Genesis - Chapter 35
Holy Bible

1 : ದೇವರು ಯಕೋಬನಿಗೆ, “ನೀನು ಈ ಸ್ಥಳವನ್ನು ಬಿಟ್ಟು ಬೇತೇಲಿಗೆ ಹೋಗಿ ಅಲ್ಲೇ ವಾಸಮಾಡು. ನೀನು ನಿನ್ನ ಅಣ್ಣ ಏಸಾವನ ಬಳಿಯಿಂದ ಓಡಿಹೋಗುವಾಗ ನಿನಗಲ್ಲಿ ದರ್ಶನ ಇತ್ತ ದೇವರು ನಾನೇ. ನನಗೊಂದು ಬಲಿಪೀಠವನ್ನು ಅಲ್ಲಿ ಕಟ್ಟಿಸು,” ಎಂದು ಹೇಳಿದರು.
2 : ಆಗ ಯಕೋಬನು ತನ್ನ ಮನೆಯವರಿಗೂ ಹಾಗು ತನ್ನ ಸಂಗಡ ಇದ್ದ ಎಲ್ಲರಿಗೂ, “ನಿಮ್ಮಲ್ಲಿ ಇರುವ ಅನ್ಯ ದೇವರುಗಳನ್ನು ತೊರೆದುಬಿಡಿ; ನಿಮ್ಮನ್ನೇ ಶುದ್ಧೀಕರಿಸಿಕೊಂಡು ಮಡಿವಸ್ತ್ರಗಳನ್ನು ಹಾಕಿಕೊಳ್ಳಿ; ನಾವು ಬೇತೇಲಿಗೆ ಹೊರಟು ಹೋಗೋಣ.
3 : ಕಷ್ಟಕಾಲದಲ್ಲಿ ನನ್ನ ವಿಜ್ಞಾಪನೆಯನ್ನು ಆಲಿಸಿ, ನಾನು ಹೋದ ಕಡೆಯೆಲ್ಲ ನನ್ನೊಂದಿಗಿದ್ದ ದೇವರಿಗೆ ಅಲ್ಲೊಂದು ಬಲಿಪೀಠವನ್ನು ಕಟ್ಟಿಸುತ್ತೇನೆ,” ಎಂದು ಹೇಳಿದನು.
4 : ಅಂತೆಯೆ ಅವರು ತಮ್ಮಲ್ಲಿದ್ದ ಎಲ್ಲ ಅನ್ಯ ದೇವರುಗಳನ್ನೂ ತಮ್ಮ ಕಿವಿಗಳಲ್ಲಿದ್ದ ಮುರುವುಗಳನ್ನೂ ಯಕೋಬನಿಗೆ ಒಪ್ಪಿಸಿ ಬಿಟ್ಟರು. ಅವನು ಅವುಗಳನ್ನು ಶೆಕೆಮ್ ಪಟ್ಟಣದ ಹತ್ತಿರ ಇದ್ದ ಒಂದು ಓಕ್ ಮರದ ಬುಡದಡಿಯಲ್ಲಿ ಹೂಳಿಬಿಟ್ಟನು.
5 : ಅವರು ಪ್ರಯಾಣಮಾಡುತ್ತಿದ್ದಾಗ ದೇವರು ಸುತ್ತಮುತ್ತಣದ ಊರಿನವರಲ್ಲಿ ಭಯ ಹುಟ್ಟಿಸಿದರು. ಇದರಿಂದಾಗಿ ಈ ಊರಿನವರಾರೂ ಯಕೋಬನ ಮಕ್ಕಳನ್ನು ಹಿಂದಟ್ಟಿ ಬರಲಿಲ್ಲ.
6 : ಯಕೋಬನೂ ಅವನ ಸಂಗಡವಿದ್ದ ಜನರೆಲ್ಲರೂ ಕಾನಾನ್ ನಾಡಿನಲ್ಲಿದ್ದ ಬೇತೇಲೆಂಬ ಊರಿಗೆ ಬಂದು ಸೇರಿದರು.
7 : ಯಕೋಬನು ತನ್ನ ಅಣ್ಣನ ಬಳಿಯಿಂದ ಓಡಿಹೋಗುವಾಗ ದೇವರು ಅವನಿಗೆ ಪ್ರತ್ಯಕ್ಷವಾದುದು ಅಲ್ಲಿಯೇ. ಎಂದೇ ಅವನು ಅಲ್ಲಿ ಒಂದು ಬಲಿಪೀಠವನ್ನು ಕಟ್ಟಿಸಿ, ಆ ಸ್ಥಳಕ್ಕೆ ‘ಏಲ್ ಬೇತೇಲ್’ ಎಂದು ಹೆಸರಿಟ್ಟನು.
8 : ಅಲ್ಲಿರುವಾಗ ರೆಬೆಕ್ಕಳ ದಾದಿ ದೆಬೋರಳು ಸತ್ತುಹೋದಳು. ಆಕೆಯನ್ನು ಬೇತೇಲಿನ ಕಣಿವೆಯಲ್ಲಿರುವ ಮತ್ತೊಂದು ಓಕ್ ಮರದ ಬುಡದಲ್ಲಿ ಸಮಾಧಿಮಾಡಿ ಅದಕ್ಕೆ ‘ಅಲ್ಲೋನ್ ಬಾಕೂತ್’ ಎಂದು ಹೆಸರಿಟ್ಟರು.
9 : ಯಕೋಬನು ಮೆಸಪೊಟೇಮಿಯಾದಿಂದ ಹಿಂದಿರುಗಿ ಬಂದಾಗ ದೇವರು ಮತ್ತೆ ಅವನಿಗೆ ದರ್ಶನಕೊಟ್ಟು ಅವನನ್ನು ಆಶೀರ್ವದಿಸಿದರು.
10 : ಅವನಿಗೆ ದೇವರು, “ನಿನ್ನ ಹೆಸರು; ಯಕೋಬ ಅಲ್ಲವೆ? ಇನ್ನು ಮೇಲೆ ನೀನು ಯಕೋಬನೆನಿಸಿಕೊಳ್ಳದೆ ‘ಇಸ್ರಯೇಲ್’ ಎನಿಸಿಕೊಳ್ಳಬೇಕು” ಎಂದು ಹೇಳಿದರು. ಹೀಗೆ ಅವನ ಹೆಸರು ಇಸ್ರಯೇಲ್ ಆಯಿತು.
11 : ಇದಲ್ಲದೆ ಅವನಿಗೆ ದೇವರು, “ನಾನೇ ಸರ್ವವಲ್ಲಭನಾದ ದೇವರು; ನೀನು ವೃದ್ಧಿಯಾಗಿ ಬಹುಸಂತಾನವುಳ್ಳವನಾಗು. ನಿನ್ನಿಂದ ರಾಷ್ಟ್ರವೊಂದು ಉಂಟಾಗುವುದು, ಅನೇಕ ರಾಷ್ಟ್ರಗಳೂ ರಾಜರುಗಳೂ ನಿನ್ನಿಂದ ಹುಟ್ಟುವರು.
12 : ನಾನು ಅಬ್ರಹಾಮ್, ಇಸಾಕರಿಗೆ ವಾಗ್ದಾನ ಮಾಡಿದ ನಾಡನ್ನು ನಿನಗೂ ನಿನ್ನ ತರುವಾಯ ಬರುವ ನಿನ್ನ ಸಂತತಿಗೂ ಕೊಡುವೆನು,” ಎಂದು ಹೇಳಿದರು.
13 : ಬಳಿಕ ಅವನ ಸಂಗಡ ಮಾತನಾಡಿದ ಆ ಸ್ಥಳದಿಂದ ಮೇಲಕ್ಕೇರಿ ಹೋದರು.
14 : ಯಕೋಬನು ತನ್ನೊಡನೆ ದೇವರು ಮಾತನಾಡಿದ ಆ ಸ್ಥಳದಲ್ಲಿ ಕಲ್ಲಿನ ಸ್ತಂಭವೊಂದನ್ನು ನಿಲ್ಲಿಸಿ, ಅದರ ಮೇಲೆ ಪಾನಕಾ ಅಭಿಷೇಕಮಾಡಿ, ಎಣ್ಣೆ ಹೊಯ್ದು ಅಭ್ಯಂಗಿಸಿದನು.
15 : ಆ ಸ್ಥಳವನ್ನು ‘ಬೇತೇಲ್’ ಎಂದು ಹೆಸರಿಸಿದನು.
16 : ಆ ಬಳಿಕ ಅವರು ಬೇತೇಲನ್ನು ಬಿಟ್ಟು ಹೊರಟರು. ಎಫ್ರಾತೂರಿಗೆ ಸೇರುವುದಕ್ಕೆ ಇನ್ನು ಸ್ವಲ್ಪ ದೂರವಿದ್ದಾಗ ರಾಖೇಲಳಿಗೆ ಹೆರಿಗೆಯ ಕಾಲ ಬಂದಿತು.
17 : ಆಕೆ ಪ್ರಸವವೇದನೆಯಿಂದ ಬಹಳ ಕಷ್ಟಪಡುತ್ತಿದ್ದಾಗ ಸೂಲಗಿತ್ತಿಯು ಆಕೆಗೆ, “ಅಂಜಬೇಡ, ನಿನಗೆ ಇನ್ನೊಬ್ಬ ಮಗ ಹುಟ್ಟಿದ್ದಾನೆ,” ಎಂದು ಹೇಳಿದಳು.
18 : ಆದರೆ ರಾಖೇಲಳು ಸತ್ತುಹೋದಳು. ಪ್ರಾಣ ಹೋಗುತ್ತಿದ್ದಾಗ ಆಕೆ ಆ ಮಗುವಿಗೆ ‘ಬೆನೋನಿ’ ಎಂದು ಹೆಸರಿಟ್ಟಳು. ಅದರ ತಂದೆಯಾದರೋ ಅದಕ್ಕೆ ಬೆನ್ಯಾವಿೂನ್ ಎಂದು ಹೆಸರಿಟ್ಟನು.
19 : ಅನಂತರ ರಾಖೇಲಳು ಸತ್ತುಹೋದಳು. ಆಕೆಯನ್ನು ಬೆತ್ಲೆಹೇಮೆಂಬ ಎಫ್ರಾತಿಗೆ ಹೋಗುವ ದಾರಿಪಕ್ಕದಲ್ಲಿ ಸಮಾಧಿ ಮಾಡಿದರು.
20 : ಯಕೋಬನು ಆಕೆಯ ಸಮಾಧಿಯ ಮೇಲೆ ಸ್ಮಾರಕಸ್ತಂಭವನ್ನು ನಿಲ್ಲಿಸಿದನು. ಅದು ಇಂದಿನವರೆಗೂ ರಾಖೇಲಳ ಸಮಾಧಿಸ್ತಂಭ ಎನಿಸಿಕೊಳ್ಳುತ್ತದೆ.
21 : ಅಲ್ಲಿಂದ ಇಸ್ರಯೇಲನು ಪ್ರಯಾಣ ಬೆಳೆಸಿ ಮಿಗ್ದಲದ ಏದನ ಆಚೆಕಡೆಯಲ್ಲಿ ತನ್ನ ಗುಡಾರವನ್ನು ಹಾಕಿಸಿದನು.
22 : ಇಸ್ರಯೇಲನು ಆ ನಾಡಿನಲ್ಲಿ ವಾಸವಾಗಿದ್ದಾಗ ರೂಬೇನ್ ತನ್ನ ತಂದೆಯ ಉಪಪತ್ನಿಯಾದ ಬಿಲ್ಹಳಲ್ಲಿ ಸಂಗಮಿಸಿದನು. ಈ ಸಂಗತಿ ತಿಳಿದು ಬಂದಾಗ ಇಸ್ರಯೇಲನಿಗೆ ಕಡುಕೋಪವಾಯಿತು.
23 : ಯಕೋಬನ ಹನ್ನೆರಡು ಗಂಡುಮಕ್ಕಳ ಹೆಸರು ಇವು: ಯಕೋಬನ ಚೊಚ್ಚಲಮಗ ರೂಬೇನ್, ಸಿಮೆಯೋನ್, ಲೇವಿ, ಯೆಹೂದಾ, ಇಸ್ಸಾಕಾರ್, ಜೆಬುಲೂನ್ - ಇವರು ಲೇಯಳಲ್ಲಿ ಹುಟ್ಟಿದವರು.
24 : ಜೋಸೆಫ್, ಬೆನ್ಯಾವಿೂನ್ ಇವರಿಬ್ಬರು ರಾಖೇಲಳಲ್ಲಿ ಹುಟ್ಟಿದವರು.
25 : ದಾನ್, ನಫ್ತಾಲಿ - ಇವರು ರಾಖೇಲಳ ದಾಸಿ ಬಿಲ್ಹಾಳಲ್ಲಿ ಹುಟ್ಟಿದವರು.
26 : ಗಾದ್, ಆಶೇರ್ - ಇವರಿಬ್ಬರು ಲೇಯಳ ದಾಸಿ ಜಿಲ್ಪಳಲ್ಲಿ ಹುಟ್ಟಿದವರು. ಮೆಸಪೊಟೇಮಿಯಾದಲ್ಲಿ ಯಕೋಬನಿಗೆ ಹುಟ್ಟಿದ ಮಕ್ಕಳು ಇವರೇ.
27 : ಯಕೋಬನು ತನ್ನ ತಂದೆ ಇಸಾಕನ ಬಳಿಗೆ ಮಮ್ರೆಗೆ ಬಂದನು. ಮಮ್ರೆಯು ಹೆಬ್ರೋನೆಂಬ ಕಿರ್ಯತರ್ಬಕ್ಕೆ ಸೇರಿದುದು. ಅದೇ ಅಬ್ರಹಾಮ್ ಹಾಗು ಇಸಾಕನು ಪರದೇಶಸ್ಥರಾಗಿ ವಾಸವಾಗಿದ್ದ ಸ್ಥಳ.
28 : ಇಸಾಕನು ಹಣ್ಣುಹಣ್ಣು ಮುದುಕನಾಗಿದ್ದು ನೂರ ಎಂಬತ್ತನೆಯ ವರ್ಷದಲ್ಲಿ ತೀರಿಕೊಂಡು ತನ್ನ ಪಿತೃಗಳ ಬಳಿಗೆ ಸೇರಿಕೊಂಡನು. ಅವನ ಮಕ್ಕಳಾದ ಏಸಾವ ಮತ್ತು ಯಕೋಬರು ಅವನನ್ನು ಸಮಾಧಿ ಮಾಡಿದರು.

Holydivine