Genesis - Chapter 15
Holy Bible

1 : ಈ ಘಟನೆಗಳೆಲ್ಲ ನಡೆದ ಮೇಲೆ ಅಬ್ರಾಮನಿಗೆ ಒಂದು ದಿವ್ಯ ದರ್ಶನ ಆಯಿತು. ಅದರಲ್ಲಿ ಸರ್ವೇಶ್ವರಸ್ವಾಮಿಯ ಈ ವಾಣಿ ಕೇಳಿಸಿತು: “ಅಬ್ರಾಮನೇ, ಭಯಪಡಬೇಡ, ನಿನ್ನನ್ನು ರಕ್ಷಿಸುವ ಕವಚ ನಾನೇ, ಘನವಾದ ಬಹುಮಾನ ಸಿಗುವುದು ನಿನಗೆ.”
2 : ಅದಕ್ಕೆ ಪ್ರತ್ಯುತ್ತರವಾಗಿ ಅಬ್ರಾಮನು - "ಸ್ವಾಮಿ ಸರ್ವೇಶ್ವರಾ, ನನಗೆ ಏನು ಕೊಟ್ಟರೇನು? ನಾನು ಪುತ್ರಸಂತಾನವಿಲ್ಲದವನು. ನನ್ನ ಮನೆ ಮಾರುಗಳಿಗೆ ಉತ್ತರಾಧಿಕಾರಿ ದಮಸ್ಕದ ಎಲೀಯೆಜರನೇ ಹೊರತು ಮತ್ತಾರೂ ಇಲ್ಲ.
3 : ನೀವು ನನಗೆ ಮಕ್ಕಳನ್ನು ಕೊಟ್ಟಿಲ್ಲ. ನನ್ನ ಮನೆದಾಸನೇ ನನಗೆ ಉತ್ತರಾಧಿಕಾರಿ,” ಎಂದನು.
4 : ಮತ್ತೆ ಸ್ವಾಮಿಯ ವಾಣಿ - “ಇಲ್ಲ, ಅವನು ಉತ್ತರಾಧಿಕಾರಿಯಾಗುವುದಿಲ್ಲ. ನಿನ್ನಿಂದ ಹುಟ್ಟಿದವನೇ ನಿನಗೆ ಉತ್ತರಾಧಿಕಾರಿ ಆಗುತ್ತಾನೆ,” ಎಂದಿತು.
5 : ಸರ್ವೇಶ್ವರ ಬಳಿಕ ಅಬ್ರಾಮನನ್ನು ಹೊರಗೆ ಕರೆತಂದು, “ಆಕಾಶದ ಕಡೆಗೆ ನೋಡು. ಆ ನಕ್ಷತ್ರಗಳನ್ನು ನಿನ್ನಿಂದಾದರೆ ಲೆಕ್ಕಿಸು. ನಿನ್ನ ಸಂತಾನವು ಅಷ್ಟು ಅಸಂಖ್ಯಾತವಾಗುವುದು!” ಎಂದರು.
6 : ಅಬ್ರಾಮನು ಸರ್ವೇಶ್ವರಸ್ವಾಮಿಯಲ್ಲಿ ವಿಶ್ವಾಸವಿಟ್ಟನು. ಅವರು ಅವನ ವಿಶ್ವಾಸವೇ ಸರಿಯಾದ ಸಂಬಂಧವೆಂದು ಪರಿಗಣಿಸಿದರು.
7 : ಸರ್ವೇಶ್ವರ ಬಳಿಕ ಅಬ್ರಾಮನಿಗೆ ಇಂತೆಂದರು: “ಈ ನಾಡನ್ನು ನಿನಗೆ ಸೊತ್ತಾಗಿ ಕೊಡಬೇಕೆಂದು ಬಾಬಿಲೋನಿನಲ್ಲಿರುವ ಊರ್ ಪಟ್ಟಣದಿಂದ ನಿನ್ನನ್ನು ಬರಮಾಡಿದ ಸರ್ವೇಶ್ವರ ನಾನೇ,” ಎಂದರು.
8 : ಅದಕ್ಕೆ ಅಬ್ರಾಮನು, “ಸರ್ವೇಶ್ವರಾ, ಇದು ನನ್ನ ಸೊತ್ತು ಎಂದು ತಿಳಿದುಕೊಳ್ಳುವುದು ಹೇಗೆ?” ಎಂದನು.
9 : ಸರ್ವೇಶ್ವರ ಪ್ರತ್ಯುತ್ತರವಾಗಿ, “ನೀನು ಮೂರು ಮೂರು ವರ್ಷದ ಒಂದು ಕಡಸನ್ನು, ಒಂದು ಆಡನ್ನು, ಒಂದು ಟಗರನ್ನು, ಒಂದು ಬೆಳವಕ್ಕಿಯನ್ನು ಹಾಗು ಒಂದು ಮರಿಪಾರಿವಾಳವನ್ನು ತೆಗೆದುಕೊಂಡು ಬಾ,” ಎಂದರು
10 : ಅಬ್ರಾಮನು ಅವುಗಳನ್ನೆಲ್ಲಾ ತೆಗೆದುಕೊಂಡು ಬಂದು ಆ ಪ್ರಾಣಿಗಳನ್ನು ಕಡಿದು, ಎರಡೆರಡು ಹೋಳು ಮಾಡಿ, ತುಂಡಿಗೆ ತುಂಡನ್ನು ಎದುರಾಗಿಟ್ಟನು. ಪಕ್ಷಿಗಳನ್ನು ಮಾತ್ರ ಕಡಿಯಲಿಲ್ಲ.
11 : ಆ ಪ್ರಾಣಿಗಳ ತುಂಡುಗಳ ಮೇಲೆ ರಣಹದ್ದುಗಳು ಎರಗಿದಾಗ ಅಬ್ರಾಮನು ಅವುಗಳನ್ನು ಓಡಿಸಿಬಿಟ್ಟನು.
12 : ಹೊತ್ತು ಮುಳುಗುತ್ತಿದ್ದಾಗ ಅಬ್ರಾಮನಿಗೆ ಗಾಢನಿದ್ರೆ ಹತ್ತಿತು. ಭೀಕರವಾದ ಕಾರ್ಗತ್ತಲು ಅವನನ್ನು ಕವಿಯಿತು.
13 : ಆಗ ಅಬ್ರಾಮನಿಗೆ ಸರ್ವೇಶ್ವರ, “ಇದನ್ನು ನೀನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು: ನಿನ್ನ ಸಂತತಿಯವರು ಅನ್ಯನಾಡಿಗೆ ಆಗಂತುಕರಂತೆ ಹೋಗುವರು; ಆ ನಾಡಿಗರಿಗೆ ಗುಲಾಮರಾಗುವರು; ನಾನೂರು ವರ್ಷ ಅಲ್ಲಿಯವರ ಶೋಷಣೆಗೆ ಗುರಿಯಾಗುವರು.
14 : ಆದರೆ ಅವರನ್ನು ಗುಲಾಮರನ್ನಾಗಿಸಿಕೊಳ್ಳುವ ರಾಷ್ಟ್ರವನ್ನು ನಾನು ದಂಡಿಸುವೆನು. ಬಳಿಕ ಬಿಡುಗಡೆ ಹೊಂದಿ ಅಧಿಕ ಆಸ್ತಿವಂತರಾಗಿ ಹಿಂತಿರುಗುವರು.
15 : ನೀನಂತೂ ಹಣ್ಣು ಹಣ್ಣು ಮುದುಕನಾಗಿ ಶವಸಂಸ್ಕಾರವನ್ನು ಪಡೆಯುವೆ; ಶಾಂತಿ ಸಮಾಧಾನದಿಂದ ನಿನ್ನ ಪಿತೃಗಳನ್ನು ಸೇರುವೆ.
16 : ನಿನ್ನ ಸಂತತಿಯವರು ನಾಲ್ಕನೆಯ ತಲಾಂತರವಾದ ಮೇಲೆ ಇಲ್ಲಿಗೆ ಮರಳಿ ಬರುವರು. ಏಕೆಂದರೆ ಅಮೋರಿಯರ ಪಾಪಾಕ್ರಮ ಇನ್ನೂ ಮಾಗಿಲ್ಲ,” ಎಂದರು.
17 : ಹೊತ್ತು ಮುಳುಗಿ ಕಾರ್ಗತ್ತಲಾದಾಗ ಇಗೋ, ಹೊಗೆಯಾಡುವ ಒಲೆಯೊಂದು ಹಾಗು ಉರಿಯುವ ದೀವಟಿಗೆಯೊಂದು ಕಾಣಿಸಿಕೊಂಡು ಆ ತುಂಡುಗಳ ನಡುವೆ ಹಾದುಹೋದವು.
18 : ಸರ್ವೇಶ್ವರ ಅಂದೇ ಅಬ್ರಾಮನ ಸಂಗಡ ಒಂದು ಒಡಂಬಡಿಕೆಯನ್ನು ಮಾಡಿಕೊಂಡರು: “ಈಜಿಪ್ಟಿನ ನದಿಯಿಂದ ಯೂಫ್ರೆಟಿಸ್ ಮಹಾನದಿಯವರೆಗೆ, ಕೊಡುವೆನು ಈ ನಾಡೆಲ್ಲವನ್ನು ನಿನ್ನ ಸಂತತಿಯವರಿಗೆ,”
19 : ಅಂದರೆ, ಕೇನಿಯರು, ಕೆನಿಜೀಯರು, ಕದ್ಮೋನಿಯರು,
20 : ಹಿತ್ತಿಯರು, ಪೆರಿಜೀಯರು, ರೆಫಾಯರು,
21 : ಅಮೋರಿಯರು, ಕಾನಾನ್ಯರು, ಗಿರ್ಗಾಷಿಯರು ಹಾಗು ಯೆಬೂಸಿಯರು ವಾಸವಾಗಿರುವ ಪ್ರಾಂತಗಳಿಂದ ಕೂಡಿರುವ ಈ ನಾಡನ್ನು ಕೊಡುವೆನು,” ಎಂದು ವಾಗ್ದಾನ ಮಾಡಿದರು.

Holydivine