Revelation - Chapter 20
Holy Bible

1 : ತರುವಾಯ ದೇವದೂತನೊಬ್ಬನು ಸ್ವರ್ಗದಿಂದ ಇಳಿದು ಬಂದುದನ್ನು ಕಂಡೆ. ಆತನ ಕೈಯಲ್ಲಿ ಪಾತಾಳದ ಬೀಗದ ಕೈ ಮತ್ತು ದೊಡ್ಡ ಸರಪಣಿ ಇದ್ದವು.
2 : ಪಿಶಾಚಿಯೂ ಸೈತಾನನೂ ಆಗಿರುವ ಘಟಸರ್ಪವನ್ನು, ಅಂದರೆ ಪುರಾತನ ಸರ್ಪವನ್ನು, ಆತನು ಹಿಡಿದು ಒಂದು ಸಾವಿರ ವರ್ಷಗಳ ಕಾಲ ಬಂಧನದಲ್ಲಿಟ್ಟನು.
3 : ಆ ಒಂದು ಸಾವಿರ ವರ್ಷಗಳ ಕಾಲದವರೆಗೆ, ಅದು ಜನಾಂಗಗಳನ್ನು ಮರುಳುಗೊಳಿಸದಂತೆ ದೇವದೂತನು ಸೈತಾನನನ್ನು ಪಾತಾಳಕ್ಕೆ ದಬ್ಬಿ, ಬಾಗಿಲು ಮುಚ್ಚಿ, ಅದಕ್ಕೆ ಮುದ್ರೆ ಹಾಕಿದನು. ಆ ಸಾವಿರ ವರ್ಷಗಳ ಕಾಲ ಮುಗಿದ ಮೇಲೆ ಅವನಿಗೆ ಸ್ವಲ್ಪ ಕಾಲ ಬಿಡುಗಡೆ ದೊರೆಯುವುದು.
4 : ಬಳಿಕ ಸಿಂಹಾಸನಗಳನ್ನು ಕಂಡೆ. ಅವುಗಳ ಮೇಲೆ ಕುಳಿತಿದ್ದವರಿಗೆ ತೀರ್ಪು ಕೊಡುವ ಅಧಿಕಾರವನ್ನು ಕೊಡಲಾಗಿತ್ತು. ಇದಲ್ಲದೆ, ಕ್ರಿಸ್ತೇಸುವಿನ ಪರವಾಗಿ ಸಾಕ್ಷಿಕೊಟ್ಟು ದೇವರ ವಾಕ್ಯದ ಪ್ರಚಾರಕ್ಕಾಗಿ ತಲೆತೆತ್ತ ಜೀವಾತ್ಮಗಳನ್ನು ಕಂಡೆ. ಇವರು ಆ ಮೃಗವನ್ನಾಗಲಿ, ಅದರ ವಿಗ್ರಹವನ್ನಾಗಲಿ ಪೂಜಿಸಿದವರಲ್ಲ; ತಮ್ಮ ಹಣೆಗಳ ಮೇಲಾಗಲಿ, ಕೈಗಳ ಮೇಲಾಗಲಿ ಅದರ ಗುರುತಿನ ಹಚ್ಚೆಯನ್ನೂ ಚುಚ್ಚಿಸಿಕೊಂಡವರಲ್ಲ. ಇವರು ಜೀವಂತರಾಗಿ ಕ್ರಿಸ್ತೇಸುವಿನೊಡನೆ ಒಂದು ಸಾವಿರ ವರ್ಷಗಳು ಆಳುವರು.
5 : ಇದೇ ಪ್ರಥಮ ಪುನರುತ್ಥಾನ. ಮರಣಹೊಂದಿದ್ದ ಇನ್ನುಳಿದವರು ಆ ಒಂದು ಸಾವಿರ ವರ್ಷಗಳು ಮುಗಿಯುವವರೆಗೆ ಜೀವಂತರಾಗಲಿಲ್ಲ.
6 : ಆ ಪ್ರಥಮ ಪುನರುತ್ಥಾನದಲ್ಲಿ ಸೇರಿರುವ ದೇವಜನರು ಭಾಗ್ಯವಂತರು. ಇಂಥವರ ಮೇಲೆ ಎರಡನೆಯ ಮರಣಕ್ಕೆ ಅಧಿಕಾರವಿಲ್ಲ. ಅವರು ದೇವರಿಗೂ ಕ್ರಿಸ್ತೇಸುವಿಗೂ ಯಾಜಕರಾಗಿ ಸೇವೆಸಲ್ಲಿಸುವರು; ಮತ್ತು ಕ್ರಿಸ್ತೇಸುವಿನೊಡನೆ ಒಂದು ಸಾವಿರ ವರ್ಷಗಳ ಕಾಲ ಆಳುವರು. ಸೈತಾನನ ಸರ್ವನಾಶ
7 : ಆ ಒಂದು ಸಾವಿರ ವರ್ಷಗಳು ಮುಗಿದ ನಂತರ ಸೈತಾನನನ್ನು ಬಂಧನದಿಂದ ಬಿಡುಗಡೆ ಮಾಡಲಾಗುವುದು.
8 : ಅವನು ಬಂದು ಭೂಮಿಯ ಅಷ್ಟದಿಕ್ಕುಗಳಲ್ಲಿರುವ ಗೋಗ್ ಮತ್ತು ಮಾಗೋಗ್ ಎಂಬ ಜನಾಂಗಗಳನ್ನು ಮರುಳುಗೊಳಿಸುವನು, ಯುದ್ಧ ಮಾಡುವುದಕ್ಕಾಗಿ ಅವರನ್ನು ಒಟ್ಟುಗೂಡಿಸುವನು. ಅವರ ಸಂಖ್ಯೆ ಸಮುದ್ರ ತೀರದ ಮರಳಿನಷ್ಟಿರುವುದು.
9 : ಅವರು ದೇಶದಲ್ಲೆಲ್ಲಾ ಹರಡಿಕೊಂಡು ದೇವಜನರ ಪಾಳೆಯಕ್ಕೂ ದೇವರ ಪ್ರಿಯ ಪಟ್ಟಣಕ್ಕೂ ಮುತ್ತಿಗೆ ಹಾಕಿದರು. ಆಗ ಸ್ವರ್ಗದಿಂದ ಬೆಂಕಿ ಇಳಿದು ಬಂದು ಅವರನ್ನು ದಹಿಸಿಬಿಟ್ಟಿತು.
10 : ಜನರನ್ನು ಮರುಳುಗೊಳಿಸುತ್ತಿದ್ದ ಪಿಶಾಚಿಯನ್ನು ಗಂಧಕದ ಅಗ್ನಿ ಸರೋವರಕ್ಕೆ ಎಸೆಯಲಾಯಿತು. ಆ ಮೃಗವನ್ನೂ ಕಪಟ ಪ್ರವಾದಿಯನ್ನೂ ಮೊದಲೇ ಅದಕ್ಕೆ ಎಸೆಯಲಾಗಿತ್ತು. ಇವರೆಲ್ಲರೂ ಯುಗಯುಗಾಂತರಗಳವರೆಗೆ ಹಗಲಿರುಳೆನ್ನದೆ ಅಲ್ಲಿಯೇ ಬೇನೆಬೇಗುದಿಗಳಿಂದ ನರಳುವರು. ಅಂತಿಮ ತೀರ್ಪು
11 : ಅನಂತರ ಶ್ವೇತವರ್ಣದ ಒಂದು ಮಹಾ ಸಿಂಹಾಸನವನ್ನು ಕಂಡೆ. ಅದರಲ್ಲಿ ಒಬ್ಬರು ಆಸೀನರಾಗಿದ್ದರು. ಅವರ ಸನ್ನಿಧಿಯಿಂದ ಭೂಮ್ಯಾಕಾಶಗಳು ತಮ್ಮ ಇರುವಿಕೆಯೇ ಇಲ್ಲದಂತೆ ಕಣ್ಮರೆಯಾಗಿ ಹೋದವು.
12 : ಇದಲ್ಲದೆ, ಮೃತರಾಗಿದ್ದ ಹಿರಿಯ ಕಿರಿಯರೆಲ್ಲರೂ ಸಿಂಹಾಸನದ ಸಾನ್ನಿಧ್ಯದಲ್ಲಿ ನಿಂತಿರುವುದನ್ನು ಕಂಡೆ. ಆಗ ಪುಸ್ತಕಗಳನ್ನು ತೆರೆಯಲಾಯಿತು. ಅನಂತರ ಮತ್ತೊಂದು ಪುಸ್ತಕವನ್ನು ತೆರೆಯಲಾಯಿತು. ಅದು ಜೀವಬಾಧ್ಯರ ಪಟ್ಟಿಯುಳ್ಳ ಪುಸ್ತಕ. ಆ ಪುಸ್ತಕದಲ್ಲಿ ಬರೆದಿದ್ದ ಪ್ರಕಾರ ಅವರವರ ಕೃತ್ಯಗಳಿಗೆ ತಕ್ಕಂತೆ ಮೃತರಿಗೆ ನ್ಯಾಯತೀರ್ಪು ಕೊಡಲಾಯಿತು.
13 : ಸಮುದ್ರವು ತನ್ನಲ್ಲಿದ್ದ ಮೃತರನ್ನು ಒಪ್ಪಿಸಿತು; ಮೃತ್ಯುವೂ ಪಾತಾಳವೂ ತಮ್ಮ ವಶದಲ್ಲಿದ್ದ ಮೃತರನ್ನು ಒಪ್ಪಿಸಿದವು; ಅವರಲ್ಲಿ ಪ್ರತಿಯೊಬ್ಬನಿಗೂ ಅವನವನ ಕೃತ್ಯಗಳಿಗೆ ತಕ್ಕಂತೆ ನ್ಯಾಯತೀರ್ಪು ಆಯಿತು.
14 : ಅನಂತರ ಮೃತ್ಯುವನ್ನೂ ಪಾತಾಳವನ್ನೂ ಅಗ್ನಿಸರೋವರಕ್ಕೆ ಎಸೆಯಲಾಯಿತು. ಆ ಅಗ್ನಿಸರೋವರವೇ ಎರಡನೆಯ ಮರಣ.
15 : ಯಾರ ಯಾರ ಹೆಸರು ಜೀವಬಾಧ್ಯರ ಪಟ್ಟಿಯಲ್ಲಿ ಲಿಖಿತವಾಗಿಲ್ಲವೋ ಅಂಥವರನ್ನು ಅಗ್ನಿ ಸರೋವರಕ್ಕೆ ಎಸೆಯಲಾಯಿತು.

Holydivine