Genesis - Chapter 20
Holy Bible

1 : ಅಬ್ರಹಾಮನು ಅಲ್ಲಿಂದ ಕಾನಾನ್ ನಾಡಿನ ದಕ್ಷಿಣ ಪ್ರಾಂತಕ್ಕೆ ಪ್ರಯಾಣ ಮಾಡುತ್ತಾ ಕಾದೇಶಿಗೂ ಶೂರಿಗೂ ನಡುವೆ ವಾಸ ಮಾಡಿದನು. ಕೆಲವು ಕಾಲ ಗೆರಾರಿನಲ್ಲೂ ಇದ್ದನು.
2 : ಅಲ್ಲಿದ್ದಾಗ ಅಬ್ರಹಾಮನು ತನ್ನ ಹೆಂಡತಿ ಸಾರಳು ತನಗೆ ತಂಗಿಯಾಗಬೇಕೆಂದು ಹೇಳಿಕೊಂಡನು. ಈ ಕಾರಣ ಗೆರಾರಿನ ಅರಸನಾದ ಅಬೀಮೆಲೆಕನು ಆಕೆಯನ್ನು ಕರೆಸಿ ತನ್ನ ಮನೆಯಲ್ಲಿ ಸೇರಿಸಿಕೊಂಡನು.
3 : ಆದರೆ ದೇವರು ಅಬೀಮೆಲೆಕನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ನೀನು ಆ ಮಹಿಳೆಯನ್ನು ಸೇರಿಸಿಕೊಂಡ ಕಾರಣ ಸಾಯತಕ್ಕವನು, ಆಕೆಗೆ ಗಂಡನಿದ್ದಾನೆ,” ಎಂದರು.
4 : ಅಬೀಮೆಲೆಕನು ಆಕೆಯನ್ನು ಅಲ್ಲಿಯವರೆಗೂ ಕೂಡಿರಲಿಲ್ಲ. ಎಂದೇ ಅವನು, “ಸ್ವಾವಿೂ ನಿರಪರಾಧಿಯಾದ ಪ್ರಜೆಯನ್ನು ನೀವು ನಾಶ ಮಾಡುವಿರೋ?
5 : ಆ ಮನುಷ್ಯನೇ ಈಕೆ ನನಗೆ ತಂಗಿಯಾಗಬೇಕೆಂದು ಹೇಳಿದ; ಈಕೆಯೂ ಆತನು ನನಗೆ ಅಣ್ಣನಾಗಬೇಕೆಂದು ಹೇಳಿದಳು. ಶುದ್ಧಮನಸ್ಸಿನಿಂದ ಹಾಗು ಶುದ್ಧಹಸ್ತದಿಂದ ಈ ಕಾರ್ಯ ಮಾಡಿದೆ,” ಎಂದನು.
6 : ಅದಕ್ಕೆ ದೇವರು ಪ್ರತ್ಯುತ್ತರವಾಗಿ, “ನೀನು ಶುದ್ಧ ಮನಸ್ಸಿನಿಂದ ಈ ಕಾರ್ಯಮಾಡಿದೆಯೆಂದು ನಾನು ಬಲ್ಲೆ; ಆದಕಾರಣವೇ ನನಗೆ ವಿರುದ್ಧವಾಗಿ ನೀನು ಪಾಪಮಾಡದಂತೆ ತಡೆದು ಆಕೆಯನ್ನು ಮುಟ್ಟಗೊಡಿಸಲಿಲ್ಲ.
7 : ಈಗ ಆ ಮನುಷ್ಯನ ಹೆಂಡತಿಯನ್ನು ಮರಳಿ ಅವನಿಗೆ ಒಪ್ಪಿಸಿಬಿಡು. ಅವನೊಬ್ಬ ಪ್ರವಾದಿ. ನಿನ್ನ ಪರವಾಗಿ ನನ್ನನ್ನು ಪ್ರಾರ್ಥಿಸುವನು, ನೀನು ಬದುಕುವೆ. ಆಕೆಯನ್ನು ಒಪ್ಪಿಸಲು ನಿರಾಕರಿಸಿದೆಯಾದರೆ ನೀನೂ ನಿನ್ನವರೆಲ್ಲರೂ ಸತ್ತೇ ಸಾಯುವಿರೆಂದು ತಿಳಿದುಕೊ,” ಎಂದು ಕನಸಿನಲ್ಲಿ ಹೇಳಿದರು.
8 : ಅಬೀಮೆಲೆಕನು ಬೆಳಿಗ್ಗೆ ಬೇಗನೆ ಎದ್ದು ತನ್ನ ಪರಿವಾರವನ್ನೆಲ್ಲಾ ಕೂಡಿಸಿದನು. ನಡೆದ ಸಂಗತಿಗಳನ್ನೆಲ್ಲ ತಿಳಿಸಿದಾಗ ಅವರಿಗೆ ಬಹಳ ಭಯವುಂಟಾಯಿತು.
9 : ಅನಂತರ ಅವನು ಅಬ್ರಹಾಮನನ್ನು ಕರೆಸಿ, “ನೀನು ನನಗೆ ಮಾಡಿದ್ದೇನು? ಯಾವ ತಪ್ಪಿಗಾಗಿ ನೀನು ನನ್ನನ್ನೂ ನನ್ನ ರಾಜ್ಯವನ್ನೂ ಈ ಮಹಾಪಾತಕಕ್ಕೆ ಒಳಪಡಿಸಿದೆ? ಮಾಡಬಾರದ ಕಾರ್ಯವನ್ನು ನೀನು ಮಾಡಿದೆ,” ಎಂದು ಹೇಳಿದನು.
10 : ಅಲ್ಲದೆ, “ನೀನು ಯಾವ ಉದ್ದೇಶದಿಂದ ಹೀಗೆ ಮಾಡಿದೆ?” ಎಂದು ವಿಚಾರಿಸಿದನು.
11 : ಅದಕ್ಕೆ ಅಬ್ರಹಾಮನು, “ಇಲ್ಲಿಯ ಜನರಿಗೆ ದೇವರಲ್ಲಿ ಭಯಭಕ್ತಿಯಿಲ್ಲವೆಂದೂ ನನ್ನ ಹೆಂಡತಿಯ ನಿಮಿತ್ತ ನನ್ನನ್ನು ಕೊಂದಾರು ಎಂದೂ ಭಾವಿಸಿದೆ.
12 : ಅದೂ ಅಲ್ಲದೆ ಈಕೆ ನಿಜವಾಗಿಯೂ ನನ್ನ ತಂಗಿ, ನನ್ನ ತಂದೆಯ ಮಗಳು, ಆದರೆ ನನ್ನ ತಾಯಿಯ ಮಗಳಲ್ಲ; ಎಂದೇ ನನಗೆ ಹೆಂಡತಿಯಾದಳು.
13 : ನಾನು ದೇವರ ಸಂಕಲ್ಪಕ್ಕೆ ತಲೆಬಾಗಿ, ತಂದೆಯ ಮನೆಯನ್ನು ಬಿಟ್ಟು, ದೇಶಾಂತರ ಹೋಗಲು ಹೊರಟಾಗ ಈಕೆಗೆ, ‘ನಿನ್ನಿಂದ ನನಗೊಂದು ಉಪಕಾರವಾಗಬೇಕು; ಅದೇನೆಂದರೆ, ನಾವು ಹೋದ ಕಡೆಯೆಲ್ಲಾ ನಾನು ನಿನಗೆ ಅಣ್ಣನಾಗಬೇಕೆಂದು ಹೇಳು,’ ಎಂದು ತಿಳಿಸಿದೆ,” ಎಂದನು.
14 : ಆಗ ಅಬೀಮೆಲೆಕನು ಅಬ್ರಹಾಮನಿಗೆ ದನಕುರಿಗಳನ್ನೂ ದಾಸದಾಸಿಯರನ್ನೂ ಕೊಟ್ಟು ಅವನ ಹೆಂಡತಿ ಸಾರಳನ್ನು ಅವನಿಗೆ ಒಪ್ಪಿಸಿದನು.
15 : ಅದೂ ಅಲ್ಲದೆ, “ಇಗೋ, ನನ್ನ ನಾಡು ನಿನಗೆ ತೆರೆದಿದೆ; ಇಷ್ಟಬಂದ ಕಡೆ ಹೋಗಿ ವಾಸಮಾಡು,” ಎಂದನು.
16 : ಸಾರಳಿಗೆ ಅವನು ಹೇಳಿದ್ದೇನೆಂದರೆ, “ನಿನ್ನ ಅಣ್ಣನಿಗೆ ಸಾವಿರ ಬೆಳ್ಳಿನಾಣ್ಯಗಳನ್ನು ಕೊಟ್ಟಿದ್ದೇನೆ. ಇದರಿಂದ ನೀನು ನಿರ್ದೋಷಿಯೆಂದು ರುಜುವಾತಾಗಲಿ; ನೀನು ತಪ್ಪು ಮಾಡಿಲ್ಲವೆಂದು ಎಲ್ಲರಿಗೂ ಸ್ಪಷ್ಟವಾಗಲಿ.”
17 : ತರುವಾಯ ಅಬ್ರಹಾಮನು ಅಬೀಮೆಲೆಕನಿಗೋಸ್ಕರ ದೇವರಲ್ಲಿ ಪ್ರಾರ್ಥನೆ ಮಾಡಿದನು. ದೇವರು ಅಬೀಮೆಲೆಕನನ್ನು, ಅವನ ಪತ್ನಿಯನ್ನು ಹಾಗೂ ದಾಸಿಯರನ್ನು ಗುಣಪಡಿಸಿದರು; ಅವರಿಗೆ ಮಕ್ಕಳಾದರು.
18 : ಇದಕ್ಕೆ ಮುಂಚೆ ಅಬ್ರಹಾಮನ ಹೆಂಡತಿ ಸಾರಳ ನಿಮಿತ್ತ ಅಬೀಮೆಲೆಕನ ಮನೆಯಲ್ಲಿದ್ದ ಮಹಿಳೆಯರೆಲ್ಲರನ್ನು ಸರ್ವೇಶ್ವರಸ್ವಾಮಿ ಬಂಜೆಯರನ್ನಾಗಿಸಿದ್ದರು.

Holydivine