Sirach - Chapter 1
Holy Bible

1 : ‘ಸುಜ್ಞಾನ’ ಎಂಬುದೆಲ್ಲವೂ ಬರುವುದು ಸರ್ವೇಶ್ವರನಿಂದಲೆ ನಿತ್ಯಕ್ಕೂ ಅದಿರುವುದು ಆತನ ಬಳಿಯಲ್ಲೇ.
2 : ಎಣಿಸಬಲ್ಲವನಾರು ಕಡಲ ಮರಳಿನ ಕಣಗಳನು ಮಳೆಯ ಹನಿಗಳನು, ಅನಂತಕಾಲದ ದಿನಗಳನು?
3 : ಅಳೆಯಬಲ್ಲವನಾರು ಆಕಾಶದ ಎತ್ತರವನು, ಭೂಮಿಯ ಉದ್ದಗಲವನು, ಪಾತಾಳದ ಆಳವನು? ಅಂತೆಯೇ ಸುಜ್ಞಾನದ ನೆಲೆಯನು?
4 : ಸೃಷ್ಟಿಯಾಯಿತು ಸುಜ್ಞಾನ ಸಕಲಕ್ಕೂ ಮೊದಲೇ ವಿವೇಚನಾಗ್ರಹಿಕೆ ಕಾಲಕ್ಕೆ ಮುಂಚೆಯೇ.
5 : ಉನ್ನತ ಸ್ವರ್ಗದ ದೇವರ ವಾಣಿಯೇ ಸುಜ್ಞಾನದ ಮೂಲ ಆತನ ಶಾಶ್ವತವಾದ ಆಜ್ಞೆಗಳೇ ಅದರ ಮಾರ್ಗ.
6 : ಬಯಲಾಯಿತೆ ಸುಜ್ಞಾನದ ಮೂಲ ಯಾರಿಗಾದರೂ? ಅರಿತಿರುವರೆ ಅದರ ಭವ್ಯ ಕಲ್ಪನೆಗಳನು ಯಾರಾದರೂ?
7 : ಪ್ರಕಟವಾಯಿತೆ ಸುಜ್ಞಾನದ ಅರಿವು ಯಾರಿಗಾದರೂ? ಗ್ರಹಿಸಿರುವರೆ ಅದರ ಮಾರ್ಗಗಳನು ಯಾರಾದರೂ?
8 : ಸುಜ್ಞಾನಿ ಒಬ್ಬನಿಹನು; ಆತನು ಅತ್ಯಂತ ಭಯಂಕರನು ಆತನೇ ಸಿಂಹಾಸನಾರೂಢನಾಗಿರುವ ಸರ್ವೇಶ್ವರನು.
9 : ಸುಜ್ಞಾನವನ್ನು ನಿರ್ಮಿಸಿದಾಗ ಸರ್ವೇಶ್ವರನೇ ಅದನ್ನು ವೀಕ್ಷಿಸಿ ತೂಕಮಾಡಿದಾತ ಆತನೇ ಅದನ್ನು ಸುರಿಸಿದನು ಸಮಸ್ತ ಸೃಷ್ಟಿ ಕಾರ್ಯಗಳ ಮೇಲೆ.
10 : ಸಕಲ ಜೀವಿಗಳಲಿ ನೆಲೆಸುವುದದು ಆತನ ಇಚ್ಛೆಯಂತೆ ದಯಪಾಲಿಸಿರುವನದನ್ನು ಹೇರಳವಾಗಿ ಆತನನ್ನು ಪ್ರೀತಿಸುವವರಿಗೆ. ದೇವರಲ್ಲಿ ಭಯಭಕ್ತಿ
11 : ದೇವರಲ್ಲಿ ಭಯಭಕ್ತಿಯು ತರುತ್ತದೆ ಮಹಿಮೆ, ಗೌರವ, ಸಂತೋಷ, ಪರಮಾನಂದದ ಮುಕುಟ.
12 : ದೇವಭಯದಿಂದ ಅರಳುತ್ತದೆ ಅಂತರಂಗ, ಅದು ಬೀರುತ್ತದೆ ಹರ್ಷ ಹಾಗು ದೀರ್ಘಾನಂದ.
13 : ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವನಿಗೆ ಕಾದಿದೆ ಶುಭಾಂತ್ಯ ಮರಣ ದಿನದಲ್ಲಿ ಲಭಿಸುವುದು ದಯೆದಾಕ್ಷಿಣ್ಯ.
14 : ದೇವರಲ್ಲಿ ಭಯಭಕ್ತಿಯೇ ಜ್ಞಾನದ ಉದಯ ನಂಬಿಕಸ್ಥರಿಗೆ ಅದರ ಉಗಮಸ್ಥಾನ ತಾಯಿಯ ಉದರ.
15 : ಮಾನವರಲ್ಲಿದೆ ಅದರ ನಿತ್ಯ ನಿವಾಸ ಅವರ ಸಂತಾನದ ನೆಚ್ಚಿಗೆಗೆ ಅದು ಯೋಗ್ಯ.
16 : ದೇವ ಭಯಭಕ್ತಿಯಿಂದ ಜ್ಞಾನಸಿದ್ಧಿ ಅದರ ಸತ್ಫಲಗಳಿಂದ ತೃಪ್ತಿ.
17 : ತುಂಬುವುದದು ಭಕ್ತರ ಗೃಹಗಳನ್ನು ಒಳ್ಳೇವಸ್ತುಗಳಿಂದ ಅವರ ಉಗ್ರಾಣಗಳನ್ನು ತನ್ನ ಉತ್ಪನ್ನದಿಂದ.
18 : ದೇವರಲ್ಲಿ ಭಯಭಕ್ತಿಯೇ ಸುಜ್ಞಾನದ ಶಿರೋಮಣಿ ಸೊಂಪಾಗಿ ಬೆಳೆಯುವುವು ಅದರಿಂದ ಶಾಂತಿ ಸಮೃದ್ಧಿ.
19 : ಸರ್ವೇಶ್ವರನು ವೀಕ್ಷಿಸಿ ಅದನ್ನು ಪರೀಕ್ಷಿಸಿರುವನು ಮಳೆಗರೆದನು ಕೌಶಲ್ಯವನು, ಗ್ರಹಿಕೆಯನು ಅಧಿಕರಿಸಿಹನು ಅದನಪ್ಪಿಕೊಂಡವರ ಗೌರವವನು.
20 : ಸರ್ವೇಶ್ವರನಲಿ ಭಯಭಕ್ತಿಯೇ ಸುಜ್ಞಾನದ ಮೂಲವು ದೀರ್ಘಾಯುಸ್ಸೇ ಅದರ ಕೊಂಬೆಯು.
21 : ಸರ್ವೇಶ್ವರನ ಭಯ ತೊಲಗಿಸುವುದು ಪಾಪವನು ಅದಿರುವ ಎಡೆಯಲ್ಲಿ ತಡೆಗಟ್ಟುವುದು ಕೋಪವನು.
22 : ನ್ಯಾಯಸಮ್ಮತವಾಗದು ದುಷ್ಟವಾದ ಕೋಪ ಮನುಷ್ಯನ ಕೋಪದ ಸೆಳೆತವೇ ಪತನಕ್ಕೆ ಕಾರಣ.
23 : ಸಹನೆಯುಳ್ಳವನು ತಾಳಿಕೊಳ್ಳುವನು ಸೂಕ್ತ ಕಾಲದವರೆಗೆ ಚಿಲುಮೆಯಂತೆ ಉಕ್ಕುವುದು ಪರಮಾನಂದ ಕೊನೆಗೆ.
24 : ಮೌನವಾಗಿರುವನು ಅವನು ಸಮಯ ಬರುವವರೆಗೆ ಅವನೆಷ್ಟು ವಿವೇಕಿಯೆಂದು ನುಡಿಯುವುವು ಭಕ್ತರ ಬಾಯಿಗಳೆ. ಸುಜ್ಞಾನ - ಸನ್ನಡತೆ
25 : ವಿವೇಕದ ದೃಷ್ಟಾಂತಗಳಿವೆ ಸುಜ್ಞಾನದ ನಿಧಿಯಲಿ ಪಾಪಿಗಾದರೋ ಭಕ್ತಿ ಕಾಣಿಸುವುದು ಅಸಹ್ಯವಾಗಿ.
26 : ದೈವಾಜ್ಞೆಗಳನು ನೀ ಪಾಲಿಸಿ ಸುಜ್ಞಾನವನು ಬಯಸುವೆಯಾದರೆ ದಯಪಾಲಿಸುವನು ಆತ ಅದನ್ನು ಧಾರಾಳವಾಗಿ ನಿನಗೆ.
27 : ಕಾರಣ, ದೇವರಲ್ಲಿ ಭಯಭಕ್ತಿಯೇ ಸುಜ್ಞಾನ, ಸುಶಿಕ್ಷಣ ಆತ ಮೆಚ್ಚುವಂಥದು ಪ್ರಾಮಾಣಿಕತೆ ಮತ್ತು ವಿನಯ.
28 : ದೇವರ ಭಯಭಕ್ತಿಯಲ್ಲಿ ನಿನಗಿರದಿರಲಿ ಅಪನಂಬಿಕೆ ದ್ವಂದ್ವ ಮನಸ್ಸಿನಿಂದ ಸೇರಬೇಡ ಆತನ ಸನ್ನಿಧಿಗೆ.
29 : ವರ್ತಿಸಬೇಡ ಜನರ ಮುಂದೆ ಕಪಟತನದಿಂದ ಮಾತಾಡುವಾಗ ನಡೆದುಕೊ ಎಚ್ಚರದಿಂದ.
30 : ಉಬ್ಬಿಕೊಳ್ಳಬೇಡ, ಬಿದ್ದು ಹೋದೀಯೇ ಕೆಳಗೆ! ಇದರಿಂದ ಅಪಮಾನವಾದೀತು ನಿನಗೆ.
31 : ನಿನ್ನ ಗುಟ್ಟು ರಟ್ಟಾದೀತು ಜನರ ಮುಂದೆ ನಿನ್ನನು ಒಗೆದುಬಿಟ್ಟಾರು ದೇವರು ತಮ್ಮ ಜನರ ಮಧ್ಯೆ ಏಕೆನೆ, ನೀನು ಸೇರಲಿಲ್ಲ ದೇವರ ಸನ್ನಿಧಿಗೆ ಭಯಭಕ್ತಿಯಿಂದ ನಿನ್ನ ಅಂತರಂಗ ತುಂಬಿಕೊಂಡಿತ್ತು ಮೋಸ ವಂಚನೆಯಿಂದ.

Holydivine