Mathew - Chapter 16
Holy Bible

1 : ತರುವಾಯ ಫರಿಸಾಯರು ಮತ್ತು ಸದ್ದುಕಾಯರು ಯೇಸುಸ್ವಾಮಿಯ ಬಳಿಗೆ ಬಂದರು. ಸ್ವಾಮಿಯನ್ನು ಪರೀಕ್ಷಿಸುವ ದುರುದ್ದೇಶದಿಂದ, "ನೀನು ದೇವರಿಂದ ಬಂದವನೆಂದು ಸೂಚಿಸಲು ಅದ್ಭುತವೊಂದನ್ನು ನಮಗೆ ಮಾಡಿತೋರಿಸು," ಎಂದರು.
2 : ಅದಕ್ಕೆ ಯೇಸು, "ಸಂಜೆಯಾದಾಗ ನೀವು ‘ಹವಾಮಾನವು ಹಿತಕರವಾಗಿರುತ್ತದೆ, ಏಕೆಂದರೆ ಆಕಾಶ ಕೆಂಪಗಿದೆ ಎನ್ನುತ್ತೀರಿ.’ ಬೆಳಗ್ಗೆ, ‘ಈ ದಿನ ಗಾಳಿಮಳೆ ಇರುತ್ತದೆ. ಏಕೆಂದರೆ ಕೆಂಪಾದ ಆಕಾಶದಲ್ಲಿ ಮೋಡಮುಚ್ಚಿದೆ’ ಎನ್ನುತ್ತೀರಿ.
3 : ಆಕಾಶದಲ್ಲಿ ಕಾಣುವ ಲಕ್ಷಣಗಳನ್ನು ನೀವು ಅರ್ಥಮಾಡಿಕೊಳ್ಳಬಲ್ಲಿರಿ; ಆದರೆ ಈಗಿನ ಕಾಲದ ಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ನಿಮ್ಮಿಂದಾಗದು.
4 ಈ ದುಷ್ಟ ಹಾಗೂ ಅಧರ್ಮ ಪೀಳಿಗೆ ಅದ್ಭುತಗಳನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವಲ್ಲದೆ ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು,” ಎಂದು ಹೇಳಿ ಅವರನ್ನು ಬಿಟ್ಟು ಹೋದರು.
5 : ಶಿಷ್ಯರು ಬುತ್ತಿಯನ್ನು ಕಟ್ಟಿಕೊಳ್ಳುವುದನ್ನು ಮರೆತು ಸರೋವರದ ಆಚೆ ದಡಕ್ಕೆ ಬಂದರು.
6 : ಯೇಸುಸ್ವಾಮಿ ಅವರಿಗೆ, "ಎಚ್ಚರಿಕೆ, ಫರಿಸಾಯರ ಹಾಗೂ ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ!" ಎಂದರು.
7 : ತಾವು ರೊಟ್ಟಿ ತಂದಿಲ್ಲವಾದ ಕಾರಣ ಯೇಸು ಹೀಗೆ ಹೇಳುತ್ತಿದ್ದಾರೆಂದು ಶಿಷ್ಯರು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳಲಾರಂಭಿಸಿದರು.
8 : ಇದನ್ನು ಗಮನಿಸಿದ ಯೇಸು, "ಅಲ್ಪ ವಿಶ್ವಾಸಿಗಳೇ, ರೊಟ್ಟಿಯನ್ನು ತಂದಿಲ್ಲವೆಂದು ನಿಮ್ಮ ನಿಮ್ಮಲ್ಲೇ ಚರ್ಚೆ ಏಕೆ?
9 : ಏನು, ನಿಮಗಿನ್ನೂ ಅರಿವಿಲ್ಲವೆ? ಐದು ರೊಟ್ಟಿಗಳಿಂದ ನಾನು ಐದುಸಾವಿರ ಜನರನ್ನು ತೃಪ್ತಿಪಡಿಸಿದ್ದು ನಿಮಗೆ ಜ್ಞಾಪಕವಿಲ್ಲವೆ? ಆಗ ಉಳಿದುದ್ದನ್ನು ಎಷ್ಟು ಬುಟ್ಟಿಗಳಲ್ಲಿ ತುಂಬಿಸಿಕೊಂಡಿರಿ?
10 : ಅಲ್ಲದೆ ಏಳು ರೊಟ್ಟಿಗಳಿಂದ ನಾಲ್ಕು ಸಾವಿರ ಜನರನ್ನು ತೃಪ್ತಿಪಡಿಸಿದಾಗ, ಉಳಿದುದನ್ನು ಎಷ್ಟು ಕುಕ್ಕೆಗಳಲ್ಲಿ ತುಂಬಿಸಿಕೊಂಡಿರಿ?
11 : ಹೀಗಿದ್ದೂ ನಾನು ಈಗ ರೊಟ್ಟಿಯನ್ನು ಕುರಿತು ಎಚ್ಚರಿಸಲಿಲ್ಲವೆಂದು ನೀವು ತಿಳಿಯದೆ ಹೋದಿರಲ್ಲಾ," ಎಂದರು.
12 : ರೊಟ್ಟಿಯ ಹಿಟ್ಟನ್ನು ಹುದುಗೆಬ್ಬಿಸುವ ಹುಳಿಯನ್ನು ಕುರಿತು ಅಲ್ಲ, ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯ ವಿಷಯವಾಗಿ ಜಾಗರೂಕರಾಗಿರಬೇಕೆಂದು ಯೇಸು ಎಚ್ಚರಿಸಿದರೆಂದು ಆಗ ಶಿಷ್ಯರು ಅರ್ಥಮಾಡಿಕೊಂಡರು.
13 : ಯೇಸುಸ್ವಾಮಿ "ಫಿಲಿಪ್ಪನ ಸೆಜರೇಯ" ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ?" ಎಂದು ಕೇಳಿದರು.
14 : ಅದಕ್ಕೆ ಶಿಷ್ಯರು, "ಸ್ನಾನಿಕ ಯೊವಾನ್ನ", ಎಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು, "ಎಲೀಯನು" ಎನ್ನುತ್ತಾರೆ; "ಯೆರೆವಿೂಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು," ಎಂಬುದು ಇನ್ನೂ ಕೆಲವರ ಅಭಿಪ್ರಾಯ, ಎಂದು ಉತ್ತರ ಕೊಟ್ಟರು.
15 : ಆಗ ಯೇಸು, "ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?" ಎಂದು ಪ್ರಶ್ನಿಸಿದರು.
16 : ಅದಕ್ಕೆ ಪೇತ್ರನು, "ಅಭಿಷಿಕ್ತರಾದ ಲೋಕೋದ್ದಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ," ಎಂದನು.
17 : ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಹೀಗೆಂದರು: "ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತ ಪಡಿಸಿದ್ದು ನರಮಾನವ ಶಕ್ತಿ ಅಲ್ಲ, ಸ್ವರ್ಗದಲ್ಲಿರುವ ನನ್ನ ಪಿತನೇ.
18 : ನಾನು ನಿನಗೆ ಹೇಳುತ್ತೇನೆ, ಕೇಳು: "ನಿನ್ನ ಹೆಸರು ಪೇತ್ರ; ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು. ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು.
19 : ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತೀಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು."
20 : ಅನಂತರ ಯೇಸು ತಮ್ಮ ಶಿಷ್ಯರಿಗೆ ತಾವು ‘ಅಭಿಷಿಕ್ತರಾದ ಲೋಕೋದ್ಧಾರಕ’ ಎಂಬುದನ್ನು ಯಾರಿಗೂ ಹೇಳಕೂಡದೆಂದು ಕಟ್ಟಪ್ಪಣೆ ಮಾಡಿದರು.
21 : ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, "ನಾನು ಜೆರುಸಲೇಮಿಗೆ ಹೋಗಬೇಕಾಗಿದೆ; ಅಲ್ಲಿ ಸಭಾ ಪ್ರಮುಖರಿಂದಲೂ ಮುಖ್ಯ ಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಕಠಿಣವಾದ ಯಾತನೆಯನ್ನು ಅನುಭವಿಸಿ, ಮರಣಕ್ಕೆ ತುತ್ತಾಗಿ, ಮೂರನೆಯ ದಿನ ಪುನರುತ್ಥಾನ ಹೊಂದಬೇಕಾಗಿದೆ" ಎಂದು ಅಂದಿನಿಂದಲೂ ಒತ್ತಿ ಹೇಳಲಾರಂಭಿಸಿದರು.
22 : ಇದನ್ನು ಕೇಳಲಾಗದೆ ಪೇತ್ರನು ಯೇಸುವನ್ನು ಪಕ್ಕಕ್ಕೆ ಕರೆದು, "ಪ್ರಭೂ, ಹಾಗೆನ್ನಲೇಬೇಡಿ, ನಿಮಗೆಂದಿಗೂ ಹಾಗೆ ಸಂಭವಿಸದಿರಲಿ," ಎಂದು ಪ್ರತಿಭಟಿಸಿದನು.
23 : ಆದರೆ ಯೇಸು ಪೇತ್ರನತ್ತ ತಿರುಗಿ, "ಸೈತಾನನೇ, ತೊಲಗಿಲ್ಲಿಂದ; ನೀನು ನನಗೆ ಅಡೆತಡೆ; ನಿನ್ನ ಈ ಆಲೋಚನೆ ಮನುಷ್ಯರದ್ದೇ ಹೊರತು, ದೇವರದಲ್ಲ," ಎಂದರು.
24 ಅನಂತರ ತಮ್ಮ ಶಿಷ್ಯರಿಗೆ ಹೀಗೆಂದರು: “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.
25 : ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಂಡುಕೊಳ್ಳುವನು.
26 : ಪ್ರಪಂಚವನ್ನೆಲ್ಲಾ ಗೆದ್ದುಕೊಂಡರೂ ಒಬ್ಬನು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಅವನಿಗೆ ದೊರಕುವ ಲಾಭವೇನು? ಅಥವಾ ಮನುಷ್ಯನು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು?
27 : ನರಪುತ್ರನು ತನ್ನ ಪಿತನ ಪ್ರಭಾವದೊಡನೆ ತನ್ನ ದೂತರ ಸಮೇತ ಬರಲಿದ್ದಾನೆ. ಆಗ ಪ್ರತಿಯೊಬ್ಬ ಮಾನವನಿಗೆ ಅವನವನ ಕೃತ್ಯಕ್ಕೆ ತಕ್ಕ ಪ್ರತಿಫಲ ಕೊಡುವನು.
28 : ಇಲ್ಲಿರುವವರಲ್ಲಿ ಕೆಲವರು ನರಪುತ್ರನು ತನ್ನ ಸಾಮ್ರಾಜ್ಯದಲ್ಲಿ ಪ್ರತ್ಯಕ್ಷನಾಗುವುದನ್ನು ಕಾಣುವುದಕ್ಕೆ ಮುನ್ನ ಸಾವನ್ನು ಸವಿಯುವುದಿಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ," ಎಂದರು.

Holydivine