Zechariah - Chapter 1
Holy Bible

1 : ಡೇರಿಯಸನ ಆಳ್ವಿಕೆಯ ಎರಡನೆಯ ವರ್ಷದ ಎಂಟನೆಯ ತಿಂಗಳಲ್ಲಿ ಸರ್ವೇಶ್ವರನಿಂದ ಇದ್ದೋವಿನ ಮೊಮ್ಮಗನೂ ಬೆರೆಕ್ಯನ ಮಗನೂ ಆದ ಜೆಕರ್ಯನೆಂಬ ಪ್ರವಾದಿಗೆ ಕೇಳಿಬಂದ ದೈವವಾಣಿಯಿದು:
2 : ಸರ್ವೇಶ್ವರ ನಿಮ್ಮ ಪಿತೃಗಳ ಮೇಲೆ ಬಹಳ ಸಿಟ್ಟುಗೊಂಡಿದ್ದಾರೆ.
3 : ಎಂದೇ ನೀನು ನನ್ನ ಜನರಿಗೆ ಹೀಗೆಂದು ಹೇಳು: “ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: ಮರಳಿ ನನಗೆ ಅಭಿಮುಖರಾಗಿರಿ. ಆಗ ನಾನು ನಿಮಗೆ ಮರಳಿ ಅಭಿಮುಖನಾಗುವೆನು.
4 : ನಿಮ್ಮ ಪಿತೃಗಳಂತೆ ಆಗಬೇಡಿ. ಅವರಿಗೆ ಪೂರ್ವಕಾಲದ ಪ್ರವಾದಿಗಳು, ‘ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: ನಿಮ್ಮ ದುರ್ಮಾರ್ಗಗಳನ್ನೂ ದುಷ್ಕøತ್ಯಗಳನ್ನೂ ಬಿಟ್ಟು ಹಿಂದಿರುಗಿ’ ಎಂದು ಸಾರಿದರು. ಆದರೂ ಅವರು ನನ್ನ ಮಾತನ್ನು ಕಿವಿಗೊಟ್ಟು ಕೇಳಲಿಲ್ಲ.
5 : ನಿಮ್ಮ ಪಿತೃಗಳು ಈಗಲೂ ಇದ್ದಾರೆಯೇ? ಪ್ರವಾದಿಗಳು ಸದಾಕಾಲ ಇರುವರೆ?
6 : ಆದರೂ ನನ್ನ ದಾಸರಾದ ಪ್ರವಾದಿಗಳಿಗೆ ನಾನು ಕೊಟ್ಟ ಆಜ್ಞೆಗಳು, ವಿಧಿನಿಯಮಗಳು ನಿಮ್ಮ ಪಿತೃಗಳ ಮರಣದ ನಂತರವೂ ಶಾಶ್ವತವಾಗಿ ಉಳಿದಿವೆಯಲ್ಲವೆ? ಅವರು ಪಶ್ಚಾತ್ತಾಪಪಟ್ಟು, ‘ಸೇನಾಧೀಶ್ವರ ಸರ್ವೇಶ್ವರ ನಮ್ಮ ದುರ್ಮಾರ್ಗ ಹಾಗೂ ದುಷ್ಕøತ್ಯಗಳಿಗೆ ತಕ್ಕಂತೆ ಏನು ಮಾಡಬೇಕೆಂದು ಸಂಕಲ್ಪಿಸಿದ್ದರೋ, ಅದನ್ನು ನಮಗೆ ಮಾಡಿಯೇ ಮಾಡಿದ್ದಾರೆ’ ಎಂದು ಹೇಳಿಕೊಂಡರಲ್ಲವೆ?”
7 : ಡೇರಿಯಸನ ಆಳ್ವಿಕೆಯ ಎರಡನೇ ವರ್ಷದ ಹನ್ನೊಂದನೆಯ ತಿಂಗಳಿನ (ಅಂದರೆ ಶೆಬಾತ್ ತಿಂಗಳಿನ) ಇಪ್ಪತ್ತನಾಲ್ಕನೇ ದಿನದಲ್ಲಿ ಇದ್ದೋವಿನ ಮೊಮ್ಮಗನೂ ಬೆರೆಕ್ಯನ ಮಗನೂ ಆದ ಜೆಕರ್ಯನೆಂಬ ಪ್ರವಾದಿಗೆ ಸರ್ವೇಶ್ವರ ಕೊಟ್ಟ ದರ್ಶನವಿದು:
8 : ರಾತ್ರಿಯಲ್ಲಿ ನನಗೆ ಈ ದರ್ಶನವಾಯಿತು. ಇಗೋ, ಕೆಂಪು ಕುದುರೆಯನ್ನೇರಿದ್ದ ಒಬ್ಬ ವ್ಯಕ್ತಿ ತಗ್ಗಿನಲ್ಲಿರುವ ಸುಗಂಧ ವೃಕ್ಷಗಳ ನಡುವೆ ನಿಂತಿದ್ದಾನೆ. ಅವನ ಹಿಂದೆ ಕೆಂಪು, ನಸುಗೆಂಪು ಮತ್ತು ಬಿಳಿಯ ಕುದುರೆಗಳಿವೆ.
9 : ನಾನು, ‘ಸ್ವಾಮೀ, ಇದೆಲ್ಲ ಏನು?’ ಎಂದು ಕೇಳಿದೆ. ಅದಕ್ಕೆ ಸೂತ್ರಧಾರಿಯಾದ ದೂತನು ನನ್ನೊಡನೆ ಮಾತನಾಡುತ್ತಾ ‘ಇದು ಏನನ್ನು ಸೂಚಿಸುತ್ತದೆಂಬುದನ್ನು ನಿನಗೆ ತೋರಿಸುತ್ತೇನೆ’ ಎಂದು ಹೇಳಿದ.
10 : ಕೂಡಲೆ ಸುಗಂಧ ವೃಕ್ಷಗಳ ನಡುವೆ ಇದ್ದವನು: “ಇವರು ಲೋಕದ ವೀಕ್ಷಣಾರ್ಥವಾಗಿ ದೇವರಿಂದ ಕಳುಹಿಸಲ್ಪಟ್ಟವರು” ಎಂದು ಉತ್ತರಕೊಟ್ಟ.
11 : ಆಗ ಅವರು ವೃಕ್ಷಗಳ ನಡುವೆ ನಿಂತಿದ್ದ ದೇವದೂತನಿಗೆ, “ನಾವು ಲೋಕವನ್ನೆಲ್ಲ ವೀಕ್ಷಿಸಿ ಬಂದಿದ್ದೇವೆ. ಅದು ನಿಶ್ಚಿಂತೆಯಿಂದ ನೆಮ್ಮದಿಯಾಗಿದೆ,” ಎಂದು ವರದಿ ಮಾಡಿದರು.
12 : ಆಗ ದೇವದೂತನು: “ಸೇನಾಧೀಶ್ವರ ಸರ್ವೇಶ್ವರಾ, ಕಳೆದ ಎಪ್ಪತ್ತು ವರ್ಷಗಳಿಂದ ನೀವು ಕೋಪದಿಂದಿರುವಿರಿ, ಏಕೆ? ಇನ್ನೆಷ್ಟು ಕಾಲ ಜೆರುಸಲೇಮಿಗೂ ಜುದೇಯದ ಇತರ ಪಟ್ಟಣಗಳಿಗೂ ಕರುಣೆ ತೋರಿಸದೆ ಇರುವಿರಿ?” ಎಂದು ಕೇಳಿದ.
13 : ಆಗ ಸೂತ್ರಧಾರಿಯಾದ ದೂತನಿಗೆ ಸರ್ವೇಶ್ವರ ಕರುಣೆಯಿಂದ ಸದುತ್ತರ ಕೊಟ್ಟರು.
14 : ಮತ್ತು ಆ ದೂತ ಹೀಗೆಂದು ನನಗೆ ಅಪ್ಪಣೆ ಮಾಡಿದ: “ಇದನ್ನು ನೀನು ಸಾರಿ ಹೇಳಬೇಕು. ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ – ಜೆರುಸಲೇಮಿನ ಹಾಗೂ ಸಿಯೋನಿನ ಮೇಲೆ ನನಗೆ ತುಂಬ ಅಭಿಮಾನವಿದೆ.
15 : ನೆಮ್ಮದಿಯಿಂದ ಬಾಳುವ ರಾಷ್ಟ್ರಗಳ ಮೇಲೆ ಬಹಳ ಸಿಟ್ಟುಗೊಂಡಿದ್ದೇನೆ. ಏಕೆಂದರೆ, ನಾನು ಜೆರುಸಲೇಮಿನ ವಿರುದ್ಧ ಕಿಂಚಿತ್ತೇ ಕೋಪಗೊಂಡಿದ್ದಾಗ ಅವರು ಕೇಡಿಗೆ ಕೇಡು ಕೂಡಿಸಿಬಿಟ್ಟರು.
16 : ಆದುದರಿಂದ ನಾನು ಕರುಣಾಮಯನಾಗಿ ಜೆರುಸಲೇಮಿಗೆ ಹಿಂದಿರುಗಿ ಬಂದಿದ್ದೇನೆ. ಅಲ್ಲಿ ನನ್ನ ಆಲಯವನ್ನು ಮರಳಿ ಕಟ್ಟಲಾಗುವುದು. ಜೆರುಸಲೇಮ್ ನಗರವನ್ನು ವಾಸ್ತುಶಿಲ್ಪಕ್ಕೆ ತಕ್ಕಂತೆ ನಿರ್ಮಿಸಲಾಗುವುದು. ಇದು ಸೇನಾಧೀಶ್ವರ ಸರ್ವೇಶ್ವರನ ನುಡಿ.”
17 : “ಮತ್ತೊಮ್ಮೆ ನೀನು ಹೀಗೆಂದು ಘೋಷಿಸು: ‘ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ. ಇನ್ನು ನನ್ನ ಪಟ್ಟಣದಲ್ಲಿ ಸಿರಿ ಸಂಪತ್ತು ತುಂಬಿತುಳುಕುವುದು. ಸರ್ವೇಶ್ವರ ಸಿಯೋನನ್ನು ಪುನಃ ಸಂತೈಸುವರು. ಜೆರುಸಲೇಮ್ ನಗರವನ್ನು ಪುನಃ ತನ್ನದಾಗಿ ಆರಿಸಿಕೊಳ್ಳುವರು’.”
18 : ಮತ್ತೊಂದು ದರ್ಶನದಲ್ಲಿ ನಾನು ನಾಲ್ಕು ಕೊಂಬುಗಳನ್ನು ಕಂಡೆನು.
19 : “ಈ ಕೊಂಬುಗಳು ಏನನ್ನು ಸೂಚಿಸುತ್ತವೆ?” ಎಂದು ನಾನು ಕೇಳಿದಾಗ ಸೂತ್ರಧಾರಿಯಾದ ದೂತನು: ‘ಇವು ಜೂದ, ಇಸ್ರಯೇಲ್, ಮತ್ತು ಜೆರುಸಲೇಮಿನ ಪ್ರಜೆಗಳನ್ನು ಚದರಿಸಿಬಿಟ್ಟ ಕೊಂಬುಗಳು,’ ಎಂದನು
20 : ಅನಂತರ ಸರ್ವೇಶ್ವರ ನನಗೆ ನಾಲ್ಕು ಮಂದಿ ಸುತ್ತಿಗೆ ಹಿಡಿದವರನ್ನು ತೋರಿಸಿದರು. “ಇವರು ಏನು ಮಾಡುವುದಕ್ಕೆ ಬಂದಿದ್ದಾರೆ?” ಎಂದು ಕೇಳಿದಾಗ ಆತ: ಯೆಹೂದ್ಯರಲ್ಲಿ ಯಾರೂ ತಲೆಯೆತ್ತದಂತೆ ಅವುಗಳನ್ನು ಚದರಿಸುವ ಕೊಂಬುಗಳು ಅವು. ಇವರಾದರೆ ಜುದೇಯ ನಾಡನ್ನು ಚದರಿಸಬೇಕೆಂದು ತಲೆಯೆತ್ತಿದ ರಾಷ್ಟ್ರಗಳನ್ನೆ ಚದರಿಸಿ ಅವರ ಕೊಂಬುಗಳನ್ನು ಹೊಡೆದು ಕೆಡುವುದಕ್ಕೆ ಬಂದಿದ್ದಾರೆ” ಎಂದು ಹೇಳಿದರು.

Holydivine