Genesis - Chapter 41
Holy Bible

1 : ಎರಡು ವರ್ಷಗಳಾದ ಮೇಲೆ ಫರೋಹನಿಗೆ ಒಂದು ಕನಸುಬಿತ್ತು. ಆ ಕನಸಿನಲ್ಲಿ ಅವನು ನೈಲ್‍ನದಿಯ ತೀರದಲ್ಲಿ ನಿಂತಿದ್ದನು.
2 : ಆಗ ಅಚ್ಚುಕಟ್ಟಾದ ಏಳು ಕೊಬ್ಬಿದ ಹಸುಗಳು ಈ ನದಿಯೊಳಗಿಂದ ಬಂದು ಜೊಂಡು ಹುಲ್ಲಿನಲ್ಲಿ ಮೇಯುತ್ತಿದ್ದವು.
3 : ಅವುಗಳ ಹಿಂದೆಯೇ ಒಣಕಲಾದ ಏಳು ಬಡ ಹಸುಗಳು ನದಿಯೊಳಗಿಂದ ಬಂದು ಮೊದಲು ಕಾಣಿಸಿದ ಹಸುಗಳ ಹತ್ತಿರ ನದಿಯ ತೀರದಲ್ಲೇ ನಿಂತವು.
4 : ಒಣಕಲಾದ ಈ ಬಡ ಹಸುಗಳು ಅಚ್ಚುಕಟ್ಟಾದ ಆ ಕೊಬ್ಬಿದ ಹಸುಗಳನ್ನು ತಿಂದುಬಿಟ್ಟವು. ಅಷ್ಟರಲ್ಲಿ ಫರೋಹನಿಗೆ ಎಚ್ಚರವಾಯಿತು.
5 : ಫರೋಹನಿಗೆ ಮತ್ತೆ ನಿದ್ರೆ ಹತ್ತಿದಾಗ ಅವನಿಗೆ ಇನ್ನೊಂದು ಕನಸುಬಿತ್ತು. ಅದರಲ್ಲಿ ಕಾಳುತುಂಬಿದ ಏಳು ಬಲಿತ ತೆನೆಗಳು ಒಂದೇ ದಂಟಿನಲ್ಲಿ ಹುಟ್ಟಿದವು.
6 : ಅವುಗಳ ಹಿಂದೆಯೇ ಮೂಡಣ ಗಾಳಿಯಿಂದ ಒಣಗಿ, ಬತ್ತಿಹೋಗಿದ್ದ ಬೇರೆ ಏಳು ತೆನೆಗಳು ಮೊಳೆತು ಬಂದವು.
7 : ಬತ್ತಿ ಹೋಗಿದ್ದ ಈ ತೆನೆಗಳು, ಕಾಳುತುಂಬಿದ್ದ ಆ ಏಳು ಬಲಿತ ತೆನೆಗಳನ್ನು ನುಂಗಿಬಿಟ್ಟವು. ಅಷ್ಟರೊಳಗೆ ಫರೋಹನು ಎಚ್ಚೆತ್ತು. ತಾನು ಕಂಡದ್ದು ಕನಸೆಂದು ತಿಳಿದುಕೊಂಡ.
8 : ಬೆಳಿಗ್ಗೆ ಅವನ ಮನಸ್ಸು ಕಳವಳಗೊಂಡು ಇತ್ತು. ಈಜಿಪ್ಟ್ ದೇಶದ ಎಲ್ಲ ಜೋಯಿಸರನ್ನೂ ವಿದ್ವಾಂಸರನ್ನೂ ಬರಮಾಡಿದ. ಅವರಿಗೆ ತನ್ನ ಕನಸನ್ನು ವಿವರಿಸಿದ. ಅದರ ಅರ್ಥವನ್ನು ಅವನಿಗೆ ಹೇಳಬಲ್ಲವರು ಯಾರೂ ಸಿಕ್ಕಲಿಲ್ಲ.
9 : ಆಗ ಪಾನಸೇವಕರಲ್ಲಿ ಮುಖ್ಯಸ್ಥನು ಫರೋಹನಿಗೆ, “ಒಡೆಯಾ, ಈ ದಿನ ತಾನೆ ನನ್ನ ನೆನಪಿಗೆ ಬರುತ್ತಿದೆ.
10 : ತಾವು ತಮ್ಮ ಸೇವಕರ ಮೇಲೆ ಸಿಟ್ಟುಗೊಂಡು, ನನ್ನನ್ನೂ ಆ ಮುಖ್ಯ ಅಡಿಗೆಭಟ್ಟನನ್ನೂ ದಳಪತಿಯ ವಠಾರದಲ್ಲಿ ಇರುವ ಸೆರೆಯಲ್ಲಿ ಇಟ್ಟಿದ್ದಿರಿ. ಅಲ್ಲಿದ್ದಾಗ ನಮ್ಮಿಬ್ಬರಿಗೂ ಒಂದೇ ರಾತ್ರಿಯಲ್ಲಿ ಕನಸುಬಿತ್ತು.
11 : ಒಬ್ಬೊಬ್ಬನ ಕನಸಿಗೂ ಬೇರೆಬೇರೆ ಅರ್ಥವಿತ್ತು.
12 : ಹಿಬ್ರಿಯನಾದ ಒಬ್ಬ ಯುವಕ ನಮ್ಮ ಸಂಗಡ ಅಲ್ಲಿದ್ದ. ಅವನು ದಳಪತಿಯವರ ಸೇವಕ. ನಾವು ನಮ್ಮ ಕನಸನ್ನು ಅವನಿಗೆ ತಿಳಿಸಿದೆವು. ಅವನು ಆ ಕನಸುಗಳಿಗೆ ಸರಿಯಾದ ಅರ್ಥವನ್ನು ಹೇಳಿದ.
13 : ಅದು ಮಾತ್ರವಲ್ಲ, ಅವನು ಹೇಳಿದ ಪ್ರಕಾರವೇ ಆಯಿತು. ನನಗೆ ನೌಕರಿ ಮತ್ತೆ ದೊರಕಿತು. ಆ ಮುಖ್ಯ ಅಡಿಗೆಭಟ್ಟನನ್ನೋ ನೇಣುಹಾಕಲಾಯಿತು,” ಎಂದು ಸನ್ನಿಧಿಯಲ್ಲಿ ಅರಿಕೆಮಾಡಿದ.
14 : ಇದನ್ನು ಕೇಳಿದ ಫರೋಹನು ಜೋಸೆಫನನ್ನು ಕರೆತರುವಂತೆ ಆಳುಗಳನ್ನು ಕಳಿಸಿದ. ಅವರು ಬಂದು ಅವನನ್ನು ಸೆರೆಯಿಂದ ತ್ವರೆಯಾಗಿ ಬಿಡುಗಡೆ ಮಾಡಿದರು. ಜೋಸೆಫನು ಕ್ಷೌರಮಾಡಿಕೊಂಡು, ಬಟ್ಟೆಬದಲಾಯಿಸಿಕೊಂಡು ಫರೋಹನ ಸನ್ನಿಧಿಯಲ್ಲಿ ಹಾಜರಾದ.
15 : ಫರೋಹನು ಅವನಿಗೆ, “ನಾನು ಒಂದು ಕನಸುಕಂಡೆ, ಅದರ ಅರ್ಥ ಹೇಳಬಲ್ಲವರು ಯಾರೂ ಇಲ್ಲ. ಆದರೆ ನೀನು ಕನಸನ್ನು ಕೇಳುತ್ತಲೇ ಅದರ ಅರ್ಥವನ್ನು ಹೇಳ ಬಲ್ಲೆ ಎಂಬ ಸಮಾಚಾರ ಕೇಳಿದ್ದೇನೆ,” ಎಂದ.
16 : ಜೋಸೆಫನು, “ನನ್ನಲ್ಲಿ ಅಂಥ ಸಾಮಥ್ರ್ಯವೇನೂ ಇಲ್ಲ; ಆದರೆ ದೇವರು, ಫರೋಹ ಆದ ನಿಮಗೆ ತೃಪ್ತಿಕರವಾದ ಉತ್ತರ ಕೊಡಬಲ್ಲರು,” ಎಂದು ಹೇಳಿದ.
17 : ಆಗ ಫರೋಹನು ಜೋಸೆಫನಿಗೆ, “ಕನಸಿನಲ್ಲಿ ನಾನು ನೈಲ್ ನದಿಯ ತೀರದಲ್ಲಿ ನಿಂತಿದ್ದೆ.
18 : ನದಿಯೊಳಗಿಂದ ಅಚ್ಚುಕಟ್ಟಾದ ಏಳು ಕೊಬ್ಬಿದ ಹಸುಗಳು ಬಂದು ಜೊಂಡುಹುಲ್ಲಿನಲ್ಲಿ ಮೇಯುತ್ತಿದ್ದವು.
19 : ಅವುಗಳ ಹಿಂದೆಯೆ ಬಹಳ ಒಣಕಲಾದ ಹಾಗೂ ಸಣಕಲಾದ, ಬೇರೆ ಏಳು ಬಡಹಸುಗಳು ಬಂದವು. ಅಂಥ ಬಡ ಹಸುಗಳನ್ನು ನಾನು ಈಜಿಪ್ಟಿನಲ್ಲಿ ಎಲ್ಲೂ ನೋಡಿದ್ದಿಲ್ಲ.
20 : ಅದಲ್ಲದೆ, ಸಣಕಲಾಗಿದ್ದ ಆ ಬಡ ಹಸುಗಳು ಮೊದಲೇ ಕಾಣಿಸಿದ ಆ ಏಳು ಕೊಬ್ಬಿನ ಹಸುಗಳನ್ನು ತಿಂದುಬಿಟ್ಟವು.
21 : ತಿಂದರೂ ತಿಂದಂತೆಯೇ ತೋರಲಿಲ್ಲ. ಮೊದಲಿದ್ದಂತೆಯೇ ಬಡಕಲಾಗಿದ್ದವು. ಅಷ್ಟರ ಒಳಗೆ ನನಗೆ ಎಚ್ಚರವಾಯಿತು.
22 : ನನಗೆ ಬಿದ್ದ ಇನ್ನೊಂದು ಕನಸಿನೊಳಗೆ ಕಾಳು ತುಂಬಿದ್ದ ಏಳು ಬಲಿತ ತೆನೆಗಳು ಒಂದೇ ದಂಟಿನಲ್ಲಿ ಹುಟ್ಟಿ ಬಂದವು.
23 : ಅವುಗಳ ಹಿಂದೆಯೆ, ಮೂಡಣ ಗಾಳಿಯಿಂದ ಒಣಗಿ, ಬತ್ತಿ, ಕೆಟ್ಟುಹೋಗಿದ್ದ ಬೇರೆ ಏಳು ತೆನೆಗಳು ಮೊಳೆತು ಬಂದವು.
24 : ಬತ್ತಿ ಹೋಗಿದ್ದ ತೆನೆಗಳು ಕಾಳು ತುಂಬಿದ್ದ ಆ ಏಳು ತೆನೆಗಳನ್ನು ನುಂಗಿಬಿಟ್ಟವು. ಈ ಕನಸುಗಳನ್ನು ಜೋಯಿಸರಿಗೆ ತಿಳಿಸಿದೆ; ಅವುಗಳ ಅರ್ಥವನ್ನು ವಿವರಿಸಿ ಹೇಳಲು ಅವರಲ್ಲಿ ಯಾರಿಂದಲೂ ಆಗಲಿಲ್ಲ.”
25 : ಜೋಸೆಫನು ಫರೋಹನಿಗೆ, “ತಾವು ಕಂಡ ಎರಡು ಕನಸುಗಳ ವಿಷಯ ಒಂದೇ. ದೇವರು ಮಾಡಬೇಕೆಂದಿರುವುದನ್ನು ಇವುಗಳ ಮೂಲಕ ತಮಗೆ ತಿಳಿಸಿದ್ದಾರೆ.
26 : ಆ ಏಳು ಒಳ್ಳೆಯ ಹಸುಗಳೇ ಏಳು ವರ್ಷಗಳು; ಆ ಏಳು ಒಳ್ಳೆಯ ತೆನೆಗಳೂ ಏಳು ವರ್ಷಗಳು; ಎರಡು ಕನಸುಗಳ ಅರ್ಥ ಒಂದೇ.
27 : ಒಳ್ಳೆಯ ಹಸುಗಳ ಹಿಂದೆ ಬಂದ ಒಣಕಲಾಗಿದ್ದ ಆ ಏಳು ಬಡ ಹಸುಗಳು ಮತ್ತು ಮೂಡಣ ಗಾಳಿಯಿಂದ ಕೆಟ್ಟುಹೋಗಿದ್ದ ಆ ಏಳು ಕಾಳಿಲ್ಲದ ತೆನೆಗಳು ಬರವುಂಟಾಗುವ ಏಳು ವರ್ಷಗಳನ್ನು ಸೂಚಿಸುತ್ತವೆ.
28 : ನಾನು ತಮಗೆ ಅರಿಕೆ ಮಾಡಿದಂತೆ ದೇವರು ಮಾಡಬೇಕೆಂದು ಇರುವುದನ್ನು ತಮಗೆ ತಿಳಿಸಿದ್ದಾರೆ.
29 : ಈಜಿಪ್ಟ್ ದೇಶದಲ್ಲೆಲ್ಲ ಬಹು ವಿಶೇಷವಾದ ಏಳು ಸುಭಿಕ್ಷ ವರ್ಷಗಳೂ
30 : ತರುವಾಯ ಏಳು ದುರ್ಭಿಕ್ಷ ವರ್ಷಗಳೂ ಬರುವುವು. ಆಗ ಈಜಿಪ್ಟ್ ದೇಶದ ಅವರು ಮೊದಲಿದ್ದ ಆ ಸುಭಿಕ್ಷವನ್ನು ಮರೆತು ಬಿಡುವರು; ಆ ಬರದಿಂದ ದೇಶವು ಹಾಳಾಗಿ ಹೋಗುವುದು.
31 : ಮುಂದೆ ಬರಲಿರುವ ಕ್ಷಾಮವು ಅತ್ಯಂತ ಘೋರವಾಗಿರುವುದು; ಮೊದಲಿದ್ದ ಸಮೃದ್ಧಿಯ ಗುರುತೇ ಇಲ್ಲದೆ ಹೋಗುವುದು.
32 : ದೇವರು ಈ ಕಾರ್ಯವನ್ನು ನಿರ್ಧರಿಸಿದ್ದಾರೆ; ಇದು ಬೇಗ ಬರಲಿದೆಯೆಂದು ತಿಳಿದುಕೊಳ್ಳಬೇಕು. ಏಕೆಂದರೆ ನಿಮಗೆ ಇಮ್ಮಡಿ ಕನಸುಬಿದ್ದಿದೆ.
33 : “ಆದುದರಿಂದ ತಾವು ವಿವೇಕಿಯೂ ಬುದ್ಧಿವಂತನೂ ಆದ ಒಬ್ಬನನ್ನು ಆರಿಸಿಕೊಂಡು ಅವನನ್ನು ಈಜಿಪ್ಟ್ ದೇಶದ ಮೇಲೆ ಅಧಿಕಾರಿಯನ್ನಾಗಿ ನೇಮಿಸಬೇಕು.
34 : ಅದೂ ಅಲ್ಲದೆ, ದೇಶದ ಎಲ್ಲ ಭಾಗಗಳಲ್ಲೂ ಗುಮಾಸ್ತರನ್ನು ನೇಮಿಸಿ ಅವರ ಮೂಲಕ ಸುಭಿಕ್ಷವಾದ ಏಳು ವರ್ಷಗಳಲ್ಲಿ ದೇಶದ ಬೆಳೆಯಲ್ಲಿ ಐದನೆಯ ಒಂದು ಪಾಲನ್ನು ಕಂದಾಯವಾಗಿ ಎತ್ತಬೇಕು.
35 : ಮುಂದಣ ಒಳ್ಳೆಯ ವರ್ಷಗಳಲ್ಲಿ ಆಹಾರ ಪದಾರ್ಥಗಳನ್ನೂ ದವಸ ಧಾನ್ಯಗಳನ್ನು ಶೇಖರಿಸಿ ಪಟ್ಟಣಗಳಲ್ಲಿ ಜೋಪಾನವಾಗಿಡುವಂತೆ ತಾವು ಆಜ್ಞಾಪಿಸಬೇಕು.
36 : ಹೀಗೆ ಆಹಾರಪದಾರ್ಥಗಳನ್ನು ಶೇಖರಿಸುವುದರಿಂದ ಈಜಿಪ್ಟ್ ದೇಶದಲ್ಲಿ ದುರ್ಭಿಕ್ಷೆವುಂಟಾಗುವ ಏಳು ವರ್ಷಗಳಲ್ಲಿ ಜನರು ಕ್ಷಾಮದಿಂದ ಸಾಯುವುದಿಲ್ಲ,” ಎಂದು ಹೇಳಿದನು.
37 : ಜೋಸೆಫನು ಸೂಚಿಸಿದ ಯೋಜನೆ ಫರೋಹನಿಗೂ ಅವನ ಪರಿವಾರದವರಿಗೂ ಒಳ್ಳೆಯದೆಂದು
38 : ತೋರಿತು. ಫರೋಹನು ತನ್ನ ಪರಿವಾರದವರಿಗೆ, “ಈತ ದೇವರಾತ್ಮ ಪಡೆದವನು,
39 : ಈತನಿಗಿಂತ ಯೋಗ್ಯವಾದ ವ್ಯಕ್ತಿ ನಮಗೆ ಸಿಕ್ಕುವುದು ಸಾಧ್ಯವೆ?” ಎಂದು ಹೇಳಿ ಜೋಸೆಫನಿಗೆ, “ದೇವರೇ ನಿನಗೆ ಇದನ್ನೆಲ್ಲ ತಿಳಿಸಿರುವುದರಿಂದ ನಿನಗೆ ಸಮಾನವಾದ ಬುದ್ಧಿ ವಿವೇಕಗಳುಳ್ಳ ವ್ಯಕ್ತಿ ಯಾವನೂ ಇಲ್ಲ.
40 : ನೀನೇ ಅರಮನೆಯಲ್ಲಿ ಮುಖ್ಯಾಧಿಕಾರಿಯಾಗಿರಬೇಕು; ನಿನ್ನ ಅಪ್ಪಣೆ ಮೇರೆಗೆ ಪ್ರಜೆಗಳೆಲ್ಲರು ನಡೆದುಕೊಳ್ಳಬೇಕು; ಸಿಂಹಾಸನದ ವಿಷಯದಲ್ಲಿ ಮಾತ್ರ ನಾನು ನಿನಗಿಂತ ದೊಡ್ಡವನಾಗಿರುವೆನು,” ಎಂದು ಹೇಳಿದನು.
41 : ಬಳಿಕ ಫರೋಹನು ಜೋಸೆಫನಿಗೆ, “ಇದೀಗಲೆ ಈಜಿಪ್ಟ್ ದೇಶದ ಮೇಲೆಲ್ಲ ನಿನ್ನನ್ನು ಅಧಿಕಾರಿಯನ್ನಾಗಿ ನೇಮಿಸುತ್ತಿದ್ದೇನೆ,” ಎಂದು ಹೇಳಿ
42 : ತನ್ನ ಬೆರಳಿನಿಂದ ಮುದ್ರಿಕೆಯನ್ನು ತೆಗೆದು ಜೋಸೆಫನ ಬೆರಳಿಗೆ ಇಟ್ಟನು. ಅವನಿಗೆ ಮೌಲ್ಯವಾದ ವಸ್ತ್ರಗಳನ್ನು ಹೊದಿಸಿದನು. ಕೊರಳಿಗೆ ಚಿನ್ನದ ಸರವನ್ನು ಹಾಕಿಸಿದನು.
43 : ತನಗಿದ್ದ ಎರಡನೆಯ ರಥದಲ್ಲಿ ಕುಳ್ಳಿರಿಸಿ ಅವನ ಮುಂದೆ, “ಈತನಿಗೆ ಅಡ್ಡಬೀಳಿ,” ಎಂದು ಪ್ರಕಟಣೆ ಮಾಡಿಸಿದನು. ಹೀಗೆ ಅವನನ್ನು ಈಜಿಪ್ಟ್ ದೇಶಕ್ಕೆ ಮುಖ್ಯಮಂತ್ರಿಯನ್ನಾಗಿ ನೇಮಿಸಿದನು.
44 : ಅಷ್ಟು ಮಾತ್ರವಲ್ಲ, ಫರೋಹನು ಅವನಿಗೆ, “ಫರೋಹನಾದ ನಾನು ಹೇಳುತ್ತಿದ್ದೇನೆ: ನಿನ್ನ ಅಪ್ಪಣೆಯಿಲ್ಲದೆ ಇಡೀ ಈಜಿಪ್ಟ್ ದೇಶದಲ್ಲಿ ಯಾರೂ ಏನನ್ನೂ ಮಾಡಕೂಡದು,” ಎಂದು ಹೇಳಿದನು.
45 : ಬಳಿಕ ಫರೋಹನು ಜೋಸೆಫನಿಗೆ ‘ಸಾಫ್ನತ್ಪನ್ನೇಹ’ ಎಂಬ ಹೊಸ ಹೆಸರಿಟ್ಟನು; ಓನ್ ಎಂಬ ಗುರುಪೀಠದ ಆಚಾರ್ಯನಾಗಿದ್ದ ಪೊಟೀಫೆರನ ಮಗಳು ಆಸನತ್ ಎಂಬಾಕೆಯನ್ನು ಅವನಿಗೆ ಮದುವೆ ಮಾಡಿಸಿದನು. ತರುವಾಯ ಜೋಸೆಫನು ಈಜಿಪ್ಟ್ ದೇಶಸಂಚಾರ ಹೊರಟನು.
46 : ಈಜಿಪ್ಟ್ ದೇಶದ ಅರಸನಾದ ಫರೋಹನ ಆಸ್ಥಾನವನ್ನು ಸೇರಿದಾಗ ಜೋಸೆಫನಿಗೆ ಮೂವತ್ತು ವರ್ಷ ವಯಸ್ಸು. ಜೋಸೆಫನು ಫರೋಹನ ಸನ್ನಿಧಿಯಿಂದ ಹೊರಟು ಈಜಿಪ್ಟ್ ದೇಶದಲ್ಲೆಲ್ಲ ಸಂಚಾರ ಮಾಡಿದನು.
47 : ಆ ದೇಶದಲ್ಲಿ ಸುಭಿಕ್ಷದ ಏಳು ವರ್ಷಗಳಲ್ಲಿ ಭೂಮಿ ಹೇರಳವಾದ ಬೆಳೆ ಕೊಟ್ಟಿತು.
48 : ಆ ಏಳು ವರ್ಷದ ಬೆಳೆಯನ್ನು ಜೋಸೆಫನು ಶೇಖರಿಸಿ ಪಟ್ಟಣಗಳಲ್ಲಿ ಇಟ್ಟನು. ಆಯಾ ಪಟ್ಟಣದ ಸುತ್ತಲಿದ್ದ ಹೊಲಗಳ ಬೆಳೆಯನ್ನು ಆಯಾ ಪಟ್ಟಣದಲ್ಲೇ ಶೇಖರಿಸಿದನು.
49 : ಹೀಗೆ ಕೂಡಿಸಿದ ದವಸಧಾನ್ಯ ಸಮುದ್ರದ ಮರಳಿನಂತೆ ರಾಶಿರಾಶಿಯಾಗಿತ್ತು. ಲೆಕ್ಕ ಮಾಡುವುದಕ್ಕೂ ಆಗದೆ ಲೆಕ್ಕ ಇಡುವುದನ್ನೇ ಬಿಟ್ಟುಬಿಡಬೇಕಾಯಿತು.
50 : ಬರಗಾಲ ಬರುವುದಕ್ಕೆ ಮುಂಚೆ ಜೋಸೆಫನಿಗೆ ಇಬ್ಬರು ಗಂಡು ಮಕ್ಕಳು ಹುಟ್ಟಿದರು. ಅವರ ತಾಯಿ ಓನ್ ಪಟ್ಟಣದ ಆಚಾರ್ಯನಾಗಿದ್ದ ಪೋಟೀಫೆರನ ಮಗಳಾದ ಆಸನತ್,
51 : ಜೇಷ್ಠಮಗ ಹುಟ್ಟಿದಾಗ ಜೋಸೆಫನು, “ನಾನು ನನ್ನ ಕಷ್ಟ ದುಃಖವನ್ನೂ ತಂದೆಯ ಮನೆಯವರನ್ನೂ ಮರೆಯುವಂತೆ ದೇವರು ಮಾಡಿದ್ದಾರಲ್ಲಾ!” ಎಂದುಕೊಂಡು ಆ ಮಗುವಿಗೆ, ‘ಮನಸ್ಸೆ’ ಎಂದು ಹೆಸರಿಟ್ಟನು.
52 : ಎರಡನೆಯ ಮಗನು ಹುಟ್ಟಿದಾಗ, “ಯಾವ ದೇಶದಲ್ಲಿ ನನಗೆ ಸಂಕಷ್ಟವಿತ್ತೋ ಆ ದೇಶದಲ್ಲಿ ದೇವರು ನನಗೆ ಸಮೃದ್ಧಿಯನ್ನು ದಯಪಾಲಿಸಿದ್ದಾರೆ!” ಎಂದು ಆ ಮಗನಿಗೆ ‘ಎಫ್ರಯಿಮ್’ ಎಂದು ನಾಮಕರಣ ಮಾಡಿದನು.
53 : ಈಜಿಪ್ಟ್ ದೇಶದಲ್ಲಿ ಸುಭಿಕ್ಷದ ಏಳು ವರ್ಷಗಳು ಮುಗಿದವು.
54 : ಜೋಸೆಫನು ಹೇಳಿದ್ದ ಪ್ರಕಾರವೇ ಕ್ಷಾಮದ ಏಳು ವರ್ಷಗಳು ಪ್ರಾರಂಭವಾದವು. ಬರವು ಸುತ್ತಮುತ್ತಲಿನ ಎಲ್ಲ ದೇಶಗಳಿಗೂ ಹಬ್ಬಿತು. ಈಜಿಪ್ಟಿನಲ್ಲಿ ಮಾತ್ರ ಆಹಾರ ದೊರಕುತ್ತಿತ್ತು.
55 : ಕ್ರಮೇಣ ಈಜಿಪ್ಟಿಗೂ ಬರಬಂದಾಗ ಪ್ರಜೆಗಳು ಆಹಾರಬೇಕೆಂದು ಫರೋಹನಿಗೆ ಮೊರೆಯಿಟ್ಟರು. ಆಗ ಅವನು ಅವರಿಗೆ, “ಹೋಗಿ, ಜೋಸೆಫನ ಬಳಿಗೆ, ಅವನು ಹೇಳಿದಂತೆ ಮಾಡಿ,” ಎಂದು ಉತ್ತರಕೊಟ್ಟನು.
56 : ಬರವು ದೇಶದಲ್ಲೆಲ್ಲ ಹರಡಿಕೊಂಡಾಗ ಜೋಸೆಫನು ಕಣಜಗಳನ್ನೆಲ್ಲ ತೆಗೆಸಿ, ಈಜಿಪ್ಟರಿಗೆ ಧಾನ್ಯವನ್ನು ಮಾರಿಸಿದನು. ಈಜಿಪ್ಟ್ ದೇಶದಲ್ಲಿ ಬರವು ಬಹು ಘೋರವಾಗಿತ್ತು.
57 : ಅಂತೆಯೇ ಲೋಕದಲ್ಲೆಲ್ಲಾ ಬರವು ಭಯಂಕರವಾಗಿತ್ತು. ಎಲ್ಲ ದೇಶದವರು ಜೋಸೆಫನಿಂದ ಧಾನ್ಯ ಕೊಂಡುಕೊಳ್ಳಲು ಈಜಿಪ್ಟಿಗೆ ಬರುತ್ತಿದ್ದರು.

Holydivine