Mathew - Chapter 21
Holy Bible

1 : ಯೇಸುಸ್ವಾಮಿ ಮತ್ತು ಅವರ ಜೊತೆಯಲ್ಲಿದ್ದವರು ಜೆರುಸಲೇಮನ್ನು ಸಮೀಪಿಸಿದರು. ಓಲಿವ್ ಗುಡ್ಡದ ಬಳಿಯಿರುವ ಬೆತ್ಫಗೆ ಎಂಬ ಊರನ್ನು ಸೇರಿದರು.
2 : ಅಲ್ಲಿ ಯೇಸು ಇಬ್ಬರು ಶಿಷ್ಯರನ್ನು ಕರೆದು, “ನಿಮ್ಮೆದುರಿಗೆ ಇರುವ ಆ ಹಳ್ಳಿಗೆ ಹೋಗಿರಿ. ಅಲ್ಲಿ ಕಟ್ಟಿಹಾಕಿರುವ ಒಂದು ಹೇಸರಗತ್ತೆಯನ್ನೂ ಅದರ ಮರಿಯನ್ನೂ ಕಾಣುವಿರಿ. ಅವುಗಳನ್ನು ಬಿಚ್ಚಿ ನನ್ನ ಬಳಿಗೆ ತನ್ನಿರಿ.
3 : ಯಾವನಾದರೂ ನಿಮ್ಮನ್ನು ಏನಾದರೂ ಕೇಳಿದರೆ, ‘ಇವು ಪ್ರಭುವಿಗೆ ಬೇಕಾಗಿವೆ’ ಎನ್ನಿ. ಅವನು ತಕ್ಷಣ ಕಳುಹಿಸಿಕೊಡುವನು” ಎಂದು ಹೇಳಿಕಳುಹಿಸಿದರು.
4 : ‘ಸಿಯೋನ್ ನಗರಿಗೆ ಹೇಳು: ನಿನ್ನರಸ ಬರುತಿಹನು ದೀನನವ ಹೇಸರಗತ್ತೆಯೇರಿ ಕುಳಿತಿಹನು ಮರಿಹೇಸರಗತ್ತೆಯನೇರಿ ಸಾಗಿಬರುತಿಹನು,’ ಎಂದು ಪ್ರವಾದಿಯೊಬ್ಬನ ವಚನ ನೆರವೇರುವಂತೆ ಇದೆಲ್ಲ ನಡೆಯಿತು.
5 : ‘ಸಿಯೋನ್ ನಗರಿಗೆ ಹೇಳು: ನಿನ್ನರಸ ಬರುತಿಹನು ದೀನನವ ಹೇಸರಗತ್ತೆಯೇರಿ ಕುಳಿತಿಹನು ಮರಿಹೇಸರಗತ್ತೆಯನೇರಿ ಸಾಗಿಬರುತಿಹನು,’ ಎಂದು ಪ್ರವಾದಿಯೊಬ್ಬನ ವಚನ ನೆರವೇರುವಂತೆ ಇದೆಲ್ಲ ನಡೆಯಿತು.
6 : ಶಿಷ್ಯರು ಹೋಗಿ ಯೇಸು ತಮಗೆ ಅಪ್ಪಣೆಮಾಡಿದಂತೆಯೇ ಹೇಸರಗತ್ತೆಯನ್ನೂ ಮರಿಯನ್ನೂ ಅಟ್ಟಿಕೊಂಡು ಬಂದರು.
7 : ತಮ್ಮ ಮೇಲಂಗಿಗಳನ್ನು ಅವುಗಳ ಮೇಲೆ ಹಾಸಿದರು. ಯೇಸು ಹತ್ತಿ ಕುಳಿತುಕೊಂಡರು.
8 : ಜನ ಸಮೂಹದಲ್ಲಿ ಅನೇಕರು ತಮ್ಮ ಹೊದಿಕೆಗಳನ್ನು ದಾರಿಯಲ್ಲಿ ಹಾಸಿದರು. ಇತರರು ಮರದೆಲೆಗಳನ್ನು ಕೊಯ್ದು ದಾರಿಯಲ್ಲಿ ಹರಡಿದರು.
9 : ಯೇಸುವಿನ ಹಿಂದೆಯೂ ಮುಂದೆಯೂ ಗುಂಪು ಗುಂಪಾಗಿ ಹೋಗುತ್ತಿದ್ದ ಜನರು: “ದಾವೀದ ಕುಲಪುತ್ರನಿಗೆ ಜಯವಾಗಲಿ! ಸರ್ವೇಶ್ವರನ ನಾಮದಲಿ ಬರುವವನಿಗೆ ಮಂಗಳವಾಗಲಿ! ಮಹೋನ್ನತದಲ್ಲಿ ದೇವರಿಗೆ ಜಯವಾಗಲಿ!” ಎಂದು ಹರ್ಷೋದ್ಗಾರ ಮಾಡುತ್ತಿದ್ದರು.
10 : ಹೀಗೆ ಯೇಸು ಜೆರುಸಲೇಮನ್ನು ಪ್ರವೇಶಿಸಿದಾಗ ನಗರಕ್ಕೆ ನಗರವೇ ಕಲಕಲಗೊಂಡಿತು. ಜನರು “ಯಾರಿವರು?” ಎಂದು ವಿಚಾರಿಸಲಾರಂಭಿಸಿದರು.
11 : “ಇವರು ಗಲಿಲೇಯಕ್ಕೆ ಸೇರಿದ ನಜರೇತಿನ ಪ್ರವಾದಿ-ಯೇಸು,” ಎಂದು ಮಾರ್ದನಿಸಿತು ಜನರ ಗುಂಪು.
12 : ಯೇಸುಸ್ವಾಮಿ ಮಹಾದೇವಾಲಯಕ್ಕೆ ಹೋದರು. ಅಲ್ಲಿ ಮಾರುತ್ತಿದ್ದವರನ್ನೂ ಕೊಳ್ಳುತ್ತಿದ್ದವರನ್ನೂ ಹೊರಗಟ್ಟಿದರು. ನಾಣ್ಯ ವಿನಿಮಯ ಮಾಡುತ್ತಿದ್ದ ವ್ಯಾಪಾರಿಗಳ ಮೇಜುಗಳನ್ನು ಕೆಡವಿದರು. ಪಾರಿವಾಳಗಳನ್ನು ಮಾರುತ್ತಿದ್ದವರ ಮಣೆಗಳನ್ನು ಉರುಳಿಸಿದರು.
13 : ಅವರನ್ನು ಉದ್ದೇಶಿಸಿ, “ ‘ಪ್ರಾರ್ಥನಾಲಯವೀ ನನ್ನ ಆಲಯ’ ಎಂದು ಪವಿತ್ರ ಗ್ರಂಥದಲ್ಲೇ ಲಿಖಿತವಾಗಿದೆ. ನೀವಾದರೋ ಇದನ್ನು ಕಳ್ಳಕಾಕರ ಗುಹೆಯನ್ನಾಗಿಸುತ್ತಿದ್ದೀರಿ,” ಎಂದು ಎಚ್ಚರಿಸಿದರು.
14 : ದೇವಾಲಯದಲ್ಲಿ ತಮ್ಮ ಬಳಿಗೆ ಬಂದ ಕುರುಡರನ್ನೂ ಕುಂಟರನ್ನೂ ಯೇಸು ಸ್ವಸ್ಥಪಡಿಸಿದರು.
15 : ಅವರು ಮಾಡಿದ ಅತಿಶಯ ಕಾರ್ಯಗಳನ್ನು ಮುಖ್ಯ ಯಾಜಕರು ಹಾಗೂ ಧರ್ಮಶಾಸ್ತ್ರಿಗಳು ನೋಡಿದರು. ದೇವಾಲಯದಲ್ಲಿ ಮಕ್ಕಳು, ‘ದಾವೀದ ಕುಲಪುತ್ರನಿಗೆ ಜಯವಾಗಲಿ’ ಎಂದು ಘೋಷಿಸುವುದನ್ನು ಕೇಳಿದರು.
16 : “ಮಕ್ಕಳು ಹೇಳುವುದು ನಿನಗೆ ಕೇಳಿಸುತ್ತಿದೆಯೋ?” ಎಂದು ಕೋಪಾವೇಶದಿಂದ ಯೇಸುವನ್ನು ಪ್ರಶ್ನಿಸಿದರು. “ಹೌದು, ಕೇಳಿಸುತ್ತದೆ; ‘ಬಾಲಬಾಲೆಯರ ಬಾಯಿಂದಲೂ ಮೊಲೆಗೂಸುಗಳ ನಾಲಿಗೆಯಿಂದಲೂ ನಿಮಗೆ ಸರ್ವಸ್ತುತಿ ಸಲ್ಲುವಂತೆ ಮಾಡಿದ್ದೀರಿ’ ಎಂಬ ವಾಕ್ಯವನ್ನು ನೀವು ಪವಿತ್ರಗ್ರಂಥದಲ್ಲಿ ಎಂದೂ ಓದಿಲ್ಲವೇ?” ಎಂದು ಉತ್ತರಿಸಿದರು.
17 : ಅನಂತರ ಅವರನ್ನು ಬಿಟ್ಟು ಪಟ್ಟಣದಿಂದ ಹೊರಟರು. ಬೆಥಾನಿಯಕ್ಕೆ ಬಂದು ರಾತ್ರಿಯನ್ನು ಅಲ್ಲೇ ಕಳೆದರು.
18 : ಮಾರನೆಯ ದಿನ ಬೆಳಿಗ್ಗೆ ಯೇಸುಸ್ವಾಮಿ ಪುನಃ ಪಟ್ಟಣಕ್ಕೆ ಬರುತ್ತಿದ್ದಾಗ ಅವರಿಗೆ ಹಸಿವಾಯಿತು.
19 : ದಾರಿಯ ಪಕ್ಕದಲ್ಲಿ ಒಂದು ಅಂಜೂರದ ಮರ ಕಣ್ಣಿಗೆ ಬಿದ್ದಿತು. ಹತ್ತಿರಕ್ಕೆ ಹೋಗಿ ನೋಡುವಾಗ ಅದರಲ್ಲಿ ಬರೀ ಎಲೆಗಳೇ ಹೊರತು ಮತ್ತೇನೂ ಕಾಣಲಿಲ್ಲ. ಯೇಸು ಆ ಮರಕ್ಕೆ, “ಇನ್ನು ಮುಂದೆ ನೀನೆಂದಿಗೂ ಹಣ್ಣು ಬಿಡದಂತಾಗಲಿ”, ಎಂದರು. ಅದೇ ಕ್ಷಣದಲ್ಲಿ ಆ ಮರ ಒಣಗಿ ಹೋಯಿತು.
20 : ಇದನ್ನು ನೋಡಿ ಶಿಷ್ಯರು ನಿಬ್ಬೆರಗಾದರು. “ಈ ಅಂಜೂರದ ಮರ ಇಷ್ಟು ಬೇಗನೆ ಹೇಗೆ ಒಣಗಿಹೋಯಿತು?” ಎಂದು ಕೇಳಿದರು.
21 : ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ನಾನು ನಿಮಗೆ ಖಂಡಿತವಾಗಿ ಹೇಳುತ್ತೇನೆ: ನೀವು ಸಂಶಯಪಡದೆ ವಿಶ್ವಾಸಿಸಿದರೆ ಈ ಅಂಜೂರದ ಮರಕ್ಕೆ ನಾನು ಏನು ಮಾಡಿದೆನೋ ನೀವೂ ಅಂತೆಯೇ ಮಾಡುವಿರಿ; ಅದು ಮಾತ್ರವಲ್ಲ, ಈ ಬೆಟ್ಟಕ್ಕೆ, ‘ನೀನು ಇಲ್ಲಿಂದ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು,’ ಎಂದು ನೀವು ಹೇಳಿದರೆ, ಅದು ಹಾಗೆಯೇ ಆಗುವುದು.
22 : ವಿಶ್ವಾಸವಿಟ್ಟು ಏನನ್ನು ಪ್ರಾರ್ಥನೆಯಲ್ಲಿ ನೀವು ಬೇಡಿಕೊಳ್ಳುವಿರೋ, ಅದನ್ನೆಲ್ಲಾ ಪಡೆಯುವಿರಿ,” ಎಂದು ಉತ್ತರಿಸಿದರು. ಇಷ್ಟೆಲ್ಲಾ ಅಧಿಕಾರ ಎಲ್ಲಿಂದ? (ಮಾರ್ಕ 11.27-33, ಲೂಕ 20.1-8)
23 : ತರುವಾಯ ಯೇಸುಸ್ವಾಮಿ ಮಹಾ ದೇವಾಲಯದ ಒಳಕ್ಕೆ ಹೋಗಿ ಅಲ್ಲಿ ಬೋಧನೆ ಮಾಡತೊಡಗಿದರು. ಮುಖ್ಯ ಯಾಜಕರೂ ಪ್ರಜಾಪ್ರಮುಖರೂ ಅವರ ಬಳಿಗೆ ಬಂದು, “ಇದನ್ನೆಲ್ಲಾ ನೀನು ಯಾವ ಅಧಿಕಾರದಿಂದ ಮಾಡುತ್ತಿರುವೆ? ನಿನಗೆ ಈ ಅಧಿಕಾರವನ್ನು ಕೊಟ್ಟವರಾರು?” ಎಂದು ಪ್ರಶ್ನಿಸಿದರು.
24 : ಅದಕ್ಕೆ ಯೇಸು, “ನಾನು ನಿಮಗೆ ಒಂದು ಪ್ರಶ್ನೆ ಕೇಳುತ್ತೇನೆ; ಅದಕ್ಕೆ ನೀವು ಉತ್ತರಕೊಟ್ಟರೆ ನಾನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತಿದ್ದೇನೆಂದು ನಿಮಗೆ ತಿಳಿಸುತ್ತೇನೆ.
25 : ‘ಸ್ನಾನದೀಕ್ಷೆ ಕೊಡುವ ಅಧಿಕಾರ ಯೊವಾನ್ನನಿಗೆ ಎಲ್ಲಿಂದ ಬಂದಿತು? ದೇವರಿಂದಲೋ, ಮನುಷ್ಯರಿಂದಲೋ?’ ” ಎಂದು ಕೇಳಿದರು.
26 : ಅದಕ್ಕೆ ಅವರು ತಮ್ಮತಮ್ಮೊಳಗೇ ಹೀಗೆಂದು ತರ್ಕ ಮಾಡಲಾರಂಭಿಸಿದರು: “ದೇವರಿಂದ ಬಂತು ಎಂದು ಉತ್ತರಿಸಿದರೆ, ‘ಹಾಗಾದರೆ ನೀವೇಕೆ ಆತನನ್ನು ನಂಬಲಿಲ್ಲ?’ ಎಂದು ಕೇಳುವನು. ‘ಮನುಷ್ಯರಿಂದ ಬಂತು’ ಎಂದು ಹೇಳಿದೆವಾದರೆ ಜನಸಮೂಹಕ್ಕೆ ನಾವು ಭಯಪಡಬೇಕಾಗಿದೆ. ಏಕೆಂದರೆ ಯೊವಾನ್ನನು ಒಬ್ಬ ಪ್ರವಾದಿಯೆಂದು ಸರ್ವರೂ ಸನ್ಮಾನಿಸುತ್ತಾರೆ” ಎಂದುಕೊಂಡರು.
27 : ಬಳಿಕ ಬಂದು, “ನಮಗೆ ಗೊತ್ತಿಲ್ಲ,” ಎಂದು ಯೇಸುವಿಗೆ ಉತ್ತರಕೊಟ್ಟರು. ಆಗ ಯೇಸು, “ಹಾಗಾದರೆ, ನಾನು ಕೂಡ ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದರು. ಆಡದೆ ಮಾಡುವವನು ಉತ್ತಮ
28 : “ಈ ಬಗ್ಗೆ ನಿಮಗೇನು ಅನಿಸುತ್ತದೆ? ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು. ಒಮ್ಮೆ ಆತ ಮೊದಲನೆಯ ಮಗನ ಹತ್ತಿರ ಬಂದು, ‘ಮಗನೇ, ಈ ಹೊತ್ತು ದ್ರಾಕ್ಷಿತೋಟಕ್ಕೆ ಹೋಗಿ ಕೆಲಸ ಮಾಡು’ ಎಂದ.
29 : ಅದಕ್ಕೆ ಅವನು, ‘ನಾನು ಹೋಗುವುದಿಲ್ಲ’ ಎಂದು ಉತ್ತರವಿತ್ತ. ಆದರೂ ಅನಂತರ ಪಶ್ಚಾತ್ತಾಪಪಟ್ಟು ಅವನು ತೋಟಕ್ಕೆ ಹೋದ.
30 : ತಂದೆ ಎರಡನೆಯ ಮಗನ ಹತ್ತಿರ ಹೋಗಿ ಅಂತೆಯೇ ತೋಟಕ್ಕೆ ಹೋಗಲು ಹೇಳಿದ. ಅವನು, ‘ಇಗೋ, ಹೋಗುತ್ತೇನಪ್ಪಾ’ ಎಂದು ಹೇಳಿದ. ಆದರೆ ಹೋಗಲೇ ಇಲ್ಲ.
31 : ಇವರಿಬ್ಬರಲ್ಲಿ ತಂದೆಯ ಇಷ್ಟದಂತೆ ನಡೆದವನು ಯಾರು?” ಎಂದು ಯೇಸು ಕೇಳಿದರು. “ಮೊದಲನೆಯ ಮಗನೇ,” ಎಂದು ಉತ್ತರಿಸಿದರು ಅವರು. ಆಗ ಯೇಸುಸ್ವಾಮಿ, “ಸುಂಕದವರೂ ವೇಶ್ಯೆಯರೂ ನಿಮಗಿಂತ ಮೊದಲೇ ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವರು ಎಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ.
32 : ಸ್ನಾನಿಕ ಯೊವಾನ್ನನು ಧರ್ಮಮಾರ್ಗವನ್ನು ತೋರಿಸಲು ಬಂದನು. ನೀವು ಆತನನ್ನು ನಂಬಲಿಲ್ಲ. ಆದರೆ ಸುಂಕದವರೂ ವೇಶ್ಯೆಯರೂ ಆತನನ್ನು ನಂಬಿದರು. ಇದನ್ನು ಕಂಡ ಮೇಲೂ ನೀವು ಪಶ್ಚಾತ್ತಾಪ ಪಡಲಿಲ್ಲ, ಯೊವಾನ್ನನನ್ನು ನಂಬಲೂ ಇಲ್ಲ.
33 : “ಇನ್ನೊಂದು ಸಾಮತಿಗೆ ಕಿವಿಗೊಡಿ: ಒಬ್ಬ ಯಜಮಾನ ಒಂದು ದ್ರಾಕ್ಷಿತೋಟ ಮಾಡಿಸಿದ. ಅದರ ಸುತ್ತ ಬೇಲಿಯನ್ನು ಹಾಕಿಸಿದ. ದ್ರಾಕ್ಷಾರಸವನ್ನು ತೆಗೆಯಲು ಅಲೆಯನ್ನು ಹೂಡಿಸಿ, ಕಾವಲಿಗಾಗಿ ಅಟ್ಟಣೆಯನ್ನು ಕಟ್ಟಿಸಿದ. ಅನಂತರ ಅದನ್ನು ಗೇಣಿದಾರರಿಗೆ ವಹಿಸಿ ಹೊರನಾಡಿಗೆ ಹೊರಟುಹೋದ.
34 : ಫಲಕೊಡುವ ಕಾಲ ಹತ್ತಿರವಾದಾಗ, ತನಗೆ ಬರಬೇಕಾದ ಪಾಲನ್ನು ತರುವುದಕ್ಕಾಗಿ ಆಳುಗಳನ್ನು ಗೇಣಿದಾರರ ಬಳಿಗೆ ಕಳುಹಿಸಿದ.
35 : ಇವರು ಆ ಆಳುಗಳ ಮೇಲೆ ಬಿದ್ದು ಒಬ್ಬನನ್ನು ಬಡಿದರು, ಇನ್ನೊಬ್ಬನನ್ನು ಕಡಿದರು, ಮತ್ತೊಬ್ಬನ ಮೇಲೆ ಕಲ್ಲು ತೂರಿದರು.
36 : ತೋಟದ ಯಜಮಾನ ಮೊದಲಿಗಿಂತಲೂ ಹೆಚ್ಚು ಆಳುಗಳನ್ನು ಕಳುಹಿಸಿದ. ಅವರಿಗೂ ಅದೇ ಗತಿ ಆಯಿತು.
37 : ಕಟ್ಟಕಡೆಗೆ ಯಜಮಾನ, ‘ನನ್ನ ಮಗನಿಗೆ ಇವರು ಮರ್ಯಾದೆ ಕೊಟ್ಟೇಕೊಡುವರು’ ಎಂದುಕೊಂಡು ತನ್ನ ಮಗನನ್ನೇ ಕಳುಹಿಸಿದ.
38 : ಆದರೆ ಗೇಣಿದಾರರು ಮಗನನ್ನು ಕಂಡೊಡನೇ, ‘ಈ ತೋಟಕ್ಕೆ ಇವನೇ ಉತ್ತರಾಧಿಕಾರಿ; ಬನ್ನಿ, ಇವನನ್ನು ಮುಗಿಸಿಬಿಡೋಣ. ಇವನಿಗೆ ಬರುವ ಸೊತ್ತನ್ನು ನಮ್ಮದಾಗಿಸಿಕೊಳ್ಳೋಣ,’ ಎಂದು ತಮ್ಮತಮ್ಮಲ್ಲೇ ಒಳಸಂಚು ಮಾಡಿಕೊಂಡರು.
39 : ಅಂತೆಯೇ ಅವನನ್ನು ಹಿಡಿದು, ತೋಟದಿಂದ ಹೊರಕ್ಕೆ ದಬ್ಬಿಕೊಂಡು ಹೋಗಿ, ಕೊಂದುಹಾಕಿದರು.
40 : “ಈಗ ನೀವೇ ಹೇಳಿ: ತೋಟದ ಯಜಮಾನ ಬಂದಾಗ ಆ ಗೇಣಿದಾರರರಿಗೆ ಏನು ಮಾಡುವನು?” ಎಂದು ಯೇಸು ಕೇಳಿದರು.
41 : “ಆ ಕೇಡಿಗರನ್ನು ಕ್ರೂರವಾಗಿ ಸಂಹರಿಸುವನು. ತರುವಾಯ ಕಾಲಕಾಲಕ್ಕೆ ಸರಿಯಾಗಿ ಪಾಲನ್ನು ಸಲ್ಲಿಸುವ ಬೇರೆಯವರಿಗೆ ತೋಟವನ್ನು ಗೇಣಿಗೆ ಕೊಡುವನು,” ಎಂದು ಅಲ್ಲಿದ್ದವರು ಉತ್ತರಕೊಟ್ಟರು.
42 : ಬಳಿಕ ಯೇಸು ಇಂತೆಂದರು: “ ‘ಮನೆ ಕಟ್ಟುವವರು ಬೇಡವೆಂದು ಬಿಸಾಡಿದ ಆ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು! ಸರ್ವೇಶ್ವರನಿಂದಲೇ ಆದ ಈ ಕಾರ್ಯ ನಮ್ಮ ಕಣ್ಣಿಗೆ ಅದೆಂಥ ಆಶ್ಚರ್ಯ!’ ಎಂಬ ವಾಕ್ಯವನ್ನು ನೀವು ಪವಿತ್ರ ಗ್ರಂಥದಲ್ಲಿ ಓದಿಲ್ಲವೆ?
43 : ಆದುದರಿಂದ ನಾನು ನಿಮಗೆ ಹೇಳುತ್ತೇನೆ, ‘ದೇವರ ಸಾಮ್ರಾಜ್ಯವನ್ನು ನಿಮ್ಮಿಂದ ಕಿತ್ತುಕೊಂಡು ತಕ್ಕ ಫಲಕೊಡುವ ಜನತೆಗೆ ನೀಡಲಾಗುವುದು.
44 : ಅಷ್ಟೇ ಅಲ್ಲದೆ, ಆ ಕಲ್ಲಿನ ಮೇಲೆ ಬೀಳುವವನು ಛಿದ್ರಛಿದ್ರನಾಗುವನು. ಯಾವನ ಮೇಲೆ ಆ ಕಲ್ಲು ಬೀಳುವುದೋ ಅವನು ಜಜ್ಜಿ ಹೋಗುವನು’.”
45 : ಮುಖ್ಯ ಯಾಜಕರೂ ಫರಿಸಾಯರೂ ಸ್ವಾಮಿ ಹೇಳಿದ ಸಾಮತಿಗಳನ್ನು ಕೇಳಿ, ‘ಇವನು ನಮ್ಮನ್ನು ಕುರಿತೇ ಹೀಗೆ ಮಾತನಾಡುತ್ತಿದ್ದಾನೆ,’ ಎಂದು ಅರ್ಥ ಮಾಡಿಕೊಂಡರು. ಯೇಸುವನ್ನು ಹಿಡಿದು ಬಂಧಿಸಲು ಯತ್ನಿಸಿದರು.
46 : ಆದರೆ ಜನಸಮೂಹಕ್ಕೆ ಭಯಪಟ್ಟರು. ಏಕೆಂದರೆ, ಜನರು ಯೇಸುವನ್ನು ಪ್ರವಾದಿ ಎಂದು ಸನ್ಮಾನಿಸುತ್ತಿದ್ದರು.

Holydivine