Judges - Chapter 1
Holy Bible

1 : ಯೆಹೋಶುವನು ಮರಣಹೊಂದಿದ ಬಳಿಕ ಇಸ್ರಯೇಲರು ಕಾನಾನ್ಯರೊಡನೆ ಯುದ್ಧ ಮಾಡಲು ತಮ್ಮಲ್ಲಿ ಯಾವ ಕುಲ ಮುಂದಾಗಿ ಹೋಗಬೇಕೆಂದು ಸರ್ವೇಶ್ವರಸ್ವಾಮಿಯನ್ನು ವಿಚಾರಿಸಿದರು.
2 : “ಯೆಹೂದಕುಲ ಹೋಗಲಿ; ಇಗೋ, ನಾಡನ್ನು ಅವರ ಕೈಗೆ ಒಪ್ಪಿಸಿದ್ದೇನೆ,” ಎಂದರು ಸರ್ವೇಶ್ವರ.
3 : ಆಗ ಯೆಹೂದಕುಲದವರು ತಮ್ಮ ಸೋದರರಾದ ಸಿಮೆಯೋನ್ಯರಿಗೆ, “ಕಾನಾನ್ಯರೊಡನೆ ಯುದ್ಧಮಾಡಲು ನೀವೂ ನಮ್ಮ ಸಂಗಡ ನಮ್ಮ ಸ್ವಂತಪ್ರಾಂತ್ಯಕ್ಕೆ ಬನ್ನಿ; ಅನಂತರ ನಾವೂ ನಿಮ್ಮ ಸಂಗಡ ನಿಮ್ಮ ಸ್ವಂತಪ್ರಾಂತ್ಯಕ್ಕೆ ಬರುತ್ತೇವೆ,” ಎಂದು ಹೇಳಿದರು.
4 : ಅವರು ಒಪ್ಪಿ ಯೆಹೂದ ಕುಲದವರ ಜೊತೆ ಯುದ್ಧಕ್ಕೆ ಹೋದರು. ಸರ್ವೇಶ್ವರ ಕಾನಾನ್ಯರನ್ನು ಹಾಗು ಪೆರಿಜ್ಜೀಯರನ್ನು ಅವರ ಕೈವಶಮಾಡಲು ಅವರು ಹತ್ತುಸಾವಿರ ಶತ್ರುಗಳನ್ನು ಬೆಜೆಕಿನಲ್ಲಿ ಸೋಲಿಸಿದರು.
5 : ಅದೋನೀ ಬೆಜೆಕನನ್ನು ಅಲ್ಲಿ ಎದುರುಗೊಂಡು ಯುದ್ಧಮಾಡಿ ಸೋಲಿಸಿದರು
6 : ಅದೋನೀಬೆಜೆಕನು ಅಲ್ಲಿಂದ ಓಡಿಹೋಗುತ್ತಿರುವಾಗ ಅವನನ್ನು ಹಿಂದಟ್ಟಿ ಹಿಡಿದು ಅವನ ಕೈಕಾಲುಗಳ ಹೆಬ್ಬೆರಳುಗಳನ್ನು ಕತ್ತರಿಸಿಬಿಟ್ಟರು.
7 : ಆಗ ಅದೋನೀಬೆಜೆಕನು, “ಎಪ್ಪತ್ತು ಮಂದಿ ಅರಸರ ಕೈಕಾಲುಗಳ ಹೆಬ್ಬೆರಳುಗಳನ್ನು ನಾನು ಕತ್ತರಿಸಿದೆ; ನನ್ನ ಊಟದ ಮೇಜಿನ ಕೆಳಗೆ ಬೀಳುತ್ತಿದ್ದ ಚೂರು ಪಾರುಗಳನ್ನು ಅವರು ತಿನ್ನುತ್ತಿದ್ದರು; ನಾನು ಅವರಿಗೆ ಮಾಡಿದಂತೆಯೇ ದೇವರು ನನಗೆ ಮಾಡಿದ್ದಾರೆ,” ಎಂದನು. ಅವನನ್ನು ಜೆರುಸಲೇಮಿಗೆ ಕರೆತರಲು ಅವನು ಅಲ್ಲೇ ನಿಧನನಾದನು.
8 : ಯೆಹೂದ ಕುಲದವರು ಜೆರುಸಲೇಮಿನೊಡನೆ ಯುದ್ಧಮಾಡಿದರು. ಆ ಜನರನ್ನು ಕತ್ತಿಗೆ ತುತ್ತಾಗಿಸಿ ಅವರ ಪಟ್ಟಣವನ್ನು ಸುಟ್ಟು ಹಾಕಿದರು.
9 : ಅನಂತರ ಅವರು ಪರ್ವತಪ್ರದೇಶ, ದಕ್ಷಿಣಸೀಮೆ ಮತ್ತು ತಗ್ಗುಪ್ರದೇಶ ಇವುಗಳಿಗೆ ಹೋಗಿ ಅಲ್ಲಿದ್ದ ಕಾನಾನ್ಯರೊಡನೆ ಯುದ್ಧ ಮಾಡಿದರು.
10 : ‘ಕಿರ್ಯತರ್ಬ’ ಎಂದು ಈ ಮುಂದೆ ಹೆಸರುಗೊಂಡಿದ್ದ ಹೆಬ್ರೋನಿಗೆ ಹೋಗಿ ಅಲ್ಲಿದ್ದ ಕಾನಾನ್ಯರ ಮೇಲೆ ದಾಳಿಮಾಡಿ ಅವರಲ್ಲಿ ಶೇಷೈ, ಅಹೀಮನ್, ತಲ್ಮೈ ಎಂಬವರನ್ನು ಸೋಲಿಸಿದರು.
11 : ಅಲ್ಲಿಂದ ದೆಬೀರಿನವರೆಗೆ ತೆರಳಿ ಅಲ್ಲಿಯವರ ವಿರುದ್ಧ ಯುದ್ಧಮಾಡಿದರು. ದೆಬೀರಕ್ಕೆ ಇದಕ್ಕೆ ಮುಂಚೆ ‘ಕಿರ್ಯತ್‍ಸೇಫೆರ್’ ಎಂಬ ಹೆಸರಿತ್ತು.
12 : ಕಿರ್ಯತ್‍ಸೇಫೆರನ್ನು ಹಿಡಿದುಕೊಳ್ಳುವವನಿಗೆ ತನ್ನ ಮಗಳು ‘ಅಕ್ಷಾ’ ಎಂಬಾಕೆಯನ್ನು ಕೊಟ್ಟು ಮದುವೆ ಮಾಡುವುದಾಗಿ ಕಾಲೇಬನು ಹೇಳಿದ್ದನು.
13 : ಅಂತೆಯೇ ಅವನ ತಮ್ಮನೂ ಕೆನಜನ ಮಗನೂ ಆದ ಒತ್ನೀಯೇಲನು ಅದನ್ನು ಹಿಡಿದುಕೊಂಡಾಗ ಕಾಲೇಬನು ತನ್ನ ಮಗಳು ಅಕ್ಷಾ ಎಂಬಾಕೆಯನ್ನು ಆತನಿಗೆ ಮದುವೆಮಾಡಿಕೊಟ್ಟನು.
14 : ಆಕೆ ಬಂದಾಗ ತನ್ನ ತಂದೆಯ ಬಳಿ ಭೂಮಿಯನ್ನು ಕೇಳುವಂತೆ ಗಂಡನನ್ನು ಪ್ರೇರೇಪಿಸಿದಳು. ಆಕೆ ಕತ್ತೆಯಿಂದ ಇಳಿಯುವಾಗ ಕಾಲೇಬನು, “ನಿನಗೇನು ಬೇಕು”, ಎಂದು ಕೇಳಲು ಅವಳು, “ನನ್ನನ್ನು ಬೆಂಗಾಡಿಗೆ ಕೊಟ್ಟುಬಿಟ್ಟಿರಿ.
15 : ಬುಗ್ಗೆಗಳಿರುವ ಭೂಮಿಯನ್ನು ದಾನವಾಗಿಕೊಡಿ,” ಎಂದಳು. ಕಾಲೇಬನು ಆಕೆಗೆ ಮೇಲಿನ ಹಾಗು ಕೆಳಗಿನ ಬುಗ್ಗೆಗಳನ್ನು ದಾನ ಮಾಡಿದನು.
16 : ಕೇನ್ಯನೂ ಮೋಶೆಯ ಮಾವನೂ ಆದ ಹೋಬಾಬನ ವಂಶದವರು ಖರ್ಜೂರ ನಗರದಿಂದ ಹೊರಟು ಯೆಹೂದ ಕುಲದವರ ಜೊತೆಯಲ್ಲಿ ಆರಾದಿನ ದಕ್ಷಿಣದಲ್ಲಿರುವ ಯೆಹೂದ ಮರುಭೂಮಿಗೆ ಬಂದು ಅಲ್ಲಿಯ ಜನರ ಸಂಗಡ ವಾಸಮಾಡಿದರು
17 : ತರುವಾಯ ಯೆಹೂದಕುಲದವರು ತಮ್ಮ ಬಂಧುಗಳಾದ ಸಿಮೆಯೋನ್ ಕುಲದವರ ಸಂಗಡ ಹೋಗಿ ‘ಚೆಫತ್’ ಎಂಬ ಪಟ್ಟಣದಲ್ಲಿದ್ದ ಕಾನಾನ್ಯರನ್ನು ಸೋಲಿಸಿ ಆ ಪಟ್ಟಣವನ್ನು ಹಾಳುಮಾಡಿ ಅದನ್ನು ‘ಹೋರ್ಮಾ’ ಎಂದು ಕರೆದರು.
18 : ಅನಂತರ ಅವರು ಗಾಜಾ, ಅಷ್ಕೆಲೋನ್, ಎಕ್ರೋನ್ ಎಂಬ ಪಟ್ಟಣಗಳನ್ನೂ ಅವುಗಳ ಮೇರೆಗಳನ್ನೂ ಸ್ವಾಧೀನಮಾಡಿಕೊಂಡರು.
19 : ಸರ್ವೇಶ್ವರ ಯೆಹೂದ ಕುಲದವರ ಸಂಗಡ ಇದ್ದುದರಿಂದ ಅವರು ಪರ್ವತ ಪ್ರದೇಶಗಳನ್ನೆಲ್ಲಾ ಸ್ವತಂತ್ರಿಸಿಕೊಂಡರು. ಆದರೆ ತಗ್ಗಿನ ಪ್ರದೇಶಗಳಲ್ಲಿ ವಾಸಿಸುವವರಿಗೆ ಕಬ್ಬಿಣ ರಥಗಳಿದ್ದುದರಿಂದ ಅವರನ್ನು ಹೊರಗಟ್ಟಲು ಆಗಲಿಲ್ಲ.
20 : ಮೋಶೆ ಆಜ್ಞಾಪಿಸಿದಂತೆ ಅವರು ಕಾಲೇಬನಿಗೆ ಹೆಬ್ರೋನ್ ಪಟ್ಟಣವನ್ನು ಕೊಟ್ಟರು; ಅವನು ಅನಾಕನ ಮೂರು ಮಂದಿ ಮಕ್ಕಳನ್ನು ಅಲ್ಲಿಂದ ಅಟ್ಟಿಬಿಟ್ಟನು.
21 : ಜೆರುಸಲೇಮಿನಲ್ಲಿದ್ದ ಯೆಬೂಸಿಯರನ್ನು ಹೊರಡಿಸಲು ಬೆನ್ಯಾವಿೂನ್ಯರಿಂದ ಆಗದೆ ಹೋಯಿತು. ಅವರು ಇಂದಿನವರೆಗೂ, ಬೆನ್ಯಾವಿೂನ್ಯರ ಸಂಗಡ ಜೆರುಸಲೇಮಿನಲ್ಲೇ ವಾಸವಾಗಿ ಇದ್ದಾರೆ.
22 : ಇವರ ಹಾಗೆಯೇ ಜೋಸೆಫನ ಕುಲದವರು ಹೊರಟು ಬೇತೇಲಿಗೆ ಬಂದರು. ಸರ್ವೇಶ್ವರಸ್ವಾಮಿ ಅವರೊಂದಿಗೆ ಇದ್ದರು.
23 : ಅವರು ‘ಲೂಜ್’ ಎಂದು ಕರೆಯಲಾದ ಬೇತೇಲ್ ಊರನ್ನು ಸಂಚರಿಸಿನೋಡಲು ಗೂಢಚಾರರನ್ನು ಕಳುಹಿಸಿದರು.
24 : ಇವರು ಆ ಊರೊಳಗಿಂದ ಬರುತ್ತಿದ್ದ ಒಬ್ಬ ವ್ಯಕ್ತಿಯನ್ನು ಕಂಡು, “ದಯಮಾಡಿ, ಪಟ್ಟಣದೊಳಗೆ ನುಗ್ಗಬಹುದಾದ ದಾರಿಯನ್ನು ನಮಗೆ ತೋರಿಸಿಕೊಡು; ನಾವು ನಿನಗೆ ಒಳ್ಳೆಯದನ್ನೇ ಮಾಡುತ್ತೇವೆ,” ಎಂದರು. ಅವನು ಅವರಿಗೆ ಆ ದಾರಿಯನ್ನು ತೋರಿಸಿದನು.
25 : ಹೀಗೆ ಅವರು ಆ ಪಟ್ಟಣವನ್ನು ಕತ್ತಿಗೆ ತುತ್ತಾಗಿಸಿದರು. ಆದರೆ ಆ ವ್ಯಕ್ತಿಯನ್ನು ಮತ್ತು ಅವನ ಕುಟುಂಬದವರನ್ನು ಕಳುಹಿಸಿಬಿಟ್ಟರು.
26 : ಅವನು ಹಿತ್ತಿಯರ ದೇಶಕ್ಕೆ ಹೋಗಿ ಒಂದು ಪಟ್ಟಣವನ್ನು ಕಟ್ಟಿಕೊಂಡು ಅದಕ್ಕೆ ‘ಲೂಜ್’ ಎಂದು ಹೆಸರಿಟ್ಟನು. ಅದಕ್ಕೆ ಇಂದಿನವರೆಗೂ ಅದೇ ಹೆಸರು ಉಳಿದಿದೆ. ಇಸ್ರಯೇಲರು ಹೊರದೂಡದೆ ಬಿಟ್ಟ ಅನ್ಯವಂಶೀಯರು
27 : ಮನಸ್ಸೆ ಕುಲದವರು ಬೇತ್‍ಷೆಯಾನ್, ತಾನಾಕ್, ದೋರ್, ಇಬ್ಲೆಯಾಮ್, ಮೆಗಿದ್ದೋ ಎಂಬ ಪಟ್ಟಣಗಳನ್ನೂ ಅವುಗಳ ಗ್ರಾಮಗಳನ್ನೂ ಸ್ವಾಧೀನಮಾಡಿಕೊಳ್ಳಲಿಲ್ಲ. ಆದುದರಿಂದ ಕಾನಾನ್ಯರು ಆ ಪ್ರಾಂತ್ಯಗಳಲ್ಲೇ ವಾಸಿಸುವುದಕ್ಕೆ ನಿರ್ಧರಿಸಿಕೊಂಡರು
28 : ಇಸ್ರಯೇಲರು ಬಲಗೊಂಡ ಮೇಲೆ ಅವರನ್ನು ದಾಸತ್ವದಲ್ಲಿ ಇಟ್ಟುಕೊಂಡರೇ ಹೊರತು ಅಲ್ಲಿಂದ ಅಟ್ಟಿಬಿಡಲಿಲ್ಲ.
29 : ಎಫ್ರಯಿಮ್ ಕುಲದವರು ಗೆಜೆರಿನಲ್ಲಿದ್ದ ಕಾನಾನ್ಯರನ್ನು ಹೊರಡಿಸಿಬಿಡಲಿಲ್ಲ. ಆದುದರಿಂದ ಅವರು ಅವರ ನಡುವೆಯೇ ವಾಸಿಸಿದರು.
30 : ಜೆಬುಲೂನ್ ಕುಲದವರು ಕಿಟ್ರೋನ್, ನಹಲೋಲ್ ಎಂಬ ಪಟ್ಟಣಗಳ ನಿವಾಸಿಗಳನ್ನು ಅಟ್ಟಿಬಿಡಲಿಲ್ಲ. ಆದರೆ ಆ ಕಾನಾನ್ಯರು ಅವರಿಗೆ ಗುಲಾಮರಾಗಿ ಅವರ ಮಧ್ಯದಲ್ಲೇ ವಾಸಮಾಡಿದರು.
31 : ಆಶೇರ್ಯ ಕುಲದವರು ಆಕ್ಕೋ, ಚೀದೋನ್, ಆಹ್ಲಾಬ್, ಅಕ್ಜೀಬ್, ಹೆಲ್ಬಾ, ರೆಹೋಬ್ ಎಂಬ ಪಟ್ಟಣಗಳನ್ನು ಸ್ವಾಧೀನ ಮಾಡಿಕೊಳ್ಳಲಿಲ್ಲ;
32 : ಅವರು ಆ ದೇಶದ ಕಾನಾನ್ಯರನ್ನು ಹೊರಡಿಸದೆ ಅವರ ಮಧ್ಯದಲ್ಲೇ ವಾಸಮಾಡಿದರು.
33 : ನಫ್ತಾಲಿ ಕುಲದವರು ಬೇತ್‍ಷೆಮೆಷ್, ಬೇತನಾತ್ ಎಂಬ ಊರುಗಳನ್ನು ಸ್ವತಂತ್ರಿಸಿಕೊಳ್ಳದೆ ಅಲ್ಲಿಯ ನಿವಾಸಿಗಳಾದ ಕಾನಾನ್ಯರ ಮಧ್ಯದಲ್ಲೇ ವಾಸಮಾಡಿದರು. ಮತ್ತು ಆ ಬೇತ್‍ಷೆಮೆಷ್, ಬೇತನಾತ್ ಊರುಗಳ ಜನರು ಅವರಿಗೆ ಗುಲಾಮರಾದರು
34 : ಇದಲ್ಲದೆ ಅಮೋರಿಯರು ದಾನ್ ಕುಲದವರನ್ನು ತಗ್ಗಿನ ಪ್ರದೇಶಕ್ಕೆ ಇಳಿಯಗೊಡದೆ ಹಿಂದಟ್ಟಿ ಬೆಟ್ಟಗಳಿಗೆ ಓಡಿಸಿಬಿಟ್ಟರು.
35 : ಹೀಗೆ ಅಮೋರಿಯರು ಹರ್‍ಹೆರೆಸ್, ಅಯ್ಯಾಲೋನ್, ಶಾಲ್ಬೀಮ್ ಎಂಬ ಊರುಗಳಲ್ಲೇ ವಾಸಿಸಲು ನಿರ್ಧಾರಮಾಡಿದರು. ಆದರೆ ಜೋಸೆಫ್ ಕುಲದವರ ಪ್ರಭಾವ ಹೆಚ್ಚಾದಮೇಲೆ ಅವರಿಗೆ ಗುಲಾಮರಾದರು.
36 : ಅಮೋರಿಯರ ಮೇರೆಯು ಅಕ್ರಬ್ಬೀಮ್ ಕಣಿವೆಯಲ್ಲಿರುವ ಬಂಡೆಯಿಂದ ಮೇಲಕ್ಕೆ ವಿಸ್ತರಿಸಿಕೊಂಡಿದೆ.

Holydivine