Tobit - Chapter 1
Holy Bible

1 : ಇದು ತೊಬೀತನ ಜೀವನ ಚರಿತ್ರೆ. ತೊಬೀತನು ತೊಬಿಯೇಲನ ಮಗ, ತೊಬಿಯೇಲನು ಅನಾನಿಯೇಲನ ಮಗ; ಅನಾನಿಯೇಲನು ಅದುಯೇಲನ ಮಗ; ಅದುಯೇಲ ಗಬಯೇಲನ ಮಗ; ಗಬಯೇಲನು ರಫಯೇಲನ ಮಗ; ರಫಯೇಲನು ರಾಗುಯೇಲನ ಮಗ; ರಾಗುಯೇಲನು ಅಸಿಯೇಲನ ಕುಟುಂಬದವನು ಹಾಗು ನಫ್ತಾಲಿಯ ಕುಲಕ್ಕೆ ಸೇರಿದವನು.
2 : ಅಸ್ಸೀರಿಯದ ರಾಜನಾಗಿದ್ದ ಶಲ್ಮನೇಸರನ ಕಾಲದಲ್ಲಿ ತೊಬೀತನು ತಿಸ್ಬೆಯೆಂಬ ಪಟ್ಟಣದಿಂದ ಗಡೀಪಾರಾದನು. ತಿಸ್ಬೆ ಉತ್ತರ ಗಲಿಲೇಯದಲ್ಲಿ ಇದೆ. ಇದು ನಫ್ತಾಲಿ ಪ್ರಾಂತ್ಯದ ಕಾದೇಶಿಗೆ ದಕ್ಷಿಣದಲ್ಲಿ, ಅಂದರೆ ಹಾಜೋರಿಗೆ ವಾಯುವ್ಯದಲ್ಲಿ, ಫೊಗೋರಿಗೆ ಉತ್ತರದಲ್ಲಿ ಇದೆ.
3 : ತೊಬೀತನಾದ ನಾನು ನನ್ನ ಜೀವಮಾನದಲ್ಲೆಲ್ಲಾ ಪ್ರಾಮಾಣಿಕನಾಗಿದ್ದೆ; ಸನ್ಮಾರ್ಗದಲ್ಲಿ ನಡೆದೆ. ಅಸ್ಸೀರಿಯ ದೇಶದ ರಾಜಧಾನಿಯಾಗಿದ್ದ ನಿನೆವೆ ನಗರಕ್ಕೆ ನನ್ನೊಡನೆ ಗಡೀಪಾರಾದ ಬಂಧು ಬಾಂಧವರಿಗೂ ಸಹ-ಜುದೇಯರಿಗೂ ಧಾರಾಳವಾಗಿ ದಾನಧರ್ಮ ಮಾಡಿಕೊಂಡು ಬಂದೆ.
4 : ನಾನು ಚಿಕ್ಕ ವಯಸ್ಸಿನಿಂದ ನನ್ನ ನಾಡಾದ ಇಸ್ರಯೇಲಿನಲ್ಲೇ ವಾಸವಾಗಿದ್ದೆ. ದೇವರು ತಮ್ಮ ಪವಿತ್ರ ಹಾಗೂ ಶಾಶ್ವತ ನಿವಾಸಕ್ಕಾಗಿ ಒಂದು ಮಹಾದೇವಾಲಯವನ್ನು ಕಟ್ಟಿ ಪ್ರತಿಷ್ಠಾಪಿಸಲು ಇಸ್ರಯೇಲಿನ ಎಲ್ಲಾ ಪಟ್ಟಣಗಳಲ್ಲಿ ಜೆರುಸಲೇಮನ್ನೇ ಆರಿಸಿಕೊಂಡಿದ್ದರು. ಆಗ ಇಸ್ರಯೇಲಿನ ಎಲ್ಲಾ ಕಾಲದ ಕುಲಗಳು ಜೆರುಸಲೇಮಿಗೇ ಬಂದು ಬಲಿಯರ್ಪಣೆ ಮಾಡಬೇಕಾಗಿತ್ತು. ಆದರೆ ನನ್ನ ಇಡೀ ನಫ್ತಾಲಿ ಕುಲವು ಜೆರುಸಲೇಮ್ ಪಟ್ಟಣವನ್ನು ನಿರಾಕರಿಸಿತ್ತು. ದಾವೀದನ ಮನೆತನವನ್ನೇ ತ್ಯಜಿಸಿಬಿಟ್ಟಿತ್ತು.
5 : ಆದುದರಿಂದ ನಫ್ತಾಲಿ ಕುಲಕ್ಕೆ ಸೇರಿದ ಇತರರಂತೆ ನನ್ನ ಕುಟುಂಬಸ್ಥರು ಉತ್ತರ ಗಲಿಲೇಯದ ಬೆಟ್ಟ ಗುಡ್ಡಗಳಲ್ಲಿ ಬಲಿಯರ್ಪಿಸುತ್ತಿದ್ದರು. ಇಸ್ರಯೇಲಿನ ಅರಸ ಯಾರೊಬ್ಬಾಮನು ದಾನ್ ಪಟ್ಟಣದಲ್ಲಿ ಸ್ಥಾಪಿಸಿದ್ದ ಹೋರಿಕರುವಿಗೆ ಅಲ್ಲಿ ಬಲಿಯರ್ಪಣೆ ಮಾಡುತ್ತಿದ್ದರು.
6 : ಸನಾತನ ಧರ್ಮನಿಯಮದ ಪ್ರಕಾರ ಪ್ರತಿಯೊಬ್ಬ ಇಸ್ರಯೇಲನು ಹಬ್ಬಗಳ ಆಚರಣೆಗಾಗಿ ಜೆರುಸಲೇಮಿಗೆ ಹೋಗಬೇಕಾಗಿತ್ತು. ಅದರಂತೆ ನನ್ನ ಕುಟುಂಬದಲ್ಲಿ ಜೆರುಸಲೇಮಿಗೆ ಅನೇಕ ಸಾರಿ ವಿಧಿಬದ್ಧವಾಗಿ ಹೋಗುತ್ತಿದ್ದವನು ನಾನೊಬ್ಬನೇ. ಬೆಳೆಗಳ ಪ್ರಥಮ ಫಲಗಳು, ಪಶುಪ್ರಾಣಿಗಳ ಚೊಚ್ಚಲು ಮರಿಗಳು, ದನಕರುಗಳ ದಶಮಾಂಶ, ಕುರಿಗಳ ಹೊಸ ಉಣ್ಣೆ ಇದೆಲ್ಲವನ್ನು ತೆಗೆದುಕೊಂಡು ಜೆರುಸಲೇಮಿಗೆ ಧಾವಿಸುತ್ತಿದ್ದೆ. ಇವುಗಳನ್ನು ಆರೋನನ ಸಂತತಿಯ ಯಾಜಕರಿಗೆ ಪೀಠಕಾಣಿಕೆಯಾಗಿ ಕೊಡುತ್ತಿದ್ದೆ.
7 : ಜೆರುಸಲೇಮಿನಲ್ಲಿ ಸೇವೆಸಲ್ಲಿಸುತ್ತಿದ್ದ ಲೇವಿಯರಿಗೆ ದ್ರಾಕ್ಷಾರಸ, ದವಸಧಾನ್ಯಗಳು, ಓಲಿವ್ ಎಣ್ಣೆ, ದಾಳಿಂಬೆ ಮತ್ತಿತರ ಹಣ್ಣುಗಳ ದಶಮಾಂಶವನ್ನು ಕೊಡುತ್ತಿದ್ದೆ. ಅದಲ್ಲದೆ, ದಶಮಾಂಶದ ಮತ್ತೊಂದು ಭಾಗವನ್ನು ಮಾರಿ ಅದರಿಂದ ಬಂದ ಹಣವನ್ನು, ಸಬ್ಬತ್ ವರ್ಷವನ್ನು ಬಿಟ್ಟು, ಪ್ರತಿವರ್ಷವೂ ಜೆರುಸಲೇಮಿನಲ್ಲೇ ಹಂಚಿಕೊಡುತ್ತಿದ್ದೆ.
8 : ಮೂರು ವರ್ಷಕ್ಕೊಮ್ಮೆ ದಶಮಾಂಶದ ಮೂರನೇ ಭಾಗವನ್ನು ವಿಧವೆಯರಿಗೆ, ಅನಾಥರಿಗೆ ಹಾಗೂ ಮತಾಂತರಗೊಂಡು ಇಸ್ರಯೇಲ್ ಜನರ ನಡುವೆ ನೆಲೆಸಿದ್ದವರಿಗೆ ದಾನಮಾಡುತ್ತಿದ್ದೆ. ಮೋಶೆಯ ನಿಯಮಾನುಸಾರು ಹಾಗು ನನ್ನ ಪೂರ್ವಜಳೂ ನನ್ನ ತಂದೆ ತೊಬಿಯೇಲನ ತಾಯಿಯೂ ಆದ ದೆಬೋರಳ ಆದೇಶದ ಪ್ರಕಾರ ಅವರೊಡನೆ ಸೇರಿ ಊಟಮಾಡುತ್ತಿದ್ದೆ. ನನ್ನ ತಂದೆಯ ಮರಣದ ನಂತರ ನಾನು ಸಹ ಅನಾಥನಾಗಿದ್ದೆ.
9 : ನನಗೆ ವಯಸ್ಸಾದಾಗ ನನ್ನ ಕುಲದವಳೇ ಆದ ಅನ್ನಾ ಎಂಬಾಕೆಯನ್ನು ವಿವಾಹಮಾಡಿಕೊಂಡೆ. ಅವಳಿಂದ ಒಬ್ಬ ಮಗನನ್ನು ಪಡೆದು, ಅವನಿಗೆ ತೊಬಿಯಾಸ್ ಎಂದು ನಾಮಕರಣ ಮಾಡಿದೆ.
10 : ಅನಂತರ ಅಸ್ಸೀರಿಯಕ್ಕೆ ಗಡೀಪಾರಾಗಿ ಬಂದು ನಿನೆವೆಯಲ್ಲಿ ವಾಸಮಾಡತೊಡಗಿದೆ. ನಾನು ನಿನೆವೆಯಲ್ಲಿದ್ದಾಗ ನನ್ನ ಬಂಧು ಬಳಗದವರು ಹಾಗು ನನ್ನ ಕುಲಸ್ಥರು ಅನ್ಯಧರ್ಮೀಯರ ಆಹಾರವನ್ನೇ ಭುಜಿಸುತ್ತಿದ್ದರು.
11 : ಆದರೆ ನಾನು ಮಾತ್ರ ಆ ಆಹಾರವನ್ನು ಮುಟ್ಟುತ್ತಿರಲಿಲ್ಲ.
12 : ನಾನು ಮನಃಪೂರ್ವಕವಾಗಿ ದೇವರಲ್ಲಿ ಭಯಭಕ್ತಿಯುಳ್ಳವನಾಗಿದ್ದೆ.
13 : ಆ ಮಹೋನ್ನತ ದೇವರು ಶಲ್ಮನಸೇರ್ ರಾಜನ ಗೌರವಾದಾರಗಳಿಗೆ ನಾನು ಪಾತ್ರನಾಗುವಂತೆ ಮಾಡಿದ್ದರು. ರಾಜ ತನಗೆ ಬೇಕಾದ ಸಾಮಾನುಗಳನ್ನು ಸರಬರಾಯಿ ಮಾಡಲು ನನ್ನನ್ನು ನೇಮಿಸಿಕೊಂಡಿದ್ದನು.
14 : ಅರಸನ ಮರಣದವರೆಗೆ, ಮೇದ್ಯನಾಡಿಗೆ ಹೋಗಿ ಅರಸನಿಗೆ ಅವಶ್ಯಕವಾದ ಸರಕು-ಸಾಮಾಗ್ರಿಗಳನ್ನು ತರುವ ರೂಢಿ ಇತ್ತು. ಒಮ್ಮೆ ಮೇದ್ಯ ನಾಡಿನ ರಾಜೆಸ್ ಎಂಬ ಪಟ್ಟಣದಲ್ಲಿ ಇದ್ದಾಗ ಕೆಲವು ಹಣದ ಚೀಲಗಳನ್ನು ಗಬ್ರಿಯಾಸನ ಸಹೋದರನಾದ ಗಬಯೇಲನ ಬಳಿ ಬಿಟ್ಟು ಅವುಗಳನ್ನು ನನಗೋಸ್ಕರ ಭದ್ರವಾಗಿ ಇಟ್ಟುಕೊಳ್ಳಬೇಕೆಂದು ಕೇಳಿಕೊಂಡೆ. ಅದರಲ್ಲಿ 300 ಕಿಲೋಗ್ರಾಂಗಿಂತ ಹೆಚ್ಚು ಬೆಳ್ಳಿನಾಣ್ಯಗಳು ಇದ್ದವು.
15 : ಶಲ್ಮನಸೇರ್ ಅರಸನು ಸತ್ತಾಗ ಅವನ ಮಗ ಸೆನ್ಹೇರೀಬನು ಪಟ್ಟಕ್ಕೆ ಬಂದನು. ಆಗ ಮೇದ್ಯ ನಾಡಿನ ರಸ್ತೆಗಳು ಸುರಕ್ಷಿತವಾಗಿರಲಿಲ್ಲ. ಆದುದರಿಂದ ಅಲ್ಲಿಗೆ ಹೋಗಲು ನನಗೆ ಸಾಧ್ಯವಾಗಲಿಲ್ಲ.
16 : ಶಲ್ಮನಸೇರನ ಕಾಲದಲ್ಲಿ ನನ್ನ ಕುಲಸ್ಥರಾದ ಯೆಹೂದ್ಯರಿಗೆ ಹಲವಾರು ಬಾರಿ ದಾನಧರ್ಮ ಮಾಡುತ್ತಿದ್ದೆ.
17 : ಹಸಿದವರಿಗೆ ನನ್ನ ಆಹಾರವನ್ನೇ, ಬಟ್ಟೆಯಿಲ್ಲದವರಿಗೆ ನನ್ನ ಬಟ್ಟೆಯನ್ನೇ ಕೊಡುತ್ತಿದ್ದೆ. ನನ್ನ ಕುಲದವರ ಯಾರದೇ ಪಾರ್ಥಿವ ಶರೀರ ನಿನೆವೆ ಪಟ್ಟಣದ ಗೋಡೆಯ ಹೊರಗೆ ಬಿದ್ದಿರುವುದನ್ನು ಕಂಡಾಗ, ನಾನು ಅದನ್ನು ಸಮಾಧಿಮಾಡುತ್ತಿದ್ದೆ.
18 : ಸೆನ್ಹೇರೀಬನಿಂದ ಹತರಾದವರನ್ನೂ ನಾನು ಸಮಾಧಿಮಾಡುತ್ತಿದ್ದೆ. ಪರಲೋಕದ ಅರಸರಾದ ದೇವರನ್ನು ಶಪಿಸಿದ್ದಕ್ಕಾಗಿ ಸೆನ್ಹೇರೀಬನಿಗೆ ದೇವರ ಶಿಕ್ಷೆಯಾಯಿತು. ಅವನು ಜುದೇಯ ನಾಡಿನಿಂದ ಹಿಮ್ಮೆಟ್ಟಬೇಕಾಯಿತು. ಆ ಸಂದರ್ಭದಲ್ಲಿ ಅವನು ಕೋಪದಿಂದ ಅನೇಕ ಇಸ್ರಯೇಲರನ್ನು ಕೊಂದುಹಾಕಿದನು. ಹೀಗೆ ಮೃತರಾದವರ ಶವಗಳನ್ನು ರಹಸ್ಯವಾಗಿ ಎತ್ತಿಕೊಂಡು ಹೋಗಿ ಸಮಾಧಿಮಾಡಿದೆ. ಸೆನ್ಹೇರೀಬನು ಆ ಶವಗಳನ್ನು ಹುಡುಕಿದಾಗ ಅವನಿಗೆ ಅವು ಕಾಣಸಿಗಲಿಲ್ಲ.
19 : ಆಗ ನಿನೆವೆಯ ನಿವಾಸಿಯೊಬ್ಬನು ಅರಸ ಸೆನ್ಹೇರೀಬನ ಬಳಿಗೆ ಹೋಗಿ, ಶವಗಳನ್ನು ಸಮಾಧಿಮಾಡುತ್ತಿದ್ದವನು ನಾನೇ ಎಂದು ತಿಳಿಸಿದನು. ನನ್ನ ಬಗ್ಗೆ ರಾಜನಿಗೆ ಸಮಾಚಾರ ತಿಳಿದು ಹೋಯಿತೆಂದು ನನಗೆ ಮನದಟ್ಟಾಯಿತು. ನನ್ನನ್ನು ಕೊಲ್ಲಲು ಆತನ ಜನರು ಹವಣಿಸುತ್ತಿದ್ದಾರೆಂದೂ ತಿಳಿದುಬಂತು. ನಾನು ಭಯದಿಂದ ಓಡಿಹೋಗಿ ಅವಿತುಕೊಂಡೆ.
20 : ನನ್ನ ಆಸ್ತಿಗೆಲ್ಲ ಮುಟ್ಟುಗೋಲು ಹಾಕಿ, ರಾಜ್ಯ ಬೊಕ್ಕಸಕ್ಕೆ ಸೇರಿಸಲಾಯಿತು. ನನ್ನ ಪತ್ನಿ ಅನ್ನಾ ಮತ್ತು ನನ್ನ ಮಗ ತೊಬಿಯಾಸ್ ಇವರ ಹೊರತು ಮತ್ತೇನೂ ನನಗಿರಲಿಲ್ಲ.
21 : ಇದಾದ ನಾಲ್ವತ್ತು ದಿನಗಳಾಗುವಷ್ಟರಲ್ಲಿ ಸೆನ್ಹೇರೀಬನ ಮಕ್ಕಳಿಬ್ಬರು ಅವನನ್ನು ಹತ್ಯೆಮಾಡಿ ಅರಾರಾತಿನ ಬೆಟ್ಟಕ್ಕೆ ಪಲಾಯನ ಮಾಡಿದರು. ಅವನ ನಂತರ ಅವನ ಮಗ ಎಸಾರದ್ದೋನ್ ಅರಸನಾದ. ನನ್ನ ಸಹೋದರ ಅನಯೇಲನ ಮಗ ಅಹೀಕರನನ್ನು ರಾಜ್ಯ ಬೊಕ್ಕಸಕ್ಕೆ ಮುಖ್ಯಾಧಿಕಾರಿಯನ್ನಾಗಿ ನೇಮಿಸಲಾಯಿತು. ಅಲ್ಲದೆ ಮುಖ್ಯ ವಿಷಯಗಳ ವಹಿವಾಟನ್ನು ಅವನಿಗೆ ವಹಿಸಲಾಯಿತು.
22 : ಈ ಮೊದಲು ಅಹೀಕರನು ಅಸ್ಸೀರಿಯದ ಅರಸ ಸೆನ್ಹೇರೀಬನ ಅಧೀನದಲ್ಲಿ ಮುಖ್ಯಪಾನಸೇವಕ, ಮುದ್ರಾಧಿಕಾರಿ, ಗೃಹನಿರ್ವಾಹಕ ಮತ್ತು ಖಜಾಂಚಿ ಆಗಿದ್ದನು. ಆದ್ದರಿಂದ ಅವನು ನನ್ನ ಪರವಾಗಿ ಅರಸನನ್ನು ಮನವಿ ಮಾಡಿಕೊಂಡ ಕಾರಣ, ನಿನೆವೆಗೆ ಹಿಂದಿರುಗಲು ಅಪ್ಪಣೆ ದೊರಕಿತು. ಅಹೀಕರನು ನನ್ನ ಬಂಧು ಹಾಗು ಸೋದರಳಿಯ.

Holydivine