Leviticus - Chapter 1
Holy Bible

1 : ಸರ್ವೇಶ್ವರಸ್ವಾಮಿ ಮೋಶೆಯನ್ನು ಕರೆದು, ದೇವದರ್ಶನದ ಗುಡಾರದಿಂದ ಅವನ ಸಂಗಡ ಮಾತಾಡಿ, ಇಸ್ರಯೇಲರಿಗೆ ಹೀಗೆ ಆಜ್ಞಾಪಿಸಬೇಕೆಂದು ತಿಳಿಸಿದರು:
2 : “ನಿಮ್ಮಲ್ಲಿ ಯಾರಾದರೂ ಸರ್ವೇಶ್ವರನಿಗೆ ಒಂದು ಪ್ರಾಣಿಯನ್ನು ಸಮರ್ಪಿಸಲು ಆಶಿಸಿದರೆ, ಅದನ್ನು ದನಕರುಗಳಿಂದಾಗಲಿ, ಆಡುಕುರಿಗಳಿಂದಾಗಲಿ ಆಯ್ದುಕೊಂಡು ಸಮರ್ಪಿಸಲಿ.
3 : ಅಂಥವನು ದನ ಕರುಗಳನ್ನು ದಹನಬಲಿಯನ್ನಾಗಿ ಸಮರ್ಪಿಸುವುದಾದರೆ ಆ ಪ್ರಾಣಿ ಕಳಂಕರಹಿತವಾದ ಗಂಡಾಗಿರಬೇಕು. ಸರ್ವೇಶ್ವರನಿಗೆ ಒಪ್ಪಿಗೆಯಾಗುವಂತೆ ಅದನ್ನು ದೇವದರ್ಶನದ ಗುಡಾರದ ಬಳಿಗೆ ತರಬೇಕು.
4 : ಅರ್ಪಿಸುವವನು ಆ ಪ್ರಾಣಿಯ ತಲೆಯ ಮೇಲೆ ಕೈಯಿಡಬೇಕು. ಆಗ ಅದು ಅವನ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಅಂಗೀಕೃತವಾಗುವುದು.
5 : ಅವನು ಅದನ್ನು ಸರ್ವೇಶ್ವರನ ಎದುರಿನಲ್ಲಿ ವಧಿಸಬೇಕು. ಆರೋನನ ವಂಶಜರಾದ ಯಾಜಕರು ಅದರ ರಕ್ತವನ್ನು ತೆಗೆದುಕೊಂಡು ದೇವದರ್ಶನದ ಗುಡಾರದ ಬಾಗಿಲಿಗೆ ಎದುರಾಗಿರುವ ಬಲಿಪೀಠದ ಸುತ್ತಲೂ ಚಿಮುಕಿಸಬೇಕು.
6 : ಅದೂ ಅಲ್ಲದೆ ಅರ್ಪಿಸುವವನು ಆ ಪ್ರಾಣಿಯ ಚರ್ಮವನ್ನು ಸುಲಿದು ಅದರ ದೇಹವನ್ನು ತುಂಡು ತುಂಡಾಗಿ ಕಡಿಯಬೇಕು.
7 : ಆರೋನನ ವಂಶಜರಾದ ಯಾಜಕರು ಬಲಿಪೀಠದ ಮೇಲೆ ಬೆಂಕಿಯನ್ನಿಟ್ಟು
8 : ಅದರ ಮೇಲೆ ಕಟ್ಟಿಗೆಯನ್ನು ಪೇರಿಸಬೇಕು. ಪ್ರಾಣಿಯ ಆ ತುಂಡುಗಳನ್ನೂ ತಲೆಯನ್ನೂ ಕೊಬ್ಬನ್ನೂ ಅದರ ಮೇಲೆ ಕ್ರಮವಾಗಿ ಇಡಬೇಕು.
9 : ಅದರ ಕರುಳುಗಳನ್ನೂ ಕಾಲುಗಳನ್ನೂ ನೀರಿನಲ್ಲಿ ತೊಳೆದ ನಂತರ ಯಾಜಕನು ಅದನ್ನು ಪೂರ್ತಿಯಾಗಿ ಬಲಿಪೀಠದ ಮೇಲೆ ಹೋಮಮಾಡಬೇಕು. ಅದು ದಹನಬಲಿ. ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ಬಲಿ.
10 : “ಒಬ್ಬನು ಆಡನ್ನಾಗಲಿ, ಕುರಿಯನ್ನಾಗಲಿ ದಹನಬಲಿದಾನ ಮಾಡಬೇಕೆಂದಿದ್ದರೆ ಅಂಥವನು ಕಳಂಕರಹಿತವಾದ ಗಂಡನ್ನು ತರಲಿ.
11 : ಅದನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ಬಲಿಪೀಠದ ಉತ್ತರದ ಕಡೆ ವಧಿಸಲಿ. ತರುವಾಯ ಆರೋನನ ವಂಶಜರಾದ ಯಾಜಕರು ಅದರ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಲಿ.
12 : ಅರ್ಪಿಸುವವನು ಆ ಪ್ರಾಣಿಯ ದೇಹವನ್ನು ತುಂಡುತುಂಡಾಗಿ ಕಡಿದ ಮೇಲೆ ಯಾಜಕನು ಆ ತುಂಡುಗಳನ್ನೂ ತಲೆಯನ್ನೂ ಕೊಬ್ಬನ್ನೂ ಬಲಿಪೀಠ ಮೇಲಿನ ಬೆಂಕಿಯಲ್ಲಿ ಕಟ್ಟಿಗೆಯ ಮೇಲೆ ಕ್ರಮವಾಗಿ ಇಡಬೇಕು.
13 : ಅದರ ಕರುಳುಗಳನ್ನೂ ಕಾಲುಗಳನ್ನೂ ನೀರಿನಲ್ಲಿ ತೊಳೆಸಿದ ನಂತರ ಯಾಜಕನು ಅದನ್ನು ಪೂರ್ತಿಯಾಗಿ ಬಲಿಪೀಠದ ಮೇಲೆ ಹೋಮ ಮಾಡಬೇಕು. ಅದು ದಹನಬಲಿ. ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ಬಲಿ.
14 : “ಸರ್ವೇಶ್ವರನಿಗೆ ದಹನಬಲಿಯಾಗಿ ಸಮರ್ಪಿಸುವಂಥದ್ದು ಪಕ್ಷಿ ಜಾತಿಯಾಗಿದ್ದರೆ ಅದು ಬೆಳವಕ್ಕಿಯಾಗಿರಲಿ ಅಥವಾ ಮರಿ ಪಾರಿವಾಳ ಆಗಿರಲಿ.
15 : ಯಾಜಕನು ಅದನ್ನು ಬಲಿಪೀಠದ ಬಳಿಗೆ ತಂದು ಕುತ್ತಿಗೆ ಮುರಿದು ಬಲಿಪೀಠದ ಮೇಲೆ ಹೋಮಮಾಡಲಿ; ಅದರ ರಕ್ತವನ್ನು ಬಲಿಪೀಠದ ಪಕ್ಕದಲ್ಲಿ ಹಿಂಡಲಿ.
16 : ಅದರ ಕರುಳುಗಳನ್ನೂ ಗರಿಗಳನ್ನೂ ತೆಗೆದುಬಿಟ್ಟು ಬಲಿಪೀಠದ ಪೂರ್ವ ದಿಕ್ಕಿನಲ್ಲಿರುವ ಬೂದಿಯ ಎಡೆಯಲ್ಲಿ ಬಿಸಾಡಲಿ.
17 : ಯಾಜಕನು ಆ ಹಕ್ಕಿಯ ದೇಹವನ್ನು ಇಬ್ಭಾಗವಾಗಿ ಸೀಳಲಿ; ಒಂದೊಂದು ಭಾಗದಲ್ಲಿ ಒಂದು ರೆಕ್ಕೆ ಇರುವಂತೆ ಸೀಳಲಿ. ಅನಂತರ ಅದನ್ನು ಬಲಿಪೀಠದ ಮೇಲಿನ ಬೆಂಕಿಯಲ್ಲಿರುವ ಕಟ್ಟಿಗೆಯ ಮೇಲೆ ಹೋಮಮಾಡಲಿ. ಅದು ದಹನಬಲಿ. ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ಬಲಿ.

Holydivine