Genesis - Chapter 49
Holy Bible

1 : ತನ್ನ ಮಕ್ಕಳನ್ನು ಕುರಿತು ಯಕೋಬನ ಭವಿಷ್ಯವಾಣಿ ಯಕೋಬನು ತನ್ನ ಮಕ್ಕಳನ್ನು ಕರೆಯಿಸಿ ಇಂತೆಂದನು: ಕೂಡಿಬನ್ನಿ ನೀವೆಲ್ಲರು, ನುಡಿವೆನು ನಿಮಗೆ ಮುಂದೆ ಸಂಭವಿಸುವುದನ್ನು:
2 : ಯಕೋಬನ ಮಕ್ಕಳೇ, ಕೂಡಿಬಂದು ಕೇಳಿ ನೀವೆಲ್ಲರು ಆಲಿಸಿ ನಿಮ್ಮ ತಂದೆ ಇಸ್ರಯೇಲನ ಮಾತನ್ನು:
3 : ರೂಬೇನನೇ, ನೀನೆನ್ನ ಜೇಷ್ಠಪುತ್ರನು ನನ್ನ ಚೈತನ್ಯಸ್ವರೂಪನು, ನನ್ನ ವೀರ್ಯದ ಪ್ರಥಮ ಫಲ ನೀನು ಹಿರಿಮೆಯಲು, ಒಲುಮೆಯಲು
4 : ಆದರೆ ದಡವಿೂರಿದ ಪ್ರವಾಹ ನೀನು ಹತ್ತಿದೆ, ಹೊಲೆಮಾಡಿದೆ, ತಂದೆಯ ಹಾಸಿಗೆಯನು ಪ್ರಮುಖಸ್ಥಾನದಲ್ಲಿರೆ ನನ್ನ ಮಂಚವನ್ನೇರಿದೆ ನೀನು.
5 : ಅಣ್ಣತಮ್ಮಂದಿರು ಸಿಮೆಯೋನ್ - ಲೇವಿಯರು ಅವರ ಕತ್ತಿಗಳು ಹಿಂಸಾತ್ಮಕ ಆಯುಧಗಳು.
6 : ನನ್ನ ಮನವೇ, ಒಳಗಾಗಬೇಡ ಅವರ ದುರಾಲೋಚನೆಗೆ ನನ್ನ ಪ್ರಾಣವೇ, ಸೇರಬೇಡ ನೀನವರ ಗುಂಪಿಗೆ ಕೊಂದರವರು ನರರನು ಕೋಪೋದ್ರೇಕದಿಂದ ಊನಪಡಿಸಿದರು ಎತ್ತುಗಳನ್ನು ಮದದಿಂದ.
7 : ಅವರ ಕೋಪ ಭೀಕರ, ಅದಕ್ಕಿರಲಿ ಧಿಕ್ಕಾರ ! ಅವರ ರೌದ್ರ - ಕ್ರೂರ, ಅದಕ್ಕಿರಲಿ ಧಿಕ್ಕಾರ ! ವಿಭಾಗಿಸುವೆನವರನು ಯಕೋಬ ಕುಲದಲಿ ಚದರಿಸುವೆನವರನು ಇಸ್ರಯೇಲರಲಿ.
8 : ಯೆಹೂದನೇ, ವಂದಿಸುವರು ನಿನ್ನನು ಸಹೋದರರು ನಿನ್ನ ಕೈಯಲ್ಲಿರುವುದು ಶತ್ರುಗಳ ಕುತ್ತಿಗೆಯು ಎರಗುವರು ನಿನಗೆ ನಿನ್ನ ಅಣ್ಣತಮ್ಮಂದಿರು.
9 : ನನ್ನ ಪುತ್ರ ಯೆಹೂದ, ನೀ ಪ್ರಾಯದ ಸಿಂಹದಂತೆ ಬೇಟೆಹಿಡಿದು ಬೆಟ್ಟ ಏರಿದ ಕಂಠೀರವನಂತೆ ಕಾಲು ಮಡಿಚಿ ಹೊಂಚು ಕೂತ ಕೇಸರಿಯಂತೆ ಈ ಸಿಂಹಿಣಿಯನ್ನು ಕೆಣಕುವ ಕೆಚ್ಚು ಯಾರಿಗಿದೆ?
10 : ರಾಜ್ಯಾಧಿಕಾರ ಪಡೆದವನು ಬರುವ ತನಕ ರಾಷ್ಟ್ರಗಳು ಆತನಿಗೆ ತಲೆಬಾಗುವ ತನಕ ತಪ್ಪದು ರಾಜದಂಡ ಯೆಹೂದನ ಕೈಯಿಂದ ಕದಲದು ಮುದ್ರೆಕೋಲು ಅವನ ವಂಶದಿಂದ.
11 : ಕಟ್ಟುವನು ತನ್ನ ವಾಹನಪಶುವನು ದ್ರಾಕ್ಷಾಲತೆಗೆ ಬಿಗಿಯುವನು ತನ್ನ ಹೇಸರಕತ್ತೆಯನು ರಾಜದ್ರಾಕ್ಷೆಗೆ ಒಗೆಯುವನು ತನ್ನ ಬಟ್ಟೆಯನು ದ್ರಾಕ್ಷಾರಸದಲ್ಲಿ ತೊಳೆವನು ಮೇಲಂಗಿಯನು ಆ ರಕ್ತಗೆಂಪು ರಸದಲಿ.
12 : ಅವನ ಕಣ್ಣು ಕೆಂಪಾಗಿರುವುವು ದ್ರಾಕ್ಷಾರಸದ ಸಮೃದ್ಧಿಯಿಂದ ಅವನ ಹಲ್ಲು ಬೆಳ್ಳಗಿರುವುವು ಹಾಲಿನ ಸಮೃದ್ಧಿಯಿಂದ.
13 : ಜೆಬುಲೂನನು ವಾಸಿಸುವನು ಸಮುದ್ರದ ಕರಾವಳಿಯಲ್ಲಿ ಹಡಗುಗಳು ಬಂದು ಹೋಗುವ ರೇವಂತೆ ಇರುವನಲ್ಲಿ ಸಿದೋನಿನ ತನಕ ಹರಡಿರುವುದು ಅವನ ಪ್ರಾಂತ್ಯದ ಗಡಿ.
14 : ಇಸ್ಸಾಕಾರನು ಕುರಿಹಟ್ಟಿಗಳ ನಡುವೆ ಮಲಗಿರುವ ದೊಡ್ಡ ಕತ್ತೆ.
15 : ಸೂಕ್ತವೆಂದುಕೊಂಡು ತನ್ನ ನಾಡು ವಿಶ್ರಾಂತಿಗೆ, ಸುಖಾನುಭವಕೆ ಬಗ್ಗಿಸುವನು ಬೆನ್ನನು ಹೊರೆ ಹೊರುವುದಕ್ಕೆ, ಬಿಟ್ಟಿಯ ಕೆಲಸಕ್ಕೆ.
16 : ದಾನನು ತನ್ನ ಜನರನ್ನಾಳುವನು ಇಸ್ರಯೇಲಿನಿತರ ಕುಲಗಳಂತೆ.
17 : ಇರುವನವನು ದಾರಿಯಲ್ಲಿರುವ ವಿಷಸರ್ಪದಂತೆ, ಕುದುರೆಯ ಹಿಮ್ಮಡಿ ಕಚ್ಚಿ ರಾಹುತನನು ಕೆಡವುವ ಹಾವಿನಂತೆ.
18 : ಸರ್ವೇಶ್ವರಾ, ಎದುರುನೋಡುತ್ತಿರುವೆನು ನಿನ್ನಿಂದ ಬರುವಾ ಸಂರಕ್ಷಣೆಯನು.
19 : ಗಾದನು ಗುರಿಯಾಗುವನು ಸುಲಿಗೆಗಾರರಾಕ್ರಮಣಕೆ ಓಡುವನಾ ದರೋಡೆಗಾರರನ್ನು ಹಿಮ್ಮೆಟ್ಟಿಕೊಂಡೇ.
20 : ಆಶೇರನಗಿರುವುದು ಸಮೃದ್ಧಿಯಾಗಿ ಧಾನ್ಯ ದೊರಕುವುದವನಲಿ ರಾಜನಿಗೂ ತಕ್ಕ ಭಕ್ಷ್ಯ.
21 : ನಪ್ತಾಲಿ ಸ್ವಚ್ಛಂದ ಜಿಂಕೆಮರಿಯಂತೆ ಸಿಗುವುದವನಲಿ ಸುಮಧುರವಾದ ಮಾತುಕತೆ.
22 : ಜೋಸೆಫನು ಫಲಭರಿತ ವೃಕ್ಷದಂತೆ ಒರತೆ ಬಳಿಯಲೆ ಬೆಳೆದ ದ್ರಾಕ್ಷಿಯಂತೆ ಚಾಚಿದೆ ಅದರ ರೆಂಬೆ ಬೇಲಿಯಿಂದಾಚೆ.
23 : ಬಿಲ್ಲುಗಾರರೆಸಗಿದರು ಅವನ ಮೇಲೆ ಆಕ್ರಮಣ ಸುತ್ತುವರೆದರವನನು ಎಸೆದು ಬಿರುಸುಬಾಣ.
24 : ಆದರೂ ಯಕೋಬಕುಲದ ಸರ್ವ ಬಲಾಢ್ಯನ ಶಕ್ತಿಯಿಂದ ಇಸ್ರಯೇಲನ ಪೊರೆಬಂಡೆ - ಪರಿಪಾಲಕನ ನಾಮದಿಂದ ನಿಂತಿತು ಸ್ಥಿರವಾಗಿ ಅವನ ಬಿಲ್ಲು ಚುರುಕುಗೊಂಡಿತು ಅವನ ಕೈಗಳ ಬಲ್ಬು.
25 : ಹೀಗಾಯಿತು ನಿನ್ನ ತಂದೆಯ ದೇವರಿಂದ ಸಿಗಲಿ ನಿನಗಾತನ ಸಹಾಯ ಹೀಗಾಯಿತು ಸರ್ವವಲ್ಲಭ ದೇವರಿಂದ. ದೊರಕಲಿ ನಿನಗಾತನ ಆಶೀರ್ವಾದ. ಮೇಲಣ ಆಕಾಶದಿಂದ, ಕೆಳಗಣ ಸಾಗರ ಸೆಲೆಗಳಿಂದ ಸ್ತನ್ಯದಿಂದ, ಗರ್ಭದಿಂದ, ಆತ ನೀಡುವ ವರದಾನ.
26 : ಪ್ರಾಚೀನ ಪರ್ವತಗಳಿಗಿಂತ, ಚಿರಸ್ಥಾಯಿ ಗುಡ್ಡಗಳಿಗಿಂತ ಉತ್ತಮೋತ್ತಮ ನಿನ್ನ ತಂದೆಯಿಂದ ಬರುವ ಆಶೀರ್ವಾದ. ಇಳಿದು ಬರಲೀ ವರದಾನಗಳು ಜೋಸೆಫನ ಮೇಲೆ ಸೋದರರಿಂದ ಬೇರ್ಪಟ್ಟವನ ಶಿರಸ್ಸಿನ ಮೇಲೆ.
27 : ಕಿತ್ತು ತಿನ್ನುವ ತೋಳ ಬೆನ್ಯಾವಿೂನನು ಬೆಳಗ್ಗೆ ತಿನ್ನುವನು ಹಿಡಿದುಕೊಂಡದುದನು ಸಂಜೆ ಹಂಚಿಕೊಳ್ಳುವನು ಕೊಳ್ಳೆಹೊಡೆದುದನು.
28 : ಇವೇ ಇಸ್ರಯೇಲಿನ ಹನ್ನೆರಡು ಕುಲಗೋತ್ರಗಳು; ಇದೇ ಅವರ ತಂದೆ ಕೊಟ್ಟ ಆಶೀರ್ವಾದ: ಒಂದೊಂದು ಕುಲಕ್ಕೆ ಅವನು ನುಡಿದ ಒಂದೊಂದು ಆಶೀರ್ವಚನ.
29 : ಯಕೋಬನು ತನ್ನ ಮಕ್ಕಳಿಗೆ ಕೊಟ್ಟ ಆಜ್ಞೆ ಇದು: “ನಾನು ನನ್ನ ದಿವಂಗತ ಪೂರ್ವಜರನ್ನು ಸೇರುವ ಕಾಲ ಸವಿೂಪಿಸಿತು. ಹಿತ್ತಿಯನಾದ ಎಫ್ರೋನನ ಭೂಮಿಯಲ್ಲಿರುವ ಗವಿಯೊಳಗೆ, ಪಿತೃಗಳ ಬಳಿಯಲ್ಲಿ ನನ್ನನ್ನು ಸಮಾಧಿಮಾಡಬೇಕು.
30 : ಆ ಗವಿ ಕಾನಾನ್ ನಾಡಿನ ಮಮ್ರೆಗೆದುರಾಗಿರುವ ಮಕ್ಬೇಲ ಎಂಬ ಬಯಲಿನಲ್ಲಿದೆ. ಅದನ್ನು ಅಬ್ರಹಾಮನು ಅದರ ಸುತ್ತಲಿರುವ ಭೂಮಿ ಸಹಿತ ಹಿತ್ತಿಯನಾದ ಎಫ್ರೋನನಿಂದ ಸ್ವಂತ ಸ್ಮಶಾನ ಭೂಮಿಗಾಗಿ ಕೊಂಡು ಕೊಂಡನು.
31 : ಅಲ್ಲೇ ಅಬ್ರಹಾಮನಿಗೂ ಅವನ ಪತ್ನಿ ಸಾರಳಿಗೂ ಸಮಾಧಿಯಾಯಿತು. ಅಲ್ಲೇ ಇಸಾಕನಿಗೂ ಅವನ ಮಡದಿ ರೆಬೆಕ್ಕಳಿಗೂ ಸಮಾಧಿ ಆಯಿತು. ಲೇಯಳನ್ನೂ ನಾನು ಅಲ್ಲಿ ಸಮಾಧಿ ಮಾಡಿದ್ದೇನೆ.
32 : ಹೊಲದ ಸಮೇತ ಹಿತ್ತಿಯರಿಂದ ಕ್ರಯಕ್ಕೆ ಕೊಂಡುಕೊಂಡ ಆ ಗವಿಯೊಳಗೆ ನನಗೂ ಸಮಾಧಿಯಾಗಲಿ,” ಎಂದನು.
33 : ಮಕ್ಕಳಿಗೆ ಈ ಆಜ್ಞೆಯನ್ನು ಕೊಟ್ಟು ಮುಗಿಸಿದನಂತರ ಯಕೋಬನು ಹಾಸಿಗೆಯಲ್ಲಿ ತನ್ನ ಕಾಲುಗಳನ್ನು ಮಡಚಿಕೊಂಡು ಪ್ರಾಣಬಿಟ್ಟು, ಮೃತರಾದ ಪಿತೃಗಳ ಬಳಿಗೆ ಸೇರಿದನು.

Holydivine