Genesis - Chapter 4
Holy Bible

1 : ಆದಾಮನು ತನ್ನ ಹೆಂಡತಿಯ ಜೊತೆ ಕೂಡಲು ಆಕೆ ಗರ್ಭಿಣಿಯಾಗಿ ಕಾಯಿನನನ್ನು ಹೆತ್ತಳು. “ಸರ್ವೇಶ್ವರಸ್ವಾಮಿಯ ಅನುಗ್ರಹದಿಂದ ಒಂದು ಗಂಡು ಮಗುವನ್ನು ಪಡೆದಿದ್ದೇನೆ” ಎಂದಳು.
2 : ತರುವಾಯ ಅವನ ತಮ್ಮನಾದ ಹೇಬೆಲನಿಗೆ ಜನ್ಮವಿತ್ತಳು. ಹೇಬೆಲನು ಕುರಿಗಾಹಿಯಾದನು; ಕಾಯಿನನು ವ್ಯವಸಾಯಗಾರನಾದನು.
3 : ಕ್ರಮೇಣ ಕಾಯಿನನು ತಾನು ಬೆಳೆಸಿದ ಫಸಲಲ್ಲಿ ಕೆಲವನ್ನು ತಂದು ಸರ್ವೇಶ್ವರ ಸ್ವಾಮಿಗೆ ಕಾಣಿಕೆಯಾಗಿ ಸಮರ್ಪಿಸಿದನು.
4 : ಅಂತೆಯೇ, ಹೇಬೆಲನು ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನು ಕಾಣಿಕೆಯಾಗಿ ತಂದು ಅವುಗಳ ಕೊಬ್ಬನ್ನು ಸಮರ್ಪಿಸಿದನು.
5 : ಸರ್ವೇಶ್ವರ ಹೇಬೆಲನನ್ನೂ ಅವನ ಕಾಣಿಕೆಯನ್ನೂ ಮೆಚ್ಚಿಕೊಂಡರು; ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ಮೆಚ್ಚಲಿಲ್ಲ. ಇದರಿಂದ ಕಾಯಿನನು ಕಡುಗೋಪಗೊಂಡನು; ಅವನ ಮುಖ ಸಿಂಡರಿಸಿತು.
6 : ಆಗ ಸರ್ವೇಶ್ವರ ಕಾಯಿನನಿಗೆ, “ಕೋಪವೇಕೆ? ಮುಖ ಸಿಂಡರಿಸಿದೆ ಏಕೆ?
7 : ನೀನು ಒಳಿತನ್ನು ಮಾಡಿದ್ದರೆ ತಲೆ ಎತ್ತುತ್ತಿದ್ದೆ; ಕೆಡುಕನ್ನು ಮಾಡಿದ್ದರಿಂದ ಪಾಪವು ಹೊಸ್ತಿಲಲ್ಲಿ ಹೊಂಚು ಹಾಕುತ್ತಿದೆ; ಅದು ನಿನ್ನನ್ನು ಬಯಸುತ್ತಿದೆ. ನೀನು ಅದನ್ನು ಜಯಿಸಬೇಕು,” ಎಂದರು.
8 : ಬಳಿಕ ಕಾಯಿನನು ತಮ್ಮ ಹೇಬೆಲನಿಗೆ, “ಹೊಲಕ್ಕೆ ಹೋಗೋಣ ಬಾ”, ಎಂದು ಕರೆದನು. ಅವರಿಬ್ಬರೂ ಅಲ್ಲಿಗೆ ಬಂದಾಗ ಕಾಯಿನನು ತಮ್ಮನ ಮೇಲೆ ಬಿದ್ದು ಅವನನ್ನು ಕೊಂದನು.
9 : “ನಿನ್ನ ತಮ್ಮನೆಲ್ಲಿ?” ಎಂದು ಸರ್ವೇಶ್ವರ ಕೇಳಿದಾಗ “ನಾನರಿಯೆ, ನನ್ನ ತಮ್ಮನಿಗೆ ನಾನೇನು ಕಾವಲುಗಾರನೋ?” ಎಂದು ಕಾಯಿನನು ಉತ್ತರ ಕೊಟ್ಟನು.
10 : ಆಗ ಸರ್ವೇಶ್ವರ, “ನೀನು ಎಂಥ ಕೃತ್ಯ ಎಸಗಿದೆ? ಪ್ರತೀಕಾರಕ್ಕಾಗಿ ನೆಲದಿಂದ ನಿನ್ನ ತಮ್ಮನ ರಕ್ತ ಕೂಗಿ ನನಗೆ ಮೊರೆಯಿಡುತ್ತಿದೆ, ಕೇಳು.
11 : ನಿನ್ನ ಕೈ ಸುರಿಸಿದ ನಿನ್ನ ತಮ್ಮನ ರಕ್ತವನ್ನು ಕುಡಿದ ಈ ನೆಲದಿಂದಾಗಿ ನೀನು ಶಾಪಗ್ರಸ್ತನು; ತಿರಸ್ಕøತನು.
12 : ಇದನ್ನು ನೀನು ವ್ಯವಸಾಯ ಮಾಡಿದರೂ ಇನ್ನು ಮುಂದೆ ಇದು ಫಲ ಕೊಡುವುದಿಲ್ಲ. ನೆಲೆಯಿಲ್ಲದೆ ನೀನು ಲೋಕದಲ್ಲಿ ಅಲೆಮಾರಿಯಾಗಿರಬೇಕು,” ಎಂದರು.
13 : ಅದಕ್ಕೆ ಕಾಯಿನನು, “ಸರ್ವೇಶ್ವರಾ, ಈ ಶಿಕ್ಷೆ ನನ್ನಿಂದ ಸಹಿಸಲಾಗದಷ್ಟು ಕಠಿಣ.
14 : ಈ ನಾಡಿನಿಂದ ನನ್ನನ್ನು ಹೊರದೂಡುತ್ತಿರುವಿರಿ, ತಮ್ಮ ಸಾನ್ನಿಧ್ಯ ನನಗಿನ್ನು ದೊರಕದು; ನೆಲೆ ಇಲ್ಲದ ನಾನು ಲೋಕದಲ್ಲಿ ಅಲೆಮಾರಿಯಾಗಿರಬೇಕು; ಕಂಡ ಕಂಡವರೆಲ್ಲರು ನನ್ನನ್ನು ಕೊಲ್ಲುವರು,” ಎಂದು ಹೇಳಿದನು.
15 : ಅದಕ್ಕೆ ಸರ್ವೇಶ್ವರ, “ಇಲ್ಲ, ಕಾಯಿನನ ಪ್ರಾಣವನ್ನು ತೆಗೆದವನಿಗೆ ಏಳ್ಮಡಿ ದಂಡನೆ ಆಗುವುದು,” ಎಂದು ಹೇಳಿ, ಅವನನ್ನು ಕಂಡವರು ಕೊಲ್ಲದಂತೆ ಅವನ ಮೇಲೆ ಒಂದು ಗುರುತನ್ನು ಇಟ್ಟರು.
16 : ಕಾಯಿನನು ಸರ್ವೇಶ್ವರಸ್ವಾಮಿಯ ಸಾನ್ನಿಧ್ಯದಿಂದ ಹೊರಟು ಹೋಗಿ ಏದೆನ್ ನಾಡಿಗೆ ಪೂರ್ವಕ್ಕಿರುವ “ಅಲೆನಾಡು” ಎಂಬ ನಾಡಿನಲ್ಲಿ ವಾಸಮಾಡಿದನು.
17 : ಕಾಯಿನನು ತನ್ನ ಹೆಂಡತಿಯ ಜೊತೆ ಕೂಡಲು ಆಕೆ ಗರ್ಭಿಣಿಯಾಗಿ ಹನೋಕನನ್ನು ಹೆತ್ತಳು. ತಾನು ಕಟ್ಟಿದ ಊರಿಗೆ ಕಾಯಿನನು ‘ಹನೋಕ’ ಎಂದು ತನ್ನ ಮಗನ ಹೆಸರನ್ನೇ ಇಟ್ಟನು.
18 : ಹನೋಕನಿಗೆ ಈರಾದನು ಹುಟ್ಟಿದನು. ಈರಾದನಿಗೆ ಮೆಹೂಯಾಯೇಲನು ಹುಟ್ಟಿದನು. ಮೆಹೂಯಾಯೇಲನಿಗೆ ಮೆತೂಷಾಯೇಲನು, ಮೆತೂಷಾಯೇಲನಿಗೆ ಲೆಮೆಕನು ಹುಟ್ಟಿದರು.
19 : ಲೆಮೆಕನಿಗೆ ‘ಆದಾ’ ಹಾಗು ‘ಚಿಲ್ಲಾ’ ಎಂಬ ಇಬ್ಬರು ಹೆಂಡಿರು.
20 : ಆದಾಳು ಯಾಬಾಲನನ್ನು ಹೆತ್ತಳು. ಗುಡಾರಗಳಲ್ಲಿದ್ದು ದನಕರುಗಳನ್ನು ಸಾಕುವವರಿಗೆ ಇವನೇ ಮೂಲಪುರುಷ.
21 : ಇವನ ತಮ್ಮನ ಹೆಸರು ಯೂಬಾಲ. ಇವನು ಕಿನ್ನರಿ ಕೊಳಲುಗಳನ್ನು ನುಡಿಸುವವರಿಗೆ ಮೂಲ ಪುರುಷ.
22 : ಚಿಲ್ಲಾ ಎಂಬುವಳು ತೂಬಲ್ ಕಾಯಿನನಿಗೆ ಜನ್ಮವಿತ್ತಳು. ಇವನು ಕಬ್ಬಿಣ, ಹಿತ್ತಾಳೆ ಆಯುಧಗಳನ್ನು ಮಾಡುವ ಕುಲುಮೆಗಾರರಿಗೆ ಮೂಲ ಪುರುಷ. ತೂಬಲ್ ಕಾಯಿನನ ತಂಗಿಯ ಹೆಸರು ನಯಮಾ.
23 : ಲೆಮೆಕನು ತನ್ನ ಹೆಂಡತಿಯರಿಗೆ ಹೀಗೆಂದನು: ಆದಾ, ಚಿಲ್ಲಾ, ಕೇಳಿ ನಾನು ಹೇಳುವುದನ್ನು ಲೆಮೆಕನ ಸತಿಯರೇ, ಆಲಿಸಿ ನನ್ನ ಮಾತನ್ನು ನಾ ಹತಮಾಡಿದೆ ನನಗೆ ಗಾಯಮಾಡಿದವನನ್ನು ನಾ ಕೊಂದೆ ನನ್ನನ್ನು ಹೊಡೆದಾ ಪ್ರಾಯದವನನ್ನು.
24 : ಕಾಯಿನನನ್ನು ಕೊಂದವನಿಗೆ ಆಗುವುದಾದರೆ ಪ್ರತೀಕಾರ ಏಳ್ಮಡಿ ಲೆಮೆಕನನ್ನು ಕೊಂದವನಿಗೆ ಆಗುವುದು ಪ್ರತೀಕಾರ ಎಪ್ಪತ್ತೇಳ್ಮಡಿ.
25 : ಆದಾಮ್ ಮತ್ತು ಅವನ ಹೆಂಡತಿಗೆ ಮತ್ತೊಂದು ಗಂಡುಮಗು ಆಯಿತು. ಆಕೆ, “ಕಾಯಿನನು ಕೊಂದುಹಾಕಿದ ಹೇಬೆಲನಿಗೆ ಬದಲಾಗಿ ದೇವರು ನನಗೆ ಬೇರೆ ಸಂತಾನವನ್ನು ಅನುಗ್ರಹಿಸಿದ್ದಾರೆ,” ಎಂದುಕೊಂಡು ಅವನಿಗೆ “ಸೇತ್” ಎಂದು ನಾಮಕರಣ ಮಾಡಿದಳು.
26 : ತರುವಾಯ ಸೇತನು ಸಹ ಒಬ್ಬ ಮಗನನ್ನು ಪಡೆದು ಅವನಿಗೆ “ಏನೋಷ್” ಎಂದು ಹೆಸರಿಟ್ಟನು. ಜನರು “ಸರ್ವೇಶ್ವರ” ಎಂಬ ಹೆಸರನ್ನು ಆರಾಧಿಸುವುದಕ್ಕೆ ಪ್ರಾರಂಭಿಸಿದ್ದು ಆ ಕಾಲದಲ್ಲಿಯೇ.

Holydivine