Mathew - Chapter 14
Holy Bible

1 : ಯೇಸುಸ್ವಾಮಿಯ ಸಮಾಚಾರ ಆಗ ಗಲಿಲೇಯ ಪ್ರಾಂತ್ಯಕ್ಕೆ ಸಾಮಂತ ರಾಜನಾಗಿದ್ದ ಹೆರೋದನ ಕಿವಿಗೆ ಬಿದ್ದಿತು.
2 : ಅವನು ತನ್ನ ಪರಿಚಾರಕರಿಗೆ, "ಮಡಿದ ಸ್ನಾನಿಕ ಯೊವಾನ್ನನೇ ಮರಳಿ ಜೀವಂತನಾಗಿ ಬಂದಿದ್ದಾನೆ; ಆದ್ದರಿಂದಲೇ ಮಹತ್ಕಾರ್ಯಗಳನ್ನು ಮಾಡುವ ಶಕ್ತಿ ಇವನಿಗಿದೆ," ಎಂದನು.
3 : ಹೆರೋದನು ತನ್ನ ಸಹೋದರ ಫಿಲಿಪ್ಪನ ಧರ್ಮಪತ್ನಿಯಾದ ಹೆರೋದಿಯಳನ್ನು ಇಟ್ಟುಕೊಂಡಿದ್ದನು. ಅವಳ ಪ್ರಯುಕ್ತ ಯೊವಾನ್ನನನ್ನು ಹಿಡಿದು ಬಂಧಿಸಿ ಸೆರೆಯಲ್ಲಿ ಹಾಕಿದ್ದನು.
4 : ಏಕೆಂದರೆ ಆತನು, "ನಿನ್ನ ಸಹೋದರನ ಧರ್ಮಪತ್ನಿಯನ್ನು ನೀನು ಇಟ್ಟುಕೊಂಡಿರುವುದು ಅಕ್ರಮ," ಎಂದು ಹೆರೋದನಿಗೆ ಹೇಳುತ್ತಿದ್ದನು.
5 : ಯೊವಾನ್ನನನ್ನು ಕೊಲ್ಲಿಸಬೇಕೆಂದಿದ್ದರೂ ಹೆರೋದನು ಜನರಿಗೆ ಹೆದರಿದ್ದನು. ಅವರು ಆತನನ್ನು ಪ್ರವಾದಿಯೆಂದು ಭಾವಿಸಿದ್ದರು.
6 : ಹೀಗಿರುವಲ್ಲಿ ಹೆರೋದನ ಹುಟ್ಟುಹಬ್ಬ ಬಂದಿತು. ಹೆರೋದಿಯಳ ಮಗಳು ಆಹ್ವಾನಿತರ ಮುಂದೆ ನರ್ತನಮಾಡಿ ಹೆರೋದನನ್ನು ಮೆಚ್ಚಿಸಿದಳು.
7 : ಆಗ ಅವಳು ಏನು ಕೇಳಿದರೂ ಕೊಡುವುದಾಗಿ ಅವನು ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದನು.
8 : ಅವಳು ತನ್ನ ತಾಯಿಯ ಸಲಹೆ ಪಡೆದು, "ನನಗೆ ಸ್ನಾನಿಕ ಯೊವಾನ್ನನ ತಲೆಯನ್ನು ಒಂದು ತಟ್ಟೆಯಲ್ಲಿ ತರಿಸಿಕೊಡಿ," ಎಂದಳು.
9 : ಇದನ್ನು ಕೇಳಿ ರಾಜನಿಗೆ ವ್ಯಥೆಯಾಯಿತು. ಆದರೆ ಅತಿಥಿಗಳ ಮುಂದೆ ಮಾಡಿದ ಪ್ರಮಾಣವನ್ನು ಮುರಿಯಲಾಗದೆ ಅವಳ ಇಚ್ಛೆಯನ್ನು ಪೂರೈಸುವಂತೆ ಆಜ್ಞೆಮಾಡಿದನು.
10 : ಅದರಂತೆಯೇ ಆಳುಗಳನ್ನು ಕಳುಹಿಸಿ, ಸೆರೆಮನೆಯಲ್ಲಿದ್ದ ಯೊವಾನ್ನನ ತಲೆಯನ್ನು ಕಡಿಸಿದನು;
11 : ಅದನ್ನು ಒಂದು ತಟ್ಟೆಯಲ್ಲಿ ತಂದು ಆ ಹುಡುಗಿಗೆ ಕೊಡಲಾಯಿತು. ಅವಳು ಅದನ್ನು ತನ್ನ ತಾಯಿಯ ಬಳಿಗೆ ತೆಗೆದುಕೊಂಡು ಹೋದಳು.
12 : ಯೊವಾನ್ನನ ಶಿಷ್ಯರು ಶವವನ್ನು ತೆಗೆದುಕೊಂಡು ಹೋಗಿ ಸಮಾಧಿಮಾಡಿದರು. ಅನಂತರ ಹೋಗಿ ಯೇಸುವಿಗೆ ಈ ವಿಷಯವನ್ನು ತಿಳಿಸಿದರು.
13 : ಈ ಸಮಾಚಾರವನ್ನು ಕೇಳಿದ ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು, ದೋಣಿಹತ್ತಿ ನಿರ್ಜನ ಪ್ರದೇಶಕ್ಕೆ ಒಬ್ಬಂಟಿಗರಾಗಿ ಹೊರಟರು. ಇದನ್ನು ತಿಳಿದುಕೊಂಡ ಜನರು ಊರೂರುಗಳಿಂದ ಹೊರಟು ಗುಂಪುಗುಂಪಾಗಿ ಅವರ ಹಿಂದೆಯೇ ಕಾಲ್ದಾರಿಯಲ್ಲಿ ನಡೆದುಹೋದರು.
14 : ಯೇಸು ದೋಣಿಯಿಂದ ಇಳಿದಾಗ, ದೊಡ್ಡ ಜನಸಮೂಹ ಆಗಲೇ ಅಲ್ಲಿ ಸೇರಿತ್ತು. ಆ ಸಮೂಹವನ್ನು ಕಂಡು ಅವರ ಮನ ಕರಗಿತು; ಅವರಲ್ಲಿ ಅಸ್ವಸ್ಥರಾಗಿದ್ದವರನ್ನು ಗುಣಪಡಿಸಿದರು.
15 : ಸಂಜೆಯಾದಾಗ, ಶಿಷ್ಯರು ಯೇಸುವಿನ ಬಳಿಗೆ ಬಂದು, "ಇದು ನಿರ್ಜನ ಪ್ರದೇಶ. ಈಗಾಗಲೇ ಹೊತ್ತು ಮೀರಿಹೋಗಿದೆ. ಜನಸಮೂಹವನ್ನು ಕಳುಹಿಸಿಬಿಡಿ, ಹಳ್ಳಿಪಳ್ಳಿಗಳಿಗೆ ಹೋಗಿ ಅವರಿಗೆ ಬೇಕಾದ ತಿಂಡಿತಿನಿಸುಗಳನ್ನು ಕೊಂಡುಕೊಳ್ಳಲಿ." ಎಂದರು.
16 ಅದಕ್ಕೆ ಯೇಸು, “ಅವರು ಹೋಗಬೇಕಾಗಿಲ್ಲ, ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿ,” ಎಂದರು.
17 : ಶಿಷ್ಯರು ಪ್ರತ್ಯುತ್ತರವಾಗಿ, "ನಮ್ಮ ಬಳಿ ಐದೇ ಐದು ರೊಟ್ಟಿ ಮತ್ತು ಎರಡು ಮೀನುಗಳು ಮಾತ್ರ ಇವೆ," ಎಂದರು.
18 : ಯೇಸು, "ಅವನ್ನು ಇಲ್ಲಿಗೆ ತನ್ನಿ," ಎಂದು ಹೇಳಿ, ಜನರೆಲ್ಲರೂ ಹುಲ್ಲಿನ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಮಾಡಿದರು.
19 : ಬಳಿಕ ಆ ಐದು ರೊಟ್ಟಿಗಳನ್ನೂ ಎರಡು ಮೀನುಗಳನ್ನೂ ತೆಗೆದುಕೊಂಡು, ಸ್ವರ್ಗದತ್ತ ಕಣ್ಣೆತ್ತಿನೋಡಿ, ದೇವರಿಗೆ ಸ್ತೋತ್ರ ಸಲ್ಲಿಸಿದರು. ತರುವಾಯ ರೊಟ್ಟಿಗಳನ್ನು ಮುರಿದು ಶಿಷ್ಯರಿಗೆ ಕೊಟ್ಟರು. ಶಿಷ್ಯರು ಜನರಿಗೆ ಹಂಚಿದರು.
20 : ಎಲ್ಲರೂ ಹೊಟ್ಟೆತುಂಬ ತಿಂದು ತೃಪ್ತರಾದರು. ಉಳಿದಿದ್ದ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಹನ್ನೆರಡು ಬುಟ್ಟಿಗಳ ತುಂಬ ಆದುವು.
21 : ಊಟ ಮಾಡಿದವರಲ್ಲಿ ಹೆಂಗಸರು, ಮಕ್ಕಳನ್ನು ಬಿಟ್ಟರೆ, ಗಂಡಸರೇ ಸುಮಾರು ಐದು ಸಾವಿರ ಇದ್ದರು. ಕಡಲ ಮೇಲೆ ಕಾಲುನಡೆ (ಮಾರ್ಕ 6:45-52; ಯೊವಾ. 6:15-21)
22 : ಇದಾದಮೇಲೆ ಯೇಸುಸ್ವಾಮಿ ತಾವು ಜನರ ಗುಂಪನ್ನು ಕಳಿಸಿಬಿಡುವಷ್ಟರಲ್ಲಿ, ಶಿಷ್ಯರು ದೋಣಿಹತ್ತಿ ತಮಗಿಂತ ಮುಂದಾಗಿ ಸರೋವರದ ಆಚೆಯ ದಡಕ್ಕೆ ಹೋಗಬೇಕೆಂದು ಆಜ್ಞಾಪಿಸಿದರು.
23 : ಜನರನ್ನು ಬೀಳ್ಕೊಟ್ಟ ಬಳಿಕ ಪ್ರಾರ್ಥನೆಮಾಡಲು ಯೇಸು ಒಬ್ಬರೇ ಬೆಟ್ಟಕ್ಕೆ ಹೋದರು. ಕತ್ತಲೆ ಕವಿದಾಗ ಅವರು ಅಲ್ಲಿ ಒಬ್ಬಂಟಿಗರಾಗಿದ್ದರು.
24 : ಅಷ್ಟರಲ್ಲಿ ದೋಣಿ ದಡದಿಂದ ಬಹುದೂರ ಸಾಗಿತ್ತು. ಎದುರುಗಾಳಿ ಬೀಸಿ ಅದು ಅಲೆಗಳ ಬಡಿತಕ್ಕೆ ಸಿಕ್ಕಿಕೊಂಡಿತ್ತು.
25 : ಆಗ ರಾತ್ರಿಯ ಕಡೇ ಜಾವದ ಸಮಯ. ಯೇಸು ಸರೋವರದ ಮೇಲೆ ನಡೆದುಕೊಂಡೇ ಶಿಷ್ಯರ ಬಳಿಗೆ ಬಂದರು.
26 : ಹೀಗೆ ಸರೋವರದ ಮೇಲೆ ನಡೆದುಕೊಂಡು ಬರುತ್ತಿದ್ದ ಯೇಸುವನ್ನು ನೋಡಿದಾಗ ಶಿಷ್ಯರು ಭಯಭ್ರಾಂತರಾದರು. ದಿಗಿಲುಗೊಂಡು, "ಭೂತ, ಭೂತ!" ಎಂದು ಚೀರಿದರು.
27 : ತಕ್ಷಣವೇ ಯೇಸು, "ಭಯಪಡಬೇಡಿ, ನಾನೇ. ಬೇರೆ ಯಾರೂ ಅಲ್ಲ, ಧೈರ್ಯದಿಂದಿರಿ," ಎಂದು ಅವರೊಡನೆ ಮಾತನಾಡಿದರು.
28 : ಆಗ ಪೇತ್ರನು, "ಸ್ವಾವಿೂ, ನೀವೇ ಆದರೆ ನಾನೂ ನೀರಿನ ಮೇಲೆ ನಡೆದು ನಿಮ್ಮ ಬಳಿಗೆ ಬರುವಂತೆ ಆಜ್ಞಾಪಿಸಿ," ಎಂದನು. ಯೇಸು, "ಬಾ" ಎಂದು ಕರೆಯಲು
29 : ಪೇತ್ರನು ದೋಣಿಯನ್ನು ಬಿಟ್ಟು ನೀರಿನ ಮೇಲೆ ನಡೆಯುತ್ತಾ ಯೇಸುವಿನತ್ತ ಬಂದನು.
30 : ಆದರೆ ಬಲವಾದ ಗಾಳಿ ಬೀಸುತ್ತಿರುವುದನ್ನು ಕಂಡು ಹೆದರಿದನು. ಹಾಗೆಯೇ ಮುಳುಗಿ ಹೋಗಲಾರಂಭಿಸಿದನು. ಆಗ, "ಸ್ವಾವಿೂ, ಕಾಪಾಡಿ, ಕಾಪಾಡಿ," ಎಂದು ಕೂಗಿಕೊಂಡನು.
31 : ಆ ಕ್ಷಣವೇ ಯೇಸು ಕೈಚಾಚಿ ಅವನನ್ನು ಹಿಡಿದುಕೊಂಡು, "ಅಲ್ಪ ವಿಶ್ವಾಸಿಯೇ ಏಕೆ ಸಂದೇಹಪಟ್ಟೆ?" ಎಂದರು.
32 : ಅನಂತರ ಅವರಿಬ್ಬರೂ ದೋಣಿಯನ್ನು ಹತ್ತಿದರು. ಕೂಡಲೇ ಗಾಳಿ ನಿಂತುಹೋಯಿತು.
33 : ದೋಣಿಯಲ್ಲಿದ್ದವರು "ನೀವು ನಿಜವಾಗಿಯೂ ದೇವರ ಪುತ್ರ!" ಎಂದು ಹೇಳಿ ಯೇಸುವನ್ನು ಆರಾಧಿಸಿದರು. ಅರಿವೆಯಿಂದಲೂ ಹರಿದುಬಂದ ಆರೋಗ್ಯ (ಮಾರ್ಕ 6:53-56)
34 : ಅವರೆಲ್ಲರೂ ಸರೋವರವನ್ನು ದಾಟಿ ಗೆನೆಸರೇತ್ ಊರಿನ ದಡ ಸೇರಿದರು.
35 : ಈ ಊರಿನವರು ಯೇಸುಸ್ವಾಮಿಯನ್ನು ಗುರುತು ಹಚ್ಚಿದ್ದೇ ತಡ ಸುತ್ತಮುತ್ತಲಿನ ಊರುಗಳಿಗೆಲ್ಲಾ ಹೇಳಿ ಕಳುಹಿಸಿದರು. ರೋಗರುಜಿನಗಳಿಂದ ನರಳುತ್ತಿದ್ದವರನ್ನು ಕರೆದುಕೊಂಡು ಬಂದರು.
36 : ಇವರು, "ನಿಮ್ಮ ಉಡುಪಿನ ಅಂಚನ್ನಾದರೂ ಮುಟ್ಟಲು ಅಪ್ಪಣೆಯಾದರೆ ಸಾಕು," ಎಂದು ಯೇಸುವನ್ನು ಬೇಡಿಕೊಂಡರು. ಹಾಗೆ ಮುಟ್ಟಿದವರೆಲ್ಲಾ ಗುಣಹೊಂದಿದರು.

Holydivine