Revelation - Chapter 9
Holy Bible

1 : ಐದನೆಯ ದೇವದೂತನು ತುತೂರಿಯನ್ನು ಊದಿದನು. ಆಗ ಆಕಾಶದಿಂದ ಭೂಮಿಗೆ ಬಿದ್ದಿದ್ದ ಒಂದು ನಕ್ಷತ್ರವನ್ನು ಕಂಡೆ. ಪಾತಾಳಕೂಪದ ಬೀಗದ ಕೈಯನ್ನು ಅವನಿಗೆ ಕೊಡಲಾಗಿತ್ತು.
2 : ಅವನು ಆ ಕೂಪದ ಮುಚ್ಚಳವನ್ನು ತೆರೆದನು. ಅದರೊಳಗಿಂದ ದಟ್ಟಹೊಗೆ ದೊಡ್ಡ ಕುಲುಮೆ ಒಂದರಿಂದ ಬರುತ್ತಿರುವಂತೆ ಮೇಲೇರಿತು. ಇದರಿಂದಾಗಿ ಸೂರ್ಯನೂ ವಾಯುಮಂಡಲವೂ ಕಪ್ಪಾದವು.
3 : ಆ ಹೊಗೆಯೊಳಗಿಂದ ಮಿಡತೆಗಳು ಹೊರಟು ಭೂಮಿಗೆ ಬಂದವು. ಭೂಮಿಯಲ್ಲಿ ಇರುವ ಚೇಳುಗಳಿಗಿರುವಂಥ ಶಕ್ತಿಯನ್ನು ಅವುಗಳಿಗೆ ಕೊಡಲಾಗಿತ್ತು.
4 : ಭೂಮಿಯ ಮೇಲಣ ಹುಲ್ಲಿಗಾಗಲಿ, ಯಾವುದೇ ಹಸಿರು ಇಲ್ಲವೇ ಮರಗಳಿಗಾಗಲಿ ಕೇಡನ್ನುಂಟು ಮಾಡಬಾರದು ಎಂದೂ ಮಾನವರಲ್ಲಿ ಯಾರ ಹಣೆಯ ಮೇಲೆ ದೇವರ ಮುದ್ರೆಯಿಲ್ಲವೋ ಅಂಥವರಿಗೆ ಮಾತ್ರ ಕೇಡು ಮಾಡಬಹುದೆಂದೂ ಅಪ್ಪಣೆಯಾಗಿತ್ತು.
5 : ಅಲ್ಲದೆ, ಅವರನ್ನು ಕೊಲ್ಲದೆಯೇ ಐದು ತಿಂಗಳಕಾಲ ಬಾಧಿಸಬೇಕೆಂದು ಆಜ್ಞಾಪಿಸಲಾಗಿತ್ತು. ಆ ಬಾಧೆ, ಚೇಳು ಕುಟುಕಿದರೆ ಉಂಟಾಗುವ ಬಾಧೆಯಂಥದ್ದು.
6 : ಅಂಥ ದಿನಗಳಲ್ಲಿ ಮನುಷ್ಯರು ಮರಣವನ್ನು ಅಪೇಕ್ಷಿಸುವರು. ಆದರೆ ಅದು ಅವರಿಗೆ ಪ್ರಾಪ್ತವಾಗುವುದಿಲ್ಲ. ಸತ್ತರೆ ಸಾಕೆಂದು ಬಯಸುವರು; ಪ್ರಯತ್ನಿಸುವರು. ಆದರೆ ಮೃತ್ಯು ಅವರಿಂದ ದೂರ ಸರಿಯುವುದು.
7 : ಆ ಮಿಡತೆಗಳು ನೋಡುವುದಕ್ಕೆ ಸಮರಕ್ಕೆ ಸನ್ನದ್ಧರಾಗಿರುವ ಕುದುರೆಗಳಂತಿದ್ದವು. ಅವುಗಳ ತಲೆಯ ಮೇಲೆ ಚಿನ್ನದ ಕಿರೀಟವಿದ್ದಂತೆ ಕಾಣಿಸುತ್ತಿತ್ತು. ಮುಖಗಳು ಮನುಷ್ಯರ ಮುಖಗಳಂತೆ ಇದ್ದವು.
8 : ಅವುಗಳ ಕೂದಲು ಸ್ತ್ರೀಯರ ಕೂದಲಿನಂತೆಯೂ ಹಲ್ಲುಗಳು ಸಿಂಹದ ಹಲ್ಲುಗಳಂತೆಯೂ ಇದ್ದವು.
9 : ಅವುಗಳ ಮೈಚಿಪ್ಪು ಕವಚದಂತಿತ್ತು. ರೆಕ್ಕೆ ಬಡಿಯುವ ಶಬ್ದವು ಸಮರಕ್ಕೆ ಧಾವಿಸುವ ಹಲವಾರು ರಥಾಶ್ವಗಳ ಶಬ್ದವನ್ನು ಹೋಲುತ್ತಿತ್ತು.
10 : ಚೇಳುಗಳಿಗಿರುವಂತೆ ಬಾಲಗಳೂ ಕೊಂಡಿಗಳೂ ಅವುಗಳಿಗಿದ್ದವು. ಐದು ತಿಂಗಳವರೆಗೆ ಮಾನವರನ್ನು ಬಾಧಿಸುವ ಶಕ್ತಿ ಆ ಬಾಲಗಳಿಗಿತ್ತು.
11 : ಪಾತಾಳಕೂಪದ ದೂತನೇ ಅವುಗಳನ್ನು ಆಳುವ ಅರಸು. ಅವನಿಗೆ ಹಿಬ್ರಿಯ ಭಾಷೆಯಲ್ಲಿ ‘ಅಬದ್ದೋನ್’ ಎಂದೂ ಗ್ರೀಕ್ ಭಾಷೆಯಲ್ಲಿ ‘ಅಪೊಲ್ಲುವೋನ್’ ಎಂದೂ ಹೆಸರು.
12 : ಹೀಗೆ ಮೊದಲನೆಯ ವಿಪತ್ತು ಮುಗಿಯಿತು. ಇಗೋ, ಇನ್ನೆರಡು ವಿಪತ್ತುಗಳು ಬಂದೆರಗಲಿವೆ:
13 : ಆರನೆಯ ದೇವದೂತನು ತುತೂರಿಯನ್ನು ಊದಿದನು. ದೇವರ ಸಾನ್ನಿಧ್ಯದಲ್ಲಿ ಇರುವ ಚಿನ್ನದ ಬಲಿಪೀಠದ ನಾಲ್ಕು ಮೂಲೆಗಳಿಂದ ಹೊರಟ ಒಂದು ಶಬ್ದ ನನಗೆ ಕೇಳಿಸಿತು.
14 : ತುತೂರಿಯನ್ನು ಹಿಡಿದಿದ್ದ ಆರನೆಯ ದೇವದೂತನಿಗೆ ಅದು, “ಯೂಫ್ರೆಟಿಸ್ ಮಹಾನದಿಯ ಬಳಿ ಕಟ್ಟಲಾಗಿರುವ ನಾಲ್ಕು ದೇವದೂತರನ್ನು ಬಿಚ್ಚಿಬಿಡು,” ಎಂದು ಆಜ್ಞಾಪಿಸಿತು.
15 : ಮಾನವ ಜನಾಂಗದ ಮೂರನೆಯ ಒಂದು ಭಾಗವನ್ನು ಸಂಹರಿಸುವುದಕ್ಕಾಗಿ ಗಂಟೆ, ದಿನ, ತಿಂಗಳು, ವರ್ಷ ಎಲ್ಲವನ್ನೂ ನಿಗದಿಮಾಡಲಾಗಿತ್ತು. ಅದಕ್ಕೆ ಸಿದ್ಧರಾಗಿ ನಿಂತಿದ್ದ ಆ ನಾಲ್ಕು ದೇವದೂತರನ್ನು ಬಂಧಮುಕ್ತರನ್ನಾಗಿ ಮಾಡಲಾಯಿತು.
16 : ಕುದುರೆ ಸೈನ್ಯದ ಸಂಖ್ಯೆ ಇಪ್ಪತ್ತು ಕೋಟಿ ಎಂದು ಹೇಳಿದುದು ನನಗೆ ಕೇಳಿಸಿತು.
17 : ಹೀಗೆ ಕುದುರೆಗಳನ್ನೂ ಅವುಗಳ ಮೇಲೆ ಕುಳಿತ ಸವಾರರನ್ನೂ ನಾನು ದರ್ಶನದಲ್ಲಿ ಕಂಡೆ. ಆ ಸವಾರರು ಬೆಂಕಿಯ, ನೀಲಮಣಿಯ ಹಾಗೂ ಗಂಧಕ ವರ್ಣಗಳ ಕವಚಗಳನ್ನು ಧರಿಸಿದ್ದರು. ಕುದುರೆಗಳ ತಲೆಗಳು ಸಿಂಹಗಳ ತಲೆಗಳಂತೆ ಇದ್ದವು. ಅವುಗಳ ಬಾಯಿಂದ ಬೆಂಕಿ, ಹೊಗೆ ಮತ್ತು ಗಂಧಕ ಹೊರಬರುತ್ತಿದ್ದವು.
18 : ಅವುಗಳ ಬಾಯಿಂದ ಬರುತ್ತಿದ್ದ ಇವುಗಳು ಮೂರು ವಿಪತ್ತುಗಳಾಗಿದ್ದವು. ಇವುಗಳಿಂದ ಮಾನವ ಜನಾಂಗದ ಮೂರನೆಯ ಒಂದು ಭಾಗ ಹತವಾಯಿತು.
19 : ಕುದುರೆಗಳ ಶಕ್ತಿಯು ಅವುಗಳ ಬಾಯಲ್ಲೂ ಬಾಲಗಳಲ್ಲೂ ಅಡಗಿತ್ತು. ಆ ಬಾಲಗಳು ಸರ್ಪಗಳ ತಲೆಯಂತೆ ಇದ್ದವು ಮತ್ತು ಗಾಯಗೊಳಿಸುವ ಶಕ್ತಿ ಅವಕ್ಕಿತ್ತು.
20 : ಆ ವಿಪತ್ತುಗಳಿಂದ ಸಾಯದೆ ಬದುಕಿದ್ದ ಜನರು ತಮ್ಮ ದುಷ್ಕøತ್ಯಗಳನ್ನು ಬಿಟ್ಟು ದೇವರಿಗೆ ಅಭಿಮುಖರಾಗಲೇ ಇಲ್ಲ; ದೆವ್ವಾರಾಧನೆಯನ್ನು ತ್ಯಜಿಸಲಿಲ್ಲ; ನೋಡಲಾರದ, ಕೇಳಿಸಿಕೊಳ್ಳಲಾರದ ಮತ್ತು ನಡೆಯಲಾರದ ವಿಗ್ರಹಗಳನ್ನು ಚಿನ್ನ, ಬೆಳ್ಳಿ, ತಾಮ್ರ, ಕಲ್ಲು ಮತ್ತು ಮರಗಳಲ್ಲಿ ಮಾಡಿ ಪೂಜಿಸುವುದನ್ನು ಕೈಬಿಡಲಿಲ್ಲ.
21 : ಇಷ್ಟೇ ಅಲ್ಲದೆ ತಮ್ಮ ಕೊಲೆಗಡುಕತನ, ಮಾಟಮಂತ್ರ, ಹಾದರ ಮತ್ತು ಕಳ್ಳತನಗಳನ್ನು ತೊರೆದು ಮನಸ್ಸಾಂತರಗೊಳ್ಳಲಿಲ್ಲ.

Holydivine