Revelation - Chapter 22
Holy Bible

1 : ಬಳಿಕ ಆ ದೇವದೂತನು ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ಸ್ಫಟಿಕದಂತೆ ಮಿನುಗುತ್ತಿತ್ತು. ಅದು ದೇವರ ಹಾಗೂ ಯಜ್ಞದ ಕುರಿಮರಿಯ ಸಿಂಹಾಸನದಲ್ಲಿ ಉಗಮಿಸಿ,
2 : ನಗರದ ಹೆದ್ದಾರಿಯ ಮಧ್ಯದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲೂ ಜೀವವೃಕ್ಷವಿತ್ತು. ಅದು ವರ್ಷದಲ್ಲಿ ಹನ್ನೆರಡು ಸಾರಿ ಫಲ ಕೊಡುವಂಥದ್ದು; ಪ್ರತೀ ತಿಂಗಳೂ ಫಸಲನ್ನೀಯುವಂಥದ್ದು. ಆ ವೃಕ್ಷದ ಎಲೆಗಳನ್ನು ರಾಷ್ಟ್ರಗಳಿಗೆ ಸಿದ್ದೌಷಧಿಯನ್ನಾಗಿ ಉಪಯೋಗಿಸಲಾಗುವುದು.
3 : ಶಾಪಗ್ರಸ್ತವಾದುದು ಯಾವುದೂ ಆ ನಗರದಲ್ಲಿ ಇರದು. ದೇವರ ಮತ್ತು ಯಜ್ಞದ ಕುರಿಮರಿಯ ಸಿಂಹಾಸನವು ಅಲ್ಲಿರುವುದು. ಸದಾ ಯಾಜಕ ಸೇವೆ ಸಲ್ಲಿಸುವ ಅವರ ದಾಸರಿಗೆ ಅದರ ಮುಖದರ್ಶನವಾಗುವುದು.
4 : ಆ ಹೆಸರು ಆ ದಾಸರ ಹಣೆಗಳ ಮೇಲೆ ಲಿಖಿತವಾಗಿರುವುದು.
5 : ರಾತ್ರಿ ಎಂಬುದೇ ಅಲ್ಲಿ ಇರದು; ದೀಪದ ಇಲ್ಲವೇ ಸೂರ್ಯನ ಬೆಳಕಿನ ಅವಶ್ಯಕತೆಯೂ ಇರದು; ದೇವರಾದ ಪ್ರಭುವೇ ಅವರಿಗೆ ಬೆಳಕಾಗಿರುವರು. ಯುಗಯುಗಾಂತರಕ್ಕೂ ಅವರು ರಾಜ್ಯವಾಳುವರು. ಯೇಸುವಿನ ಪುನರಾಗಮನ
6 : ಅನಂತರ ಆ ದೇವದೂತನು ನನಗೆ, “ಈ ಮಾತುಗಳು ಸತ್ಯವಾದುವು, ನಂಬಲರ್ಹವಾದುವು. ಪ್ರವಾದಿಗಳಿಗೆ ಆತ್ಮ ಪ್ರೇರಣೆಯನ್ನೀಯುವ ದೇವರಾದ ಪ್ರಭುವೇ ಬೇಗನೆ ಸಂಭವಿಸಲಿರುವುವುಗಳನ್ನು ತಮ್ಮ ದಾಸರಿಗೆ ತಿಳಿಸಲು ತಮ್ಮ ದೂತನನ್ನೇ ಕಳಿಸಿದ್ದಾರೆ.
7 : “ಯೇಸುಸ್ವಾಮಿ ನುಡಿಯುವುದನ್ನು ಕೇಳು: ‘ಇಗೋ, ನಾನು ಬೇಗನೆ ಬರುತ್ತೇನೆ.’ ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾ ವಾಕ್ಯಗಳನ್ನು ಕೈಗೊಂಡು ನಡೆಯುವವನು ಧನ್ಯನು!” ಎಂದು ಹೇಳಿದನು.
8 : ಯೊವಾನ್ನನೆಂಬ ನಾನೇ ಇವುಗಳನ್ನೆಲ್ಲಾ ಕೇಳಿದವನು ಮತ್ತು ಕಂಡವನು. ಇವುಗಳನ್ನು ಕಂಡು ಕೇಳಿದಾಗ, ಇವುಗಳನ್ನು ನನಗೆ ತೋರಿಸಿದ ದೇವದೂತನನ್ನು ಆರಾಧಿಸಬೇಕೆಂದು ಆತನ ಪಾದಗಳಿಗೆ ಅಡ್ಡಬಿದ್ದೆ.
9 : ಆದರೆ ಆತನು, “ನೀನು ನನಗೆ ಅಡ್ಡಬೀಳಬೇಡ, ಪ್ರವಾದಿಗಳಾದ ನಿನ್ನ ಸಹೋದರರಿಗೂ ಈ ಪುಸ್ತಕದಲ್ಲಿ ಬರೆದಿರುವ ವಾಕ್ಯಗಳನ್ನು ಕೈಗೊಂಡು ನಡೆಯುವವರಿಗೂ ನಿನಗೂ ನಾನು ಸಹಸೇವಕನು ಮಾತ್ರ. ಆದ್ದರಿಂದ ನೀನು ದೇವರನ್ನು ಆರಾಧಿಸು,” ಎಂದು ತಿಳಿಸಿದನು.
10 : ಇದಲ್ಲದೆ ಆತನು ನನಗೆ, “ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾವಾಕ್ಯಗಳಿಗೆ ಮುದ್ರೆ ಹಾಕಿ ಮುಚ್ಚಿಡಬೇಡ; ಇವು ನೆರವೇರುವ ಕಾಲವು ಸವಿೂಪಿಸಿತು.
11 : ಅಕ್ರಮಿಯು ತನ್ನ ಅಕ್ರಮವನ್ನು ಮುಂದುವರೆಸಲಿ. ಅಶುದ್ಧನು ತನ್ನ ಅಶುದ್ಧತೆಯಲ್ಲಿ ಮುಂದುವರಿಯಲಿ. ಸಜ್ಜನನು ತನ್ನ ಸನ್ನಡತೆಯಲ್ಲಿಯೇ ನಿರತನಾಗಿರಲಿ. ಪವಿತ್ರನು ತನ್ನ ಪಾವಿತ್ರ್ಯತೆಯನ್ನು ಹೆಚ್ಚಿಸಿಕೊಳ್ಳಲಿ,” ಎಂದನು.
12 : “ಯೇಸುಸ್ವಾಮಿ ನುಡಿಯುವುದನ್ನು ಕೇಳು: ‘ಇಗೋ, ನಾನು ಬೇಗನೆ ಬರುತ್ತೇನೆ. ಪ್ರತಿಯೊಬ್ಬನಿಗೂ ಅವನವನ ಕೃತ್ಯಗಳಿಗೆ ತಕ್ಕಂತೆ ಕೊಡಲಾಗುವ ಪ್ರತಿಫಲವು ನನ್ನ ಕೈಯಲ್ಲೇ ಇದೆ.
13 : ‘ಅ’ಕಾರವೂ ‘ಳ’ಕಾರವೂ ನಾನೇ ಆದಿಯೂ ಅಂತ್ಯವೂ ನಾನೇ ಆರಂಭವೂ ಸಮಾಪ್ತಿಯೂ ನಾನೇ.”
14 : ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರವಾಗಿಟ್ಟುಕೊಂಡಿರುವವರು ಭಾಗ್ಯವಂತರು. ಜೀವವೃಕ್ಷದ ಫಲವನ್ನು ಸವಿಯುವ ಹಕ್ಕು ಅವರಿಗಿರುತ್ತದೆ. ಹೆಬ್ಬಾಗಿಲಿನ ಮೂಲಕ ಅವರು ಆ ನಗರವನ್ನು ಸೇರುವರು.
15 : ಆದರೆ ಶುನಕ ಸಮಾನರೂ ಮಾಟಮಂತ್ರಗಾರರೂ ಕಾಮುಕರೂ ಕೊಲೆಗಾರರೂ ವಿಗ್ರಹಾರಾಧಕರೂ ಅಸತ್ಯವಾದಿಗಳೂ ನಗರದ ಹೊರಗೆ ಬಿದ್ದಿರುವರು. ಮುಕ್ತಾಯ
16 : “ಯೇಸುವೆಂಬ ನಾನೇ ನನ್ನ ಸಭೆಗಳ ಪ್ರಯೋಜನಾರ್ಥವಾಗಿ ಈ ಸಂಗತಿಗಳ ಬಗ್ಗೆ ನಿಮಗೆ ಸಾಕ್ಷಿನೀಡಲೆಂದು ನನ್ನ ದೂತನನ್ನು ಕಳುಹಿಸಿದೆನು. ನಾನು ದಾವೀದಕುಲಪುತ್ರ. ಅದೇ ವಂಶದ ಕುಡಿ; ಉದಯಕಾಲದ ಉಜ್ವಲ ನಕ್ಷತ್ರ!”
17 : ದೇವರಾತ್ಮ ಹಾಗು ಮದುವಣಗಿತ್ತಿ, ‘ಬಾ’ ಎಂದು ಆಹ್ವಾನಿಸುತ್ತಾರೆ. ಇದನ್ನು ಕೇಳಿಸಿಕೊಳ್ಳುವ ಪ್ರತಿಯೊಬ್ಬನೂ ‘ಬಾ’ ಎಂದು ಹೇಳಲಿ. ಬಾಯಾರಿದವನು ಬರಲಿ; ಇಷ್ಟವುಳ್ಳವನು ಜೀವಜಲವನ್ನು ಉಚಿತವಾಗಿ ಪಡೆಯಲಿ.
18 : ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾ ವಾಕ್ಯಗಳನ್ನು ಕೇಳುವ ಪ್ರತಿಯೊಬ್ಬನಿಗೂ ನಾನು ಕೊಡುವ ಎಚ್ಚರಿಕೆ ಇದು: “ಯಾವನಾದರೂ ಇವುಗಳಿಗೆ ಏನನ್ನಾದರೂ ಕೂಡಿಸಿದರೆ, ದೇವರು ಅವನ ಮೇಲೆ ಪುಸ್ತಕದಲ್ಲಿ ಬರೆದಿರುವ ವಿಪತ್ತುಗಳು ಬಂದೆರಗುವಂತೆ ಮಾಡುವರು.
19 : ಯಾವನಾದರೂ ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾ ವಾಕ್ಯಗಳಲ್ಲಿ ಏನನ್ನಾದರೂ ತೆಗೆದು ಹಾಕಿದರೆ, ಈ ಪುಸ್ತಕದಲ್ಲಿ ವಿವರಿಸಿರುವ ಜೀವವೃಕ್ಷದಲ್ಲಿಯೂ ಪವಿತ್ರ ನಗರದಲ್ಲಿಯೂ ಅವನಿಗೆ ಸಿಗುವ ಪಾಲನ್ನು ದೇವರು ತೆಗೆದುಬಿಡುವರು.”
20 : ಇದಕ್ಕೆಲ್ಲಾ ಸಾಕ್ಷಿಯಾಗಿರುವಾತನು, “ಹೌದು, ನಾನು ಬೇಗನೆ ಬರುತ್ತೇನೆ,” ಎಂದು ಹೇಳುತ್ತಾನೆ. ಆಮೆನ್. ಪ್ರಭು ಯೇಸುವೇ, ಬನ್ನಿ.
21 : ಪ್ರಭು ಯೇಸುವಿನ ಕೃಪಾಶೀರ್ವಾದಗಳು ಎಲ್ಲರಲ್ಲೂ ಇರಲಿ !

Holydivine