Revelation - Chapter 12
Holy Bible

1 : ಆಕಾಶದಲ್ಲಿ ಚಿಹ್ನೆಯೊಂದು ಕಾಣಿಸಿಕೊಂಡಿತು. ಮಹಿಳೆಯೊಬ್ಬಳು ಸೂರ್ಯಭೂಷಿತಳಾಗಿದ್ದಳು. ಆಕೆಯ ಪಾದದಡಿ ಚಂದ್ರನಿದ್ದನು. ತಲೆಯ ಮೇಲೆ ಹನ್ನೆರಡು ನಕ್ಷತ್ರ ಖಚಿತವಾದ ಕಿರೀಟವಿತ್ತು.
2 : ಆಕೆ ತುಂಬು ಗರ್ಭಿಣಿ, ಪ್ರಸವವೇದನೆಯಿಂದ ನರಳುತ್ತಿದ್ದಳು.
3 : ಆಕಾಶದಲ್ಲಿ ಮತ್ತೊಂದು ಚಿಹ್ನೆ ಕಾಣಿಸಿಕೊಂಡಿತು. ಅಲ್ಲಿ ಕೆಂಪು ಘಟಸರ್ಪವೊಂದು ಇತ್ತು. ಅದಕ್ಕೆ ಏಳು ತಲೆಗಳಿದ್ದವು, ಹತ್ತು ಕೊಂಬುಗಳಿದ್ದವು; ಅದರ ಏಳು ತಲೆಗಳ ಮೇಲೆ ಏಳು ಮುಕುಟಗಳಿದ್ದವು.
4 : ಅದು ತನ್ನ ಬಾಲದಿಂದ ಮೂರನೆಯ ಒಂದು ಭಾಗದಷ್ಟು ನಕ್ಷತ್ರಗಳನ್ನು ಆಕಾಶದಿಂದ ಸೆಳೆದೆಳೆದು ಅವುಗಳನ್ನು ಭೂಮಿಗೆ ಎಸೆಯಿತು. ಮಗು ಹುಟ್ಟಿದ ಕೂಡಲೇ ಅದನ್ನು ನುಂಗಿ ಬಿಡಬೇಕೆಂದು ಘಟಸರ್ಪವು ಆ ತುಂಬು ಗರ್ಭಿಣಿಯ ಬಳಿಯಲ್ಲಿಯೇ ಕಾಯ್ದುಕೊಂಡಿತು.
5 : ಸರ್ವಜನಾಂಗಗಳನ್ನು ಕಬ್ಬಿಣದ ದಂಡದಿಂದ ಆಳಬಲ್ಲಂಥ ಒಂದು ಗಂಡುಮಗುವಿಗೆ ಆಕೆ ಜನ್ಮವಿತ್ತಳು. ಆದರೆ, ಆ ಮಗುವನ್ನು ಸಿಂಹಾಸನದಲ್ಲಿದ್ದ ದೇವರ ಬಳಿಗೆ ಕೊಂಡೊಯ್ಯಲಾಯಿತು.
6 : ಆ ಮಹಿಳೆ ಅರಣ್ಯಕ್ಕೆ ಓಡಿಹೋದಳು. ಅಲ್ಲಿ ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಆಕೆಗೆ ಶುಶ್ರೂಷೆಯಾಗಬೇಕೆಂದು ದೇವರೇ ಆ ಸ್ಥಳವನ್ನು ಸಜ್ಜುಗೊಳಿಸಿದ್ದರು.
7 : ಸ್ವರ್ಗದಲ್ಲಿ ಒಂದು ಯುದ್ಧ ಪ್ರಾರಂಭವಾಯಿತು. ಮಿಕಾಯೇಲನು ತನ್ನ ಸಹದೂತರ ಸಹಿತ ಘಟಸರ್ಪದ ವಿರುದ್ಧ ಯುದ್ಧಮಾಡಿದನು. ಘಟಸರ್ಪವೂ ತನ್ನ ದೂತರ ಸಮೇತ ಯುದ್ಧದಲ್ಲಿ ಕಾದಾಡಿತು.
8 : ಆದರೆ ಜಯಗಳಿಸುವಷ್ಟು ಸಾಮಥ್ರ್ಯ ಘಟಸರ್ಪಕ್ಕಿರದೆ ಅದು ಸೋಲನ್ನಪ್ಪಿತು. ಹೀಗೆ ಸ್ವರ್ಗದಲ್ಲಿ ಅದಕ್ಕೂ ಅದರ ದೂತರಿಗೂ ಸ್ಥಳವಿಲ್ಲದಂತಾಯಿತು.
9 : ಸಮಸ್ತ ಜಗತ್ತನ್ನೂ ವಂಚಿಸುತ್ತಿದ್ದ ಆ ಮಹಾ ಘಟಸರ್ಪವನ್ನು ಭೂಮಿಗೆ ತಳ್ಳಲಾಯಿತು. ಈ ಪುರಾತನ ಸರ್ಪಕ್ಕೆ ‘ಪಿಶಾಚಿ’ ಎಂತಲೂ ‘ಸೈತಾನ’ ಎಂತಲೂ ಹೆಸರು. ಅದರ ದೂತರನ್ನು ಅದರೊಡನೆ ತಳ್ಳಲಾಯಿತು.
10 : ಸ್ವರ್ಗದಿಂದ ಬಂದ ಮಹಾಶಬ್ದವನ್ನು ನಾನು ಕೇಳಿಸಿಕೊಂಡೆ. ಅದು ಇಂತೆಂದಿತು: “ಇಗೋ, ನಮ್ಮ ದೇವನಿತ್ತ ಜೀವೋದ್ಧಾರ ಸಿದ್ಧಿಸಿದೆ. ಆತನ ಶಕ್ತಿ, ಸಾಮ್ರಾಜ್ಯಗಳು ಕಂಗೊಳಿಸುತ್ತಿವೆ. ಆತನ ಕ್ರಿಸ್ತಾಧಿಪತ್ಯ ಸ್ಥಾಪಿತವಾಗಿದೆ. ನಮ್ಮ ಸೋದರರನು ದೂರಿದವನನ್ನು ದಬ್ಬಲಾಗಿದೆ. ಹಗಲಿರುಳು ನಮ್ಮ ದೇವರೆದುರು ದೂರಿತ್ತಿದ್ದವನನ್ನು ತಳ್ಳಲಾಗಿದೆ.
11 : ಜಯಿಸಿದರು ಸೋದರರು ಆ ನಿಂದಕನನ್ನು ಯಜ್ಞದ ಕುರಿಮರಿಯ ರಕ್ತದಿಂದ ಸತ್ಯಕ್ಕೆ ಸಾಕ್ಷಿಯನ್ನಿತ್ತುದರಿಂದ ಜೀವದಾಶೆಯನು ತೊರೆದುದರಿಂದ ಮರಣದ ಭಯವನು ಬಿಸುಟುದರಿಂದ.
12 : ಎಂದೇ ಸ್ವರ್ಗಲೋಕ, ಸ್ವರ್ಗನಿವಾಸಿಗಳೆಲ್ಲ ನಲಿಯಲಿ! ಕ್ಷಿತಿಸಾಗರಗಳಿಗೆ ಒದಗಿದೆ ದುರ್ಗತಿ. ಬಂದಿಹನು ಪಿಶಾಚಿ ಕಡುರೋಷದಿಂದ ತನಗಿರುವ ಕಾಲ ತುಸುವೆಂಬ ತವಕದಿಂದ.”
13 : ಘಟಸರ್ಪವು ತನ್ನನ್ನು ಭೂಮಿಗೆ ತಳ್ಳಲಾಗಿರುವುದನ್ನು ಅರಿತು, ಗಂಡು ಮಗುವಿಗೆ ಜನ್ಮವಿತ್ತ ಆ ಮಹಿಳೆಯನ್ನು ಅಟ್ಟಿಸಿಕೊಂಡು ಓಡಿತು.
14 : ಆಗ ಆ ಮಹಿಳೆ ಅರಣ್ಯದಲ್ಲಿರುವ ತನ್ನ ಸ್ಥಳಕ್ಕೆ ಹಾರಿ ಹೋಗುವಂತೆ ದೊಡ್ಡ ಗರುಡಪಕ್ಷಿಗಿರುವಂಥ ಎರಡು ರೆಕ್ಕೆಗಳನ್ನು ಆಕೆಗೆ ಕೊಡಲಾಯಿತು; ಅಲ್ಲಿ ಘಟಸರ್ಪದ ಕಣ್ಣಿಗೆ ಬೀಳದೆ ಮೂರುವರೆ ವರ್ಷಗಳ ಕಾಲ ಪೋಷಣೆ ಹೊಂದುವಂತಾಯಿತು.
15 : ಆ ಘಟಸರ್ಪ ತನ್ನ ಬಾಯಿಂದ ನೀರನ್ನು ನದಿಯಂತೆ ಸುರಿಸುತ್ತಾ ಅದರಲ್ಲಿ ಆ ಮಹಿಳೆಯನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಲು ಯತ್ನಿಸಿತು.
16 : ಆದರೆ ಭೂಮಿ ಆಕೆಯ ನೆರವಿಗೆ ಬಂದಿತು. ಅದು ತನ್ನ ಬಾಯನ್ನು ತೆರೆದು ಘಟಸರ್ಪದ ಬಾಯಿಂದ ಹೊರಬಂದ ನದಿಯನ್ನು ಕುಡಿದು ಬಿಟ್ಟಿತು.
17 : ಇದರಿಂದಾಗಿ ಘಟಸರ್ಪಕ್ಕೆ ಆ ಮಹಿಳೆಯ ಮೇಲೆ ತೀವ್ರತರ ರೋಷವುಂಟಾಯಿತು. ಆಕೆಯ ಇನ್ನುಳಿದ ಸಂತತಿಯವರ ಮೇಲೆ, ಅಂದರೆ ದೇವರ ಆಜ್ಞೆಗಳನ್ನು ಅನುಸರಿಸಿ ನಡೆಯುವವರ ಮೇಲೆ ಹಾಗೂ ಯೇಸುಸ್ವಾಮಿಯ ಪರವಾಗಿ ಸಾಕ್ಷಿ ನೀಡುವವರ ಮೇಲೆ ಯುದ್ಧಮಾಡಲು ಹೊರಟುಹೋಯಿತು.

Holydivine