Mathew - Chapter 28
Holy Bible

1 : ‘ಸಬ್ಬತ್’ ದಿನ ಕಳೆದಿತ್ತು. ಭಾನುವಾರ ಬೆಳಗಾಗುವುದರಲ್ಲಿತ್ತು. ಮಗ್ದಲದ ಮರಿಯಳು ಮತ್ತು ಆ ಇನ್ನೊಬ್ಬ ಮರಿಯಳು ಸಮಾಧಿಯನ್ನು ನೋಡಲು ಬಂದರು.
2 : ಇದ್ದಕ್ಕಿದ್ದಂತೆ ಭೂಮಿ ಗಡಗಡನೆ ನಡುಗಿತು. ಆಗ ದೇವದೂತನು ಸ್ವರ್ಗದಿಂದ ಇಳಿದುಬಂದನು. ಸಮಾಧಿಯ ಕಲ್ಲನ್ನು ಹಿಂದಕ್ಕೆ ಉರುಳಿಸಿ ಅದರ ಮೇಲೆ ಕುಳಿತುಕೊಂಡನು.
3 : ಆತನ ರೂಪ ಮಿಂಚಿನಂತೆ ಹೊಳೆಯುತ್ತಿತ್ತು; ಉಡುಪು ಹಿಮದಂತೆ ಬೆಳ್ಳಗಿತ್ತು.
4 : ಕಾವಲಿನವರು ಆತನನ್ನು ಕಂಡು ಭಯದಿಂದ ನಡುಗುತ್ತಾ ಸತ್ತಂತಾದರು.
5 : ಆಗ ದೂತನು ಆ ಮಹಿಳೆಯರಿಗೆ, “ಹೆದರಬೇಡಿ, ಶಿಲುಬೆಗೇರಿಸಿದ ಯೇಸುವನ್ನು ನೀವು ಹುಡುಕುತ್ತಿದ್ದೀರೆಂದು ನಾನು ಬಲ್ಲೆ. ಅವರು ಇಲ್ಲಿಲ್ಲ;
6 : ಅವರೇ ಹೇಳಿದಂತೆ ಪುನರುತ್ಥಾನ ಹೊಂದಿದ್ದಾರೆ. ಬನ್ನಿ, ಅವರನ್ನಿಟ್ಟಿದ್ದ ಸ್ಥಳವನ್ನು ನೋಡಿ.
7 : ಈಗ ಬೇಗನೆ ಹೋಗಿ, ಅವರ ಶಿಷ್ಯರಿಗೆ, ‘ಸತ್ತಿದ್ದವರು ಪುನರುತ್ಥಾನ ಹೊಂದಿದ್ದಾರೆ; ಅವರು ನಿಮಗಿಂತ ಮುಂಚಿತವಾಗಿ ಗಲಿಲೇಯಕ್ಕೆ ಹೋಗುವರು; ಅಲ್ಲೇ ಅವರನ್ನು ಕಾಣುವಿರಿ,’ ಎಂದು ತಿಳಿಸಿರಿ. ನಾನು ನಿಮಗೆ ತಿಳಿಸಬೇಕಾದ ಸಮಾಚಾರ ಇದೇ, ಮರೆಯದಿರಿ,” ಎಂದನು. ಮಹಿಳೆಯರಿಗೆ ಮೊದಲ ದರ್ಶನ (ಮಾರ್ಕ 16.9-11; ಲೂಕ 24.10-11; ಯೊವಾ. 20.14-18)
8 : ಅದರಂತೆಯೇ ಆ ಮಹಿಳೆಯರು ಭಯಮಿಶ್ರಿತ ಆನಂದದಿಂದ ಸಮಾಧಿಯನ್ನು ಬಿಟ್ಟು ಕೂಡಲೇ ಹೊರಟರು. ಶಿಷ್ಯರಿಗೆ ಈ ಸಮಾಚಾರವನ್ನು ಮುಟ್ಟಿಸಲು ಧಾವಿಸಿದರು.
9 : ತಟ್ಟನೆ, ಯೇಸುವೇ ಅವರನ್ನು ಎದುರುಗೊಂಡು, “ನಿಮಗೆ ಶುಭವಾಗಲಿ!” ಎಂದರು. ಆ ಮಹಿಳೆಯರು ಹತ್ತಿರಕ್ಕೆ ಬಂದು, ಅವರ ಪಾದಕ್ಕೆರಗಿ ಪೂಜಿಸಿದರು.
10 : ಆಗ ಯೇಸು ಅವರಿಗೆ, “ಭಯಪಡಬೇಡಿ, ನನ್ನ ಸೋದರರ ಬಳಿಗೆ ಹೋಗಿ ಅವರು ಗಲಿಲೇಯಕ್ಕೆ ಹೋಗಬೇಕೆಂದೂ ಅಲ್ಲಿ ಅವರು ನನ್ನನ್ನು ಕಾಣುವರೆಂದೂ ತಿಳಿಸಿರಿ,” ಎಂದು ಹೇಳಿದರು.
11 : ಇತ್ತ ಆ ಮಹಿಳೆಯರು ಹೋಗುತ್ತಿದ್ದಂತೆ, ಅತ್ತ ಕಾವಲುಗಾರರಲ್ಲಿ ಕೆಲವರು ನಗರಕ್ಕೆ ಬಂದು ನಡೆದ ಸಂಗತಿಯನ್ನೆಲ್ಲಾ ಮುಖ್ಯಯಾಜಕರಿಗೆ ವರದಿ ಮಾಡಿದರು.
12 : ಇವರು ಪ್ರಮುಖರೊಂದಿಗೆ ಸಭೆಸೇರಿ ಒಂದು ಸಂಚುಹೂಡಿದರು. ಸೈನಿಕರಿಗೆ ಭಾರಿ ಲಂಚಕೊಟ್ಟು,
13 : “ಅವನ ಶಿಷ್ಯರು ರಾತ್ರಿ ವೇಳೆಯಲ್ಲಿ ಬಂದು, ನಾವು ನಿದ್ರೆಮಾಡುತ್ತಿದ್ದಾಗ ಅವನನ್ನು ಕದ್ದುಕೊಂಡು ಹೋದರೆಂದು ಜನರಿಗೆ ಹೇಳಿರಿ;
14 : ಈ ಸುದ್ಧಿ ರಾಜ್ಯಪಾಲನ ಕಿವಿಗೆ ಬಿದ್ದರೆ, ನಾವು ಅವರನ್ನು ಸಮಾಧಾನ ಪಡಿಸುತ್ತೇವೆ; ನಿಮಗೇನೂ ಆಗದಂತೆ ನೋಡಿಕೊಳ್ಳುತ್ತೇವೆ,” ಎಂದು ಹೇಳಿದರು.
15 : ಸೈನಿಕರು ಲಂಚವನ್ನು ತೆಗೆದುಕೊಂಡು ತಮಗೆ ಹೇಳಿಕೊಟ್ಟಂತೆಯೇ ಮಾಡಿದರು. ಈ ಕಟ್ಟುಕತೆ ಯೆಹೂದ್ಯರಲ್ಲಿ ಹಬ್ಬಿ ಇಂದಿನವರೆಗೂ ಪ್ರಚಲಿತವಾಗಿದೆ.
16 : ಹನ್ನೊಂದು ಮಂದಿ ಶಿಷ್ಯರು ಗಲಿಲೇಯಕ್ಕೆ ಹೋದರು. ಯೇಸು ಸೂಚಿಸಿದ್ದ ಬೆಟ್ಟಕ್ಕೆ ಬಂದರು.
17 : ಅಲ್ಲಿ ಯೇಸುಸ್ವಾಮಿಯನ್ನು ಕಂಡು ಅವರನ್ನು ಪೂಜಿಸಿದರು. ಆದರೆ ಕೆಲವರು ಸಂದೇಹಪಟ್ಟರು.
18 : ಆಗ ಯೇಸು ಹತ್ತಿರಕ್ಕೆ ಬಂದು ಮಾತಾಡಿದರು: “ಭೂಮಿಯಲ್ಲೂ ಸ್ವರ್ಗದಲ್ಲೂ ಸರ್ವಾಧಿಕಾರವನ್ನು ನನಗೆ ಕೊಡಲಾಗಿದೆ.
19 : ಆದ್ದರಿಂದ ನೀವು ಹೋಗಿ, ಸಕಲ ದೇಶಗಳ ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ; ಪಿತ, ಸುತ, ಮತ್ತು ಪವಿತ್ರಾತ್ಮ ನಾಮದಲ್ಲಿ ಅವರಿಗೆ ದೀಕ್ಷಾಸ್ನಾನ ಮಾಡಿಸಿರಿ.
20 : ನಾನು ನಿಮಗೆ ಆಜ್ಞಾಪಿಸಿದ ಸಕಲವನ್ನೂ ಅನುಸರಿಸುವಂತೆ ಅವರಿಗೆ ಬೋಧಿಸಿರಿ. ಇಗೋ, ಲೋಕಾಂತ್ಯದವರೆಗೂ ಸದಾ ನಾನು ನಿಮ್ಮೊಡನೆ ಇರುತ್ತೇನೆ,” ಎಂದರು.

Holydivine