Lamentations - Chapter 1
Holy Bible

1 : ಅಯ್ಯೋ, ಅಂದು ಜನಭರಿತವಾಗಿದ್ದ ನಗರಿ ಇಂದು ಒಂಟಿಯಾಗಿ ಕುಳಿತುಬಿಟ್ಟಳಲ್ಲಾ ! ರಾಷ್ಟ್ರಗಳಲ್ಲೆಲ್ಲಾ ಅತಿ ಶ್ರೇಷ್ಠಳಾಗಿದ್ದವಳು ವಿಧವೆ ಆಗಿಬಿಟ್ಟಳಲ್ಲಾ ! ಪ್ರಾಂತ್ಯಗಳಲ್ಲೆಲ್ಲಾ ಬಹಳ ಪ್ರವೀಣಳಾಗಿದ್ದವಳು ದಾಸಿಯಂತೆ ಆಗಿಬಿಟ್ಟಿರುವಳಲ್ಲಾ !
2 : ಇರುಳೆಲ್ಲ ಅತ್ತಳು ಬಿಕ್ಕಿಬಿಕ್ಕಿ ಕೆನ್ನೆ ಮೇಲೆ ನೋಡಿ, ಕಣ್ಣೀರ ಕೋಡಿ ! ಆಕೆಯ ಹಲವಾರು ಪ್ರಿಯರಲ್ಲಿ ಸಂತೈಸುವವರೇ ಇಲ್ಲ ಮಿತ್ರರಾಗಿದ್ದವರೇ ದ್ರೋಹವೆಸಗಿ ಶತ್ರುಗಳಾಗಿರುವರಲ್ಲಾ !
3 : ಘೋರಸೇವೆ ಶ್ರಮೆಗಳಿಂದ ತಪ್ಪಿಸಿಕೊಳ್ಳಲಿಕೆ ವಲಸೆಹೋಗಿರುವಳಲ್ಲಾ ‘ಯೆಹೂದಿ’ ಎಂಬಾಕೆ ! ಮ್ಲೇಚ್ಚರ ಮಧ್ಯೆ ವಾಸಮಾಡುತ್ತಿರುವಳಲ್ಲಾ ನೆಮ್ಮದಿಯಿಲ್ಲದೆ ಹಿಮ್ಮೆಟ್ಟಿ ಹಿಡಿದರು ಹಿಂಸಕರೆಲ್ಲಾ ಆಕೆ ಇಕ್ಕಟ್ಟಿಗೆ ಸಿಕ್ಕಿರುವಾಗಲೆ !
4 : ಬಿಕೋ ಎನ್ನುತ್ತಿವೆ ಸಿಯೋನಿಗೆ ತೆರಳುವ ಮಾರ್ಗಗಳು ಮಹೋತ್ಸವಕ್ಕೆ ಇನ್ನು ಬರುತ್ತಿಲ್ಲ ಯಾತ್ರಿಕರಾರು ಪಾಳುಬಿದ್ದಿವೆ ಅದರ ಬಾಗಿಲುಗಳು ನಿಟ್ಟುಸಿರಿಡುತ್ತಿರುವರು ಅದರ ಯಾಜಕರು ವ್ಯಥೆಪಡುತ್ತಿರುವರು ಅದರ ಯುವತಿಯರು ನಗರಕ್ಕೆ ನಗರವೇ ದುಃಖದಲ್ಲಿ ಮುಳುಗಿರುವುದು.
5 : ಅದರ ಅಗಣಿತ ದ್ರೋಹಗಳಿಗಾಗಿ ಸರ್ವೇಶ್ವರ ಮಾಡಿದನದನ್ನು ದುಃಖಕ್ಕೆ ಈಡಾಗಿ, ಅದರ ವಿರೋಧಿಯೇ ಅದಕ್ಕೀಗ ಅಧಿಪತಿ ! ಅದರ ಶತ್ರುಗಳಿಗೋ ಸುಖಸಮೃದ್ಧಿ ! ಅದರ ಹಸುಳೆಗಳೂ ಸೆರೆಹೋಗಿವೆ ವೈರಿಯ ವಶವಾಗಿ !
6 : ಕಳೆದು ಹೋಗಿದೆಯಲ್ಲಾ ಸಿಯೋನ್ ನಗರಿಯ ವೈಭವವೆಲ್ಲಾ ! ಮೇವಿಲ್ಲದೆ ಬಡಕಲಾದ ಜಿಂಕೆಗಳಂತೆ ಅದರ ನಾಯಕರೆಲ್ಲಾ ಓಡಿಹೋದರು ಬೆಂಗೊಟ್ಟು ಅಟ್ಟಿಬಂದವರಿಗೆಲ್ಲಾ !
7 : ಜೆರುಸಲೇಮ್ ದಿಕ್ಕುಪಾಲಾಗಿ ಕಷ್ಟಪಡುವಾಗ ನೆನೆಸಿಕೊಳ್ಳುತ್ತಾಳೆ ತನ್ನ ಪ್ರಾಚೀನ ವೈಭವಗಳನ್ನೆಲ್ಲಾ. ತನ್ನ ಜನತೆ ವೈರಿಗಳ ವಶವಾದಾಗ ಆಕೆಗೆ ಸಿಗಲಿಲ್ಲ ಯಾರೊಬ್ಬರ ಬೆಂಬಲ. ಆಕೆಯಾ ಹೀನಸ್ಥಿತಿ ನೋಡಿ ವೈರಿಗಳು ಮಾಡಿದರು ಪರಿಹಾಸ್ಯ.
8 : ಜೆರುಸಲೇಮ್ ಅಶುದ್ಧಳಾದಳು ಪದೇ ಪದೇ ಪಾಪಮಾಡಿ. ಹೊಗಳುತ್ತಿದ್ದವರೇ ತೆಗಳುವವರಾದರು ಆಕೆಯ ನಗ್ನತೆಯನ್ನು ನೋಡಿ. ಆಕೆಯೋ ನಿಟ್ಟುಸಿರಿಡುತ್ತಿರುವಳು ಮುಖವನ್ನು ಮರೆಮಾಡಿ.
9 : ಆಕೆಯ ನೆರಿಗೆಯೂ ಹೊಲಸಾಗಿ ಮುಂದಿನ ಗತಿ ತೋಚದಂತಾಗಿ ಸಂತೈಸುವವರೇ ಇಲ್ಲದವಳಾಗಿ ಬಿದ್ದಿರುವಳಲ್ಲಾ ಈ ಭೀಕರ ಸ್ಥಿತಿಯಲ್ಲಿ ! “ಹೇ ಸರ್ವೇಶ್ವರಾ, ನೋಡು ನನ್ನ ಸಂಕಟವನು ಹೆಚ್ಚಳ ಪಡುತ್ತಿರುವನಲ್ಲಾ ಶತ್ರುವಾದವನು” ಎಂದು ಮೊರೆಯಿಡುತ್ತಾಳೆ ಕೂಗಿ.
10 : ದೋಚಿಕೊಂಡನು ದ್ರೋಹಿ ಆಕೆಯ ಆಸ್ತಿಯನ್ನು ಕೈಚಾಚಿ, ‘ಸೇರಿಸಬಾರದು ಸಭೆಗೆ ಮ್ಲೇಚ್ಛರನ್ನು’ ಎಂಬುದು ದೇವನ ಆಣತಿ. ಆದರಿಗೋ ಅಂಥವರೇ ಪವಿತ್ರಾಲಯ ಪ್ರವೇಶಿಸುವ ದುರ್ಗತಿ !
11 : ಅಡ್ಡಾಡುತ್ತಿರುವರು ಆಕೆಯ ಜನರು ಅನ್ನಕ್ಕಾಗಿ ಮಾರುತ್ತಿರುವರು ಅಮೂಲ್ಯವಾದುದನ್ನೆ ಆಹಾರಕ್ಕಾಗಿ. “ಸರ್ವೇಶ್ವರಾ, ನೋಡು, ಕಟಾಕ್ಷಿಸು, ನನ್ನ ತುಚ್ಛತೆಯನ್ನು” ಎಂದು ಹೇಳಿ ಆಕೆ ಪ್ರಲಾಪಿಸುತ್ತಿರುವಳು.
12 : “ಹಾದುಹೋಗುವವರೇ, ನಿಮಗಿಲ್ಲವೆ ನನ್ನ ಚಿಂತೆ? ಸರ್ವೇಶ್ವರ ಸಿಟ್ಟುಗೊಂಡು ನನಗಿತ್ತಿರುವನು ಈ ವ್ಯಥೆ ! ಈ ಪರಿ ಸಂಕಟವನ್ನು ನೀವೆಲ್ಲಾದರು ನೋಡಿದ್ದುಂಟೆ?”
13 : “ಆಕಾಶದಿಂದ ಆತ ಸುರಿಸಿದ್ದಾನೆ ಅಗ್ನಿಯನ್ನೆ ಅದು ದಹಿಸುತ್ತಿದೆ ನನ್ನೊಳಗಿನ ಎಲುಬುಗಳನ್ನೆ ನನ್ನ ಕಾಲುಗಳಿಗೆ ಬಲೆಯೊಡ್ಡಿದ್ದಾನೆ ಅದು ನನ್ನನ್ನೆಳೆಯುತ್ತಿದೆ ನೆಲಕ್ಕೆ ಹಾಳುಬಿದ್ದ ನಾನು ಸದಾ ಬಳಲುತ್ತಿದ್ದೇನೆ.”
14 : “ನನ್ನ ದ್ರೋಹಗಳನ್ನು ನನಗೆ ಬಿಗಿದಿದ್ದಾನೆ ನೊಗದ ಕಣ್ಣುಗಳಂತೆ. ಅವು ಹುರಿಗೊಂಡು, ಸುತ್ತಿಕೊಂಡು ಕುತ್ತಿಗೆಗೆ, ನನ್ನ ಶಕ್ತಿಯನ್ನು ಹೀರುತ್ತಿವೆ. ಸಿಕ್ಕಿಸಿದನಲ್ಲಾ ಸ್ವಾಮಿ, ನನ್ನಿಂದ ಎದುರಿಸಲಾಗದಂಥವರ ಕೈಗೆ !
15 : “ಸ್ವಾಮಿ ತೃಣೀಕರಿಸಿದನು ನನ್ನ ಶೂರರನ್ನೆಲ್ಲಾ ನನ್ನ ಕಣ್ಮುಂದೆಯೇ. ಸೈನ್ಯ ಸಮೂಹವನ್ನೆ ಬರಮಾಡಿದನು ನನ್ನ ಯುವಕರನ್ನು ಸದೆಬಡಿಯಲೆಂದೇ. ಯೆಹೂದಿಯೆಂಬ ಯುವತಿಯನ್ನು ತುಳಿಸಿದನು ತೊಟ್ಟಿಯಲ್ಲಿ ದ್ರಾಕ್ಷಿ ತುಳಿವಂತೆ.
16 : “ಗೋಳಾಡುತ್ತಿರುವೆನು ಈ ವಿಪತ್ತುಗಳಿಂದ; ಸಂತೈಸಿ ಸುಧಾರಿಸುವವನು ಬಲುದೂರವಿರುವುದರಿಂದ ಹರಿಯುತ್ತಿದೆ ಕಂಬನಿ ಧಾರೆಧಾರೆಯಾಗಿ ಕಣ್ಗಳಿಂದ; ವೈರಿಗಳು ಗೆದ್ದು, ನನ್ನ ಕುವರರು ಬಿದ್ದುಹೋಗಿರುವುದರಿಂದ.
17 : ಸಿಯೋನ್ ನಗರಿ ಕೈಚಾಚಿ ಕೂಗಿಕೊಂಡರೂ ಸಂತೈಸುವವರಾರೂ ಇಲ್ಲ. ನೆರೆಹೊರೆಯವರೇ ಆಕೆಯ ವಿರೋಧಿಗಳಾಗಲೆಂದು ಸರ್ವೇಶ್ವರ ತೀರ್ಮಾನಿಸಿದ್ದಾನಲ್ಲಾ ! ಅವರ ನಡುವೆ ಹೊಲೆಯಾದ ಹೆಣ್ಣಿನಂತೆ ಜೆರುಸಲೇಮ್ ಬಿದ್ದಿದ್ದಾಳಲ್ಲಾ !
18 : “ಸರ್ವೇಶ್ವರನು ನ್ಯಾಯಸ್ವರೂಪಿ, ನಾನಾದರೊ ಆತನ ಆಜ್ಞೆ ಮೀರಿದ ದ್ರೋಹಿ. ಜನಾಂಗಗಳೇ, ನೀವೆಲ್ಲರು ಕಿವಿಗೊಡಿ, ನನ್ನ ಸಂಕಟನೋಡಿ ! ನನ್ನ ಯುವಕ ಯುವತಿಯರು, ಇಗೋ, ಸೆರೆಹೋಗಿರುವರು ನೋಡಿ.
19 : “ನನ್ನ ಪ್ರಿಯರನ್ನು ಕರೆದೆ: ಅವರೇ ಮೋಸಮಾಡಿದರೆನಗೆ. ನನ್ನ ಯಾಜಕರೂ ಪ್ರಮುಖರೂ ಪಟ್ಟಣದಲ್ಲೇ ಪ್ರಾಣತೆತ್ತರು, ಉಸಿರನ್ನು ಉಳಿಸಿಕೊಳ್ಳಲು ಊಟವನ್ನು ಹುಡುಕುತ್ತಿರಲು.
20 : “ಹೇ, ಸರ್ವೇಶ್ವರಾ, ಕಟಾಕ್ಷಿಸು; ನಾ ಇಕ್ಕಟ್ಟಿಗೆ ಸಿಕ್ಕಿಕೊಂಡಿರುವೆ. ಕರುಳು ಕುದಿಯುತ್ತಿದೆ, ಹೃದಯ ವಿಮುಖವಾಗಿದೆ ನಾ ಗೈದ ದ್ರೋಹಕ್ಕೆ. ಕತ್ತಿಗೆ ತುತ್ತಾಗುತ್ತಿರುವರು ಹೊರಗೆ ಪ್ರಾಣಸಂಕಟಕ್ಕೆ ಗುರಿಯಾಗಿರುವೆ ಒಳಗೆ.
21 : “ಸಾಂತ್ವನ ತರುವವರಾರೂ ಇಲ್ಲವಲ್ಲಾ ನನಗೆ ! ನನ್ನ ನರಳಾಟದ ಸುದ್ದಿ ಮುಟ್ಟಿದೆ ವೈರಿಗಳ ಕಿವಿಗೆ. ನನಗಾದ ಕೇಡಿಗೆ ನೀನೇ ಕಾರಣನೆಂಬ ಸಂತಸ ಶತ್ರುವಿಗೆ. ನೀ ಮುಂತಿಳಿಸಿದ ಮೇರೆಗೆ ನನಗಾದ ಗತಿ ಬರಲಿ ಅವರಿಗೆ.
22 : “ಅವರು ಗೈದ ಕೆಡುಕೆಲ್ಲಾ ಬಟ್ಟಬಯಲಾಗಲಿ ನಿನ್ನ ದೃಷ್ಟಿಗೆ. ನನ್ನ ದ್ರೋಹಕ್ಕೆ ಪ್ರತಿಯಾಗಿ ನನಗೆ ಮಾಡಿರುವಂತೆ ನೀ ಮಾಡು ಅವರಿಗೆ. ನನ್ನ ನರಳಾಟ ಹೆಚ್ಚಿದೆ; ನನ್ನ ಎದೆ ಕುಂದಿಹೋಗಿದೆ.” ಎರಡನೆಯ ಶೋಕಗೀತೆ ಜೆರುಸಲೇಮಿಗೆ ಸರ್ವೇಶ್ವರನೇ ಕೊಟ್ಟ ಶಿಕ್ಷೆ

Holydivine