Jeremiah - Chapter 1
Holy Bible

1 : ಪ್ರವಾದಿ ಯೆರೆಮೀಯನ ಗ್ರಂಥ ಪರಿಚಯ ಇವು ಯೆರೆಮೀಯನ ಪ್ರವಚನಗಳು. ಈತ ಬೆನ್ಯವಿೂನ್ ಪ್ರಾಂತ್ಯಕ್ಕೆ ಸೇರಿದ ಅನಾತೋತ್ ಊರಿನ ಯಾಜಕ ವರ್ಗದವನು. ಇವನ ತಂದೆ ಹಿಲ್ಕೀಯನು.
2 : ಜುದೇಯದ ಅರಸನೂ ಅಮೋನನ ಮಗನೂ ಆದ ಯೋಷೀಯನ ಆಳ್ವಿಕೆಯ ಹದಿ ಮೂರನೆಯ ವರುಷದಲ್ಲಿ ಸರ್ವೇಶ್ವರ ಸ್ವಾಮಿಯ ವಾಣಿ ಇವನಿಗೆ ಕೇಳಿಬಂತು.
3 : ಅಲ್ಲದೆ, ಜುದೇಯದ ಅರಸನೂ ಯೋಷೀಯನ ಮಗನೂ ಆದ ಯೆಹೋಯಾಕೀಮನ ಕಾಲದಿಂದ ಜುದೇಯದ ಅರಸನೂ ಯೋಷೀಯನ ಮಗನೂ ಆದ ಚಿದ್ಕೀಯನ ಆಳ್ವಿಕೆಯ ಹನ್ನೊಂದನೆಯ ವರುಷದ ಐದನೆಯ ತಿಂಗಳಿನಲ್ಲಿ ಜೆರುಸಲೇಮಿನ ಜನರು ಸೆರೆಹೋಗುವ ತನಕ ಸರ್ವೇಶ್ವರ ಸ್ವಾಮಿಯ ವಾಣಿ ಇವನಿಗೆ ಕೇಳಿಬರುತ್ತಿತ್ತು.
4 : ಯೆರೆಮೀಯನಿಗೆ ಪ್ರವಾದಿ ಪಟ್ಟ ಸರ್ವೇಶ್ವರಸ್ವಾಮಿ ಈ ವಾಣಿಯನ್ನು ನನಗೆ ದಯಪಾಲಿಸಿದರು:
5 : “ನಿನ್ನನ್ನು ತಾಯಿಯ ಗರ್ಭದಲ್ಲಿ ರೂಪಿಸುವುದಕ್ಕೆ ಮುಂಚೆಯೇ ನಿನ್ನನ್ನು ನಾನು ತಿಳಿದಿದ್ದೆ; ನೀನು ಉದರದಿಂದ ಹೊರ ಬರುವುದಕ್ಕೆ ಮೊದಲೇ ನಿನ್ನನ್ನು ಪವಿತ್ರೀಕರಿಸಿದ್ದೆ; ನಿನ್ನನ್ನು ರಾಷ್ಟ್ರಗಳಿಗೆ ಪ್ರವಾದಿಯನ್ನಾಗಿ ನೇಮಿಸಿದ್ದೇನೆ.”
6 : ಅದಕ್ಕೆ ನಾನು, “ಅಯ್ಯೋ, ಸ್ವಾಮಿ ಸರ್ವೇಶ್ವರಾ, ನಾನು ಮಾತುಬಲ್ಲವನಲ್ಲ, ಇನ್ನೂ ತರುಣ,” ಎಂದು ಬಿನ್ನವಿಸಿದೆ.
7 : ಆಗ ಸರ್ವೇಶ್ವರ ನನಗೆ, “ನಾನೊಬ್ಬ ತರುಣ ಎನ್ನಬೇಡ; ಯಾರ ಬಳಿಗೆ ನಿನ್ನನ್ನು ಕಳಿಸುತ್ತೇನೋ, ಅವರೆಲ್ಲರ ಬಳಿಗೆ ನೀನು ಹೋಗಲೇಬೇಕು; ನಾನು ಆಜ್ಞಾಪಿಸುವುದನ್ನೆಲ್ಲ ನುಡಿಯಲೇ ಬೇಕು.
8 : ಅವರಿಗೆ ಅಂಜಬೇಡ; ನಿನ್ನನ್ನು ಕಾಪಾಡಲು ನಾನೇ ನಿನ್ನೊಂದಿಗೆ ಇರುತ್ತೇನೆ; ಇದು ಸರ್ವೇಶ್ವರನಾದ ನನ್ನ ಮಾತು,” ಎಂದು ಹೇಳಿದರು.
9 : ಬಳಿಕ ಸ್ವಾಮಿ ಕೈಚಾಚಿ ನನ್ನ ಬಾಯನ್ನು ಮುಟ್ಟಿ, “ಇಗೋ, ನಿನ್ನ ಬಾಯಲ್ಲಿ ನನ್ನ ಮಾತುಗಳನ್ನು ಇಟ್ಟಿದ್ದೇನೆ;
10 : ರಾಷ್ಟ್ರಗಳ ಮೇಲೂ ರಾಜ್ಯಗಳ ಮೇಲೂ ಅಧಿಕಾರವುಳ್ಳವನನ್ನಾಗಿ ನಾನು ನಿನ್ನನ್ನು ಈ ದಿನ ನೇಮಿಸಿದ್ದೇನೆ. ಇದರಿಂದಾಗಿ ಕಿತ್ತುಹಾಕುವ ಹಾಗು ಕೆಡುವುವ, ನಾಶ ಪಡಿಸುವ ಹಾಗು ನೆಲಸಮಮಾಡುವ, ಕಟ್ಟುವ ಹಾಗು ನೆಡುವ ಕಾರ್ಯ ನಿನ್ನದು,” ಎಂದರು.
11 : ಎರಡು ದರ್ಶನಗಳು ಇದಲ್ಲದೆ ಸರ್ವೇಶ್ವರಸ್ವಾಮಿ, “ಎಲೈ ಯೆರೆಮೀಯನೇ, ಏನು ನೋಡುತ್ತಿರುವೆ?” ಎಂದು ಕೇಳಿದರು. ಅದಕ್ಕೆ ನಾನು, “ಚಚ್ಚರ ಮರದ ರೆಂಬೆಯನ್ನು ನೋಡುತ್ತಿದ್ದೇನೆ,” ಎಂದೆ.
12 : ಆಗ ಸ್ವಾಮಿ ನನಗೆ, “ಸರಿಯಾಗಿ ನೋಡಿದೆ; ನನ್ನ ಮಾತನ್ನು ನೆರವೇರಿಸುವುದಕ್ಕೆ ಎಚ್ಚರಗೊಂಡಿದ್ದೇನೆಂದು ತಿಳಿದುಕೊ” ಎಂಬುದಾಗಿ ಹೇಳಿದರು.
13 : ಮತ್ತೆ ಸರ್ವೇಶ್ವರ ನನಗೆ, “ಇನ್ನೂ ಏನು ನೋಡುತ್ತಿರುವೆ?” ಎಂದರು. ಅದಕ್ಕೆ ನಾನು, “ಉರಿಯುತ್ತಿರುವ ಬೆಂಕಿಯಿಂದ ಉಕ್ಕುವ ಹಂಡೆಯೊಂದನ್ನು ನೋಡುತ್ತಿದ್ದೇನೆ. ಅದರ ಬಾಯಿ ಉತ್ತರದಿಂದ ಇತ್ತ ಬಾಗಿಕೊಂಡಿದೆ,” ಎಂದೆ.
14 : ಅದಕ್ಕೆ ಸ್ವಾಮಿ ನನಗೆ ಹೀಗೆಂದರು: “ಈ ನಾಡಿನ ನಿವಾಸಿಗಳೆಲ್ಲರ ಮೇಲೆ ಉತ್ತರದಿಂದ ಕೇಡು ಉಕ್ಕಿಬರುವುದು.
15 : ಇಗೋ, ಉತ್ತರದ ರಾಜ್ಯಗಳನ್ನೆಲ್ಲಾ ನಾನು ಕರೆಯುವೆನು; ಅವರು ಬಂದು ಜೆರುಸಲೇಮಿನ ಊರಬಾಗಿಲುಗಳ ಎದುರಿನಲ್ಲೂ ಅದರ ಎಲ್ಲ ಪೌಳಿಗೋಡೆಗಳ ಸುತ್ತಲೂ ಜುದೇಯದ ಎಲ್ಲ ನಗರಗಳಲ್ಲೂ ತಮ್ಮ ತಮ್ಮ ಸಿಂಹಾಸನಗಳನ್ನು ಹಾಕಿಕೊಳ್ಳುವರು.
16 : ನನ್ನ ಸ್ವಜನರು ನನ್ನನ್ನೆ ತೊರೆದುಬಿಟ್ಟು, ಅನ್ಯದೇವತೆಗಳಿಗೆ ಬಲಿಯರ್ಪಿಸಿ, ತಮ್ಮ ಕೈಯಿಂದ ನಿರ್ಮಿಸಿದ ಮೂರ್ತಿಗಳಿಗೆ ಆರಾಧನೆ ಮಾಡುತ್ತಿದ್ದಾರೆ; ಇಂಥ ಅಧರ್ಮಕ್ಕೆಲ್ಲ ನಾನು ಅವರಿಗೆ ವಿಧಿಸುವ ದಂಡನೆಗಳನ್ನು ತಿಳಿಸುವೆನು, ಕೇಳು:
17 : ನೀನು ಎದ್ದು ನಡುಕಟ್ಟಿಕೊ, ನಾನು ಆಜ್ಞಾಪಿಸುವುದನ್ನೆಲ್ಲ ಅವರಿಗೆ ತಿಳಿಸು, ಅವರಿಗೆ ಹೆದರಬೇಡ; ಹೆದರಿದರೆ ನಾನೂ ನಿನ್ನನ್ನು ಅವರ ಮುಂದೆ ಹೆದರಿಸುವೆನು.
18 : ನಾನು ಹೇಳುವುದನ್ನು ಗಮನದಿಂದ ಕೇಳು – ಈ ದಿನ ನಿನ್ನನ್ನು ಜುದೇಯದ ಅರಸರು, ಅಧಿಪತಿಗಳು, ಯಾಜಕರು, ಜನ ಸಾಮಾನ್ಯರು, ಹೀಗೆ ನಾಡಿನವರೆಲ್ಲರನ್ನು ಎದುರಿಸತಕ್ಕವನನ್ನಾಗಿ ಮಾಡಿದ್ದೇನೆ; ಕೋಟೆ ಕೊತ್ತಲಗಳಿಂದ ಸುಸಜ್ಜಿತ ನಗರವನ್ನಾಗಿಯೂ ಕಬ್ಬಿಣದ ಕಂಬವನ್ನಾಗಿಯೂ ತಾಮ್ರದ ಪೌಳಿಗೋಡೆಯನ್ನಾಗಿಯೂ ನಿನ್ನನ್ನು ಸ್ಥಾಪಿಸಿದ್ದೇನೆ.
19 : ನಿನಗೆ ವಿರುದ್ಧವಾಗಿ ಅವರು ಯುದ್ಧಮಾಡುವರು; ಆದರೆ ನಿನ್ನನ್ನು ಸೋಲಿಸಲಾಗುವುದಿಲ್ಲ. ನಿನ್ನನ್ನು ಕಾಪಾಡಲು ನಾನೇ ನಿನ್ನೊಂದಿಗಿರುವೆನು. ಇದು ಸರ್ವೇಶ್ವರನಾದ ನನ್ನ ನುಡಿ”.

Holydivine