Mathew - Chapter 26
Holy Bible

1 : ಇದನ್ನೆಲ್ಲಾ ಬೋಧಿಸಿ ಆದಮೇಲೆ ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಉದ್ದೇಶಿಸಿ,
2 : “ನಿಮಗೆ ಗೊತ್ತಿರುವ ಹಾಗೆ ಪಾಸ್ಕ ಹಬ್ಬಕ್ಕೆ ಇನ್ನು ಎರಡು ದಿನಗಳಿವೆ. ಆಗ ನರಪುತ್ರನನ್ನು ಶಿಲುಬೆಗೇರಿಸಲು ಹಿಡಿದೊಪ್ಪಿಸುವರು,” ಎಂದರು.
3 : ಇತ್ತ ಮುಖ್ಯ ಯಾಜಕರು ಮತ್ತು ಪ್ರಜಾ ಪ್ರಮುಖರು ‘ಕಾಯಫ’ ಎಂಬ ಪ್ರಧಾನ ಯಾಜಕನ ಭವನದಲ್ಲಿ ಒಟ್ಟುಗೂಡಿದರು.
4 : ಯೇಸುವನ್ನು ಉಪಾಯದಿಂದ ಹಿಡಿದು ಕೊಲ್ಲಿಸುವುದಕ್ಕೆ ಸಮಾಲೋಚಿಸಿಕೊಂಡರು.
5 : ಆದರೆ, ‘ಹಬ್ಬದ ಸಂದರ್ಭದಲ್ಲಿ ನಾವು ಈ ಕಾರ್ಯವನ್ನು ಮಾಡಬಾರದು. ಏಕೆಂದರೆ ಜನರು ದಂಗೆಯೆದ್ದಾರು,’ ಎಂದೂ ಮಾತನಾಡಿಕೊಂಡರು. ಬೆಥಾನಿಯದಲ್ಲಿ ಅಭ್ಯಂಜನ (ಮಾರ್ಕ 14.3-9; ಯೊವಾ. 12.1-8)
6 : ಅಂದು ಯೇಸು ಬೆಥಾನಿಯದಲ್ಲಿ ಕುಷ್ಠರೋಗಿ ಸಿಮೋನನ ಮನೆಯಲ್ಲಿದ್ದರು.
7 : ಆಗ ಮಹಿಳೆಯೊಬ್ಬಳು ಅಮೃತಶಿಲೆಯ ಭರಣಿಯ ತುಂಬ ಅತ್ಯಮೂಲ್ಯವಾದ ಸುಗಂಧತೈಲವನ್ನು ತೆಗೆದುಕೊಂಡು ಅಲ್ಲಿಗೆ ಬಂದಳು. ಊಟಕ್ಕೆ ಕುಳಿತಿದ್ದ ಯೇಸುವಿನ ತಲೆಯ ಮೇಲೆ ಆ ತೈಲವನ್ನು ಸುರಿದಳು.
8 : ಇದನ್ನು ಕಂಡ ಶಿಷ್ಯರು ಸಿಟ್ಟಿಗೆದ್ದರು. “ಏಕೆ ಇಷ್ಟೊಂದು ವ್ಯರ್ಥ?
9 : ಈ ತೈಲವನ್ನು ಅಧಿಕ ಬೆಲೆಗೆ ಮಾರಿ ಬಂದ ಹಣವನ್ನು ಬಡವರಿಗೆ ಕೊಡಬಹುದಿತ್ತಲ್ಲಾ,” ಎಂದರು.
10 : ಇದನ್ನು ಅರಿತುಕೊಂಡ ಯೇಸು ಶಿಷ್ಯರಿಗೆ, “ಈ ಮಹಿಳೆಗೇಕೆ ಕಿರುಕುಳ ಕೊಡುತ್ತೀರಿ? ಈಕೆ ನನಗೊಂದು ಸತ್ಕಾರ್ಯವನ್ನೇ ಮಾಡಿದ್ದಾಳೆ.
11 : ಬಡಬಗ್ಗರು ನಿಮ್ಮ ಸಂಗಡ ಯಾವಾಗಲೂ ಇರುತ್ತಾರೆ. ಆದರೆ ನಾನು ನಿಮ್ಮ ಸಂಗಡ ಯಾವಾಗಲೂ ಇರುವುದಿಲ್ಲ.
12 : ಈಕೆ ಈ ತೈಲವನ್ನು ನನ್ನ ದೇಹದ ಮೇಲೆ ಸುರಿದು ನನ್ನ ಶವಸಂಸ್ಕಾರಕ್ಕೆ ಸಿದ್ಧಮಾಡಿದ್ದಾಳೆ.
13 : ಜಗತ್ತಿನಾದ್ಯಂತ, ಎಲ್ಲೆಲ್ಲಿ ಶುಭಸಂದೇಶ ಪ್ರಕಟವಾಗುವುದೋ ಅಲ್ಲೆಲ್ಲಾ ಈ ಸತ್ಕಾರ್ಯವನ್ನು ಈಕೆಯ ಸವಿನೆನಪಿಗಾಗಿ ಸಾರಲಾಗುವುದು. ಇದು ನಿಶ್ಚಯ,” ಎಂದರು. ಯೂದನ ಗುರುದ್ರೋಹ (ಮಾರ್ಕ 14.10-11; ಲೂಕ 22.3-6)
14 : ಇದಾದ ಮೇಲೆ, ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತಿನ ಯೂದ ಎಂಬಾತ ಮುಖ್ಯ ಯಾಜಕರ ಬಳಿಗೆ ಹೋದನು.
15 : “ನಿಮಗೆ ನಾನು ಯೇಸುವನ್ನು ಹಿಡಿದುಕೊಟ್ಟರೆ ನನಗೇನು ಕೊಡುವಿರಿ?” ಎಂದು ಅವರನ್ನು ವಿಚಾರಿಸಿದನು. ಅವರೋ, ಅವನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ನಿಗದಿಮಾಡಿ ಕೊಟ್ಟರು.
16 : ಆ ಗಳಿಗೆಯಿಂದ ಯೇಸುವನ್ನು ಹಿಡಿದೊಪ್ಪಿಸಲು ಅವನು ಸಂದರ್ಭ ಕಾಯುತ್ತಾ ಇದ್ದನು.
17 : ಅಂದು ಹುಳಿರಹಿತ ರೊಟ್ಟಿಯ ಹಬ್ಬದ ಮೊದಲನೆಯ ದಿನ. ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, “ತಮಗೆ ಪಾಸ್ಕ ಭೋಜನವನ್ನು ನಾವು ಎಲ್ಲಿ ಸಿದ್ಧಪಡಿಸಬೇಕೆನ್ನುತ್ತೀರಿ?” ಎಂದು ಕೇಳಿದರು.
18 : ಅದಕ್ಕೆ ಅವರು, “ಪಟ್ಟಣದಲ್ಲಿ ನಾನು ಸೂಚಿಸುವಂಥವನ ಬಳಿಗೆ ಹೋಗಿರಿ, ‘ನನ್ನ ಕಾಲ ಸವಿೂಪಿಸಿತು, ಪಾಸ್ಕವನ್ನು ನನ್ನ ಶಿಷ್ಯರ ಸಮೇತ ನಿನ್ನ ಮನೆಯಲ್ಲಿಯೇ ಆಚರಿಸಬೇಕೆಂದಿದ್ದೇನೆ’; ಇದನ್ನು ನಮ್ಮ ಗುರುವೇ ಹೇಳಿಕಳುಹಿಸಿದ್ದಾರೆ ಎಂದು ಅವನಿಗೆ ತಿಳಿಸಿರಿ,” ಎಂದರು.
19 : ಯೇಸು ಸೂಚಿಸಿದಂತೆಯೇ ಶಿಷ್ಯರು ಹೋಗಿ ಪಾಸ್ಕ ಭೋಜನವನ್ನು ತಯಾರಿಸಿದರು.
20 : ಸಂಜೆಯಾಯಿತು. ಯೇಸುಸ್ವಾಮಿ ಹನ್ನೆರಡು ಮಂದಿ ಶಿಷ್ಯರ ಸಂಗಡ ಊಟಕ್ಕೆ ಕುಳಿತರು.
21 : ಅವರೆಲ್ಲರೂ ಊಟಮಾಡುತ್ತಿದ್ದಾಗ ಯೇಸು, “ನಿಮ್ಮಲ್ಲೇ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ, ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ,” ಎಂದರು.
22 : ಶಿಷ್ಯರು ಬಹಳ ಕಳವಳಗೊಂಡರು. ಒಬ್ಬರಾದ ಮೇಲೊಬ್ಬರು, “ಸ್ವಾವಿೂ, ನಾನೋ? ನಾನೋ?” ಎಂದು ಕೇಳತೊಡಗಿದರು.
23 : ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಊಟದ ಬಟ್ಟಲಲ್ಲಿ ನನ್ನೊಡನೆ ಕೈ ಅದ್ದಿ ಉಣ್ಣುವವನೇ ನನಗೆ ದ್ರೋಹ ಬಗೆಯುತ್ತಾನೆ.
24 : ನರಪುತ್ರನೇನೋ ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ ಹೊರಟುಹೋಗುತ್ತಾನೆ, ನಿಜ. ಆದರೆ ಅಯ್ಯೋ, ನರಪುತ್ರನಿಗೆ ದ್ರೋಹ ಬಗೆಯುವವನ ದುರ್ಗತಿಯನ್ನು ಏನೆಂದು ಹೇಳಲಿ! ಅವನು ಹುಟ್ಟದೇ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು!” ಎಂದರು.
25 : ಗುರುದ್ರೋಹಿಯಾದ ಯೂದನು ಆಗ, “ಗುರುವೇ, ಅವನು ನಾನಲ್ಲ ತಾನೇ?” ಎಂದನು. ಅದಕ್ಕೆ ಯೇಸು, “ಅದು ನಿನ್ನ ಬಾಯಿಂದಲೇ ಬಂದಿದೆ,” ಎಂದರು.
26 : ಅವರೆಲ್ಲರೂ ಊಟ ಮಾಡುತ್ತಿರುವಾಗ ಯೇಸುಸ್ವಾಮಿ ರೊಟ್ಟಿಯನ್ನು ತೆಗೆದುಕೊಂಡು ದೈವಸ್ತುತಿ ಮಾಡಿ, ಅದನ್ನು ಮುರಿದು, ಶಿಷ್ಯರಿಗೆ ಕೊಡುತ್ತಾ, “ಇದನ್ನು ತೆಗೆದುಕೊಂಡು ಭುಜಿಸಿರಿ, ಇದು ನನ್ನ ಶರೀರ,” ಎಂದರು.
27 : ಬಳಿಕ ಪಾನಪಾತ್ರೆಯನ್ನು ತೆಗೆದುಕೊಂಡು, ದೇವರಿಗೆ ಕೃತಜ್ಞತಾ ಸ್ತೋತ್ರವನ್ನು ಸಲ್ಲಿಸಿ, ಅದನ್ನು ಅವರಿಗೆ ಕೊಡುತ್ತಾ ಇಂತೆಂದರು: “ಇದರಲ್ಲಿ ಇರುವುದನ್ನು ಎಲ್ಲರೂ ಪಾನಮಾಡಿ;
28 : ಇದು ನನ್ನ ರಕ್ತ, ಸಮಸ್ತ ಜನರ ಪಾಪಕ್ಷಮೆಗಾಗಿ ಸುರಿಸಲಾಗುವ ಒಡಂಬಡಿಕೆಯ ರಕ್ತ.
29 : ನಾನು ನನ್ನ ಪಿತನ ಸಾಮ್ರಾಜ್ಯದಲ್ಲಿ ದ್ರಾಕ್ಷಾರಸ ನಿಮ್ಮ ಸಂಗಡ ಹೊಸದಾಗಿ ಕುಡಿಯುವ ದಿನದವರೆಗೂ ಅದನ್ನು ಇನ್ನು ಕುಡಿಯುವುದಿಲ್ಲ ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು. ವಿಶ್ವಾಸದ್ರೋಹದ ಮುನ್ಸೂಚನೆ (ಮಾರ್ಕ 14.27-31; ಲೂಕ 22.31-34; ಯೊವಾ. 13.36-38)
30 : ಬಳಿಕ ಅವರೆಲ್ಲರು ಕೀರ್ತನೆ ಹಾಡಿ, ಓಲಿವ್ ಗುಡ್ಡಕ್ಕೆ ಹೊರಟರು.
31 : ಆಗ ಯೇಸು ತಮ್ಮ ಶಿಷ್ಯರಿಗೆ, “ ‘ ಕುರಿಗಾಹಿಯನ್ನು ಕೊಲ್ಲುವೆನು ಕುರಿಗಳು ಚದರುವುವು,’ ಎಂದು ಪವಿತ್ರ ಗ್ರಂಥದಲ್ಲೇ ಬರೆದಿದೆ. ಅದರಂತೆಯೇ ನೀವೆಲ್ಲರೂ ಇದೇ ರಾತ್ರಿ ನನ್ನಲ್ಲಿ ವಿಶ್ವಾಸ ಕಳೆದುಕೊಂಡು ಹಿಮ್ಮೆಟ್ಟುವಿರಿ.
32 : ನಾನಾದರೋ ಪುನರುತ್ಥಾನಹೊಂದಿ ನಿಮಗಿಂತ ಮುಂದಾಗಿ ಗಲಿಲೇಯಕ್ಕೆ ಹೋಗುವೆನು,” ಎಂದರು.
33 : ಇದನ್ನು ಕೇಳಿದ ಪೇತ್ರನು, “ಎಲ್ಲರು ತಮ್ಮಲ್ಲಿ ವಿಶ್ವಾಸ ಕಳೆದುಕೊಂಡು ಹಿಮ್ಮೆಟ್ಟಿದರೂ ನಾನು ಮಾತ್ರ ಎಂದಿಗೂ ಹಾಗೆ ಮಾಡುವುದಿಲ್ಲ” ಎಂದು ಸಾರಿ ಹೇಳಿದನು.
34 : ಅದಕ್ಕೆ ಯೇಸು, “ಇದೇ ರಾತ್ರಿ ಕೋಳಿ ಕೂಗುವ ಮೊದಲೇ ‘ಆತನನ್ನು ನಾನರಿಯೆ’ ಎಂದು ನೀನು ಮೂರು ಬಾರಿ ನನ್ನನ್ನು ನಿರಾಕರಿಸುವೆ; ಇದು ಖಂಡಿತ,” ಎಂದರು.
35 : ಆದರೆ ಪೇತ್ರನು, “ನಾನು ತಮ್ಮೊಡನೆ ಸಾಯಬೇಕಾಗಿ ಬಂದರೂ ಸರಿಯೆ, ತಮ್ಮನ್ನು ಮಾತ್ರ ನಿರಾಕರಿಸೆನು,” ಎಂದು ನುಡಿದನು. ಅದರಂತೆಯೇ ಉಳಿದ ಶಿಷ್ಯರೂ ದನಿಗೂಡಿಸಿದರು. ಗೆತ್ಸೆಮನಿ ತೋಪಿನಲ್ಲಿ ಪ್ರಾರ್ಥನೆ (ಮಾರ್ಕ 14.32-42; ಲೂಕ 22.39-46)
36 : ಅನಂತರ ಯೇಸುಸ್ವಾಮಿ ಅವರೊಡನೆ ಗೆತ್ಸೆಮನೆ ಎಂಬ ತೋಪಿಗೆ ಬಂದರು. ಅಲ್ಲಿ ಶಿಷ್ಯರಿಗೆ, “ನಾನು ಅತ್ತ ಹೋಗಿ ಪ್ರಾರ್ಥನೆ ಮಾಡಿ ಬರುವವರೆಗೂ ನೀವು ಇಲ್ಲೇ ಕುಳಿತಿರಿ,” ಎಂದರು.
37 : ಬಳಿಕ ಪೇತ್ರನನ್ನೂ ಜೆಬೆದಾಯನ ಇಬ್ಬರು ಕುಮಾರರನ್ನೂ ತಮ್ಮೊಂದಿಗೆ ಕರೆದುಕೊಂಡು ಮುಂದಕ್ಕೆ ಹೋದರು. ಅಲ್ಲಿ ಸ್ವಾಮಿ ಚಿಂತಾಕ್ರಾಂತರಾದರು, ದುಃಖಭರಿತರಾದರು.
38 : “ನನ್ನ ಮನೋವೇದನೆ ಪ್ರಾಣಹಿಂಡುವಷ್ಟು ತೀವ್ರವಾಗಿದೆ. ನೀವು ಇಲ್ಲೇ ಇದ್ದು ನನ್ನೊಡನೆ ಎಚ್ಚರವಾಗಿರಿ,” ಎಂದರು.
39 : ಅನಂತರ ಅವರು ಅಲ್ಲಿಂದ ಇನ್ನೂ ಸ್ವಲ್ಪ ಮುಂದಕ್ಕೆ ಹೋಗಿ, ನೆಲದ ಮೇಲೆ ಅಧೋಮುಖವಾಗಿ ಬಿದ್ದು ಪ್ರಾರ್ಥನೆ ಮಾಡಿದರು. “ನನ್ನ ಪಿತನೇ, ಸಾಧ್ಯವಾದರೆ ಈ ಕಷ್ಟದ ಕೊಡವು ನನ್ನಿಂದ ದೂರವಾಗಲಿ, ಆದರೂ ನನ್ನ ಚಿತ್ತದಂತೆ ಅಲ್ಲ, ನಿಮ್ಮ ಚಿತ್ತದಂತೆಯೇ ಆಗಲಿ,” ಎಂದರು.
40 : ಅನಂತರ ಆ ಮೂವರು ಶಿಷ್ಯರ ಬಳಿಗೆ ಬಂದು, ಅವರು ನಿದ್ರಿಸುತ್ತಿರುವುದನ್ನು ಕಂಡರು. ಪೇತ್ರನನ್ನು ಉದ್ದೇಶಿಸಿ, “ಏನಿದು, ಒಂದು ಗಂಟೆಯಾದರೂ ನನ್ನೊಡನೆ ಎಚ್ಚರವಾಗಿರಲು ನಿಮ್ಮಿಂದ ಆಗದೇ ಹೋಯಿತೇ?
41 : ಪ್ರಲೋಭನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥನೆ ಮಾಡಿರಿ. ಆತ್ಮಕ್ಕೇನೋ ಆಸಕ್ತಿ ಇದೆ, ಆದರೆ ದೇಹಕ್ಕೆ ಶಕ್ತಿಸಾಲದು,” ಎಂದರು.
42 : ಎರಡನೆಯ ಬಾರಿ ಹಿಂದಕ್ಕೆ ಹೋಗಿ ಇಂತೆಂದು ಪ್ರಾರ್ಥನೆಮಾಡಿದರು: “ನನ್ನ ಪಿತನೇ, ನಾನು ಸೇವಿಸದ ಹೊರತು ಈ ಕಷ್ಟದ ಕೊಡ ನನ್ನಿಂದ ತೊಲಗದಾದರೆ ಅದು ನಿಮ್ಮ ಚಿತ್ತದಂತೆಯೇ ಆಗಲಿ.”
43 : ಯೇಸು ಮರಳಿ ಆ ಶಿಷ್ಯರ ಬಳಿಗೆ ಬಂದಾಗ ಅವರು ಇನ್ನೂ ನಿದ್ರಾವಸ್ಥೆಯಲ್ಲಿದ್ದರು. ಅವರ ಕಣ್ಣುಗಳು ಭಾರವಾಗಿ ಇದ್ದವು.
44 : ಪುನಃ ಅವರನ್ನು ಬಿಟ್ಟು ಹಿಂದಿರುಗಿ ಮೂರನೆಯ ಬಾರಿ ಅದೇ ಮಾತುಗಳನ್ನು ಹೇಳಿ ಪ್ರಾರ್ಥಿಸಿದರು .
45 : ಅದಾದ ಬಳಿಕ ಶಿಷ್ಯರನ್ನು ಸಮೀಪಿಸಿ, “ನೀವು ಇನ್ನೂ ನಿದ್ರಿಸಿ ವಿಶ್ರಮಿಸುತ್ತಾ ಇರುವಿರೋ? ಸಾಕು, ಸಮಯ ಸಮೀಪಿಸಿಬಿಟ್ಟಿತು. ನರಪುತ್ರನು ದುರ್ಜನರ ಕೈವಶವಾಗಲಿದ್ದಾನೆ.
46 : ಎದ್ದೇಳಿ, ಹೋಗೋಣ. ನನಗೆ ದ್ರೋಹ ಬಗೆಯುವವನು ಹತ್ತಿರವೇ ಇದ್ದಾನೆ, ನೋಡಿ,” ಎಂದರು.
47 : ಯೇಸುಸ್ವಾಮಿ ಇನ್ನೂ ಮಾತನಾಡುತ್ತಿದ್ದ ಹಾಗೆ, ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನು ಅಲ್ಲಿಗೆ ಬಂದನು. ಖಡ್ಗಗಳನ್ನೂ ಲಾಠಿಗಳನ್ನೂ ಹಿಡಿದಿದ್ದ ಒಂದು ದೊಡ್ಡ ಗುಂಪು ಅವನೊಂದಿಗೆ ಇತ್ತು. ಮುಖ್ಯ ಯಾಜಕರೂ ಜನರ ಪ್ರಮುಖರೂ ಅವರನ್ನು ಕಳುಹಿಸಿದ್ದರು.
48 : ‘ನಾನು ಯಾರಿಗೆ ಮುದ್ದಿಡುತ್ತೇನೋ ಆತನೇ ಆ ವ್ಯಕ್ತಿ. ಆತನನ್ನು ಹಿಡಿದುಕೊಳ್ಳಿ,’ ಎಂದು ಆ ಗುರುದ್ರೋಹಿ ಅವರಿಗೆ ಮೊದಲೇ ಸೂಚನೆ ಕೊಟ್ಟಿದ್ದನು.
49 : ಅದರಂತೆಯೇ ಅವನು ಯೇಸುಸ್ವಾಮಿಯ ಸಮೀಪಕ್ಕೆ ನೇರವಾಗಿ ಬಂದು, “ಗುರುವೇ, ನಮಸ್ಕಾರ,” ಎಂದು ಹೇಳುತ್ತಾ ಅವರಿಗೆ ಮುದ್ದಿಟ್ಟನು.
50 : ಯೇಸು ಅವನಿಗೆ, “ಮಿತ್ರಾ, ನೀನು ಮಾಡಬಂದ ಕಾರ್ಯವನ್ನು ಮಾಡಿ ಮುಗಿಸು,” ಎಂದರು. ಆಗ ಆ ಜನರು ಹತ್ತಿರಕ್ಕೆ ಬಂದು, ಯೇಸುವನ್ನು ಹಿಡಿದು ಬಂಧಿಸಿದರು.
51 : ಕೂಡಲೆ ಯೇಸುವಿನ ಸಂಗಡ ಇದ್ದ ಒಬ್ಬನು ತನ್ನ ಖಡ್ಗವನ್ನು ಹಿರಿದು, ಪ್ರಧಾನ ಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕತ್ತರಿಸಿಬಿಟ್ಟನು.
52 : ಆಗ ಯೇಸು ಅವನಿಗೆ, “ನಿನ್ನ ಖಡ್ಗವನ್ನು ಒರೆಗೆ ಹಾಕು. ಖಡ್ಗ ಎತ್ತಿದವರೆಲ್ಲರೂ ಖಡ್ಗದಿಂದಲೇ ಹತರಾಗುವರು.
53 : ನಾನು ನನ್ನ ಪಿತನನ್ನು ಕೇಳಿಕೊಂಡರೆ ಅವರು ತಕ್ಷಣವೇ ಹನ್ನೆರಡು ದಳಗಳಿಗಿಂತಲೂ ಹೆಚ್ಚು ದೇವದೂತರನ್ನು ಕಳಿಸುವುದಿಲ್ಲವೆಂದು ಕೊಂಡೆಯಾ?
54 : ಆದರೆ, ಈ ಪ್ರಕಾರವೇ ಆಗಬೇಕು ಎನ್ನುವ ಪವಿತ್ರ ಗ್ರಂಥದ ವಾಕ್ಯ ನೆರವೇರುವುದಾದರೂ ಹೇಗೆ?” ಎಂದರು.
55 : ಅದೇ ಸಂದರ್ಭದಲ್ಲಿ ಯೇಸುಸ್ವಾಮಿ ಜನರ ಗುಂಪನ್ನು ಉದ್ದೇಶಿಸಿ, “ದರೋಡೆಗಾರನನ್ನು ಹಿಡಿಯುವುದಕ್ಕೋ ಎಂಬಂತೆ ಖಡ್ಗಗಳನ್ನೂ ಲಾಠಿಗಳನ್ನೂ ಹಿಡಿದುಕೊಂಡು ನನ್ನನ್ನು ಬಂಧಿಸಲು ಬರಬೇಕಾಗಿತ್ತೆ? ನಾನು ಪ್ರತಿದಿನವೂ ಮಹಾದೇವಾಲಯದಲ್ಲಿ ಕುಳಿತು ಬೋಧನೆ ಮಾಡುತ್ತಾ ಇದ್ದೆ. ಆಗ ನೀವು ನನ್ನನ್ನು ಬಂಧಿಸಲಿಲ್ಲ.
56 : ಆದರೆ ಪವಿತ್ರ ಗ್ರಂಥದ ಪ್ರವಾದನೆಗಳು ಈಡೇರಲೆಂದೇ ಇದೆಲ್ಲಾ ಜರುಗಿದೆ,” ಎಂದರು. ಆಗ ಶಿಷ್ಯರೆಲ್ಲರೂ ಯೇಸುವನ್ನು ತೊರೆದು ಪಲಾಯನ ಮಾಡಿದರು.
57 : ಬಳಿಕ ಯೇಸುಸ್ವಾಮಿಯನ್ನು ಬಂಧಿಸಿದ್ದವರು ಅವರನ್ನು ಪ್ರಧಾನಯಾಜಕ ಕಾಯಫನ ಬಳಿಗೆ ಕರೆದೊಯ್ದರು.
58 : ಅಲ್ಲಿ ಧರ್ಮಶಾಸ್ತ್ರಿಗಳೂ ಪ್ರಮುಖರೂ ಸಭೆ ಸೇರಿದ್ದರು. ಪೇತ್ರನಾದರೋ ದೂರದಿಂದ ಯೇಸುವನ್ನು ಹಿಂಬಾಲಿಸುತ್ತಿದ್ದನು. ಅವನು ಪ್ರಧಾನ ಯಾಜಕನ ಭವನದವರೆಗೂ ಬಂದು, ಹೊರಾಂಗಣವನ್ನು ಹೊಕ್ಕು ಪಹರೆಯವರ ಜೊತೆ ಕುಳಿತುಕೊಂಡನು. ಇದೆಲ್ಲ ಹೇಗೆ ಕೊನೆಗೊಳ್ಳುವುದೆಂದು ನೋಡಬೇಕೆಂಬ ಉದ್ದೇಶ ಅವನದಾಗಿತ್ತು.
59 : ಇತ್ತ ಮುಖ್ಯ ಯಾಜಕರೂ ಉಚ್ಚನ್ಯಾಯಸಭೆಯ ಸದಸ್ಯರೆಲ್ಲರೂ ಯೇಸುವನ್ನು ಮರಣದಂಡನೆಗೆ ಗುರಿಪಡಿಸುವ ಸಲುವಾಗಿ ಸುಳ್ಳುಸಾಕ್ಷಿಯನ್ನು ಹುಡುಕುತ್ತಿದ್ದರು.
60 : ಹಲವಾರು ಸುಳ್ಳುಸಾಕ್ಷಿಗಳು ಮುಂದೆ ಬಂದರು. ಆದರೂ ಸರಿಯಾದ ಒಂದು ಸಾಕ್ಷ್ಯವೂ ಅವರಿಗೆ ದೊರಕಲಿಲ್ಲ. ಕಡೆಗೆ ಇಬ್ಬರು ಮುಂದೆ ಬಂದು,
61 : “ಮಹಾದೇವಾಲಯವನ್ನು ಕೆಡವಿಬಿಟ್ಟು ಅದನ್ನು ಮೂರು ದಿನಗಳಲ್ಲಿ ಮರಳಿ ಕಟ್ಟುವ ಶಕ್ತಿ ನನಗಿದೆ,’ ಎಂದು ಇವನು ಹೇಳಿದ್ದಾನೆ,” ಎಂದರು.
62 : ಆಗ ಪ್ರಧಾನಯಾಜಕನು ಎದ್ದುನಿಂತು ಯೇಸುವನ್ನು ನೋಡಿ, “ಈ ಜನರು ನಿನಗೆ ವಿರುದ್ಧ ತಂದಿರುವ ಆರೋಪಣೆಗಳನ್ನು ಕೇಳುತ್ತಿರುವೆಯಾ? ಇವುಗಳಿಗೆ ನಿನ್ನ ಉತ್ತರ ಏನು?” ಎಂದು ಪ್ರಶ್ನಿಸಿದನು.
63 : ಆದರೆ ಯೇಸು ಮೌನವಾಗಿದ್ದರು. “ಜೀವಂತ ದೇವರ ಮೇಲೆ ಆಣೆಯಿರಿಸಿ ನಾನು ನಿನ್ನನ್ನು ಕೇಳುತ್ತಿದ್ದೇನೆ, ‘ನೀನು ದೇವರ ಪುತ್ರ ಹಾಗೂ ಅಭಿಷಿಕ್ತನಾದ ಲೋಕೋದ್ಧಾರಕನೋ?’ ನಮಗೆ ಹೇಳು,” ಎಂದನು ಆ ಪ್ರಧಾನಯಾಜಕ.
64 : ಅದಕ್ಕೆ ಯೇಸು, “ಅದು ನಿಮ್ಮ ಬಾಯಿಂದಲೇ ಬಂದಿದೆ; ಮಾತ್ರವಲ್ಲ, ನಾನು ಹೇಳುವುದನ್ನು ಕೇಳಿ: ನರಪುತ್ರನು ಸರ್ವಶಕ್ತ ದೇವರ ಬಲಗಡೆ ಆಸೀನನಾಗಿರುವುದನ್ನೂ ಆಕಾಶದ ಮೇಘಗಳ ಮೇಲೆ ಬರುವುದನ್ನೂ ಇನ್ನು ಮುಂದಕ್ಕೆ ಕಾಣುವಿರಿ,” ಎಂದರು.
65 : ಇದನ್ನು ಕೇಳಿದ್ದೇ ಪ್ರಧಾನಯಾಜಕನು ತನ್ನ ಉಡುಪನ್ನು ಕೋಪದಿಂದ ಹರಿದುಕೊಂಡನು. “ಇವನು ದೇವದೂಷಣೆ ಆಡಿದ್ದಾನೆ. ಇನ್ನು ನಮಗೆ ಸಾಕ್ಷಿಗಳು ಏತಕ್ಕೆ?
66 : ಇವನಾಡಿದ ದೇವದೂಷಣೆಯನ್ನು ನೀವೇ ಕೇಳಿದ್ದೀರಿ. ಈಗ ನಿಮ್ಮ ತೀರ್ಮಾನ ಏನು?” ಎಂದು ಕೇಳಿದನು. ಅವರು, “ಇವನಿಗೆ ಮರಣ ದಂಡನೆ ಆಗಬೇಕು,” ಎಂದು ಉತ್ತರಕೊಟ್ಟರು.
67 : ಬಳಿಕ ಅವರು ಯೇಸುಸ್ವಾಮಿಯ ಮುಖದ ಮೇಲೆ ಉಗುಳಿದರು; ಅವರನ್ನು ಗುದ್ದಿದರು.
68 : ಕೆಲವರು ಅವರ ಕೆನ್ನೆಗೆ ಹೊಡೆದು, “ಎಲೈ ಕ್ರಿಸ್ತಾ, ನಿನ್ನನ್ನು ಹೊಡೆದವರಾರು? ನಮಗೆ ಪ್ರವಾದಿಸಿ ಹೇಳು,” ಎಂದರು.
69 : ಇತ್ತ ಪೇತ್ರನು ಹೊರಾಂಗಣದಲ್ಲಿ ಕುಳಿತಿದ್ದನು. ದಾಸಿಯೊಬ್ಬಳು ಆತನ ಬಳಿಗೆ ಬಂದು, “ನೀನು ಸಹ ಗಲಿಲೇಯದ ಯೇಸುವಿನೊಂದಿಗೆ ಇದ್ದವನು,” ಎಂದಳು.
70 : “ನೀನು ಹೇಳುವುದು ಏನೆಂದು ನನಗೆ ತಿಳಿಯದು,” ಎಂದು ಪೇತ್ರನು ಎಲ್ಲರ ಮುಂದೆ ನಿರಾಕರಿಸಿದನು.
71 : ಆತ ಅಲ್ಲಿಂದ ಎದ್ದು ಹೆಬ್ಬಾಗಿಲ ಬಳಿ ಬಂದಾಗ ಇನ್ನೊಬ್ಬ ದಾಸಿ ಆತನನ್ನು ಕಂಡು, “ಈತ ನಜರೇತಿನ ಯೇಸುವಿನೊಂದಿಗೆ ಇದ್ದವನೇ,” ಎಂದು ಅಲ್ಲಿದ್ದವರಿಗೆ ತಿಳಿಸಿದಳು.
72 : ಪೇತ್ರನು, “ಆ ಮನುಷ್ಯ ಯಾರೋ ನಾನರಿಯೆ,” ಎಂದು ಆಣೆಯಿಟ್ಟು ಇನ್ನೊಮ್ಮೆ ನಿರಾಕರಿಸಿದನು.
73 : ಸ್ವಲ್ಪ ಹೊತ್ತಾದ ಮೇಲೆ ಅಲ್ಲಿ ನಿಂತಿದ್ದವರು ಪೇತ್ರನ ಹತ್ತಿರಕ್ಕೆ ಬಂದು, “ಖಂಡಿತವಾಗಿ ನೀನೂ ಅವರಲ್ಲಿ ಒಬ್ಬನು. ನೀನು ಮಾತನಾಡುವ ರೀತಿಯೇ ನಿನ್ನನ್ನು ತೋರಿಸಿಕೊಡುತ್ತದೆ,” ಎಂದು ಹೇಳಿದರು.
74 : ಆಗ ಪೇತ್ರನು ತನ್ನನ್ನೇ ಶಪಿಸಿಕೊಳ್ಳಲಾರಂಭಿಸಿ, “ಆ ಮನುಷ್ಯನನ್ನು ನಾನು ಖಂಡಿತವಾಗಿ ಅರಿಯೆನು,” ಎಂದು ಆಣೆಯಿಟ್ಟು ಹೇಳಿದನು.
75 : ಆ ಕ್ಷಣವೇ ಕೋಳಿಕೂಗಿತು. “ಕೋಳಿಕೂಗುವ ಮೊದಲೇ, ‘ಆತನನ್ನು ನಾನರಿಯೆ’ನೆಂದು ನನ್ನನ್ನು ಮೂರು ಬಾರಿ ನಿರಾಕರಿಸುವೆ,” ಎಂದ ಸ್ವಾಮಿಯ ನುಡಿ ಪೇತ್ರನ ನೆನಪಿಗೆ ಬಂದಿತು. ಆತನು ಅಲ್ಲಿಂದ ಹೊರಗೆ ಹೋಗಿ, ಬಹಳವಾಗಿ ವ್ಯಥೆಪಟ್ಟು ಅತ್ತನು.

Holydivine