Revelation - Chapter 18
Holy Bible

1 : ಇವುಗಳಾದ ಬಳಿಕ ನಾನು ಮತ್ತೂ ಒಂದು ದಿವ್ಯದರ್ಶನವನ್ನು ಕಂಡೆ. ಸ್ವರ್ಗದಿಂದ ಮತ್ತೊಬ್ಬ ದೇವದೂತನು ಇಳಿದು ಬಂದನು. ಅವನು ವಿಶೇಷ ಅಧಿಕಾರ ಪಡೆದಿದ್ದನು. ಅವನ ತೇಜಸ್ಸು ಭೂಮಿಯನ್ನು ಬೆಳಗಿತು.
2 : ಅವನು ಗಟ್ಟಿಯಾದ ಧ್ವನಿಯಿಂದ ಇಂತೆಂದನು: “ಪತನ ಹೊಂದಿದಳು ಪತನ ಹೊಂದಿದಳು ಬಾಬಿಲೋನ್ ಮಹಾನಗರಿ ಪತನ ಹೊಂದಿದಳು ದೆವ್ವದುರಾತ್ಮಗಳಿಗೆ ಬೀಡಾದಳು ಅಶುದ್ಧ ಪ್ರಾಣಿಪಕ್ಷಿಗಳಿಗೆ ಗೂಡಾದಳು.
3 : ಕುಡಿಸಿದಳು ನಾಡುನಾಡುಗಳಿಗೆ ತನ್ನ ಹಾದರವೆಂಬ ಮದ್ಯವನು. ವ್ಯಭಿಚಾರಗೈದರು ಅವಳೊಡನೆ ಭೂರಾಜರು ಅವಳ ಭೋಗವಿಲಾಸದಿಂದ ಧನಿಕರಾದರು ಇಳೆಯ ವರ್ತಕರು.”
4 : ಸ್ವರ್ಗದಿಂದ ಬಂದ ಮತ್ತೊಂದು ವಾಣಿಯನು ಕೇಳಿದೆ. ಅದು: “ನನ್ನ ಜನರೇ, ಅವಳನ್ನು ತೊರೆದು ಹೊರಬನ್ನಿ, ಪಾಲುಗಾರರಾಗದಿರಿ ಅವಳ ಪಾಪಗಳಲಿ ತುತ್ತಾಗದಿರಿ ಅವಳಿಗೆ ಬಂದೆರಗುವ ವಿಪತ್ತುಗಳಲಿ!
5 : ಅವಳ ಪಾಪಗಳು ಬೆಳೆಬೆಳೆದು ಆಗಸಕ್ಕೇರುತಿವೆ ಅವಳ ಅಕ್ರಮ ಅನ್ಯಾಯಗಳು ದೇವರ ನೆನಪಿನಲ್ಲಿವೆ
6 : ಅವಳು ಅಳೆದ ಅಳತೆಯಲ್ಲೇ ನೀವು ಅವಳಿಗೆ ಅಳೆಯಿರಿ: ಅವಳ ಕೃತ್ಯಗಳಿಗೆ ಇಮ್ಮಡಿಯಾಗಿ ಹಿಂದಿರುಗಿಸಿರಿ ಬೆರೆಸಿಕೊಡಿ ದ್ವಿಗುಣದಿ ಅವಳೇ ಬೆರೆಸಿದ ಮದ್ಯದ ಬಟ್ಟಲಲಿ.
7 : ಅಹಂಭಾವದಿಂದಾಕೆ ಮೆರೆದುದಕೆ ಪೀಡಿಸಿ ಕಾಡಿಸಿರಿ ಸರಿಯಾದ ಅಳತೆಯಲ್ಲೇ. ಹೃದಯದಲಿ ಹೇಳುತಿಹಳು ಅವಳಿಂತು: ರಾಣಿಯಂತೆ ನಾ ಕುಳಿತಿಹೆನು ವಿಧವೆಯಲ್ಲ ನಾನೇನು ಕಾಣೆನೆಂದಿಗೂ ದುಃಖವನು.
8 : ಈ ಕಾರಣ, ಒಂದೇ ದಿನದಲಿ ಬಂದೆರಗುವುವು ಸಾವು ನೋವು ಕ್ಷಾಮಡಾಮರಗಳು ಬೆಂಕಿಯಲ್ಲವಳು ಭಸ್ಮವಾಗುವಳು ಅವಳ ದಂಡಿಪ ಪ್ರಭುವು ಬಲಾಢ್ಯ ದೇವನು.”
9 : ಅವಳೊಡನೆ ವ್ಯಭಿಚಾರಮಾಡಿದ ಹಾಗೂ ಭೋಗವಿಲಾಸದಿಂದ ಬಾಳಿದ ಭೂರಾಜರು ಅವಳನ್ನು ದಹಿಸುವ ಚಿತೆಯಿಂದ ಮೇಲೇರುವ ದಟ್ಟ ಹೊಗೆಯನ್ನು ದಿಟ್ಟಿಸಿ ನೋಡಿ ಶೋಕಿಸುವರು.
10 : ಅವಳಿಗಾದ ಚಿತ್ರಹಿಂಸೆಯ ನಿಮಿತ್ತ ಭಯಪಟ್ಟು ದೂರದಲ್ಲೇ ನಿಂತು ಗೋಳಾಡುತ್ತಾ: “ಅಯ್ಯೋ! ಅಯ್ಯೋ! ಬಲಿಷ್ಠ ಬಾಬಿಲೋನ್ ಮಹಾನಗರಿಯೇ ಒಂದೇ ತಾಸಿನಲ್ಲಿ ಬಂದೊದಗಿತಲ್ಲಾ ನಿನಗಿಂಥ ದುರ್ಗತಿ,” ಎಂದು ಪ್ರಲಾಪಿಸುವರು.
11 : ಈ ಲೋಕದ ವರ್ತಕರೂ ಅವಳ ನಿಮಿತ್ತ ಗೋಳಾಡುತ್ತಾ ತಮ್ಮ ಸರಕು ಸಾಮಗ್ರಿಗಳನ್ನು ಕೊಂಡುಕೊಳ್ಳುವವರು ಯಾರೂ ಇಲ್ಲವಲ್ಲಾ ಎಂದು ದುಃಖಿಸುವರು.
12 : ಇವರು ಚಿನ್ನ, ಬೆಳ್ಳಿ, ಮುತ್ತು, ರತ್ನಾಭರಣಗಳನ್ನೂ ನಯವಾದ ನಾರುಮಡಿ, ಕೆನ್ನೀಲಿಯ ವಸ್ತ್ರ, ರೇಷ್ಮೆ ಬಟ್ಟೆ ಮತ್ತು ಕಡುಗೆಂಪು ಉಡುಪುಗಳನ್ನೂ ಎಲ್ಲಾ ಬಗೆಯ ಗಂಧಕ ಚಕ್ಕೆಗಳನ್ನೂ ಎಲ್ಲಾ ವಿಧದ ದಂತದ ಸಾಮಾನುಗಳನ್ನೂ ಬಹು ಬೆಲೆಬಾಳುವ ಮರದ, ಕಂಚಿನ, ಕಬ್ಬಿಣದ, ಚಂದ್ರಕಾಂತ ಶಿಲೆಯ ಸಾಮಾನುಗಳನ್ನೂ ಅವಳಿಗೆ ಮಾರುತ್ತಿದ್ದರು.
13 : ಇದಲ್ಲದೆ ಚಕ್ಕೆ, ಲವಂಗ, ರಕ್ತಬೋಳ, ಧೂಪ, ಸುಗಂಧತೈಲ ಮತ್ತು ಸಾಂಬ್ರಾಣಿಗಳನ್ನೂ ಮದ್ಯ, ಎಣ್ಣೆ, ಹದವಾದ ಹಿಟ್ಟು, ಗೋದಿ ಇವುಗಳನ್ನೂ ದನ, ಕುರಿ, ಕುದುರೆ, ರಥ, ಗುಲಾಮ ಮತ್ತು ಜೀತದಾಳು ಇವೆಲ್ಲವನ್ನೂ ಆ ವರ್ತಕರು ಅವಳಿಗೆ ಮಾರುತ್ತಿದ್ದರು.
14 : “ಬಾಬಿಲೋನೇ, ನೀ ಹಂಬಲಿಸಿದ ಫಲ ನಿನ್ನಿಂದ ದೂರ ಸರಿಯಿತು ನಿನ್ನೆಲ್ಲ ವಿಲಾಸ ವೈಭವಗಳು ನಂದಿಹೋದವು ಮರಳಿ ಕಾಣವವು ಇನ್ನೆಂದಿಗೂ.”
15 : ವ್ಯಾಪಾರ ಮಾಡಿ ಅವಳಿಂದ ಧನಿಕರಾದ ವರ್ತಕರು ಅವಳಿಗುಂಟಾದ ಚಿತ್ರಹಿಂಸೆಯನ್ನು ದೂರದಲ್ಲಿ ನಿಂತು ನೋಡಿ, ಭಯಭ್ರಾಂತರಾಗಿ ಅವಳನ್ನುದ್ದೇಶಿಸಿ:
16 : “ಅಯ್ಯೋ! ಅಯ್ಯೋ! ಮಹಾನಗರಿ ನಿನಗೆಂಥಾ ದುರ್ಗತಿ! ಕೆನ್ನೀಲಿಯ ಕಡುಗೆಂಪಿನ ನಯವಸ್ತ್ರ ಗಳನುಟ್ಟವಳೇ, ಹೊನ್ನ ತೊಟ್ಟವಳೇ, ಮುತ್ತು ರತ್ನಾಭರಣಗಳನು ಧರಿಸಿದವಳೇ, ತಾಸೊಂದರಲೇ ನಿನ್ನ ಐಸಿರಿಯೆಲ್ಲಾ ವ್ಯರ್ಥವಾಯಿತೇ!” ಎಂದು ದುಃಖಿಸಿ ಅತ್ತು ಗೋಳಾಡುವರು.
17 : ಆಗ ಹಡಗುಗಳ ಮಾಲೀಕರೆಲ್ಲರೂ ಸಮುದ್ರದ ಪ್ರಯಾಣಿಕರೂ ನಾವಿಕರೂ ಸಮುದ್ರದ ದುಡಿಮೆಗಾರರೂ ದೂರದಲ್ಲಿ ನಿಂತಿದ್ದರು.
18 : ಅವರು ಅವಳನ್ನು ದಹಿಸಿದ ಬೆಂಕಿಯ ದಟ್ಟ ಹೊಗೆಯನ್ನು ಕಂಡು, “ಈ ಮಹಾನಗರಿಗೆ ಸರಿಸಮನಾದ ನಗರವೊಂದುಂಟೇ?” ಎಂದು ಉದ್ಗರಿಸಿದರು.
19 : ಅವರು ತಮ್ಮ ತಲೆಗಳ ಮೇಲೆ ಮಣ್ಣನ್ನು ಸುರಿದುಕೊಂಡು ಆರ್ತಧ್ವನಿಯಿಂದ: “ನಿನಗೆಂಥಾ ದುರ್ಗತಿ, ಓ ಮಹಾನಗರಿ! ಕಡಲಲಿ ಸಾಗುವ ಹಡಗಿನವರನ್ನೆಲ್ಲಾ ಧನಿಕರನ್ನಾಗಿಸಿದ ನಿನ್ನ ಐಸಿರಿಯಿಂದ ತಾಸೊಂದರಲೇ, ಅಯ್ಯೋ ನೀ ನಾಶ ಆದೆಯಲ್ಲಾ !” ಎಂದು ಪರಿತಪಿಸಿದರು.
20 : “ಸ್ವರ್ಗನಿವಾಸಿಗಳೇ, ಸಂಭ್ರಮಿಸಿ; ದೇವಜನರೇ, ಪೇಷಿತರೇ ಪ್ರವಾದಿಗಳೇ, ಹರ್ಷಿಸಿ! ದಂಡಿಸಿರುವರು ಅವಳನು ದೇವರೇ ಸರಿಯಾಗಿ ನಿಮಗಾಕೆ ಎಸಗಿದಕ್ಕೆ ಪ್ರತಿಯಾಗಿ.”
21 : ಆಗ ಒಬ್ಬ ಬಲಿಷ್ಠ ದೇವದೂತನು ಬೀಸುವ ಕಲ್ಲಿನಂತಿದ್ದ ಒಂದು ದೊಡ್ಡ ಕಲ್ಲನ್ನು ಎತ್ತಿ ಸಮುದ್ರಕ್ಕೆ ಎಸೆದು ಹೀಗೆಂದನು: “ಬಾಬಿಲೋನ್ ಮಹಾನಗರವನು ಈ ಪರಿಯಾಗಿ ಎತ್ತೆಸೆಯಲಾಗುವುದು ಅವಳಿದ್ದ ಎಡೆಯು ಯಾರಿಗೂ ಕಾಣಸಿಗದಂತಾಗುವುದು.
22 : “ಎಲೈ ಬಾಬಿಲೋನೇ, ಕಿನ್ನರಿಗಾರರ, ಸಂಗೀತಗಾರರ, ಕೊಳಲ ನುಡಿಸುವವರ, ತುತೂರಿಯನೂದುವವರ ಮಧುರ ಗಾನವು ಕೇಳಿಬರದು ನಿನ್ನಲಿ ಮತ್ತೆಂದೂ, ಕುಶಲಕರ್ಮಿಗಳಾರೂ ಕಾಣಸಿಗರು ಇನ್ನೆಂದೂ, ಬೀಸುವ ಕಲ್ಲಿನ ಶಬ್ದವೇ ಇರದು ನಿನ್ನಲ್ಲಿ ಎಂದೆಂದೂ !
23 : “ಉರಿಯುವ ದೀಪದ ಬೆಳಕು ಹೊಳೆಯದು ನಿನ್ನಲ್ಲಿ, ವಧುವರರ ಇನಿದನಿ ಕೇಳದು ನಿನ್ನಲ್ಲಿ. ಇದ್ದರು ನಿನ್ನ ವರ್ತಕರು ಇಳೆಗೆ ಧನವಂತರಾಗಿ, ಬಿದ್ದವು ರಾಷ್ಟ್ರಗಳು ನಿನ್ನ ಜಾಲಕೆ ವಂಚಿತರಾಗಿ.
24 : ಹರಿಯಿತಾ ನಗರದಲಿ ಪ್ರವಾದಿಗಳ ರಕ್ತ ದೇವಜನರ, ಭೂಮಿಯಲ್ಲಿ ಬಲಿಯಾದೆಲ್ಲರ ರಕ್ತ.”

Holydivine