Genesis - Chapter 40
Holy Bible

1 : ಈ ಘಟನೆಗಳಾದ ಬಳಿಕ ಈಜಿಪ್ಟಿನ ಅರಸನಾದ ಫರೋಹನ ಮುಖ್ಯ ಪಾನದಾಯಕ ಮತ್ತು ಮುಖ್ಯ ಅಡಿಗೆಭಟ್ಟ ಯಾವುದೋ ವಿಷಯದಲ್ಲಿ ತಮ್ಮ ದಣಿಗೆ ದ್ರೋಹಮಾಡಿದ್ದರು.
2 : ಫರೋಹನು ಆ ಇಬ್ಬರು ನೌಕರರ ಮೇಲೆ, ಅಂದರೆ ಪಾನಸೇವಕರಲ್ಲಿ ಮುಖ್ಯಸ್ಥನ ಮೇಲೆಯೂ ಅಡಿಗೆಭಟ್ಟರ ಮುಖ್ಯಸ್ಥನ ಮೇಲೆಯೂ ಕೋಪಗೊಂಡು,
3 : ಅವರನ್ನು ಅಂಗರಕ್ಷಕರ ದಳಪತಿಯ ವಠಾರದಲ್ಲಿದ್ದ ಸೆರೆಯಲ್ಲಿ ಹಾಕಿಸಿದ್ದನು.
4 : ದಳಪತಿ ಜೋಸೆಫನನ್ನು ಅವರ ಉಪಚಾರಕ್ಕೆ ನೇಮಿಸಿದ್ದನು. ಜೋಸೆಫನು ಅವರಿಗೆ ಸೇವೆಮಾಡಬೇಕಾಗಿತ್ತು.
5 : ಕೆಲವು ಕಾಲವಾದ ಮೇಲೆ, ಆ ಇಬ್ಬರು, ನೌಕರರಿಗೂ ಅಂದರೆ, ಈಜಿಪ್ಟಿನ ಅರಸ ಸೆರೆಗೆ ಹಾಕಿಸಿದ್ದ ಪಾನಸೇವಕನಿಗೂ ಅಡಿಗೆಭಟ್ಟನಿಗೂ ಒಂದೇ ರಾತ್ರಿ ಕನಸುಬಿತ್ತು. ಅವರ ಕನಸುಗಳಿಗೆ ಬೇರೆಬೇರೆ ಅರ್ಥವಿತ್ತು.
6 : ಬೆಳಿಗ್ಗೆ ಜೋಸೆಫನು ಅವರ ಬಳಿಗೆ ಬಂದಾಗ ಚಿಂತಾಕ್ರಾಂತರಾಗಿರುವುದು ಕಾಣಿಸಿತು.
7 : ಅದನ್ನು ಗಮನಿಸಿದ ಜೋಸೆಫನು, “ಈ ದಿನ ನಿಮ್ಮ ಮುಖ ಕಳೆಗುಂದಿದೆ ಏಕೆ?” ಎಂದು ತನ್ನೊಂದಿಗೆ ಸೆರೆಯಲ್ಲಿದ್ದ ಆ ನೌಕರರನ್ನು ಕೇಳಿದ.
8 : ಅವರು, “ನಮಗೆ ಸ್ವಪ್ನಬಿತ್ತು; ಅದರ ಅರ್ಥಹೇಳುವವರು ಯಾರೂ ಇಲ್ಲ,” ಎಂದರು. ಜೋಸೆಫನು ಅವರಿಗೆ, “ಸ್ವಪ್ನಗಳ ಅರ್ಥ ದೇವರಿಂದ ದೊರಕಬಹುದಲ್ಲವೆ? ದಯವಿಟ್ಟು ನಿಮ್ಮ ಸ್ವಪ್ನಗಳನ್ನು ನನಗೆ ತಿಳಿಸಿ,” ಎಂದ.
9 : ಆಗ ಆ ಮುಖ್ಯ ಪಾನಸೇವಕ ಜೋಸೆಫನಿಗೆ, “ನನ್ನ ಕನಸಿನಲ್ಲಿ ಒಂದು ದ್ರಾಕ್ಷಾಲತೆ ನನ್ನೆದುರಿಗೆ ಇರುವುದನ್ನು ಕಂಡೆ.
10 : ಅದಕ್ಕೆ ಮೂರು ಕವಲುಗಳಿದ್ದವು. ಅದು ಚಿಗುರುತ್ತಲೇ ಹೂಗಳನ್ನು ಬಿಟ್ಟಿತು. ಆ ಹೂಗಳು ಗೊಂಚಲುಗಳಾಗಿ ಹಣ್ಣಾದವು.
11 : ಫರೋಹನ ಪಾನಪಾತ್ರೆ ನನ್ನ ಕೈಯಲ್ಲಿತ್ತು. ನಾನು ಆ ಗೊಂಚಲುಗಳನ್ನು ಕೊಯ್ದು ಪಾತ್ರೆಯಲ್ಲಿ ಹಿಂಡಿ ಆ ಪಾತ್ರೆಯನ್ನು ಫರೋಹನ ಕೈಗೆ ಒಪ್ಪಿಸಿದೆ,” ಎಂದು ಹೇಳಿದ.
12 : ಅದಕ್ಕೆ ಜೋಸೆಫನು, “ಆ ಕನಸಿನ ಅರ್ಥ ಇದು: ಆ ಮೂರು ಕೊಂಬೆಗಳು ಮೂರು ದಿನಗಳು;
13 : ಇನ್ನು ಮೂರು ದಿನಗಳೊಳಗೆ ನೀನು ತಲೆಯೆತ್ತುವಂತೆ ಫರೋಹನು ಮಾಡುವನು; ನಿನ್ನನ್ನು ಮರಳಿ ನೌಕರಿಗೆ ಸೇರಿಸಿಕೊಳ್ಳುವನು; ನೀನು ಮುಂದಿನಂತೆಯೇ ಫರೋಹನಿಗೆ ಪಾನ ಸೇವಕನಾಗಿದ್ದು ಅವನ ಕೈಗೆ ಪಾನಪಾತ್ರೆಯನ್ನು ಒಪ್ಪಿಸುವೆ.
14 : ಆದರೆ ನೀನು ಸುಖದಿಂದಿರುವಾಗ ನನ್ನನ್ನು ಮರೆಯದೆ ನನಗೊಂದು ಉಪಕಾರ ಮಾಡು. ಫರೋಹನಿಗೆ ನನ್ನ ವಿಷಯ ತಿಳಿಸಿ ನನ್ನನ್ನು ಈ ಸೆರೆಯಿಂದ ಬಿಡುಗಡೆಮಾಡು.
15 : ನಾನು ಹಿಬ್ರಿಯ ದೇಶದವನು. ಕೆಲವರು ನನ್ನನ್ನು ಗುಲಾಮನನ್ನಾಗಿ ಈ ದೇಶಕ್ಕೆ ಹಿಡಿದು ತಂದರು. ಇಲ್ಲಿಯೂ ಸೆರೆಗೆ ಗುರಿಯಾಗಿಸುವಂಥ ದ್ರೋಹವನ್ನು ನಾನೇನು ಮಾಡಿಲ್ಲ,” ಎಂದನು.
16 : ಜೋಸೆಫನು ಹೇಳಿದ ಅರ್ಥ ಶುಭಕರ ಆದುದೆಂದು ತಿಳಿದ ಆ ಮುಖ್ಯ ಅಡಿಗೆಭಟ್ಟ ಅವನಿಗೆ, “ನಾನು ಕಂಡ ಕನಸನ್ನು ಹೇಳುತ್ತೇನೆ, ಕೇಳು: ಸೊಗಸಾದ ರೊಟ್ಟಿ ಪದಾರ್ಥಗಳು ತುಂಬಿದ್ದ ಮೂರು ಪುಟ್ಟಿಗಳು ನನ್ನ ತಲೆಯ ಮೇಲೆ ಇದ್ದವು.
17 : ಮೇಲಣ ಪುಟ್ಟಿಯಲ್ಲಿ ಫರೋಹನಿಗಾಗಿಯೆ ವಿಧವಿಧವಾದ ರೊಟ್ಟಿಪದಾರ್ಥಗಳು ಇದ್ದವು. ಪಕ್ಷಿಗಳು ಬಂದು ಅವುಗಳನ್ನು ನನ್ನ ತಲೆಯ ಮೇಲಿದ್ದ ಪುಟ್ಟಿಯಿಂದಲೆ ತಿನ್ನುತ್ತಾ ಇದ್ದವು,” ಎಂದು ಹೇಳಿದ.
18 : ಅದಕ್ಕೆ ಜೋಸೆಫನು, “ನಿನ್ನ ಕನಸಿನ ಅರ್ಥ ಇದು: ಆ ಮೂರು ಪುಟ್ಟಿಗಳೇ ಮೂರು ದಿನಗಳು.
19 : ಇನ್ನು ಮೂರು ದಿನದೊಳಗೆ ಫರೋಹನು ನಿನ್ನ ಕುತ್ತಿಗೆಗೆ ನೇಣು ಹಾಕಿಸುವನು; ಮರಕ್ಕೆ ತೂಗುಹಾಕಿಸುವನು; ಹಕ್ಕಿಗಳು ಬಂದು ನಿನ್ನ ಮಾಂಸವನ್ನು ತಿಂದುಬಿಡುವುವು,” ಎಂದನು.
20 : ಮೂರನೆಯ ದಿನ ಫರೋಹನು ಹುಟ್ಟಿದ ಹಬ್ಬದಿನವಾಗಿತ್ತು. ಅವನು ತನ್ನ ಪರಿವಾರದವರಿಗೆಲ್ಲ ಔತಣವನ್ನು ಏರ್ಪಡಿಸಿದ್ದ. ಮುಖ್ಯ ಪಾನಸೇವಕನನ್ನೂ ಮುಖ್ಯ ಅಡಿಗೆಭಟ್ಟನನ್ನೂ ಬಿಡಿಸಿ ಬರಮಾಡಿದ, ತನ್ನ ಪರಿವಾರದವರ ಮಧ್ಯದಲ್ಲೆ ಅವರ ತಲೆಯನ್ನು ಎತ್ತಿಸಿದ.
21 : ಪಾನ ಸೇವಕರ ಮುಖ್ಯಸ್ಥನನ್ನು ಪುನಃ ಅವನ ನೌಕರಿಗೆ ಏರಿಸಿದ; ಅವನು ಪಾನಪಾತ್ರೆಯನ್ನು ಫರೋಹನ ಕೈಗೆ ಒಪ್ಪಿಸುವಂಥವನಾದ.
22 : ಆದರೆ ಮುಖ್ಯ ಅಡಿಗೆ ಭಟ್ಟನನ್ನು ನೇಣು ಹಾಕಿಸಿದ. ಹೀಗೆ ಜೋಸೆಫನು ಹೇಳಿದ ಅರ್ಥ ಕಾರ್ಯಗತವಾಯಿತು.
23 : ಆದರೆ ಮುಖ್ಯ ಪಾನಸೇವಕನು ಜೋಸೆಫನನ್ನು ನೆನಪಿಗೆ ತಂದುಕೊಳ್ಳಲಿಲ್ಲ. ಅವನನ್ನು ಮರೆತೇ ಬಿಟ್ಟ.

Holydivine