Revelation - Chapter 14
Holy Bible

1 : ಅನಂತರ ಸಿಯೋನ್ ಬೆಟ್ಟದ ಮೇಲೆ ಯಜ್ಞದ ಕುರಿಮರಿಯಾದಾತನು, ನಿಂತಿರುವುದನ್ನು ಕಂಡೆ. ಆತನ ಸಂಗಡ ಒಂದು ಲಕ್ಷದ ನಲವತ್ತನಾಲ್ಕು ಸಾವಿರ ಮಂದಿ ಇದ್ದರು. ಇವರು ತಮ್ಮ ಹಣೆಯ ಮೇಲೆ ಯಜ್ಞದ ಕುರಿಮರಿಯ ಮತ್ತು ಆತನ ಪಿತನ ನಾಮಾಂಕಿತವನ್ನು ಬರೆಸಿಕೊಂಡಿದ್ದರು.
2 : ಇದಲ್ಲದೆ, ಸ್ವರ್ಗದಿಂದ ಮಹಾಧ್ವನಿಯೊಂದು ಕೇಳಿಸಿತು. ಅದು ಭೋರ್ಗರೆಯುವ ಜಲ ಪ್ರವಾಹದಂತೆಯೂ ದೊಡ್ಡ ಗುಡುಗಿನ ಗರ್ಜನೆಯಂತೆಯೂ ಇತ್ತು. ನಾವು ಕೇಳಿದಂಥ ಧ್ವನಿ ಕಿನ್ನರಿಯನ್ನು ನುಡಿಸುತ್ತಿರುವ ವಾದ್ಯಗಾರರ ಸ್ವರದಂತಿತ್ತು.
3 : ಒಂದು ಲಕ್ಷದ ನಲವತ್ತ ನಾಲ್ಕು ಸಾವಿರ ಜನರು ಸಿಂಹಾಸನದ ಸಾನ್ನಿಧ್ಯದಲ್ಲಿಯೂ ನಾಲ್ಕು ಜೀವಿಗಳ ಮುಂದೆಯೂ ಸಭಾಪ್ರಮುಖರ ಎದುರಿನಲ್ಲಿಯೂ ನಿಂತು ಒಂದು ಹೊಸಗೀತೆಯನ್ನು ಹಾಡುತ್ತಿದ್ದರು. ಇಡೀ ಮಾನವಕುಲದವರಲ್ಲಿ ವಿಮೋಚನೆಯನ್ನು ಹೊಂದಿದವರು ಇವರೇ. ಇವರನ್ನುಳಿದು ಬೇರೆ ಯಾರಿಂದಲೂ ಆ ಹಾಡನ್ನು ಕಲಿಯಲಾಗಲಿಲ್ಲ.
4 : ಇವರು ಸ್ತ್ರೀಸಂಸರ್ಗದಿಂದ ಮಲಿನರಾಗದವರು; ಕನ್ಯೆಯರಂತೆ ಕಳಂಕರಹಿತರು; ಇವರು ಯಜ್ಞದ ಕುರಿಮರಿ ಹೋದೆಡೆಯಲ್ಲೆಲ್ಲಾ ಹಿಂಬಾಲಿಸುವವರು; ದೇವರಿಗೂ ಯಜ್ಞದ ಕುರಿಮರಿಗೂ ಅರ್ಪಿತವಾದ ಪ್ರಥಮ ಫಲದಂತೆ ಮಾನವಕುಲದವರಲ್ಲಿ ವಿಮೋಚನೆಯನ್ನು ಹೊಂದಿದವರು ಇವರು.
5 : ಸುಳ್ಳು ಮಾತು ಅವರ ಬಾಯಿಂದ ಬರುವುದಿಲ್ಲ; ಅವರು ನಿರ್ದೋಷಿಗಳು. ಭಕ್ತರಾಗಿ ಸಾಯುವವರು ಭಾಗ್ಯವಂತರು
6 : ಮತ್ತೊಬ್ಬ ದೇವದೂತನು ಆಕಾಶ ಮಧ್ಯದಲ್ಲಿ ಹಾರುತ್ತಿರುವುದನ್ನು ಕಂಡೆ. ಸಕಲ ದೇಶ, ಭಾಷೆ, ಕುಲ ಗೋತ್ರದ ಜನರಿಗೂ ಸಾರಬೇಕಾದ ಅಮರ ಸಂದೇಶ ಆತನಲ್ಲಿತ್ತು.
7 : ಆತನು ಮಹಾಶಬ್ದದಿಂದ, “ದೇವರಲ್ಲಿ ಭಯಭಕ್ತಿಯುಳ್ಳವರಾಗಿರಿ; ಅವರಿಗೆ ಸ್ತುತಿಸ್ತೋತ್ರ ಸಲ್ಲಿಸಿರಿ. ಏಕೆಂದರೆ, ಅವರು ತೀರ್ಪುಕೊಡುವ ಗಳಿಗೆಯು ಬಂದಿದೆ. ಆದ್ದರಿಂದ ಭೂಸ್ವರ್ಗಗಳನ್ನೂ ಕಡಲು ಕಾರಂಜಿಗಳನ್ನೂ ಸೃಷ್ಟಿಸಿದ ದೇವರಿಗೆ ಆರಾಧನೆ ಸಲ್ಲಿಸಿರಿ”, ಎಂದು ಹೇಳಿದನು.
8 : ಅನಂತರ ಎರಡನೆಯ ದೇವದೂತನು ಬಂದನು. ಆತನು, “ಪತನ ಹೊಂದಿದಳು, ಪತನ ಹೊಂದಿದಳು, ಬಾಬಿಲೋನ್ ಮಹಾನಗರಿ; ಹಾದರವೆಂಬ ಕಾಮೋದ್ರೇಕದ ಮದ್ಯವನು ಸಕಲರಿಗೂ ಕುಡಿಸಿದ ನಗರಿ ಪತನವಾದಳು”, ಎಂದು ಹೇಳಿದನು.
9 : ಇದಾದ ಮೇಲೆ ಮೂರನೆಯ ದೇವದೂತನು ಬಂದನು. ಈತನು ಗಟ್ಟಿಯಾದ ಧ್ವನಿಯಿಂದ ಹೀಗೆಂದನು: “ಯಾರಾದರೂ ಮೊದಲನೆಯ ಮೃಗವನ್ನೂ ಅದರ ವಿಗ್ರಹವನ್ನೂ ಪೂಜಿಸಿದರೆ ಅಥವಾ ತನ್ನ ಹಣೆಯ ಮೇಲಾಗಲೀ ಕೈಯ ಮೇಲಾಗಲೀ ಗುರುತಿನ ಹಚ್ಚೆಯನ್ನು ಚುಚ್ಚಿಸಿಕೊಂಡರೆ,
10 : ಅಂಥವನು ದೇವರ ಕೋಪಾಗ್ನಿಯೆಂಬ ಪಾತ್ರೆಯಲ್ಲಿ ದೇವರ ಅಪ್ಪಟ ರೋಷವೆಂಬ ಮದ್ಯವನ್ನು ಕುಡಿಯಬೇಕಾಗುತ್ತದೆ. ಪರಿಶುದ್ಧ ದೇವದೂತರ ಮುಂದೆಯೂ ಯಜ್ಞದ ಕುರಿಮರಿಯ ಮುಂದೆಯೂ ಅಂಥವನು ಬೆಂಕಿಯಲ್ಲೂ ಗಂಧಕದಲ್ಲೂ ಬೆಂದು ನರಳುವನು.
11 : ಅಂಥವರ ನರಳಾಟದ ಹೊಗೆ ಸತತ ಮೇಲೇರುತ್ತಿರುತ್ತದೆ. ಮೃಗಕ್ಕೂ ಅದರ ವಿಗ್ರಹಕ್ಕೂ ಪೂಜೆ ಸಲ್ಲಿಸುವವರು ಮತ್ತು ಅದರ ಹೆಸರನ್ನು ಸೂಚಿಸುವ ಹಚ್ಚೆಯನ್ನು ಚುಚ್ಚಿಸಿಕೊಂಡವರು ಹಗಲಿರುಳೂ ಬಿಡುವಿಲ್ಲದೆ ಸಂಕಟಪಡುವರು,” ಎಂದು ಹೇಳಿದನು.
12 : ಆದ್ದರಿಂದ ದೇವರ ಆಜ್ಞೆಗಳನ್ನು ಕೈಗೊಂಡು ಯೇಸುಸ್ವಾಮಿಯಲ್ಲಿ ವಿಶ್ವಾಸವಿಟ್ಟು ನಡೆಯುವ ದೇವಜನರಲ್ಲಿ ಸಹನೆ, ಸಹಿಷ್ಣುತೆ ಇರಬೇಕು.
13 : ಇದಾದಮೇಲೆ ಸ್ವರ್ಗದಿಂದ ಬಂದ ಧ್ವನಿಯೊಂದು ಕೇಳಿಸಿತು. ಅದು ನನಗೆ, “ನೀನಿದನ್ನು ಬರೆ: ಇಂದಿನಿಂದ ಪ್ರಭುವಿನ ಭಕ್ತರಾಗಿ ಸಾಯುವವರು ಭಾಗ್ಯವಂತರು,” ಎಂದು ತಿಳಿಸಿತು. ಆಗ ದೇವರ ಆತ್ಮ, “ಹೌದು, ಅವರೇ ಭಾಗ್ಯವಂತರು. ಇನ್ನು ಅವರ ಸಂಕಷ್ಟಗಳು ಮುಗಿದು ಅವರಿಗೆ ವಿಶ್ರಾಂತಿ ದೊರಕುವುದು; ಅವರ ಸುಕೃತ್ಯಗಳಿಗೆ ತಕ್ಕ ಪ್ರತಿಫಲ ದೊರಕುವುದು,” ಎಂದು ಹೇಳಿತು. ಕೊಯ್ಲಿನ ಕಾಲ
14 : ನಂತರ ನನ್ನ ಕಣ್ಣಿಗೆ ಒಂದು ಬಿಳಿಯ ಮೋಡ ಕಾಣಿಸಿತು. ಆ ಮೋಡದ ಮೇಲೆ ನರಪುತ್ರನಂಥ ವ್ಯಕ್ತಿಯೊಬ್ಬನು ಕುಳಿತಿದ್ದನು. ಆತನ ತಲೆಯ ಮೇಲೆ ಚಿನ್ನದ ಕಿರೀಟವಿತ್ತು; ಕೈಯಲ್ಲಿ ಹರಿತವಾದ ಕುಡುಗೋಲಿತ್ತು.
15 : ಇನ್ನೊಬ್ಬ ದೇವದೂತನು ದೇವಮಂದಿರದಿಂದ ಹೊರಗೆ ಬಂದನು. ಈತನು ಮೋಡದ ಮೇಲೆ ಕುಳಿತಿದ್ದ ಅವನನ್ನು ಉದ್ದೇಶಿಸಿ, “ಭೂಮಿಯ ಫಸಲು ಮಾಗಿದೆ, ಕೊಯ್ಲಿನ ಕಾಲ ಬಂದಿದೆ. ನಿನ್ನ ಕುಡುಗೋಲನ್ನು ತೆಗೆದು ಕೊಯಿಲು ಮಾಡಲು ಆರಂಭಿಸು”, ಎಂದು ಗಟ್ಟಿಯಾಗಿ ಕೂಗಿ ಹೇಳಿದನು.
16 : ಆಗ ಮೋಡದ ಮೇಲೆ ಕುಳಿತಿದ್ದವನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಬೀಸಿದನು. ಭೂಮಿಯ ಕೊಯಿಲು ಮುಗಿಯಿತು.
17 : ಮಗದೊಬ್ಬ ದೇವದೂತನು ಸ್ವರ್ಗದ ದೇವಮಂದಿರದಿಂದ ಹೊರಗೆ ಬಂದನು. ಆತನ ಕೈಯಲ್ಲೂ ಹರಿತವಾದ ಕುಡುಗೋಲು ಇತ್ತು.
18 : ಬೆಂಕಿಯ ಮೇಲೆ ಅಧಿಕಾರ ಪಡೆದಿದ್ದ ಒಬ್ಬ ದೇವದೂತನು, ಆಗ ಬಲಿಪೀಠದ ಬಳಿಯಿಂದ ಬಂದನು. ಈತ ಕೈಯಲ್ಲಿ ಹರಿತವಾದ ಕುಡುಗೋಲನ್ನು ಹಿಡಿದಿದ್ದ ದೇವದೂತನನ್ನು ಉದ್ದೇಶಿಸಿ, “ನಿನ್ನ ಹರಿತವಾದ ಕುಡುಗೋಲನ್ನು ಕಳುಹಿಸು, ಭೂಮಿಯ ದ್ರಾಕ್ಷಾಫಲಗಳು ಪೂರ್ಣವಾಗಿ ಮಾಗಿವೆ; ಆ ಗೊಂಚಲುಗಳನ್ನು ಕೊಯ್ಯಬೇಕಾಗಿದೆ”, ಎಂದು ಕೂಗಿ ಹೇಳಿದನು.
19 : ಆ ದೇವದೂತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಬೀಸಿ ದ್ರಾಕ್ಷಿಯ ಗೊಂಚಲುಗಳನ್ನು ಕೊಯ್ದನು; ಅವುಗಳನ್ನು ದೇವರ ರೋಷವೆಂಬ ದ್ರಾಕ್ಷಿಯ ದೊಡ್ಡ ಆಲೆಗೆ ಎಸೆದನು.
20 : ಪಟ್ಟಣದ ಹೊರಗಿನ ಆಲೆಯಲ್ಲಿ ದ್ರಾಕ್ಷಿಯ ಹಣ್ಣನ್ನು ಹಿಂಡಲಾಯಿತು. ಆ ಆಲೆಯಿಂದ ರಕ್ತವು ಹರಿಯಿತು. ಅದು ಮುನ್ನೂರು ಕಿಲೊವಿೂಟರಿನಷ್ಟು ದೂರವಾಗಿಯೂ ಎರಡು ವಿೂಟರಿನಷ್ಟು ಆಳವಾಗಿಯೂ ಹರಿಯಿತು.

Holydivine