Nehemiah - Chapter 1
Holy Bible

1 : ಹಕಲ್ಯನ ಮಗ ನೆಹೆಮೀಯನ ಮಾತುಗಳು: ಇಪ್ಪತ್ತನೆಯ ವರ್ಷದ ಮಾರ್ಗಶಿರಮಾಸದಲ್ಲಿ ನಾನು ಶೂಷನ್ ಪಟ್ಟಣದ ಅರಮನೆಯಲ್ಲಿದ್ದೆ.
2 : ಆಗ ನನ್ನ ಸಹೋದರರಲ್ಲಿ ಒಬ್ಬನಾದ ಹನಾನೀಯನು ಹಾಗೂ ಬೇರೆ ಕೆಲವು ಜನರು ಜುದೇಯದಿಂದ ನನ್ನ ಬಳಿಗೆ ಬಂದರು. ಸೆರೆಹೋದವರಿಂದ ತಪ್ಪಿಸಿಕೊಂಡ ಯೆಹೂದ್ಯರ ಮತ್ತು ಜೆರುಸಲೇಮಿನ ಸಮಾಚಾರವನ್ನು ನಾನು ಅವರಲ್ಲಿ ವಿಚಾರಿಸಿದೆ.
3 : ಅವರು ನನಗೆ, “ಸೆರೆಯಿಂದ ತಪ್ಪಿಸಿಕೊಂಡು ಈಗ ಆ ನಾಡಿನಲ್ಲಿ ವಾಸಿಸುತ್ತಿರುವವರು ಮಹಾಕಷ್ಟ ನಿಂದೆಗಳಿಗೆ ಒಳಗಾಗಿದ್ದಾರೆ. ಇÉರುಸಲೇಮಿನ ಪೌಳಿಗೋಡೆಯನ್ನು ಕೆಡವಲಾಗಿದೆ. ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿವೆ,” ಎಂದು ಹೇಳಿದರು.
4 : ನಾನು ಈ ಸಮಾಚಾರವನ್ನು ಕೇಳಿದಾಗ ನೆಲಕಚ್ಚಿ ಕುಳಿತು ಅತ್ತೆ; ಹಲವಾರು ದಿನಗಳವರೆಗೆ ಶೋಕಿಸಿದೆ, ಉಪವಾಸವಿದ್ದೆ, ಪರಲೋಕದೇವರ ಮುಂದೆ ಪ್ರಾರ್ಥನೆ ಮಾಡುತ್ತಾ ಇದ್ದೆ.
5 : ನನ್ನ ಪ್ರಾರ್ಥನೆಯಲ್ಲಿ, “ಹೇ ಸರ್ವೇಶ್ವರಾ, ಮಹೋನ್ನತರೂ ಭಯಭಕ್ತಿಗೆ ಪಾತ್ರರೂ ಆಗಿರುವ ಪರಲೋಕದೇವರೇ, ನಿಮ್ಮನ್ನು ಪ್ರೀತಿಸಿ, ನಿಮ್ಮ ಆಜ್ಞೆಗಳನ್ನು ಅನುಸರಿಸುವವರಿಗೆ ನೀವು ಮಾಡಿದ ಕೃಪಾವಾಗ್ದಾನಗಳನ್ನು ನೆರವೇರಿಸುವವರೇ
6 : ಕೃಪೆಮಾಡಿ ನನಗೆ ಕಿವಿಗೊಡಿ, ಕಟಾಕ್ಷಿಸಿ ನೋಡಿ; ನಿಮ್ಮ ದಾಸನ ಪ್ರಾರ್ಥನೆಯನ್ನು ಆಲಿಸಿ. ನಾನು ಈಗ ಹಗಲಿರುಳೂ ನಿಮ್ಮ ಸನ್ನಿಧಿಯಲ್ಲಿ ನಿಮ್ಮ ದಾಸರಾದ ಇಸ್ರಯೇಲರ ಪರವಾಗಿ ಪ್ರಾರ್ಥಿಸುತ್ತಾ ಇದ್ದೇನೆ; ಅವರು ನಿಮಗೆ ವಿರುದ್ಧ ಮಾಡಿದ ಪಾಪಗಳನ್ನು ಅರಿಕೆಮಾಡುತ್ತ ಇದ್ದೇನೆ; ನಾನೂ ನನ್ನ ಪೂರ್ವಜರೂ ಆ ಪಾಪಗಳಲ್ಲಿ ಪಾಲುಗಾರರು.
7 : ನಾವು ನಿಮಗೆ ದ್ರೋಹಿಗಳಾಗಿ ನಡೆಯುತ್ತಾ ಬಂದೆವು; ನೀವು ನಿಮ್ಮ ದಾಸ ಮೋಶೆಯ ಮುಖಾಂತರ ಕೊಟ್ಟ ಆಜ್ಞಾವಿಧಿನ್ಯಾಯಗಳನ್ನು ನಾವು ಕೈಗೊಳ್ಳಲಿಲ್ಲ.
8 : ನೀವು ಅವನ ಮುಖಾಂತರ, ‘ನೀವು ಅವಿಧೇಯರಾದರೆ ನಿಮ್ಮನ್ನು ಜನಾಂಗಗಳೊಳಗೆ ಚದರಿಸಿ ಬಿಡುವೆನು;
9 : ನನಗೆ ಅಭಿಮುಖರಾಗಿ ನನ್ನ ಆಜ್ಞೆಗಳನ್ನು ಅನುಸರಿಸಿ ನಡೆದರೆ, ನಿಮ್ಮವರು ಆಕಾಶದ ಕೊನೆಯವರೆಗೆ ಒಯ್ಯಲ್ಪಟ್ಟರೂ ನಾನು ಅವರನ್ನು ಅಲ್ಲಿಂದ ಕೂಡಿಸಿ ನನ್ನ ನಾಮಸ್ಥಾಪನೆಗಾಗಿ ಆರಿಸಿದ ಸ್ಥಳಕ್ಕೆ ಮತ್ತೆ ಬರಮಾಡುವೆನು; ಎಂದು ಹೇಳಿದಿರಲ್ಲವೆ? ಆ ಮಾತನ್ನು ನೆನಪುಮಾಡಿಕೊಳ್ಳಿ, ಸ್ವಾಮೀ.
10 : ಅವರು ನಿಮ್ಮ ದಾಸರು ಹಾಗೂ ನೀವು ನಿಮ್ಮ ಮಹಾಶಕ್ತಿ, ಭುಜಪರಾಕ್ರಮಗಳಿಂದ ವಿಮೋಚಿಸಿದ ನಿಮ್ಮ ಪ್ರಜೆಗಳೂ ಆಗಿರುತ್ತಾರಲ್ಲವೆ?
11 : ಸ್ವಾಮೀ, ಕೃಪೆಮಾಡಿ; ನಿಮ್ಮ ದಾಸನಾದ ನನ್ನ ಪ್ರಾರ್ಥನೆಗೂ ನಿಮ್ಮ ನಾಮಸರಣೆಯಲ್ಲಿ ಆನಂದಿಸುವ ನಿಮ್ಮ ಭಕ್ತರ ಪ್ರಾರ್ಥನೆಗೂ ಕಿವಿಗೊಡಿ. ನಿಮ್ಮ ದಾಸನಾದ ನಾನು ಈ ದಿನ ಈ ಮನುಷ್ಯನ ದಯೆಗೆ ಪಾತ್ರನಾಗಿ ಕೃತಾರ್ಥನಾಗುವಂತೆ ಅನುಗ್ರಹಿಸಿ,” ಎಂದು ಬೇಡಿಕೊಂಡೆನು.

Holydivine