Revelation - Chapter 21
Holy Bible

1 : ತರುವಾಯ ನೂತನ ಆಕಾಶ ಮಂಡಲವನ್ನೂ ನೂತನ ಭೂಮಂಡಲವನ್ನೂ ಕಂಡೆ. ಮೊದಲಿದ್ದ ಆಕಾಶಮಂಡಲವೂ ಮೊದಲಿದ್ದ ಭೂಮಂಡಲವೂ ಕಣ್ಮರೆಯಾಗಿ ಹೋದವು. ಸಮುದ್ರವು ಇನ್ನಿಲ್ಲವಾಯಿತು.
2 : ಇದಲ್ಲದೆ, ಪವಿತ್ರ ನಗರವಾದ ನೂತನ ಜೆರುಸಲೇಮ್ ಸ್ವರ್ಗದಿಂದಲೂ ದೇವರ ಸನ್ನಿಧಿಯಿಂದಲೂ ಕೆಳಗಿಳಿದು ಬರುವುದನ್ನು ಕಂಡೆ. ಅದು ಮದುಮಗನನ್ನು ಎದುರುಗೊಳ್ಳುವುದಕ್ಕಾಗಿ ಅಲಂಕೃತಳಾದ ಮದುವಣಗಿತ್ತಿಯಂತೆ ಶೃಂಗಾರಮಯವಾಗಿತ್ತು.
3 : ಆಗ ಸಿಂಹಾಸನದ ಕಡೆಯಿಂದ ಬಂದ ಮಹಾಧ್ವನಿ ಇಂತೆಂದಿತು: “ಇಗೋ ಮಾನವರ ಮಧ್ಯೆಯೇ ಇದೆ ದೇವಾಲಯ, ಆತನವರೊಡನೆ ವಾಸಿಸುವನು; ಅವರಾತನಿಗೆ ಪ್ರಜೆಗಳಾಗುವರು; ದೇವರೇ ಅವರುಗಳ ಜೊತೆಗಾರ; ಆತನಲ್ಲದೆ ಅವರಿಗಿಲ್ಲ ಬೇರಾವ ದೇವ.
4 : ಒರಸುವನಾತ ಅವರ ಕಂಬನಿಯನೆಲ್ಲಾ, ಇರದಿನ್ನು ಸಾವುನೋವು ಅವರಿಗೆಲ್ಲಾ; ಇರವು ಶೋಕ ದುಃಖಗಳಾವುವು ಮರೆಯಾಗಿ ಹೋದವು ಹಿಂದಿನದೆಲ್ಲವು.”
5 : ಸಿಂಹಾಸನಾರೂಢನಾಗಿದ್ದವನು ಆಗ, “ಇಗೋ, ನಾನೆಲ್ಲವನ್ನೂ ಹೊಸದಾಗಿಸುತ್ತೇನೆ,” ಎಂದನು. ಅಲ್ಲದೆ ಅವನು, “ಇದನ್ನು ನೀನು ಬರೆ, ಈ ಮಾತುಗಳು ಸತ್ಯವಾದುವು ಹಾಗೂ ವಿಶ್ವಾಸಾರ್ಹವಾದುವು,” ಎಂದು ಹೇಳಿದನು.
6 : ಸಿಂಹಾಸನಾರೂಢನಾಗಿದ್ದವನು ನನಗೆ ಮತ್ತೂ ಹೇಳಿದ್ದೇನೆಂದರೆ: “ಮುಗಿಸಿದ್ದಾಯಿತು, ‘ಅ’ಕಾರವೂ ‘ಳ’ಕಾರವೂ ನಾನೇ; ಆದಿಯೂ ಅಂತ್ಯವೂ ನಾನೇ; ಬಾಯಾರಿದವರಿಗೆ ಕೊಡುವೆ ಜೀವಜಲವನು ಉಚಿತವಾಗಿಯೇ.
7 : ಜಯಶಾಲಿಯಾದವನು ಆಗುವನು ಇದಕ್ಕೆಲ್ಲಾ ಬಾಧ್ಯನು ನಾನವನಿಗೆ ದೇವನಾಗಿರುವೆನು, ಅವನೆನಗೆ ಪುತ್ರನಾಗಿರುವನು
8 : ಆದರೆ ಹೇಡಿಗಳಿಗೆ, ಹೇಯಕೃತ್ಯಗಾರರಿಗೆ, ಅವಿಶ್ವಾಸಿಗಳಿಗೆ, ಹಲವು ಅಸತ್ಯಗಾರರಿಗೆ, ಕಾಮುಕರಿಗೆ, ಕೊಲೆಗಾರರಿಗೆ ವಿಗ್ರಹಾರಾಧಕರಿಗೆ, ಮಾಟಮಂತ್ರಗಾರರಿಗೆ ಗಂಧಕದಿಂದುರಿಯುವ ಅಗ್ನಿಸರೋವರವೇ ಗತಿ ಇದುವೇ ಅವರೆಲ್ಲರ ಎರಡನೆಯ ಮೃತಿ,” ಎಂದು ಹೇಳಿದನು. ನೂತನ ಜೆರುಸಲೇಮ್
9 : ಏಳು ಅಂತಿಮ ವಿಪತ್ತುಗಳಿಂದ ತುಂಬಿದ್ದ ಏಳು ಪಾತ್ರೆಗಳನ್ನು ಹಿಡಿದಿದ್ದ ಏಳು ದೇವದೂತರುಗಳಲ್ಲಿ ಒಬ್ಬನು ಬಂದು, ನನ್ನೊಡನೆ ಮಾತನಾಡಿ ಇಂತೆಂದನು: “ಇಲ್ಲಿಗೆ ಬಾ, ಯಜ್ಞದ ಕುರಿಮರಿಗೆ ಸತಿಯಾಗಲಿರುವ ಮದುವಣಗಿತ್ತಿಯನ್ನು ನಿನಗೆ ತೋರಿಸುತ್ತೇನೆ,” ಎಂದನು.
10 : ಆಗ ನಾನು ಪವಿತ್ರಾತ್ಮವಶನಾದೆ. ಆ ದೇವದೂತನು ನನ್ನನ್ನು ಎತ್ತರವಾದ ಬೆಟ್ಟದ ಮೇಲೆ ಕೊಂಡೊಯ್ದನು. ಅಲ್ಲಿ ನನಗೆ ಪವಿತ್ರ ನಗರವಾದ ಜೆರುಸಲೇಮನ್ನು ತೋರಿಸಿದನು. ಅದು ಸ್ವರ್ಗದಲ್ಲಿರುವ ದೇವರ ಬಳಿಯಿಂದ ಕೆಳಗಿಳಿದು ಬರುತ್ತಿತ್ತು;
11 : ದೇವರ ತೇಜಸ್ಸಿನಿಂದ ಕೂಡಿತ್ತು; ಅಮೂಲ್ಯ ರತ್ನದಂತೆ ಹೊಳೆಯುತ್ತಿತ್ತು; ಸ್ವಚ್ಛವಾದ ಸ್ಫಟಿಕದಂತೆ ಶುಭ್ರವಾಗಿತ್ತು.
12 : ಆ ನಗರದ ಸುತ್ತಲೂ ಎತ್ತರವಾದ ಕೋಟೆಯಿತ್ತು. ಅದಕ್ಕೆ ಹನ್ನೆರಡು ಹೆಬ್ಬಾಗಿಲುಗಳಿದ್ದವು. ಆ ಬಾಗಿಲುಗಳಿಗೆ ಹನ್ನೆರಡು ಮಂದಿ ದೇವದೂತರುಗಳು ಕಾವಲಿದ್ದರು. ಆ ಬಾಗಿಲುಗಳ ಮೇಲೆ ಇಸ್ರಯೇಲಿನ ಹನ್ನೆರಡು ಕುಲಗಳ ಹೆಸರುಗಳನ್ನು ಬರೆದಿತ್ತು.
13 : ಪೂರ್ವದಿಕ್ಕಿನಲ್ಲಿ ಮೂರು ಬಾಗಿಲುಗಳು, ಉತ್ತರ ದಿಕ್ಕಿನಲ್ಲಿ ಮೂರು ಬಾಗಿಲುಗಳು, ದಕ್ಷಿಣ ದಿಕ್ಕಿನಲ್ಲಿ ಮೂರು ಬಾಗಿಲುಗಳು ಮತ್ತು ಪಶ್ಚಿಮ ದಿಕ್ಕಿನಲ್ಲಿ ಮೂರು ಬಾಗಿಲುಗಳು ಇದ್ದವು.
14 : ಆ ನಗರದ ಕೋಟೆಗೆ ಹನ್ನೆರಡು ಅಸ್ತಿವಾರಗಳಿದ್ದವು. ಅವುಗಳ ಮೇಲೆ ಹನ್ನೆರಡು ಹೆಸರುಗಳಿದ್ದವು. ಯಜ್ಞದ ಕುರಿಮರಿಯ ಹನ್ನೆರಡು ಪ್ರೇಷಿತರ ಹೆಸರುಗಳು ಅವು.
15 : ನನ್ನೊಡನೆ ಮಾತನಾಡುತ್ತಿದ್ದ ದೇವದೂತನು ಆ ನಗರವನ್ನೂ ಅದರ ಹೆಬ್ಬಾಗಿಲುಗಳನ್ನೂ ಕೋಟೆಗಳನ್ನೂ ಅಳತೆಮಾಡುವುದಕ್ಕಾಗಿ ಒಂದು ಚಿನ್ನದ ಅಳತೆಗೋಲನ್ನು ಹಿಡಿದಿದ್ದನು.
16 : ಆ ನಗರ ಚಚ್ಚೌಕವಾಗಿತ್ತು. ಅದರ ಚದರ ಅಳತೆ 2,400 ಕಿಲೊವಿೂಟರುಗಳಷ್ಟಿತ್ತು.
17 : ಅನಂತರ, ಆತನು ನಗರದ ಕೋಟೆಯನ್ನು ಅಳೆದನು. ಅದು ಆತನು ಅಳೆದ ಅಳತೆಯ ಪ್ರಮಾಣದಲ್ಲಿ ಅರವತ್ತು ವಿೂಟರಿನಷ್ಟು ಎತ್ತರವಾಗಿತ್ತು.
18 : ಆ ಕೋಟೆಯನ್ನು ಸೂರ್ಯಕಾಂತ ಶಿಲೆಯಿಂದ ನಿರ್ಮಿಸಲಾಗಿತ್ತು. ನಗರವು ಅಪ್ಪಟ ಬಂಗಾರದಂತೆ ಥಳಥಳಿಸುತ್ತಿತ್ತು.
19 : ನಗರದ ಕೋಟೆಯ ಅಸ್ತಿವಾರಗಳು ಸಕಲ ವಿಧವಾದ ರತ್ನಗಳಿಂದ ಅಲಂಕೃತವಾಗಿತ್ತು. ಮೊದಲನೆಯ ಅಸ್ತಿವಾರವನ್ನು ಸೂರ್ಯಕಾಂತ ಶಿಲೆಯಿಂದಲೂ ಎರಡನೆಯ ಅಸ್ತಿವಾರವನ್ನು ವೈಢೂರ್ಯದಿಂದಲೂ ಮೂರನೆಯ ಅಸ್ತಿವಾರವನ್ನು ಪಚ್ಚೆಯಿಂದಲೂ ಮತ್ತು ನಾಲ್ಕನೆಯ ಅಸ್ತಿವಾರವನ್ನು ಪದ್ಮರಾಗದಿಂದಲೂ ಅಲಂಕೃತಗೊಳಿಸಲಾಗಿತ್ತು.
20 : ಅಂತೆಯೇ, ಐದನೆಯ ಅಸ್ತಿವಾರವನ್ನು ಗೋಮೇಧಿಕದಿಂದಲೂ ಆರನೆಯದನ್ನು ಮಾಣಿಕ್ಯದಿಂದಲೂ ಏಳನೆಯದನ್ನು ಪೀತರತ್ನದಿಂದಲೂ ಎಂಟನೆಯದನ್ನು ಬೆರುಲ್ಲದಿಂದಲೂ ಒಂಭತ್ತನೆಯದನ್ನು ಪುಷ್ಯರಾಗದಿಂದಲೂ ಹತ್ತನೆಯದನ್ನು ಗರುಡ ಪಚ್ಚೆಯಿಂದಲೂ ಹನ್ನೊಂದನೆಯದನ್ನು ಇಂದ್ರನೀಲದಿಂದಲೂ ಹಾಗೂ ಹನ್ನೆರಡನೆಯದನ್ನು ನೀಲಸ್ಫಟಿಕದಿಂದಲೂ ಅಲಂಕೃತಗೊಳಿಸಲಾಗಿತ್ತು.
21 : ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿಯೊಂದು ಹೆಬ್ಬಾಗಿಲನ್ನು ಒಂದೊಂದು ಮುತ್ತಿನಿಂದ ಮಾಡಲಾಗಿತ್ತು. ನಗರದ ಬೀದಿ ಸ್ವಚ್ಛವಾದ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು.
22 : ಆ ನಗರದಲ್ಲಿ ನಾನು ದೇವಾಲಯವನ್ನು ಕಾಣಲಿಲ್ಲ; ಏಕೆಂದರೆ, ಸರ್ವಶಕ್ತ ದೇವರಾದ ಪ್ರಭುವೂ ಯಜ್ಞದ ಕುರಿಮರಿಯಾದಾತನೂ ಅದರ ದೇವಾಲಯವಾಗಿದ್ದಾರೆ.
23 : ನಗರಕ್ಕೆ ಬೆಳಕನ್ನು ಕೊಡಲು ಸೂರ್ಯನ ಇಲ್ಲವೆ ಚಂದ್ರನ ಅವಶ್ಯಕತೆ ಇಲ್ಲ. ಏಕೆಂದರೆ, ದೇವರ ತೇಜಸ್ಸೇ ಅದಕ್ಕೆ ಬೆಳಕು; ಯಜ್ಞದ ಕುರಿಮರಿಯೇ ಅದಕ್ಕೆ ಜ್ಯೋತಿ.
24 : ಅದರ ಬೆಳಕಿನಲ್ಲಿ ಸರ್ವ ಜನಾಂಗಗಳು ಸಂಚರಿಸುವರು. ಭೂರಾಜರು ತಮ್ಮ ಸಿರಿಸಂಪತ್ತನ್ನು ಅಲ್ಲಿಗೆ ತರುವರು.
25 : ಹಗಲಿನಲ್ಲಿ ಅದರ ಹೆಬ್ಬಾಗಿಲುಗಳನ್ನು ಮುಚ್ಚುವಂತಿಲ್ಲ. ರಾತ್ರಿಯೆಂಬುದು ಅಲ್ಲಿ ಇಲ್ಲವೇ ಇಲ್ಲ.
26 : ರಾಷ್ಟ್ರಗಳ ಸಿರಿಸಂಪತ್ತನ್ನೂ ಘನಮಾನವನ್ನೂ ಅಲ್ಲಿಗೆ ತರಲಾಗುವುದು.
27 : ಆದರೆ ಅಶುದ್ಧವಾದುದು ಯಾವುದೂ ಅದನ್ನು ಸೇರಲಾರದು. ಅಂತೆಯೇ, ಹೇಯ ಕೃತ್ಯಗಳನ್ನೆಸಗುವವನೂ ಅಸತ್ಯವನ್ನು ಆಡುವವನೂ ಅದನ್ನು ಸೇರಲಾರನು. ಯಜ್ಞದ ಕುರಿಮರಿಯ ಜೀವಬಾಧ್ಯರ ಪಟ್ಟಿಯಲ್ಲಿ ಯಾರ ಯಾರ ಹೆಸರುಗಳು ಲಿಖಿತವಾಗಿವೆಯೋ ಅಂಥವರು ಮಾತ್ರ ಅದನ್ನು ಪ್ರವೇಶಿಸಬಲ್ಲರು.

Holydivine