Genesis - Chapter 25
Holy Bible

1 : ಅಬ್ರಹಾಮನು ಕೆಟೂರಳೆಂಬ ಇನ್ನೊಬ್ಬ ಹೆಂಡತಿಯನ್ನು ಮದುವೆ ಮಾಡಿಕೊಂಡನು.
2 : ಆಕೆ ಅವನಿಗೆ ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್, ಶೂಹ ಇವರನ್ನು ಹೆತ್ತಳು.
3 : ಯೊಕ್ಷಾನನು ಶೆಬಾ, ದೆದಾನ್ ಎಂಬವರನ್ನು ಪಡೆದನು. ಅಶ್ಯೂರ್ಯರು, ಲೆಟೂಶ್ಯರು, ಲೆಯುಮ್ಯರು ದೆದಾನನಿಂದ ಹುಟ್ಟಿದರು.
4 : ಗೇಫಾ, ಗೇಫೆರ್, ಹನೋಕ್ ಅಬೀದಾ, ಎಲ್ದಾಗ ಎಂಬವರು ಮಿದ್ಯಾನನಿಂದ ಹುಟ್ಟಿದರು. ಇವರೆಲ್ಲರು ಕೆಟೂರಳ ಸಂತತಿ ಅವರು.
5 : ಅಬ್ರಹಾಮನು ತನಗಿದ್ದ ಆಸ್ತಿಪಾಸ್ತಿಯನ್ನೆಲ್ಲ ಇಸಾಕನಿಗೆ ಕೊಟ್ಟನು.
6 : ತನ್ನ ಉಪಪತ್ನಿಯರ ಮಕ್ಕಳಿಗೆ ಕೆಲವು ಸೊತ್ತುಗಳನ್ನು ದಾನಮಾಡಿ ತಾನು ಇನ್ನೂ ಜೀವದಿಂದಿರುವಾಗಲೇ ಅವರನ್ನು ತನ್ನ ಮಗ ಇಸಾಕನ ಬಳಿಯಿಂದ ದೂರಕ್ಕೆ ಪೂರ್ವದಿಕ್ಕಿನಲ್ಲಿದ್ದ ಕೆದೆಮ್ ನಾಡಿಗೆ, ಕಳಿಸಿಬಿಟ್ಟನು.
7 : ಅಬ್ರಹಾಮನು ನೂರೆಪ್ಪತ್ತೈದು ವರ್ಷ ಬದುಕಿದ್ದನು.
8 : ಪೂರ್ಣ ಆಯುಷ್ಯವನ್ನು ಕಳೆದು, ಹಣ್ಣುಹಣ್ಣು ಮುದುಕನಾಗಿ ಪ್ರಾಣಬಿಟ್ಟು ಅವನು ತನ್ನ ಪಿತೃಗಳ ಬಳಿಗೆ ಸೇರಿದನು.
9 : ಅವನ ಮಕ್ಕಳಾದ ಇಸಾಕ್ - ಇಷ್ಮಾಯೇಲರು ಅವನನ್ನು ಹಿತ್ತಿಯನಾದ ಚೋಹರನ ಮಗ ಎಫ್ರೋನನ ಹೊಲದಲ್ಲಿದ್ದ ಮಕ್ಪೇಲದ ಗವಿಯಲ್ಲಿ ಸಮಾಧಿ ಮಾಡಿದರು. ಅದು ಮಮ್ರೆಗೆ ಪೂರ್ವದಿಕ್ಕಿನಲ್ಲಿದೆ.
10 : ಅಬ್ರಹಾಮನೇ ಹಿತ್ತಿಯರಿಂದ ಕೊಂಡುಕೊಂಡ ಹೊಲ ಅದು. ಅದರಲ್ಲೇ ಅವನಿಗೂ ಅವನ ಹೆಂಡತಿ ಸಾರಳಿಗೂ ಸಮಾಧಿ ಆಯಿತು.
11 : ಅಬ್ರಹಾಮನು ಕಾಲವಾದ ಬಳಿಕ ಮಗ ಇಸಾಕನನ್ನು ದೇವರು ಆಶೀರ್ವದಿಸಿದರು. ಇಸಾಕನು ‘ಲಹೈರೋಯಿ’ ಎಂಬ ಬಾವಿಯ ಹತ್ತಿರ ವಾಸವಾಗಿದ್ದನು.
12 : ಅಬ್ರಹಾಮನಿಗೆ ಸಾರಳ ದಾಸಿಯೂ ಈಜಿಪ್ಟಿನವಳೂ ಆದ ಹಾಗರಳಲ್ಲಿ ಹುಟ್ಟಿದ ಇಷ್ಮಾಯೇಲನ ವಂಶಾವಳಿ:
13 : ಇಷ್ಮಾಯೇಲನ ಮಕ್ಕಳಿಗೂ ಅವರಿಂದ ಹುಟ್ಟಿದ ಕುಲಗಳಿಗೂ ಇಡಲಾಗಿದ್ದ ಹೆಸರುಗಳು ಇವು - ಮೊದಲು ಹುಟ್ಟಿದವನು ನೆಬಾಯೋತ್, ಆಮೇಲೆ ಹುಟ್ಟಿದವರು ಕೇದಾರ್, ಅದ್ಬಯೇಲ್,
14 : ಮಿಬ್ಸಾಮ್, ಮಿಷ್ಮಾ, ದೂಮಾ, ಮಸ್ಸಾ,
15 : ಹದದ್, ತೇಮಾ, ಯಟೂರ್, ನಾಫೀಷ್ ಹಾಗೂ ಕೇದ್ಮಾ.
16 : ಇವರೇ ಆ ಹನ್ನೆರಡು ಕುಲದ ಮೂಲಪುರುಷರು. ಈ ಹೆಸರುಗಳನ್ನು ಅವರು ವಾಸಿಸಿದ್ದ ಊರುಗಳಿಗೂ ಪಾಳೆಯಗಳಿಗೂ ಇಡಲಾಗಿತ್ತು.
17 : ಇಷ್ಮಾಯೇಲನು ನೂರ ಮೂವತ್ತೇಳು ವರ್ಷ ಬದುಕಿದ್ದನು. ಅನಂತರ ಸತ್ತು ತನ್ನ ಪಿತೃಗಳ ಬಳಿಗೆ ಸೇರಿದನು.
18 : ಇಷ್ಮಾಯೇಲ್ಯರು ಹವೀಲ ಹಾಗು ಶೂರಿನ ಮಧ್ಯೆಯಿರುವ ಪ್ರದೇಶದಲ್ಲಿ ವಾಸಮಾಡಿದರು. ಶೂರ್ ಈಜಿಪ್ಟಿನ ಪೂರ್ವಕ್ಕೆ ಅಸ್ಸೀರಿಯಗೆ ಹೋಗುವ ಹಾದಿಯಲ್ಲಿದೆ. ಹೀಗೆ ಇಷ್ಮಾಯೇಲ್ಯರು ತಮ್ಮ ಸಂಬಂಧಿಕರಿಗೆ ಎದುರು ಬದುರಿನಲ್ಲೇ ವಾಸಮಾಡಿದರು.
19 : ಅಬ್ರಹಾಮನ ಮಗ ಇಸಾಕನ ವಂಶಾವಳಿ: ಅಬ್ರಹಾಮನು ಇಸಾಕನನ್ನು ಪಡೆದನು.
20 : ಇಸಾಕನು ನಲವತ್ತು ವರ್ಷದವನಾಗಿದ್ದಾಗ ಅರಾಮ್ಯರಾದ ಬೆತುವೇಲನ ಮಗಳೂ ಲಾಬಾನನ ತಂಗಿಯೂ ಆಗಿದ್ದ ರೆಬೆಕ್ಕಳನ್ನು ಮೆಸಪೊಟೇಮಿಯಾದಿಂದ ಬರಮಾಡಿಸಿಕೊಂಡು ಮದುವೆಯಾದನು.
21 : ರೆಬೆಕ್ಕಳಿಗೆ ಮಕ್ಕಳಾಗಲಿಲ್ಲ. ಸರ್ವೇಶ್ವರ ಅವನ ವಿಜ್ಞಾಪನೆಯನ್ನು ಆಲಿಸಿದರು. ರೆಬೆಕ್ಕಳು ಗರ್ಭವತಿಯಾದಳು.
22 : ಆಕೆಯ ಗರ್ಭದಲ್ಲಿದ್ದ ಅವಳಿಮಕ್ಕಳು ಒಂದನ್ನೊಂದು ಒತ್ತರಿಸಿದಾಗ ಆಕೆ, “ನನಗೇತಕ್ಕೆ ಹೀಗಾಗುತ್ತಿದೆ?” ಎಂದುಕೊಂಡು ಸರ್ವೇಶ್ವರಸ್ವಾಮಿಯನ್ನು ವಿಚಾರಿಸಲು ಹೋದಳು.
23 : ಸರ್ವೇಶ್ವರ ಆಕೆಗೆ ಇಂತೆಂದರು: ನಿನ್ನ ಉದರದೊಳಿವೆ ಜನಾಂಗಗಳೆರಡು ಹುಟ್ಟಿನಿಂದ ವೈರಿಗಳಾ ರಾಷ್ಟ್ರಗಳೆರಡು ಬಲಿಷ್ಠವಿರುವುದು ಒಂದು ಮತ್ತೊಂದಕೆ ಜ್ಯೇಷ್ಠನೇ ದಾಸನಾಗುವನು ಕನಿಷ್ಠನಿಗೆ.
24 : ದಿನ ತುಂಬಿದಾಗ ರೆಬೆಕ್ಕಳು ಅವಳಿ ಮಕ್ಕಳನ್ನು ಹೆತ್ತಳು.
25 : ಮೊದಲು ಹುಟ್ಟಿದ ಮಗು ಕೆಂಚಗೂ ಮೈಯೆಲ್ಲ ರೋಮಮಯವಾಗೂ ಇತ್ತು. ಎಂತಲೇ ಅದಕ್ಕೆ ಏಸಾವ ಎಂದು ಹೆಸರಿಟ್ಟರು.
26 : ಎರಡನೆಯ ಮಗು ಏಸಾವನ ಹಿಮ್ಮಡಿಯನ್ನು ಹಿಡಿದುಕೊಂಡು ಹುಟ್ಟಿದ್ದರಿಂದ ಅದಕ್ಕೆ ಯಕೋಬ ಎಂದು ಹೆಸರಿಟ್ಟರು. ಇವರು ಹುಟ್ಟಿದಾಗ ಇಸಾಕನಿಗೆ ಅರವತ್ತು ವರ್ಷವಾಗಿತ್ತು.
27 : ಆ ಹುಡುಗರಿಬ್ಬರು ಬೆಳೆದರು. ಏಸಾವನು ಚೂಟಿಯಾದ ಬೇಟೆಗಾರನಾದ, ವನವಾಸಿಯಾದ. ಯಕೋಬನು ಸಾಧು ಮನುಷ್ಯ, ಅವನದು ಗುಡಾರಗಳಲ್ಲಿ ವಾಸ.
28 : ಇಸಾಕನಿಗೆ ಬೇಟೆಯ ಮಾಂಸ ಇಷ್ಟ; ಎಂದೇ ಏಸಾವನ ಮೇಲೆ ಹೆಚ್ಚು ಪ್ರೀತಿ, ರೆಬೆಕ್ಕಳಿಗಾದರೋ ಯಕೋಬನ ಮೇಲೆ ಹೆಚ್ಚು ಪ್ರೀತಿ.
29 : ಒಮ್ಮೆ ಯಕೋಬನು ಅಡಿಗೆ ಮಾಡುತ್ತಿದ್ದ. ಏಸಾವನು ಕಾಡಿನಿಂದ ದಣಿದು ಬಂದು,
30 : ‘ನಾನು ಬಹಳವಾಗಿ ದಣಿದು ಬಂದಿದ್ದೇನೆ, ಆ ಕೆಂಪು ಪದಾರ್ಥವನ್ನು ತಿನ್ನಲು ಕೊಡು’, ಎಂದು ಕೇಳಿದ. (ಈ ಕಾರಣದಿಂದಲೇ ಏಸಾವನಿಗೆ ಎದೋಮ್ ಎಂದು ಹೆಸರಾಯಿತು.)
31 : ಅದಕ್ಕೆ ಯಕೋಬ, ‘ನಿನ್ನದಾಗಿರುವ ಜ್ಯೇಷ್ಠಪುತ್ರನ ಹಕ್ಕನ್ನು ನನಗೆ ಮೊದಲು ಮಾರಿಬಿಡು,’ ಎಂದು ಹೇಳಿದ.
32 : ಏಸಾವನು, ‘ಆಗಲಿ, ಮಾರುತ್ತೇನೆ, ಸಾಯುತ್ತಿರುವ ನನಗೆ ಜ್ಯೇಷ್ಠತನದಿಂದ ಪ್ರಯೋಜನವೇನು?’ ಎಂದ.
33 : ಯಕೋಬನು ‘ಮಾರಿರುವುದಾಗಿ ನನಗೆ ಪ್ರಮಾಣ ಮಾಡು’, ಎಂದಾಗ ಏಸಾವನು ಪ್ರಮಾಣಮಾಡಿ ತನ್ನ ಜ್ಯೇಷ್ಠತನದ ಹಕ್ಕನ್ನು ಮಾರಿಬಿಟ್ಟ
34 : ಆಗ ಯಕೋಬನು ಏಸಾವನಿಗೆ ರೊಟ್ಟಿಯನ್ನೂ ಅಲಸಂದಿ ಗುಗ್ಗರಿಯನ್ನೂ ಕೊಟ್ಟ. ಏಸಾವನು ತಿಂದು, ಕುಡಿದು, ಎದ್ದು ಹೋದ. ಜ್ಯೇಷ್ಠತನದ ಹಕ್ಕುಬಾಧ್ಯತೆಗೆ ಏಸಾವನು ಕೊಟ್ಟ ಮರ್ಯಾದೆ ಇಷ್ಟೇ!

Holydivine