Revelation - Chapter 6
Holy Bible

1 : ಇದನ್ನೂ ನಾನು ಕಂಡೆ: ಯಜ್ಞದ ಕುರಿಮರಿಯಾದಾತನು ಏಳು ಮುದ್ರೆಗಳಲ್ಲಿ ಒಂದನ್ನು ಒಡೆದನು. ಆ ನಾಲ್ಕು ಜೀವಿಗಳಲ್ಲಿ ಒಂದು ಜೀವಿ ಗುಡುಗಿನಂತಿದ್ದ ಸ್ವರದಿಂದ, “ಇಲ್ಲಿ ಬಾ,” ಎಂದು ಕರೆಯುವುದನ್ನು ನಾನು ಕೇಳಿಸಿಕೊಂಡೆ.
2 : ಆಗ ಬಿಳಿಯ ಕುದುರೆಯೊಂದು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಕೈಯಲ್ಲಿ ಬಿಲ್ಲೊಂದು ಇತ್ತು. ಅವನಿಗೆ ಜಯಮಾಲೆಯನ್ನು ಹಾಕಲಾಗಿತ್ತು. ಅವನು ಜಯಪ್ರದನಾಗಿ, ಜಯದ ಮೇಲೆ ಜಯಗಳಿಸುವ ಸಲುವಾಗಿ ಹೊರಟು ಹೋದನು.
3 : ಅನಂತರ ಯಜ್ಞದ ಕುರಿಮರಿಯು ಎರಡನೆಯ ಮುದ್ರೆಯನ್ನು ಒಡೆದಾಗ, ಎರಡನೆಯ ಜೀವಿಯು, “ಇಲ್ಲಿ ಬಾ,” ಎಂದು ಕರೆಯುವುದನ್ನು ನಾನು ಕೇಳಿಸಿಕೊಂಡೆ.
4 : ಆಗ ಕೆಂಪು ಕುದುರೆ ಒಂದು ಹೊರಟುಬಂದಿತು. ಅದರ ಮೇಲೆ ಒಬ್ಬನು ಕುಳಿತಿದ್ದನು. ವಿಶ್ವದಲ್ಲಿ ಶಾಂತಿಯನ್ನು ಅಳಿಸಿಹಾಕಿ ಲೋಕದ ಜನರು ಒಬ್ಬರನ್ನೊಬ್ಬರು ಕೊಲ್ಲುವಂತೆ ಮಾಡುವ ಅಧಿಕಾರವನ್ನು ಅವನಿಗೆ ಕೊಡಲಾಗಿತ್ತು. ಇದಲ್ಲದೆ, ಅವನಿಗೆ ದೊಡ್ಡ ಖಡ್ಗವನ್ನೂ ಸಹ ಕೊಡಲಾಗಿತ್ತು.
5 : ಆ ಯಜ್ಞದ ಕುರಿಮರಿ ಮೂರನೆಯ ಮುದ್ರೆಯನ್ನು ಒಡೆದಾಗ, ಮೂರನೆಯ ಜೀವಿಯು, “ಇಲ್ಲಿ ಬಾ,” ಎಂದು ಕರೆಯುವುದನ್ನು ನಾನು ಕೇಳಿಸಿಕೊಂಡೆ. ಆಗ ಕಪ್ಪು ಕುದುರೆಯೊಂದು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಕೈಯಲ್ಲಿ ತಕ್ಕಡಿ ಇತ್ತು.
6 : ನಾಲ್ಕು ಜೀವಿಗಳ ಮಧ್ಯದಿಂದ ಹೊರಟಿತೋ ಎಂಬಂತೆ ಒಂದು ಧ್ವನಿ ನನಗೆ ಕೇಳಿಸಿತು. ಅದು “ದಿನದ ಕೂಲಿಗೆ ಒಂದು ಕಿಲೋ ಗ್ರಾಂ ಗೋದಿ; ದಿನದ ಕೂಲಿಗೆ ಮೂರು ಕಿಲೋಗ್ರಾಂ ಜವೆಗೋದಿ; ಆದರೆ ಎಣ್ಣೆಯನ್ನಾಗಲಿ, ದ್ರಾಕ್ಷಾರಸವನ್ನಾಗಲಿ ಕೆಡಿಸಬೇಡ,” ಎಂದು ಹೇಳಿತು.
7 : ಆ ಯಜ್ಞದ ಕುರಿಮರಿ ನಾಲ್ಕನೆಯ ಮುದ್ರೆಯನ್ನು ಒಡೆದಾಗ, ನಾಲ್ಕನೆಯ ಜೀವಿ “ಇಲ್ಲಿ ಬಾ”, ಎಂದು ಕರೆಯುವುದನ್ನು ನಾನು ಕೇಳಿಸಿಕೊಂಡೆ.
8 : ಆಗ ಬೂದು ಕುದುರೆಯೊಂದು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಹೆಸರು, ‘ಮೃತ್ಯು’ ಎಂದು. ಅವನನ್ನು ‘ಮೃತ್ಯುಲೋಕ’ ಎಂಬಾತನು ಹಿಂಬಾಲಿಸಿದನು. ಇವರಿಗೆ ಖಡ್ಗ, ಕ್ಷಾಮ, ಅಂಟುಜಾಡ್ಯ, ಕಾಡುಮೃಗ ಇವುಗಳಿಂದ ಭೂಲೋಕದ ಕಾಲುಭಾಗದ ಜನತೆಯನ್ನು ಕೊಂದುಹಾಕುವುದಕ್ಕೆ ಅಧಿಕಾರವನ್ನು ಕೊಡಲಾಗಿತ್ತು.
9 : ಯಜ್ಞದ ಕುರಿಮರಿಯಾದಾತ ಐದನೆಯ ಮುದ್ರೆಯನ್ನು ಒಡೆದನು. ದೇವರ ಸಂದೇಶವನ್ನು ಸಾರಿದ ಪ್ರಯುಕ್ತ ಮತ್ತು ಪ್ರಾಮಾಣಿಕ ಸಾಕ್ಷ್ಯದ ಪ್ರಯುಕ್ತ ಹತರಾದವರ ಆತ್ಮಗಳು ಬಲಿಪೀಠದ ಕೆಳಗೆ ಇರುವುದನ್ನು ನಾನು ಕಂಡೆ.
10 : ಅವರು ಆರ್ತಧ್ವನಿಯಿಂದ, “ಸರ್ವಶಕ್ತ ಪ್ರಭುವೇ, ಸತ್ಯವಂತರೇ, ಪರಿಶುದ್ಧರೇ, ನಮ್ಮನ್ನು ಕೊಲೆಮಾಡಿದ ಭೂನಿವಾಸಿಗಳಿಗೆ ಇನ್ನೆಷ್ಟು ಕಾಲ ನ್ಯಾಯವಿಚಾರಣೆ ಮಾಡದೆ, ಸೇಡನ್ನು ತೀರಿಸಿಕೊಳ್ಳದೆ ಇರುತ್ತೀರಿ?” ಎಂದು ಕೇಳಿದರು.
11 : ಅವರಲ್ಲಿ ಪ್ರತಿಯೊಬ್ಬನಿಗೂ ಬಿಳಿಯ ನಿಲುವಂಗಿಯನ್ನು ಕೊಡಲಾಗಿತ್ತು. ಅಲ್ಲದೆ ಅವರಿಗೆ, “ಇನ್ನು ತುಸು ಕಾಲ ಕಾದುಕೊಂಡಿರಿ, ನಿಮ್ಮ ಹಾಗೆಯೇ ಹತರಾಗಬೇಕಾಗಿರುವ ನಿಮ್ಮ ಸಹೋದರರ ಮತ್ತು ಜೊತೆ ಸೇವಕರ ಪಟ್ಟಿಯು ಭರ್ತಿಯಾಗುವ ತನಕ ವಿಶ್ರಮಿಸಿ,” ಎಂದು ತಿಳಿಸಲಾಯಿತು.
12 : ಆ ಯಜ್ಞದ ಕುರಿಮರಿ ಆರನೆಯ ಮುದ್ರೆಯನ್ನು ಒಡೆದಾಗ, ದೊಡ್ಡ ಭೂಕಂಪವಾಯಿತು. ಸೂರ್ಯನು ಕರಿಕಂಬಳಿಯಂತೆ ಕಪ್ಪಾದನು. ಪೂರ್ಣಚಂದ್ರನು ರಕ್ತದಂತೆ ಕೆಂಪಾದನು.
13 : ಬಿರುಗಾಳಿಯಿಂದ ಅಂಜೂರ ಮರದ ಕಾಯಿಗಳು ಉದುರಿಬೀಳುವಂತೆ ನಕ್ಷತ್ರಗಳು ಆಕಾಶದಿಂದ ಭೂಮಿಗೆ ಬಿದ್ದವು.
14 : ಆಕಾಶವು ಸುರುಳಿಯಂತೆ ಸುತ್ತಿಕೊಂಡು ಕಣ್ಮರೆಯಾಯಿತು. ಎಲ್ಲಾ ಪರ್ವತಗಳೂ ದ್ವೀಪಗಳೂ ತಮ್ಮ ತಮ್ಮ ಸ್ಥಳಗಳಿಂದ ಚಲಿಸಿದವು.
15 : ಭೂರಾಜರು, ಅಧಿಪತಿಗಳು, ಸೇವಾನಾಯಕರು, ಸಿರಿವಂತರು, ಪರಾಕ್ರಮಿಗಳು, ದಾಸರು, ಸ್ವತಂತ್ರರು ಎಲ್ಲರೂ ಓಡಿಹೋಗಿ ಬೆಟ್ಟಗಳ ಗವಿಗಳಲ್ಲೂ ಮತ್ತು ಬಂಡೆಗಳ ಸಂದುಗಳಲ್ಲೂ ಅವಿತುಕೊಂಡರು.
16 : ಅವರು ಆ ಬೆಟ್ಟಗಳನ್ನೂ ಬಂಡೆಗಳನ್ನೂ ಉದ್ದೇಶಿಸಿ, “ನಮ್ಮ ಮೇಲೆ ಬೀಳಿ; ಸಿಂಹಾಸನದಲ್ಲಿ ಆಸೀನರಾಗಿರುವವರ ಸಮ್ಮುಖದಿಂದಲೂ ಯಜ್ಞದ ಕುರಿಮರಿಯಾದಾತನ ಕೋಪಾಗ್ನಿಯಿಂದಲೂ ನಮ್ಮನ್ನು ಮರೆಮಾಡಿ;
17 : ಏಕೆಂದರೆ, ಅವರ ಕೋಪಾಗ್ನಿಯ ಘೋರ ದಿನವು ಬಂದಿದೆ. ಅದರ ಮುಂದೆ ನಿಲ್ಲುವುದಕ್ಕೆ ಯಾರು ತಾನೇ ಶಕ್ತರು?” ಎಂದು ಹಲುಬಿದರು.

Holydivine