Judith - Chapter 15
Holy Bible

1 : ಈ ಸುದ್ದಿಯನ್ನು ಕೇಳಿದ ಡೇರೆಯಲ್ಲಿನ ಜನರೆಲ್ಲ ಪೆಚ್ಚಾದರು.
2 : ದಿಗ್ಭ್ರಮೆಗೊಂಡು ನಡುಗುತ್ತಾ ಬಯಲು ಬೆಟ್ಟ ಎನ್ನದೆ ಎಲ್ಲಾಕಡೆ ದಿಕ್ಕಾಪಾಲಾಗಿ ಓಡಿ ಹೋದರು. ಎಲ್ಲೂ ಇಬ್ಬರು ಜೊತೆಯಲ್ಲಿ ಇರುವುದು ಕಂಡುಬರಲಿಲ್ಲ. ಎಲ್ಲರೂ ಕಾಲುಕಿತ್ತಿದ್ದರು.
3 : ಹಗಲಿರುಳು ಬೆಥೂಲಿಯದ ಸುತ್ತಲೂ ಶಸ್ತ್ರಧಾರಿಗಳಾಗಿ ಬೆಟ್ಟದಲ್ಲಿ ಪಹರೆಯಿದ್ದವರು ಸಹ ಓಡಲಾರಂಭಿಸಿದರು. ಆಗ ಇಸ್ರಯೇಲರು ಅವರನ್ನು ಬೆನ್ನಟ್ಟಿದರು.
4 : ಇಸ್ರಯೇಲ್ ಪ್ರಾಂತ್ಯಕ್ಕೆಲ್ಲಾ ಅಂದರೆ, ಬೆತೊಸ್ತಾಯಿಮ್, ಬೆಬಾಯಿ, ಚೋಬ, ಕೋಲ ಮುಂತಾದ ಕಡೆಗಳಲ್ಲಿದ್ದ ಇಸ್ರಯೇಲರೆಲ್ಲರಿಗೂ ಉಜ್ಜೀಯನು ಈ ಸಮಾಚಾರವನ್ನು ತಿಳಿಸಿ, ಅವರು ಶತ್ರುಗಳ ಮೇಲೆ ಬಿದ್ದು ಅವರನ್ನು ಮುಗಿಸಿಬಿಡಬೇಕೆಂದು ಒತ್ತಾಯಿಸಲು ದೂತರನ್ನು ಕಳುಹಿಸಿದನು.
5 : ಇಸ್ರಯೇಲರು ಈ ಸುದ್ದಿಯನ್ನು ಕೇಳಿದ ತಕ್ಷಣ, ಒಮ್ಮೆಗೆ ಶತ್ರುಗಳ ಮೇಲೆ ಬಿದ್ದರು. ಚೋಬದ ದಾರಿಯಲ್ಲಿದ್ದವರನ್ನೆಲ್ಲ ಕೊಂದುಹಾಕಿದರು. ಜೆರುಸಲೇಮಿನ ಜನರು ಹಾಗು ಗುಡ್ಡಗಾಡಿನ ಜುದೇಯದ ಜನರು ಶತ್ರುಪಾಳೆಯದಲ್ಲಿ ನಡೆದ ಸಂಗತಿಗಳನ್ನು ಕುರಿತು ಕೇಳಿದ್ದೇ, ಇಸ್ರಯೇಲರೊಂದಿಗೆ ಒಟ್ಟಾಗಿ ಸೇರಿ ಯುದ್ಧಮಾಡಿದರು. ಅನಂತರ ಗಿಲ್ಯಾದ್ ಮತ್ತು ಗಲಿಲೇಯದ ಜನರು ಬಯಲಿನಲ್ಲಿದ್ದ ಅಸ್ಸೀರಿಯದ ಮೇಲೆ ಎರಗಿ ಅವರಿಗೆ ಘೋರವಾದ ನಷ್ಟವನ್ನು ಉಂಟುಮಾಡಿದರು. ಶತ್ರುಗಳು ಅವರನ್ನು ದಮಸ್ಕಸ್ ಪ್ರಾಂತ್ಯದವರೆಗೆ ಬೆನ್ನಟ್ಟಿದರು.
6 : ಬೆಥೂಲಿಯದ ನಿವಾಸಿಗಳು ಅಸ್ಸೀರಿಯದ ಪಾಳೆಯವನ್ನು ಹೊಕ್ಕು ಅಲ್ಲಿ ಇದ್ದುದನ್ನೆಲ್ಲಾ ಕೊಳ್ಳೆಹೊಡೆದರು.
7 : ಅವರು ಬಿಟ್ಟದ್ದನ್ನು ಇಸ್ರಯೇಲರು ಹಿಂದಿರುಗುವಾಗ ದೋಚಿಕೊಂಡರು. ಶತ್ರುಗಳ ಸರಕು ಸರಂಜಾಮುಗಳು ಯಥೇಚ್ಛವಾಗಿದ್ದುದರಿಂದ ಗುಡ್ಡಗಾಡಿನ ಊರುಕೇರಿಗಳವರು ಹಾಗು ಬಯಲಿನ ನಿವಾಸಿಗಳು ಸಾಕಷ್ಟು ಲೂಟಿಯನ್ನು ತೆಗೆದುಕೊಂಡರು.
8 : ಜೆರುಸಲೇಮಿನಲ್ಲಿದ್ದ ಪ್ರಧಾನ ಯಾಜಕ ಯೋವಾಕಿಮನು ಹಾಗು ಇಸ್ರಯೇಲಿನ ಸಭಾ ಸದಸ್ಯರು, ಸರ್ವೇಶ್ವರಸ್ವಾಮಿ ತಮ್ಮ ಜನರಿಗೆ ತೋರಿದ ಮಹಾಕೃಪೆಯನ್ನು ಕೊಂಡಾಡಿ ಜೂಡಿತಳನ್ನು ಅಭಿನಂದಿಸಲು ಬಂದರು.
9 : ಅವಳ ಮನೆಗೆ ಎಲ್ಲರೂ ಬಂದು ಸೇರಿ ಈ ಪರಿ ಒಕ್ಕೊರಲಿನಿಂದ ಸ್ತುತಿಹಾಡಿದರು; “ನೀನೇ ಜೆರುಸಲೇಮಿನ ಮಹಿಮೆ ನೀನೇ ಇಸ್ರಯೇಲಿನ ಗರಿಮೆ ನೀನೇ ನಮ್ಮ ಜನಾಂಗದ ಹಿರಿಮೆ.
10 : ನಿನ್ನ ಕೈಯಿಂದಲೇ ಮಾಡಿರುವೆ ಇದನ್ನೆಲ್ಲ ಸಲ್ಲುವುದು ಘನತೆ ನಿನಗೆ ಇಸ್ರಯೇಲಿನಲ್ಲೆಲ್ಲಾ. ಮೆಚ್ಚಿಹನು ಪರಮನು ನೀ ಮಾಡಿದ್ದುದನ್ನೆಲ್ಲ ಸರ್ವಶಕ್ತ ಸರ್ವೇಶ್ವರನ ಆಶೀರ್ವಾದ ಸಕಲ ನಿನಗೆ ಲಭಿಸಲಿ ಮುಂದಿನ ದಿನಗಳಲ್ಲೆಲ್ಲಾ.” ಜನರೆಲ್ಲರು ‘ಆಮೆನ್’ ಎಂದು ಘೋಷಿಸಿದರು.
11 : ಜನರು ಪಾಳೆಯವನ್ನು ಮೂವತ್ತು ದಿನ ಲೂಟಿಮಾಡಿದರು. ಹೊಲೊಫರ್ನೆಸನ ಡೇರೆಯನ್ನು, ಅವನ ಬೆಳ್ಳಿಯ ತಟ್ಟೆ, ಹೊಗೆಬತ್ತಿ, ಪಾನಪಾತ್ರೆ, ಪೀಠೋಪಕರಣ ಇವುಗಳನ್ನೆಲ್ಲ ಜೂಡಿತಳಿಗೆ ಕೊಟ್ಟರು. ಜೂಡಿತ್ ತನ್ನ ಹೇಸರ ಗತ್ತೆಯ ಮೇಲೆ ಕೆಲವು ಸರಕುಗಳನ್ನು ಹೊರಿಸಿದಳು. ತನ್ನ ಬಂಡಿಗಳನ್ನೆಲ್ಲ ತರಿಸಿ ಮಿಕ್ಕುಳಿದ ಸಾಮಾನುಗಳನ್ನು ಅವುಗಳಲ್ಲಿ ತುಂಬಿಸಿದಳು.
12 : ಇಸ್ರಯೇಲಿನ ಮಹಿಳೆಯರೆಲ್ಲರು ಅವಳನ್ನು ಕಾಣಲು ತ್ವರೆಯಿಂದ ಬಂದು ಅವಳ ಗೌರವಾರ್ಥ ನೃತ್ಯವೃಂದವನ್ನು ಏರ್ಪಡಿಸಿದರು. ಜೂಡಿತಳು ದ್ರಾಕ್ಷಿಯ ಎಲೆಯ ಗುಚ್ಛಗಳನ್ನು ತೆಗೆದುಕೊಂಡು ತನ್ನ ಜೊತೆಯಲ್ಲಿ ಬರುತ್ತಿದ್ದ ಮಹಿಳೆಯರಿಗೆ ಹಂಚಿದಳು.
13 : ಓಲಿವ್ ಎಲೆಗಳ ಮುಕುಟಗಳನ್ನು ತಾನೂ ತನ್ನ ಸಂಗಡವಿದ್ದ ಮಹಿಳೆಯರೂ ಧರಿಸಿಕೊಂಡರು. ಮೆರವಣಿಗೆಯ ಮುಂದಾಳಾಗಿ ಜೂಡಿತ್ ಇರಲಾಗಿ, ಇತರ ಹೆಂಗಸರು ಅವಳ ಹಿಂದೆ ನರ್ತಿಸುತ್ತಾ ನಡೆದರು. ಇಸ್ರಯೇಲಿನ ಪುರುಷರೆಲ್ಲ ಆಯುಧಗಳನ್ನು ತೆಗೆದುಕೊಂಡು, ಮಾಲೆಗಳನ್ನು ಧರಿಸಿಕೊಂಡು, ಅವರ ಹಿಂದೆ ಹಾಡುತ್ತಾ ನಡೆದರು.
14 : ಇಸ್ರಯೇಲಿನವರೆಲ್ಲರು ತನ್ನ ಸುತ್ತ ಇರಲು, ಜೂಡಿತಳು ಹರ್ಷೋದ್ಗಾರದಿಂದ ಕೃತಜ್ಞತಾಗೀತೆಯನ್ನು ಹಾಡಲಾರಂಭಿಸಿದಳು. ಜನರೆಲ್ಲ ಅವಳೊಂದಿಗೆ ಧ್ವನಿಗೂಡಿಸಿ ಈ ಪರಿ ಹಾಡಿದರು.

Holydivine