Leviticus - Chapter 9
Holy Bible

1 : ಎಂಟನೆಯ ದಿನ ಮೋಶೆ ಆರೋನನನ್ನೂ ಅವನ ಮಕ್ಕಳನ್ನೂ ಹಾಗು ಇಸ್ರಯೇಲರ ಹಿರಿಯರನ್ನೂ ಕರೆಸಿದನು.
2 : ಆರೋನನಿಗೆ, “ನೀನು ಪರಿಹಾರಕ ಬಲಿದಾನಕ್ಕಾಗಿ ಕಳಂಕರಹಿತವಾದ ಹೋರಿಕರುವನ್ನು ಮತ್ತು ದಹನಬಲಿಗಾಗಿ ಕಳಂಕರಹಿತವಾದ ಟಗರನ್ನು ತೆಗೆದುಕೊಂಡು ಸರ್ವೇಶ್ವರನ ಸನ್ನಿಧಿಯಲ್ಲಿ ನಿನಗೋಸ್ಕರ ಸಮರ್ಪಿಸು.
3 : ಮತ್ತು ನೀನು ಇಸ್ರಯೇಲರ ಸಂಗಡ ಮಾತಾಡಿ ಅವರಿಗೆ, ‘ಈ ದಿನ ಸರ್ವೇಶ್ವರಸ್ವಾಮಿ ಪ್ರತ್ಯಕ್ಷರಾಗುತ್ತಾರೆ. ಆದುದರಿಂದ ನೀವು ಅವರ ಸನ್ನಿಧಿಯಲ್ಲಿ ಸಮರ್ಪಿಸಲು ದೋಷಪರಿಹಾರಕ್ಕಾಗಿ ಒಂದು ಹೋತವನ್ನು, ದಹನಬಲಿಗಾಗಿ ಒಂದು ವರ್ಷದ ಕಳಂಕರಹಿತವಾದ ಒಂದು ಕರು ಹಾಗು ಒಂದು ಕುರಿಯನ್ನು,
5 : ಶಾಂತಿಸಮಾಧಾನ ಬಲಿಗಾಗಿ ಒಂದು ಹೋರಿ ಹಾಗು ಒಂದು ಟಗರನ್ನು ಮತ್ತು ನೈವೇದ್ಯಕ್ಕಾಗಿ ಎಣ್ಣೆ ಮಿಶ್ರವಾದ ಪದಾರ್ಥವನ್ನು ತೆಗೆದುಕೊಂಡು ಬರಬೇಕೆಂದು ಆಜ್ಞಾಪಿಸು,” ಎಂದನು.
5 : ಮೋಶೆಯ ಆಜ್ಞಾನುಸಾರ ಅವರು ಕಾಣಿಕೆಗಳನ್ನೆಲ್ಲ ದೇವದರ್ಶನದ ಗುಡಾರದ ಬಳಿಗೆ ತಂದರು. ಇಸ್ರಯೇಲ್ ಸಮಾಜದವರೆಲ್ಲರು ಹತ್ತಿರಕ್ಕೆ ಬಂದು ಸರ್ವೇಶ್ವರನ ಸನ್ನಿಧಿಯಲ್ಲಿ ನಿಂತರು.
6 : ಮೋಶೆ ಅವರಿಗೆ, “ನೀವು ಇವುಗಳನ್ನೆಲ್ಲ ಮಾಡಬೇಕೆಂದು ಸರ್ವೇಶ್ವರಸ್ವಾಮಿಯೇ ಆಜ್ಞಾಪಿಸಿದ್ದಾರೆ; ಅದರಂತೆ ನೀವು ನಡೆದುಕೊಂಡರೆ ಸರ್ವೇಶ್ವರನ ಮಹಿಮೆ ನಿಮಗೆ ಪ್ರತ್ಯಕ್ಷವಾಗುವುದು,” ಎಂದು ಹೇಳಿದನು.
7 : ಅನಂತರ ಮೋಶೆ ಆರೋನನಿಗೆ, “ಬಲಿಪೀಠದ ಹತ್ತಿರಕ್ಕೆ ಬಂದು ನೀನು ಮಾಡಬೇಕಾದ ದೋಷಪರಿಹಾರಕ ಬಲಿಯನ್ನು ಮತ್ತು ದಹನಬಲಿಯನ್ನು ಸಮರ್ಪಿಸಿ ನಿನ್ನ ಹಾಗು ಜನರ ದೋಷವನ್ನು ಪರಿಹರಿಸು. ಜನರು ತಂದದ್ದನ್ನು ಸಮರ್ಪಿಸಿ ಸರ್ವೇಶ್ವರನ ಆಜ್ಞೆಯಂತೆ ಅವರ ದೋಷವನ್ನು ಪರಿಹರಿಸು,” ಎಂದು ಹೇಳಿದನು.
8 : ಅಂತೆಯೇ ಆರೋನನು ಬಲಿಪೀಠದ ಹತ್ತಿರಕ್ಕೆ ಹೋಗಿ ತನಗಾಗಿ ಹೋರಿಯನ್ನು ದೋಷಪರಿಹಾರಕ ಬಲಿಯಾಗಿ ವಧಿಸಿದನು.
9 : ಆರೋನನ ಮಕ್ಕಳು ಆ ಬಲಿಪ್ರಾಣಿಯ ರಕ್ತವನ್ನು ಅವನಿಗೆ ಒಪ್ಪಿಸಿದಾಗ ಅವನು ಅದರಲ್ಲಿ ತನ್ನ ಬೆರಳನ್ನು ಅದ್ದಿ, ಬಲಿಪೀಠದ ಕೊಂಬುಗಳಿಗೆ ಹಚ್ಚಿ, ಮಿಕ್ಕ ರಕ್ತವನ್ನು ಬಲಿಪೀಠದ ಬುಡದಲ್ಲಿ ಹೊಯ್ದನು.
10 : ದೋಷಪರಿಹಾರಕ ಬಲಿಪ್ರಾಣಿಯ ಕೊಬ್ಬನ್ನು, ಮೂತ್ರಪಿಂಡಗಳನ್ನು, ಕಾಳಿಜದ ಹತ್ತಿರವಿರುವ ಕೊಬ್ಬನ್ನು, ಸರ್ವೇಶ್ವರ ಮೋಶೆಯ ಮುಖಾಂತರ ಆಜ್ಞಾಪಿಸಿದಂತೆ, ಬಲಿಪೀಠದ ಮೇಲೆ ಹೋಮಮಾಡಿದನು.
11 : ಅದರ ಮಾಂಸವನ್ನೂ ಚರ್ಮವನ್ನೂ ಪಾಳೆಯದ ಹೊರಗೆ ಬೆಂಕಿಯಲ್ಲಿ ಸುಡಿಸಿಬಿಟ್ಟನು.
12 : ತರುವಾಯ ದಹನಬಲಿಯ ಪ್ರಾಣಿಯನ್ನು ವಧಿಸಿದನು. ಆರೋನನ ಮಕ್ಕಳು ಅದರ ರಕ್ತವನ್ನು ತಂದು ಅವನಿಗೆ ಒಪ್ಪಿಸಿದರು. ಅವನು ಅದನ್ನು ಬಲಿಪೀಠದ ಸುತ್ತಲು ಚಿಮುಕಿಸಿದನು.
13 : ಅವರು ಆ ಪ್ರಾಣಿಯ ಮಾಂಸ ಖಂಡಗಳನ್ನೂ ತಲೆಯನ್ನೂ ಒಂದೊಂದಾಗಿ ಒಪ್ಪಿಸಿದಾಗ ಅವನು ಅವುಗಳನ್ನು ಬಲಿಪೀಠದ ಮೇಲೆ ಹೋಮಮಾಡಿದನು.
14 : ಅದರ ಕರುಳುಗಳನ್ನೂ, ಕಾಲುಗಳನ್ನೂ ತೊಳೆಯಿಸಿ ಬಲಿಪೀಠದಲ್ಲಿ ದಹನ ಬಲಿದ್ರವ್ಯದ ಮೇಲಿಟ್ಟು ಹೋಮಮಾಡಿದನು.
15 : ಆದಾದ ಮೇಲೆ ಜನರು ಸಮರ್ಪಿಸಿದ ಪ್ರಾಣಿಗಳನ್ನು ಆರೋನನು ತರಿಸಿ ಅವುಗಳಲ್ಲಿ ದೋಷ ಪರಿಹಾರಕವಾದ ಹೋತವನ್ನು ಮೊದಲನೆಯ ಬಲಿಪ್ರಾಣಿಯಾಗಿ ವಧಿಸಿ ಜನರ ದೋಷ ಪರಿಹಾರಾರ್ಥವಾಗಿ ಸಮರ್ಪಿಸಿದನು.
16 : ಅಂತೆಯೆ ದಹನಬಲಿಪ್ರಾಣಿಯನ್ನೂ ವಿಧಿ ಬದ್ಧವಾಗಿ ಸಮರ್ಪಿಸಿದನು.
17 : ಜನರು ತಂದ ನೈವೇದ್ಯ ದ್ರವ್ಯಗಳಲ್ಲಿ ಒಂದು ಹಿಡಿಯನ್ನು ತೆಗೆದುಕೊಂಡು ಬೆಳಿಗ್ಗೆಯ ದಹನಬಲಿಯ ಜೊತೆಗೆ ಅದನ್ನು ಪೀಠದ ಮೇಲೆ ಹೋಮಮಾಡಿದನು.
18 : ಅನಂತರ ಜನರ ಪರವಾಗಿ ಶಾಂತಿಸಮಾಧಾನದ ಬಲಿದಾನಕ್ಕಾಗಿ ನೇಮಕವಾದ ಹೋರಿಯನ್ನೂ ಟಗರನ್ನೂ ವಧಿಸಿದನು. ಆರೋನನ ಮಕ್ಕಳು ಅವುಗಳ ರಕ್ತವನ್ನು ಒಪ್ಪಿಸಿದಾಗ, ಅವನು ಅದನ್ನು ಬಲಿಪೀಠದ ಸುತ್ತಲೂ ಚಿಮುಕಿಸಿದನು.
19 : ಅವರು ಆ ಹೋರಿಯ ಕೊಬ್ಬನ್ನು, ಟಗರಿನ ಬಾಲದ ಕೊಬ್ಬನ್ನು, ಕರುಳ ಸುತ್ತಲಿನ ಕೊಬ್ಬನ್ನು, ಮೂತ್ರಪಿಂಡಗಳನ್ನು ಹಾಗು ಕಾಳಿಜದ ಹತ್ತಿರವಿರುವ ಕೊಬ್ಬನ್ನು
20 : ಎದೆಯ ಭಾಗಗಳ ಮೇಲೆ ಇಟ್ಟು ಒಪ್ಪಿಸಿದನು. ಆರೋನನು ಆ ಕೊಬ್ಬನ್ನು ಬಲಿಪೀಠದ ಮೇಲೆ ಹೋಮಮಾಡಿದನು.
21 : ಮೋಶೆಯ ಆಜ್ಞಾನುಸಾರ ಅವನು ಅವುಗಳ ಎದೆಯ ಭಾಗಗಳನ್ನೂ ಬಲತೊಡೆಗಳನ್ನೂ ನೈವೇದ್ಯವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ಆರತಿಯೆತ್ತಿದನು.
22 : ಆರೋನನು ಆ ದೋಷಪರಿಹಾರಕ ಬಲಿಯನ್ನೂ ದಹನಬಲಿಯನ್ನೂ ಶಾಂತಿಸಮಾಧಾನದ ಬಲಿಗಳನ್ನೂ ಸಮರ್ಪಿಸಿದ ನಂತರ ತನ್ನ ಕೈಗಳನ್ನು ಜನರ ಕಡೆಗೆ ಎತ್ತಿ ಅವರನ್ನು ಆಶೀರ್ವದಿಸಿದನು. ಆಮೇಲೆ ಬಲಿಪೀಠದಿಂದ ಇಳಿದು ಬಂದನು.
23 : ತರುವಾಯ ಮೋಶೆ ಮತ್ತು ಆರೋನರು ದೇವರ್ಶನದ ಗುಡಾರದೊಳಗೆ ಹೋದರು. ಅಲ್ಲಿಂದ ಹೊರಗೆ ಬಂದು ಜನರನ್ನು ಆಶೀರ್ವದಿಸಿದರು. ಆಗ ಸರ್ವೇಶ್ವರನ ಮಹಿಮೆ ಜನರಿಗೆ ಪ್ರತ್ಯಕ್ಷವಾಯಿತು.
24 : ಸರ್ವೇಶ್ವರನ ಸನ್ನಿಧಿಯಿಂದ ಅಗ್ನಿ ಹೊರಟು ಬಲಿಪೀಠದ ಮೇಲಿದ್ದ ದಹನ ಬಲಿದ್ರವ್ಯವನ್ನೂ ಕೊಬ್ಬನ್ನೂ ದಹಿಸಿಬಿಟ್ಟಿತು. ಜನರೆಲ್ಲರು ಅದನ್ನು ಕಂಡು ಜಯ ಜಯಕಾರ ಮಾಡಿದರು; ಅಡ್ಡ ಬಿದ್ದು ನಮಸ್ಕರಿಸಿದರು.

Holydivine