Revelation - Chapter 16
Holy Bible

1 : ಅನಂತರ ದೇವಾಲಯದೊಳಗಿಂದ ಬಂದ ಮಹಾಶಬ್ದವನ್ನು ಕೇಳಿದೆ. ಅದು ಆ ಏಳು ದೇವದೂತರಿಗೆ, “ನೀವು ಹೋಗಿ ಏಳು ಪಾತ್ರೆಗಳಲ್ಲಿ ತುಂಬಿರುವ ದೇವರ ರೋಷವನ್ನು ಭೂಮಿಯ ಮೇಲೆ ಸುರಿಯಿರಿ,” ಎಂದು ಆಜ್ಞಾಪಿಸಿತು.
2 : ಅದರಂತೆಯೇ ಮೊದಲನೆಯ ದೇವದೂತನು ಹೋಗಿ ತನ್ನ ಪಾತ್ರೆಯಲ್ಲಿ ಇದ್ದುದನ್ನು ಭೂಮಿಯ ಮೇಲೆ ಸುರಿದನು. ಪರಿಣಾಮವಾಗಿ, ಮೊದಲನೆಯ ಮೃಗದ ಹಚ್ಚೆ ಚುಚ್ಚಿಸಿಕೊಂಡವರ ಮತ್ತು ಅದರ ವಿಗ್ರಹವನ್ನು ಪೂಜಿಸಿದವರ ಮೈಮೇಲೆಲ್ಲಾ ಭಯಂಕರವಾದ ಉರಿ ಹುಣ್ಣುಗಳು ಎದ್ದವು.
3 : ಎರಡನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಸಮುದ್ರದ ಮೇಲೆ ಸುರಿದನು. ಆಗ ಸಮುದ್ರದ ನೀರು ಸತ್ತವನ ರಕ್ತದಂತೆ ಆಯಿತು. ಸಮುದ್ರದಲ್ಲಿದ್ದ ಜಲಜಂತುಗಳೆಲ್ಲಾ ಸತ್ತು ಹೋದವು.
4 : ಮೂರನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ನದಿಗಳ ಮೇಲೆಯೂ ನೀರಿನ ಒರತೆಗಳ ಮೇಲೆಯೂ ಸುರಿದನು. ನೀರೆಲ್ಲಾ ರಕ್ತಮಯವಾಯಿತು.
5 : ಆಗ ಜಲಾಧಿಕಾರಿಯಾದ ದೂತನು: “ತ್ರಿಕಾಲಸ್ಥನು, ಪರಿಶುದ್ಧನು ನೀನೇ, ನೀನಿತ್ತ ತೀರ್ಪು ನ್ಯಾಯಬದ್ಧವಾದುದೇ.
6 : ದೇವಜನರ, ಪೂಜ್ಯ ಪ್ರವಾದಿಗಳ ರಕ್ತಪಾತಕರಿಗೆ ಕುಡಿಯಲು ನೀನಿತ್ತೆ ಆ ರಕ್ತವನೇ ಅವರ ಕೃತ್ಯಕ್ಕದುವೇ ತಕ್ಕ ಸಂಭಾವನೆ,” ಎಂದು ಹಾಡುವುದನ್ನು ನಾನು ಕೇಳಿಸಿಕೊಂಡೆ.
7 : ಅನಂತರ ಬಲಿಪೀಠದಿಂದ ಹೀಗೆ ಕೇಳಿ ಬಂತು: “ಹೌದು ಪ್ರಭುವೇ, ಸರ್ವಶಕ್ತನೇ, ನೀನಿತ್ತ ತೀರ್ಪು ಸತ್ಯ ಹಾಗೂ ನ್ಯಾಯ ಬದ್ಧವಾದುದೇ.”
8 : ನಾಲ್ಕನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಸೂರ್ಯನ ಮೇಲೆ ಸುರಿದನು. ಆಗ ಸೂರ್ಯನಿಗೆ, ಕಡುಬಿಸಿಲಿನಿಂದ ಮನುಷ್ಯರನ್ನು ಸುಡುವ ಶಕ್ತಿಯನ್ನು ಕೊಡಲಾಯಿತು.
9 : ಮನುಷ್ಯರು ಆ ಕಡು ಕಾವಿನಲ್ಲಿ ಬೆಂದು ನರಳಿದರು. ಈ ಮಾರಕ ವ್ಯಾಧಿಗಳ ಮೇಲೆ ಅಧಿಕಾರ ಇದ್ದ ದೇವರನ್ನೂ ದೂಷಿಸಿದರು. ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ಅವರು ದೇವರಿಗೆ ಅಭಿಮುಖರಾಗಲಿಲ್ಲ; ಅವರ ಮಹಿಮೆಯನ್ನು ಸ್ತುತಿಸಲಿಲ್ಲ.
10 : ಐದನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಮೊದಲನೆಯ ಮೃಗದ ಸಿಂಹಾಸನದ ಮೇಲೆ ಸುರಿದನು. ಕೂಡಲೇ ಆ ಮೃಗ ರಾಜ್ಯದ ಮೇಲೆ ಅಂಧಕಾರ ಕವಿಯಿತು. ಜನರು ತಮಗೆ ಬಂದೆರಗಿದ ಬಾಧೆಯನ್ನು ತಾಳಲಾರದೆ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡರು.
11 : ತಮ್ಮ ನೋವು ಬಾಧೆಗಳ ನಿಮಿತ್ತವೂ ತಮ್ಮ ಉರಿ ಹುಣ್ಣುಗಳ ನಿಮಿತ್ತವೂ ಸ್ವರ್ಗದ ದೇವರನ್ನು ದೂಷಿಸಿದರು. ತಮ್ಮ ದುಷ್ಕøತ್ಯಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಲೇ ಇಲ್ಲ.
13 : ಇವುಗಳಾದ ಮೇಲೆ ಕಪ್ಪೆಗಳಂತಿದ್ದ ಮೂರು ದುಷ್ಟಾತ್ಮಗಳನ್ನು ನಾನು ಕಂಡೆ. ಅವು ಘಟಸರ್ಪದ ಬಾಯೊಳಗಿಂದಲೂ ಮೃಗದ ಬಾಯೊಳಗಿಂದಲೂ ಕಪಟ ಪ್ರವಾದಿಯ ಬಾಯೊಳಗಿಂದಲೂ ಹೊರಟು ಬಂದವು.
14 : ಇವು ಪವಾಡ ಕಾರ್ಯಗಳನ್ನು ಎಸಗುವ ದೆವ್ವಾತ್ಮಗಳು. ಸರ್ವಶಕ್ತ ದೇವರ ಮಹಾದಿನದಲ್ಲಿ ನಡೆಯುವ ಯುದ್ಧಕ್ಕಾಗಿ ಭೂಲೋಕದ ರಾಜರುಗಳನ್ನೆಲ್ಲಾ ಒಟ್ಟುಗೂಡಿಸಲು ಅವು ಹೊರಟವು.
15 : “ಇಗೋ, ಕಳ್ಳನು ಬರುವಂತೆ ನಾನು ಬರುತ್ತೇನೆ. ಬೆತ್ತಲೆಯಾಗಿ ಎಲ್ಲರ ಮುಂದೆ ಕಾಣಿಸಿಕೊಂಡು ನಾಚಿಕೆಗೀಡಾಗದಂತೆ ಎಚ್ಚರವಾಗಿದ್ದು ತನ್ನ ವಸ್ತ್ರಗಳನ್ನು ಧರಿಸಿಕೊಂಡಿರುವವನು ಭಾಗ್ಯವಂತನು!”
16 : ಆ ದೆವ್ವಗಳು ಭೂರಾಜರೆಲ್ಲರನ್ನೂ ಒಂದು ಸ್ಥಳದಲ್ಲಿ ಸೇರಿಸಿದವು. ಆ ಸ್ಥಳಕ್ಕೆ ಹಿಬ್ರಿಯ ಭಾಷೆಯಲ್ಲಿ, ‘ಹರ್ಮಗೆದೋನ್’ ಎಂದು ಹೆಸರು.
17 : ಏಳನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ವಾಯುಮಂಡಲದ ಮೇಲೆ ಸುರಿದನು. ಆಗ ದೇವಾಲಯದ ಸಿಂಹಾಸನದ ಕಡೆಯಿಂದ ಒಂದು ದೊಡ್ಡ ಧ್ವನಿ ಉಂಟಾಗಿ, “ಮುಗಿಸಿದ್ದಾಯಿತು,” ಎಂದು ಹೇಳಿತು.
18 : ಆಗ ಮಿಂಚು, ಗುಡುಗು, ಗರ್ಜನೆಗಳುಂಟಾದವು. ಇದಲ್ಲದೆ ಭಯಂಕರವಾದ ಭೂಕಂಪ ಉಂಟಾಯಿತು. ಮಾನವ ಇತಿಹಾಸದಲ್ಲೇ ಅಂಥ ದೊಡ್ಡ ಭೂಕಂಪವಾಗಿರಲಿಲ್ಲ.
19 : ಮಹಾನಗರವು ಮೂರು ಭಾಗವಾಗಿ ಸೀಳಿಹೋಯಿತು. ಎಲ್ಲಾ ದೇಶಗಳ ನಗರಗಳು ನಾಶವಾದವು. ಬಾಬಿಲೋನ್ ಎಂಬ ಮಹಾನಗರವನ್ನು ದೇವರು ಮರೆಯಲಿಲ್ಲ; ತಮ್ಮ ರೋಷವೆಂಬ ಮದ್ಯಪಾತ್ರೆಯಿಂದ ಅದಕ್ಕೆ ಕುಡಿಯಲು ಕೊಟ್ಟರು.
20 : ದ್ವೀಪಗಳು ಕಣ್ಮರೆ ಆದವು; ಬೆಟ್ಟಗಳು ನೆಲಸಮವಾದವು.
21 : ಆಕಾಶದಿಂದ ಮನುಷ್ಯರ ಮೇಲೆ ಆಲಿಕಲ್ಲಿನ ಮಳೆ ಸುರಿಯಿತು. ಒಂದೊಂದು ಆಲಿಕಲ್ಲಿನ ತೂಕ ಸುಮಾರು ಐವತ್ತು ಕಿಲೊಗ್ರಾಮಿನಷ್ಟು ಇತ್ತು. ಆ ಆಲಿಕಲ್ಲಿನ ವಿಪತ್ತು ಅಧಿಕವಾದುದರಿಂದಲೂ ಭಯಂಕರವಾದುದರಿಂದಲೂ ಜನರು ದೇವರನ್ನು ದೂಷಿಸಿದರು.

Holydivine