Mathew - Chapter 17
Holy Bible

1 : ಆರು ದಿನಗಳ ಬಳಿಕ ಪೇತ್ರ, ಯಕೋಬ ಮತ್ತು ಆತನ ಸಹೋದರ ಯೊವಾನ್ನ ಇವರನ್ನು ಯೇಸುಸ್ವಾಮಿ ಪ್ರತ್ಯೇಕವಾಗಿ ತಮ್ಮೊಡನೆ ಕರೆದುಕೊಂಡು ಎತ್ತರವಾದ ಒಂದು ಬೆಟ್ಟಕ್ಕೆ ಹೋದರು.
2 : ಅಲ್ಲಿ ಆ ಶಿಷ್ಯರ ಕಣ್ಣೆದುರಿಗೇ ಸ್ವಾಮಿ ರೂಪಾಂತರ ಹೊಂದಿದರು, ಅವರ ಮುಖ ಸೂರ್ಯನಂತೆ ಪ್ರಕಾಶಿಸಿತು. ಅವರ ಉಡುಪು ಬೆಳಕಿನಂತೆ ಪ್ರಜ್ವಲಿಸಿತು.
3 : ಇದ್ದಕ್ಕಿದ್ದ ಹಾಗೆ ಮೋಶೆ ಮತ್ತು ಎಲೀಯ ಪ್ರತ್ಯಕ್ಷರಾಗಿ ಯೇಸುವಿನೊಡನೆ ಮಾತನಾಡುತ್ತಿದ್ದುದು ಅವರಿಗೆ ಕಾಣಿಸಿತು.
4 : ಆಗ ಪೇತ್ರನು ಯೇಸುವಿಗೆ, "ಪ್ರಭೂ, ನಾವು ಇಲ್ಲೇ ಇರುವುದು ಎಷ್ಟು ಒಳ್ಳೆಯದು! ಅಪ್ಪಣೆಯಾದರೆ ಇಲ್ಲಿ ಮೂರು ಗುಡಾರಗಳನ್ನು ಕಟ್ಟುವೆನು. ತಮಗೊಂದು, ಮೋಶೆಗೊಂದು, ಎಲೀಯನಿಗೊಂದು," ಎಂದನು.
5 : ಪೇತ್ರ ಇನ್ನೂ ಮಾತನಾಡುತ್ತಿರುವಾಗಲೇ ಪ್ರಕಾಶಮಾನವಾದ ಮೇಘವೊಂದು ಅವರನ್ನು ಆವರಿಸಿತು; ಆ ಮೇಘದಿಂದ ಒಂದು ವಾಣಿ, ‘ಈತನು ನನ್ನ ಪುತ್ರ, ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು. ಈತನ ಮಾತಿಗೆ ಕಿವಿಗೊಡಿ," ಎಂದಿತು.
6 : ಶಿಷ್ಯರು ಈ ವಾಣಿಯನ್ನು ಕೇಳಿ ಭಯಭ್ರಾಂತರಾದರು; ಬೋರಲು ಬಿದ್ದರು.
7 : ಆಗ ಯೇಸು ಅವರ ಹತ್ತಿರಕ್ಕೆ ಬಂದು ಅವರನ್ನು ಮುಟ್ಟಿ, "ಏಳಿ, ಭಯಪಡಬೇಡಿ," ಎಂದರು.
8 : ಅವರು ಕಣ್ಣೆತ್ತಿ ನೋಡಿದಾಗ ಯೇಸುವನ್ನು ಬಿಟ್ಟು ಮತ್ತೆ ಯಾರನ್ನೂ ಕಾಣಲಿಲ್ಲ.
9 : ಅವರೆಲ್ಲರು ಬೆಟ್ಟದಿಂದ ಇಳಿದು ಬರುವಾಗ ಯೇಸು, "ನರಪುತ್ರನು ಸತ್ತು ಪುನರುತ್ಥಾನ ಹೊಂದುವ ತನಕ ನೀವು ಕಂಡ ಈ ದರ್ಶನವನ್ನು ಯಾರಿಗೂ ಹೇಳಬೇಡಿ," ಎಂದು ಆಜ್ಞಾಪಿಸಿದರು.
10 : ಶಿಷ್ಯರು, "ಎಲೀಯನೇ ಮೊದಲು ಬರಬೇಕಾಗಿದೆ ಎಂದು ಶಾಸ್ತ್ರಜ್ಞರು ಹೇಳುತ್ತಾರಲ್ಲಾ, ಅದು ಹೇಗೆ?" ಎಂದು ಯೇಸುವನ್ನು ಕೇಳಿದರು.
11 : ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ಎಲೀಯನು ಬಂದು ಎಲ್ಲವನ್ನೂ ಸಜ್ಜುಗೊಳಿಸುವನು ಎಂಬುದು ನಿಜ.
12 : ಆದರೆ ನಾನು ನಿಮಗೆ ಹೇಳುತ್ತೇನೆ; ಎಲೀಯನು ಈಗಾಗಲೇ ಬಂದಾಗಿದೆ; ಜನರು ಆತನನ್ನು ಗುರುತಿಸದೇ ತಮಗೆ ಇಷ್ಟಬಂದ ಹಾಗೆ ಹಿಂಸಿಸಿದ್ದೂ ಆಗಿದೆ. ಅಂತೆಯೇ ನರಪುತ್ರನೂ ಅವರ ಕೈಯಿಂದ ಯಾತನೆಯನ್ನು ಅನುಭವಿಸುವನು," ಎಂದರು.
13 : ಅವರು ಹೇಳುತ್ತಿರುವುದು ಸ್ನಾನಿಕ ಯೊವಾನ್ನನನ್ನು ಕುರಿತೇ ಎಂದು ಪ್ರೇಷಿತರು ಆಗ ಅರ್ಥಮಾಡಿಕೊಂಡರು.
14 : ಜನರ ಗುಂಪು ಇದ್ದಲ್ಲಿಗೆ ಅವರೆಲ್ಲರು ಮರಳಿಬಂದರು. ಆಗ ಒಬ್ಬನು ಯೇಸುಸ್ವಾಮಿಯ ಬಳಿಗೆ ಬಂದು,
15 : "ಪ್ರಭೂ, ನನ್ನ ಮಗನ ಮೇಲೆ ಕನಿಕರವಿಡಿ, ಅವನು ಮೂರ್ಛಾರೋಗಿ, ಅವನ ಕಷ್ಟ ಹೇಳತೀರದು, ಆಗಾಗ ಬೆಂಕಿಯಲ್ಲೋ ನೀರಿನಲ್ಲೋ ಬಿದ್ದು ಬಿಡುತ್ತಾನೆ.
16 : ಅವನನ್ನು ತಮ್ಮ ಶಿಷ್ಯರ ಬಳಿಗೆ ಕರೆದುಕೊಂಡು ಬಂದೆ. ಆದರೆ ಅವನನ್ನು ಗುಣಪಡಿಸಲು ಅವರಿಂದಾಗಲಿಲ್ಲ," ಎಂದು ಮೊಣಕಾಲೂರಿ ಯಾಚಿಸಿದನು.
17 : ಅದಕ್ಕೆ ಯೇಸು, "ಅಯ್ಯೋ ವಿಶ್ವಾಸವಿಲ್ಲದ ವಕ್ರ ಪೀಳಿಗೆಯೇ, ಇನ್ನೆಷ್ಟುಕಾಲ ನಾನು ನಿಮ್ಮೊಂದಿಗಿರಲಿ? ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ?" ಎಂದು ಹೇಳಿ, "ಆ ಹುಡುಗನನ್ನು ಇಲ್ಲಿ ನನ್ನ ಬಳಿಗೆ ಕರೆದುಕೊಂಡು ಬನ್ನಿ," ಎಂದರು.
18 : ಅನಂತರ ಆ ಹುಡುಗನಲ್ಲಿದ್ದ ದೆವ್ವವನ್ನು ಅವರು ಗದರಿಸಿದೊಡನೆಯೇ, ಅದು ಅವನನ್ನು ಬಿಟ್ಟು ಹೋಯಿತು. ಅವನು ತಕ್ಷಣವೇ ಸ್ವಸ್ಥನಾದನು.
19 : ತರುವಾಯ ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, "ಆ ದೆವ್ವವನ್ನು ಬಿಡಿಸಲು ನಮ್ಮಿಂದಾಗಲಿಲ್ಲವಲ್ಲ, ಅದೇಕೆ?" ಎಂದು ಕೇಳಿದರು.
20 : ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ನಿಮ್ಮ ಅಲ್ಪವಿಶ್ವಾಸವೇ ಅದಕ್ಕೆ ಕಾರಣ. ನಾನು ನಿಶ್ಚಯವಾಗಿ ಹೇಳುತ್ತೇನೆ: ನಿಮಗೆ ಸಾಸಿವೆ ಕಾಳಿನಷ್ಟು ವಿಶ್ವಾಸವಾದರೂ ಇದ್ದಲ್ಲಿ, ಈ ಬೆಟ್ಟಕ್ಕೆ ಇಲ್ಲಿಂದ ಆ ಸ್ಥಳಕ್ಕೆ ಹೋಗು, ಎಂದು ಹೇಳಿದರೆ ಅದು ಹೋಗುತ್ತದೆ.
21 : ನಿಮ್ಮಿಂದ ಅಸಾಧ್ಯವಾದುದು ಒಂದೂ ಇರದು. (ಈ ಬಗೆಯ ದೆವ್ವಗಳನ್ನು ಹೊರಗಟ್ಟಲು ಪ್ರಾರ್ಥನೆ ಮತ್ತು ಉಪವಾಸ ಮಾಡುವುದನ್ನು ಬಿಟ್ಟು ಬೇರೆ ಮಾರ್ಗವಿಲ್ಲ)," ಎಂದರು.
22 : ಶಿಷ್ಯರೆಲ್ಲರು ಒಮ್ಮೆ ಗಲಿಲೇಯದಲ್ಲಿ ಒಟ್ಟಿಗೆ ಸೇರಿದ್ದರು. ಆಗ ಯೇಸು ಅವರಿಗೆ, "ನರಪುತ್ರನನ್ನು ಜನರ ವಶಕ್ಕೆ ಒಪ್ಪಿಸಲಾಗುವುದು;
23 : ಅವರು ಆತನನ್ನು ಕೊಲ್ಲುವರು. ಆದರೆ ಮೂರನೆಯ ದಿನ ಆತನನ್ನು ಪುನರುತ್ಥಾನಗೊಳಿಸಲಾಗುವುದು," ಎಂದರು. ಅದನ್ನು ಕೇಳಿ ಶಿಷ್ಯರು ತುಂಬ ವ್ಯಥೆಗೊಂಡರು. ದೇವಪುತ್ರನಿಂದಲೂ ದೇವಾಲಯಕ್ಕೆ ತೆರಿಗೆ ವಸೂಲಿಯೇ?
24 : ಯೇಸು ಮತ್ತು ಶಿಷ್ಯರು ಕಫೆರ್ನವುಮಿಗೆ ಹೋದರು. ದೇವಾಲಯದ ತೆರಿಗೆಯನ್ನು ವಸೂಲಿ ಮಾಡುತ್ತಿದ್ದವರು ಪೇತ್ರನ ಬಳಿಗೆ ಬಂದು, "ನಿಮ್ಮ ಗುರು ತೆರಿಗೆ ಕಟ್ಟುವುದಿಲ್ಲವೇ?" ಎಂದು ವಿಚಾರಿಸಿದರು. ಅದಕ್ಕೆ ಪೇತ್ರನು, "ಹೌದು, ಕಟ್ಟುತ್ತಾರೆ," ಎಂದು ಉತ್ತರವಿತ್ತನು.
25 : ಬಳಿಕ ಮನೆಗೆ ಬಂದಾಗ, ಅವನು ಮಾತೆತ್ತುವುದಕ್ಕೆ ಮೊದಲೇ ಯೇಸು "ಸಿಮೋನಾ, ನಿನಗೆ ಏನನ್ನಿಸುತ್ತದೆ? ಇಹಲೋಕದ ರಾಜರು ಕಂದಾಯವನ್ನಾಗಲಿ, ತೆರಿಗೆಯನ್ನಾಗಲಿ ಯಾರಿಂದ ವಸೂಲಿಮಾಡುತ್ತಾರೆ? ತಮ್ಮ ಪುತ್ರರಿಂದಲೋ ಅಥವಾ ಪರರಿಂದಲೋ?" ಎಂದು ಕೇಳಿದರು. "ಪರರಿಂದಲೇ," ಎಂದು ಪೇತ್ರನು ಉತ್ತರಕೊಟ್ಟನು.
26 : ಯೇಸು, "ಹಾಗಾದರೆ, ಪುತ್ರರು ತೆರಿಗೆ ಕಟ್ಟಬೇಕಾಗಿಲ್ಲ ತಾನೇ?
27 : ಆದರೂ, ನಾವು ಇವರಿಗೆ ಅಡ್ಡಿಯಾಗಬಾರದು. ಎಂದೇ ನೀನು ಸರೋವರಕ್ಕೆ ಹೋಗಿ ಗಾಳಹಾಕು. ಮೊದಲು ಸಿಕ್ಕುವ ಮೀನನ್ನು ಎತ್ತಿಕೊಂಡು ಅದರ ಬಾಯಿ ತೆರೆದು ನೋಡು. ಅದರಲ್ಲಿ ಒಂದು ಬೆಳ್ಳಿ ನಾಣ್ಯ ದೊರಕುವುದು. ಅದನ್ನು ತಂದು ನನ್ನ ಮತ್ತು ನಿನ್ನ ಪರವಾಗಿ ಅವರಿಗೆ ಕೊಡು," ಎಂದರು.

Holydivine