Mathew - Chapter 8
Holy Bible

1 : ಯೇಸುಸ್ವಾಮಿ ಬೆಟ್ಟದಿಂದ ಇಳಿದು ಬಂದಾಗ ಜನರು ಗುಂಪುಗುಂಪಾಗಿ ಅವರನ್ನು ಹಿಂಬಾಲಿಸಿದರು.
2 : ಆಗ ಒಬ್ಬ ಕುಷ್ಠರೋಗಿ ಯೇಸುವಿನ ಮುಂದೆ ಬಂದು, ತಲೆಬಾಗಿ, "ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣ ಮಾಡಬಲ್ಲಿರಿ," ಎಂದು ಬೇಡಿದನು.
3 : ಯೇಸು ಕೈಚಾಚಿ ಅವನನ್ನು ಮುಟ್ಟಿ, “ಖಂಡಿತವಾಗಿಯೂ ನನಗೆ ಮನಸ್ಸಿದೆ, ಗುಣಹೊಂದು,” ಎಂದರು. ತಕ್ಷಣವೇ ಅವನ ಕುಷ್ಠವು ಮಾಯವಾಯಿತು.
4 : ಯೇಸು ಅವನಿಗೆ, “ಎಚ್ಚರಿಕೆ, ನೀನು ಗುಣಹೊಂದಿರುವುದನ್ನು ಯಾರಿಗೂ ಹೇಳಕೂಡದು. ಆದರೆ ನೆಟ್ಟಗೆ ಯಾಜಕನ ಬಳಿಗೆ ಹೋಗು; ಅವನು ನಿನ್ನನ್ನು ಪರೀಕ್ಷಿಸಿ ನೋಡಲಿ. ಅನಂತರ ಮೋಶೆ ನಿಯಮಿಸಿರುವ ಪ್ರಕಾರ ಶುದ್ಧೀಕರಣವಿಧಿಯನ್ನು ಅನುಸರಿಸು. ಇದು ಜನರಿಗೆ ಸಾಕ್ಷಿಯಾಗಿರಲಿ,” ಎಂದರು. ಅನ್ಯಧರ್ಮೀಯನಲ್ಲೂ ಅತಿಶಯ ವಿಶ್ವಾಸ! (ಲೂಕ 7.1-10)
5 : ಯೇಸುಸ್ವಾಮಿ ಕಫೆರ್ನವುಮ್ ಊರಿಗೆ ಬಂದಾಗ ಶತಾಧಿಪತಿಯೊಬ್ಬನು ಅವರನ್ನು ಎದುರುಗೊಂಡನು.
6 : “ಪ್ರಭೂ, ನನ್ನ ಸೇವಕ ಮನೆಯಲ್ಲಿ ಪಾಶ್ರ್ವವಾಯು ರೋಗದಿಂದ ಹಾಸಿಗೆ ಹಿಡಿದಿದ್ದಾನೆ. ಬಹಳವಾಗಿ ನರಳುತ್ತಿದ್ದಾನೆ,” ಎಂದು ವಿನಂತಿಸಿದನು.
7 : ಯೇಸು, “ನಾನೇ ಬಂದು ಅವನನ್ನು ಗುಣಪಡಿಸುತ್ತೇನೆ,” ಎಂದರು
8 : ಅದಕ್ಕೆ ಆ ಶತಾಧಿಪತಿ, “ಪ್ರಭುವೇ, ತಾವು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ. ತಾವು ಒಂದೇ ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು.
9 : ಏಕೆಂದರೆ, ನಾನೂ ಮತ್ತೊಬ್ಬರ ಕೈಕೆಳಗಿರುವವನು. ನನ್ನ ಅಧೀನದಲ್ಲೂ ಸೈನಿಕರಿದ್ದಾರೆ. ಅವರಲ್ಲಿ ಒಬ್ಬನಿಗೆ ನಾನು, ‘ಬಾ’ ಎಂದರೆ ಬರುತ್ತಾನೆ. ಇನ್ನೊಬ್ಬನಿಗೆ, ‘ಹೋಗು’ ಎಂದರೆ ಹೋಗುತ್ತಾನೆ. ಸೇವಕನಿಗೆ, ‘ಇಂಥದ್ದನ್ನು ಮಾಡು’ ಎಂದರೆ ಮಾಡುತ್ತಾನೆ," ಎಂದನು.
10 : ಈ ಮಾತನ್ನು ಕೇಳಿದ್ದೇ ಯೇಸುವಿಗೆ ಅತ್ಯಾಶ್ಚರ್ಯವಾಯಿತು. ತಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ಜನರನ್ನು ನೋಡಿ ಹೀಗೆಂದರು: "ಇಂಥ ಗಾಢ ವಿಶ್ವಾಸವನ್ನು ನಾನು ಇಸ್ರಯೇಲ್ ಜನರಲ್ಲಿ ಕೂಡ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ.
11 : ಪೂರ್ವ ಪಶ್ಚಿಮ ದಿಕ್ಕುಗಳಿಂದ ಅನೇಕ ಜನರು ಬಂದು ಅಬ್ರಹಾಮ, ಇಸಾಕ, ಯಕೋಬರ ಸಮೇತ ಸ್ವರ್ಗಸಾಮ್ರಾಜ್ಯದ ಹಬ್ಬದೂಟದಲ್ಲಿ ಭಾಗಿಗಳಾಗುವರು.
12 : ಆದರೆ ಯಾರು ಈ ಸಾಮ್ರಾಜ್ಯಕ್ಕೆ ಬಾಧ್ಯಸ್ಥರೋ ಅವರನ್ನೇ ಹೊರಗೆ ದಬ್ಬಲಾಗುವುದು; ಅಲ್ಲಿ, ಆ ಕಾರ್ಗತ್ತಲಲ್ಲಿ, ಅವರ ಗೋಳಾಟವೇನು! ಹಲ್ಲು ಕಡಿತವೇನು!"
13 : ಅನಂತರ ಯೇಸು ಆ ಶತಾಧಿಪತಿಗೆ, "ಇನ್ನು ಮನೆಗೆ ಹೋಗು, ನೀನು ವಿಶ್ವಾಸಿಸಿದಂತೆಯೇ ಆಗುವುದು," ಎಂದರು. ಅದೇ ಕ್ಷಣದಲ್ಲಿ ಅವನ ಸೇವಕನು ಸ್ವಸ್ಥನಾದನು. ಕಾಯಿಲೆ ಕಷ್ಟಗಳ ನಿವಾರಣೆ (ಮಾರ್ಕ 1:29-34; ಲೂಕ 4:38-41)
14 : ತರುವಾಯ ಯೇಸುಸ್ವಾಮಿ ಪೇತ್ರನ ಮನೆಗೆ ಬಂದರು. ಅಲ್ಲಿ ಪೇತ್ರನ ಅತ್ತೆ ಜ್ವರದಿಂದ ಮಲಗಿರುವುದನ್ನು ಕಂಡರು.
15 : ಯೇಸು ಆಕೆಯ ಕೈ ಮುಟ್ಟಿದುದೇ ಜ್ವರ ಬಿಟ್ಟುಹೋಯಿತು, ಆಕೆ ಎದ್ದು ಅವರನ್ನು ಸತ್ಕರಿಸಿದಳು.
16 : ಸಂಜೆಯಾಯಿತು. ದೆವ್ವ ಹಿಡಿದಿದ್ದ ಅನೇಕರನ್ನು ಯೇಸುವಿನ ಬಳಿಗೆ ಕರೆತರಲಾಯಿತು. ಯೇಸು ತಮ್ಮ ಒಂದು ಮಾತಿನಿಂದಲೇ ದೆವ್ವಗಳನ್ನು ಬಿಡಿಸಿದರು. ಮಾತ್ರವಲ್ಲ, ರೋಗಪೀಡಿತರೆಲ್ಲರನ್ನೂ ಗುಣಪಡಿಸಿದರು.
17 : ಹೀಗೆ, "ನಮ್ಮ ದುರ್ಬಲತೆಗಳನ್ನು ವಹಿಸಿಕೊಂಡನು; ನಮ್ಮ ರೋಗರುಜಿನಗಳನ್ನು ಆತನೇ ಪರಿಹರಿಸಿದನು," ಎಂಬ ಯೆಶಾಯನ ಪ್ರವಾದನೆ ಈಡೇರಿತು. ಶಿಷ್ಯರಲ್ಲಿರಬೇಕಾದ ವೈರಾಗ್ಯ (ಲೂಕ 9:57-62)
18 : ದೊಡ್ಡ ಜನಸಮೂಹ ತಮ್ಮ ಸುತ್ತಲೂ ನಿಂತಿರುವುದನ್ನು ಯೇಸುಸ್ವಾಮಿ ನೋಡಿದರು. ಸರೋವರದ ಆಚೆಯ ದಡಕ್ಕೆ ಹೋಗಲು ತಮ್ಮ ಶಿಷ್ಯರಿಗೆ ಅಪ್ಪಣೆ ಮಾಡಿದರು.
19 : ಆಗ ಒಬ್ಬ ಧರ್ಮಶಾಸ್ತ್ರಿ ಬಂದು, "ಗುರುವೇ, ನೀವು ಎಲ್ಲಿಗೆ ಹೋದರೂ ನಿಮ್ಮನ್ನು ಹಿಂಬಾಲಿಸಿ ಬರುತ್ತೇನೆ," ಎಂದನು.
20 : ಅದಕ್ಕೆ ಯೇಸು, "ನರಿಗಳಿಗೆ ಗುಹೆಗಳುಂಟು; ಆಕಾಶದ ಪಕ್ಷಿಗಳಿಗೆ ಗೂಡುಗಳುಂಟು; ಆದರೆ ನರಪುತ್ರನಿಗೆ ತಲೆಯಿಟ್ಟು ಮಲಗಲೂ ಸ್ಥಳ ಇಲ್ಲ," ಎಂದರು.
21 : "ನನ್ನನ್ನು "ಸ್ವಾವಿೂ, ಸ್ವಾವಿೂ," ಎನ್ನುವ ಪ್ರತಿಯೊಬ್ಬನೂ ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸನು. ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತಾನುಸಾರ ನಡೆಯುವವನು ಮಾತ್ರ ಅದನ್ನು ಪ್ರವೇಶಿಸುವನು.
22 : ಅವನಿಗೆ ಯೇಸು, "ಸತ್ತವರೇ ತಮ್ಮ ಸತ್ತವರನ್ನು ಸಮಾಧಿ ಮಾಡಿಕೊಳ್ಳಲಿ; ನೀನು ನನ್ನನ್ನು ಹಿಂಬಾಲಿಸು," ಎಂದರು. ಯೇಸು ಕಡಲಿಗೂ ಒಡೆಯ (ಮಾರ್ಕ 4:35-41; ಲೂಕ 8:22-25)
23 : ಆಮೇಲೆ ಯೇಸುಸ್ವಾಮಿ ದೋಣಿಯನ್ನು ಹತ್ತಿದರು. ಶಿಷ್ಯರೂ ಹತ್ತಿ ಅವರ ಸಂಗಡ ಹೋದರು.
24 : ಇದ್ದಕ್ಕಿಂತ ಹಾಗೆ ಸರೋವರದಲ್ಲಿ ರಭಸವಾದ ಬಿರುಗಾಳಿ ಎದ್ದಿತು. ದೋಣಿ ಅಲೆಗಳಿಂದ ಮುಳುಗಿ ಹೋಗುವುದರಲ್ಲಿತ್ತು. ಯೇಸುವಾದರೋ ನಿದ್ರಾವಶರಾಗಿದ್ದರು.
25 : ಶಿಷ್ಯರು ಹತ್ತಿರಕ್ಕೆ ಬಂದು ಅವರನ್ನು ಎಬ್ಬಿಸಿ, "ಸ್ವಾವಿೂ, ಕಾಪಾಡಿ. ನಾವು ನೀರುಪಾಲಾಗುತ್ತಿದ್ದೇವೆ," ಎಂದರು.
26 : ಅದಕ್ಕೆ ಯೇಸು, "ಅಲ್ಪ ವಿಶ್ವಾಸಿಗಳೇ, ನಿಮಗೇಕೆ ಇಷ್ಟು ಭಯ?" ಎಂದರು. ಅನಂತರ ಎದ್ದು ನಿಂತು ಸುಂಟರಗಾಳಿಯನ್ನೂ ಸರೋವರವನ್ನೂ ಗದರಿಸಿದರು.
27 : ಆಗ ವಾತಾವರಣ ಪ್ರಶಾಂತವಾಯಿತು. ಶಿಷ್ಯರು ನಿಬ್ಬೆರಗಾದರು. "ಗಾಳಿಯೂ ಸರೋವರವೂ ಇವರು ಹೇಳಿದ್ದಂತೆ ಕೇಳಬೇಕಾದರೆ ಇವರೆಂತಹ ವ್ಯಕ್ತಿಯಾಗಿರಬೇಕು!" ಎಂದುಕೊಂಡರು.
28 : ಯೇಸುಸ್ವಾಮಿ ಗಲಿಲೇಯ ಸರೋವರವನ್ನು ದಾಟಿ, ಆಚೆಯ ಕಡೆಯಿದ್ದ ಗದರೇನ ಎಂಬ ಪ್ರಾಂತ್ಯಕ್ಕೆ ಬಂದರು. ದೆವ್ವ ಹಿಡಿದಿದ್ದ ಇಬ್ಬರು ಸಮಾಧಿಯ ಗುಹೆಗಳಿಂದ ಹೊರಬಂದು ಅವರಿಗೆ ಎದುರಾದರು. ಅವರಿಬ್ಬರೂ ಮಹಾಕ್ರೂರಿಗಳು. ಈ ಕಾರಣ ಯಾರೂ ಆ ಮಾರ್ಗವಾಗಿ ಹೋಗಲಾಗುತ್ತಿರಲಿಲ್ಲ.
29 : ಅವರು ಯೇಸುವನ್ನು ನೋಡಿದೊಡನೆಯೇ "ಓ ದೇವರ ಪುತ್ರನೇ, ನಿಮಗೇಕೆ ನಮ್ಮ ಗೊಡವೆ? ನಿಯಮಿತಕಾಲಕ್ಕೆ ಮುಂಚೆಯೇ ನಮ್ಮನ್ನು ಪೀಡಿಸಲು ಬಂದಿರಾ?" ಎಂದು ಕೂಗಿಕೊಂಡರು.
30 : ಹಂದಿಗಳ ದೊಡ್ಡ ಹಿಂಡೊಂದು ಅಲ್ಲಿಂದ ಸ್ವಲ್ಪ ದೂರದಲ್ಲೇ ಮೇಯುತ್ತಿತ್ತು.
31 : "ನೀವು ನಮ್ಮನ್ನು ಹೊರದೂಡಿದ್ದೇ ಆದರೆ ಆ ಹಂದಿಗಳ ಹಿಂಡಿಗೆ ನಮ್ಮನ್ನು ಕಳುಹಿಸಿಕೊಡಿ," ಎಂದು ಆ ದೆವ್ವಗಳು ಯೇಸುವನ್ನು ಬೇಡಿಕೊಂಡವು.
32 : ಯೇಸು, "ಹೋಗಿ" ಎಂದು ಅಪ್ಪಣೆಯಿತ್ತರು. ದೆವ್ವಗಳು ಹೊರಗೆ ಬಂದು ಹಂದಿಗಳ ಹಿಂಡನ್ನು ಹೊಕ್ಕವು. ಆಕ್ಷಣವೇ ಆ ಹಿಂಡೆಲ್ಲಾ ಬೆಟ್ಟದ ಕಡಿದಾದ ಬದಿಯಿಂದ ಧಾವಿಸಿ, ಸರೋವರಕ್ಕೆ ಬಿದ್ದು, ನೀರುಪಾಲಾಗಿ ಹೋಯಿತು.
33 : ಹಂದಿ ಮೇಯಿಸುತ್ತಿದ್ದವರು ಅಲ್ಲಿಂದ ಪಲಾಯನ ಮಾಡಿ ಊರಿಗೆ ಓಡಿಹೋಗಿ ನಡೆದದ್ದೆಲ್ಲವನ್ನೂ ಮತ್ತು ದೆವ್ವ ಮೆಟ್ಟಿದ್ದವರಿಗೆ ಸಂಭವಿಸಿದ್ದನ್ನೂ ವರದಿಮಾಡಿದರು.
34 : ಆಗ ಊರಿಗೆ ಊರೇ ಯೇಸುವನ್ನು ನೋಡಲು ಬಂದಿತು. ಅವರನ್ನು ಕಂಡು ತಮ್ಮ ಆಸುಪಾಸನ್ನು ಬಿಟ್ಟುಹೋಗಬೇಕೆಂದು ಮನವಿಮಾಡಿಕೊಂಡಿತು.

Holydivine