಭವ ನನಗಿದೆ”.
17 : ಜ್ಞಾನ ಎಂದರೇನು? ಮೂಢತನವೆಂದರೇನು? ಬುದ್ಧಿಹೀನತೆ ಎಂದರೇನು? ಇವುಗಳನ್ನು ಅರಿತುಕೊಳ್ಳಲು ಮನಸ್ಸು ಮಾಡಿದೆ. ಆದರೆ ಇದೂ ಸಹ ಗಾಳಿಯನ್ನು ಹಿಡಿಯಲು ಬೆನ್ನಟ್ಟಿಹೋದಂತೆ ವ್ಯರ್ಥ ಎಂದು ಅರಿತುಕೊಂಡೆ.
18 : ಅಧಿಕ ಜ್ಞಾನವುಳ್ಳವನಿಗೆ ಅಧಿಕ ವ್ಯಥೆ, ಹೆಚ್ಚು ತಿಳುವಳಿಕೆಯುಳ್ಳವನಿಗೆ ಹೆಚ್ಚು ಸಂಕಟ.

Holydivine